ನಿನ್ನಿಂದ ಮಗು ಬೇಕು ಎಂದವಳಿಗೆ, ನೀನೇ ನನ್ನ ತಾಯಿ ಎಂದ ಮಹಾತ್ಮ

Team Udayavani, Nov 5, 2019, 5:39 AM IST

ಪ್ರೇಮವೆಂದರೇನು? ವಿವೇಕಾನಂದರ ಉತ್ತರ ಹೀಗಿದೆ: ನೀನು ಹಿಮಾಲಯವನ್ನು ಪ್ರೀತಿಸಿದರೆ, ಅದು ಪ್ರೇಮ. ನೀನು ಪ್ರೀತಿಸುವ ಹಿಮಾಲಯ ನಿನ್ನೊಂದಿಗೇ ಇರಬೇಕೆಂದು ಬಯಸಿದರೆ ಅದು ವ್ಯಾಮೋಹ. ಸ್ವಾಮಿ ವಿವೇಕಾನಂದರ ಕೃತಿಶ್ರೇಣಿಯಲ್ಲಿ ಹೀಗೊಂದು ಉಲ್ಲೇಖ ಕಂಡುಬರುತ್ತದೆ. ಪ್ರೀತಿಯಲ್ಲಿ ಬಯಕೆಗಳಿರಬಾರದು, ಕೊಡುವುದಷ್ಟೇ ಕೆಲಸ, ಅದಕ್ಕೆ ಪ್ರತಿಯಾಗಿ ಬಯಸಿದರೆ ಅದು ವ್ಯವಹಾರ. ಭಾರತೀಯ ಆಧ್ಯಾತ್ಮಿಕ ಲೋಕದಲ್ಲಿ ಬಹುತೇಕ ಪ್ರೀತಿಗೆ ಇದೇ ಅರ್ಥ. ಇನ್ನು ಕೆಲವರು ಪ್ರೀತಿಯನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ. ಎಲ್ಲ ಭಾವನೆಗಳಂತೆ ಪ್ರೀತಿ ಅನ್ನುವುದೂ ಭಾವನೆ. ಅದು ಅತಿಯಾದರೆ ವ್ಯಾಮೋಹ, ಅದೇ ಒಂದು ಬಂಧನ ಎನ್ನುವವರು ಇದ್ದಾರೆ. ಅದನ್ನೇ ಭಕ್ತಿಯನ್ನಾಗಿ ಬದಲಿಸುವವರೂ ಇದ್ದಾರೆ. ಭಕ್ತಿಪಂಥದಲ್ಲಿ ಈ ರೀತಿಯ ಪ್ರೇಮವನ್ನು ಕಾಣಬಹುದು. ಮೀರಾಬಾಯಿ ಕೃಷ್ಣನನ್ನು ಪತಿಯಾಗಿ ಕಂಡಳು, ಅಕ್ಕಮಹಾದೇವಿಯೂ ಹಾಗೆಯೇ ಭಾವಿಸಿದಳು. ಭಗವಂತನನ್ನು ಮಗುವಿನಂತೆ ಪ್ರೀತಿಸುವ ಭಕ್ತಿಯೂ ಇದೆ. ಭಗವಂತನನ್ನು ತಾಯಿಯಂತೆ ಕಾಣುವ ರೀತಿಯೂ ಇದೆ. ಇದಂತೂ ಭಾರತೀಯ ಆಧ್ಯಾತ್ಮಿಕ ಜಗತ್ತು ಸರ್ವವ್ಯಾಪಕವಾಗಿ ಒಪ್ಪಿಕೊಂಡ ಮಾರ್ಗ. ತಂದೆಯಂತೆ, ತಾಯಿಯಂತೆ ಕಾಣುವವರೇ ಜಾಸ್ತಿ. ನಿರ್ಗುಣ, ನಿರಾಕಾರ ಎನ್ನುವ ಯೋಗಮಾರ್ಗಿಗಳು ಕಡಿಮೆ. ಸಾಧನೆಯ ಔನ್ನತ್ಯಕ್ಕೆ ತಲುಪಿರುವ ಎಲ್ಲೋ ಕೆಲವರಷ್ಟೇ ಅನುಸರಿಸುವ ಹಾದಿಯಿದು.

ವಿಶೇಷವೆಂದರೆ ಸ್ವಾಮಿ ವಿವೇಕಾನಂದರು ಒಬ್ಬ ಯೋಗಿ, ಹಾಗೆಯೇ ಜಗನ್ಮಾತೆ ಕಾಳಿಯ ಭಕ್ತ, ತಾಯಿ ಭಾರತಿಯ ಆರಾಧಕ, ದರಿದ್ರನಾರಾಯಣನ ಸೇವಕ! ಒಬ್ಬನೇ ವ್ಯಕ್ತಿ ಹೀಗೆ ತಮ್ಮ ಹಲವು ರೂಪ ತಾಳಲು, ಪ್ರತಿಯೊಂದನ್ನೂ ಅಷ್ಟೇ ಗೌರವದಿಂದ ಕಾಣಲು ಹೇಗೆ ಸಾಧ್ಯ? ಭಾರತೀಯರ ರಕ್ತದಲ್ಲೇ ಅಂತಹ ಸಮನ್ವಯತೆ ಇದೆ. ವಿವೇಕಾನಂದರಲ್ಲಂತೂ ಅದು ಇನ್ನೊಂದು ಎತ್ತರಕ್ಕೆ ಹೋಗಿದೆ. ಅದಕ್ಕೆ ಕಾರಣ ಅವರ ಗುರು ಶ್ರೀರಾಮಕೃಷ್ಣ ಪರಮಹಂಸ. ಆ ಮಹಾಪುರುಷ ಜಗತ್ತಿನ ಎಲ್ಲ ಮತಗಳನ್ನು ಸ್ವತಃ ಅನುಸರಿಸಿ ಎಲ್ಲವೂ ಪರಬ್ರಹ್ಮನನ್ನೇ ತಲುಪುತ್ತವೆ ಎಂದು ಕಂಡುಕೊಂಡವರು. ಅವರ ಶಿಷ್ಯನಾಗಿ ವಿವೇಕಾನಂದರು ಇಂತಹ ಸಮನ್ವಯತೆ ಸಾಧಿಸದಿದ್ದರೆ ಹೇಗೆ?

ಇವೆಲ್ಲ ಬದಿಗಿರಲಿ. ವಿವೇಕಾನಂದರು ತಮ್ಮ ಜೀವನದಲ್ಲಿ ಲೈಂಗಿಕಕಾಮನೆಗಳನ್ನು ಗೆದ್ದು; ಪ್ರೀತಿಯೆಂದರೆ ಹಾಗಲ್ಲ, ಹೀಗೆ ಎಂಬ ಭಿನ್ನ ವ್ಯಾಖ್ಯಾನವನ್ನು ನೀಡಿದ್ದಕ್ಕೆ ಒಂದು ಅಪೂರ್ವ ಉದಾಹರಣೆಯಿದೆ. ಶ್ರೀರಾಮಕೃಷ್ಣರು ವಿವಾಹಿತರಾಗಿದ್ದರೂ ದೈಹಿಕ ಸಂಬಂಧದ ವಿಚಾರದಲ್ಲಿ ಜೀವನಪೂರ್ತಿ ಪತ್ನಿಯಿಂದ ದೂರವೇ ಉಳಿದ ಪ್ರಕರಣವನ್ನು ಇಲ್ಲಿ ಇನ್ನೊಮ್ಮೆ ನೆನಪು ಮಾಡಿಕೊಳ್ಳಬಹುದು. ಸ್ವಾಮಿ ವಿವೇಕಾನಂದರು ಶಿಕಾಗೊ ಭಾಷಣದ ಮೂಲಕ ಅಮೆರಿಕವನ್ನು ಗೆಲ್ಲುತ್ತಾರೆ. ಅನಂತರ ಕೆಲವು ವರ್ಷ ಅಮೆರಿಕ, ಇಂಗ್ಲೆಂಡ್‌ ಪ್ರವಾಸದಲ್ಲಿರುತ್ತಾರೆ. ಆ ವೇಳೆ ಅಮೆರಿಕದಲ್ಲಿ ಒಂದು ಘಟನೆ ನಡೆಯುತ್ತದೆ. ಒಬ್ಬ ಮಹಿಳೆಯೊಬ್ಬರು ನನಗೆ ನಿಮ್ಮಂತಹ ಒಬ್ಬ ಮಗ ಬೇಕು, ಅದೂ ನಿಮ್ಮಿಂದಲೇ ಎನ್ನುತ್ತಾಳೆ. ಅದಕ್ಕೆ ವಿವೇಕಾನಂದರು, ನನ್ನನ್ನೇ ನಿನ್ನ ಮಗನನ್ನಾಗಿ ಸ್ವೀಕರಿಸು ತಾಯಿ ಎಂದು ಕೇಳಿಕೊಳ್ಳುತ್ತಾರೆ. ಆ ತಾಯಿ ಕರಗಿ ವಿವೇಕಾನಂದರ ಕಾಲಡಿ ಬೀಳುತ್ತಾಳೆ. ಇದು ಪ್ರೇಮದ ಮಹೋನ್ನತ ಸ್ಥಿತಿ. ತನ್ನ ತಾಯಿಯನ್ನು ಮಾತ್ರವಲ್ಲ ಎಲ್ಲ ಸ್ತ್ರೀಯರನ್ನು ಮಾತೃಸ್ಥಾನದಲ್ಲಿಟ್ಟು ಪ್ರೀತಿಸುವುದು ಸುಲಭಕ್ಕೆ ಒಲಿಯುವ ಶಕ್ತಿಯಲ್ಲ. ಎಲ್ಲೋ ಕೆಲವು ಮಹಾತ್ಮರಷ್ಟೇ ಅಂತಹ ಔನ್ನತ್ಯ ತಲುಪಿರುತ್ತಾರೆ. ಇನ್ನು ಕೆಲವರು ಅಂತಹ ಆದರ್ಶಗಳನ್ನು ಹೇಳುವುದಕ್ಕಷ್ಟೇ ಸೀಮಿತರಾಗಿ, ಆಚರಣೆ ಹೆಸರಿಗೆ ಮಾತ್ರವಿರುತ್ತದೆ. ಅಂತಹ ಸ್ವಾಮಿಗಳು ಪ್ರೀತಿಯ ಬಲೆಗೆ ಬಿದ್ದು ಮಾಡಿಕೊಳ್ಳುತ್ತಿರುವ ಅದ್ವಾನಗಳು ಒಂದೆರಡಲ್ಲ. ಕೆಲವರು ಖ್ಯಾತ ಸ್ವಾಮಿಗಳನ್ನು ಬಲೆಗೆ ಬೀಳಿಸಲು ಅದನ್ನೊಂದು ಅಸ್ತ್ರವನ್ನಾಗಿ ಬಳಸುತ್ತಾರೆ. ಅಮೆರಿಕದಲ್ಲಿ ಬಾಬಾ ರಾಮ್‌ದೇವ್‌ರಿಗೂ ಇಂತಹ ಆಮಿಷ ಎದುರಾಗಿ, ಅದನ್ನು ಖಂಡತುಂಡವಾಗಿ ತಿರಸ್ಕರಿಸಿದ ಘಟನೆಯೂ ಉದಾಹರಣೆಯಾಗಿ ನಮ್ಮ ಮುಂದಿದೆ. ಪ್ರೇಮವೆಂದರೆ ಲೈಂಗಿಕತೃಷೆ ಅಲ್ಲವೆನ್ನುವುದನ್ನು ಮರೆಯದಿರಿ.

-ನಿರೂಪ

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

  • ನಾವು ಬೆಳಗ್ಗೆ ಎದ್ದಾಕ್ಷಣ ಗಡಿಯಾರ ನೋಡುವುದಿಲ್ಲ. ಹಾಸಿಗೆಯ ಪಕ್ಕದಲ್ಲೇ ಅಲ್ಲೆಲ್ಲೋ ಬಿದ್ದಿರುವ ಮೊಬೈಲನ್ನು ಎತ್ತಿಕೊಂಡು ಅರೆಗಣ್ಣಿನಲ್ಲೇ ಗಂಟೆ ಎಷ್ಟಾಯ್ತು...

  • ಕ್ರಷ್‌ ಮತ್ತು ಲವ್‌, ಇವೆರಡೂ ಒಂದೇನಾ? ಇದು, ಇವತ್ತಿನ ಯುವ ಜನತೆಗಿರುವ ಗೊಂದಲ ಇದು. ಒಂದು ಸಲ ಕ್ರಷ್‌ ಶುರುವಾದರೆ ಮುಗೀತು. ಅದರ ಅಂಗೈಯಲ್ಲಿ ನಾವು. ಇಡೀ ಜಗತ್ತೇ...

  • ಅವನು ಉತ್ತರ, ಇವಳು ದಕ್ಷಿಣ. ಅವನು ಹುಬ್ಬಳ್ಳಿ ಹೈದ, ಇವಳು ಕರಾವಳಿ ಮೀನು. ಇಬ್ಬರ ಭಾಷೆ, ಸಂಪ್ರದಾಯ, ಸಂಸ್ಕೃತಿ, ಆಚಾರ-ವಿಚಾರಗಳೇ ಬೇರೆ ಬೇರೆ. ಆದರೆ ದೇವರು ಬರೆದ ಕಥೆಯಲ್ಲಿ...

  • ಮುದ್ದಿನ ಹುಡುಗಿ ಚೆಂದ ,ಮೌನದ ರೂಪವೇ ಅಂದ. ಚಂದಕ್ಕೆ ಚಂದ ಅಂತೆ ನಿನ್ನ ಅಂದವೂ... ಈ ಹಾಡು, ನಿನ್ನನ್ನು ನೋಡಿದ ಕೂಡಲೇ ಮನದ ಮೂಲೆಯಲ್ಲಿ ಪಲ್ಲವಿಸುತ್ತದೆ.ಮೌನಂ ಸಮ್ಮತಿ...

  • ಅವರ ಜೊತೆಗಾರ ರಾಜಕಾರಣಿಗಳ ಬಳಿ ಎರಡು ಮೂರು ಕಾರುಗಳಿದ್ದವು. ಆದರೆ ಗೃಹಸಚಿವ ಅನ್ನಿಸಿಕೊಂಡ ನಂತರವೂ ಇವರು ಸ್ವಂತದ ಕಾರು ಖರೀದಿಸಲಿಲ್ಲ. ಆಗ ಕೂಡ ಮಕ್ಕಳನ್ನು...

ಹೊಸ ಸೇರ್ಪಡೆ