ವಾಟರ್‌ ಬಾಯ್ಸ

ನೀರಾವರಿ ಸೇವೆ

Team Udayavani, Aug 27, 2019, 5:37 AM IST

ಸೂರ್ಯನಿಗೇ ಟಾರ್ಚಾ ಅನ್ನೋ ರೀತಿ, ಮಲೆನಾಡ ಬರಕ್ಕೆ ಸಾಗರದ ಚಿಪ್ಲಿ ಹಾಗೂ ನೀಚಡಿ ಹುಡುಗರು ಉತ್ತರವಾಗಿದ್ದಾರೆ. ಈ ಎರಡೂ ಹಳ್ಳಿಗಳ ಕೆರೆಗಳು ಸ್ವಚ್ಛವಾಗಿವೆ. ಮನೆಯ ಬಾವಿಯಲ್ಲಿ ನೀರು ನಗುತ್ತಿದೆ. ಕಾರಣ, ಯುವಕರ ಸೇವಾ ಮನೋಭಾವ.

ಸಾಗರದ ಬಂಗಾರಮ್ಮನ ಕೆರೆ ಮುಂದೆ ನಿಂತಾಗ, ಅಖೀಲೇಶ್‌ ಚಿಪ್ಲಿ ಅವರ ತಲೆಗೆ ಬಂದದ್ದು ಒಂದೇ ಯೋಚನೆ. ಈ ಕೆರೆಯನ್ನು ಸರಿ ಮಾಡಿದರೆ, ಕಾಡು ಪ್ರಾಣಿಗಳಿಗೆ ನೀರಾದರೂ ಸಿಕ್ಕೀತು ಅಂತ. ಅವರು ವೈಲ್ಡ್‌ ಲೈಫ್ ಆಕ್ಟಿವಿಸ್ಟ್‌. ಹೀಗಾಗಿ, ಇಂಥ ಯೋಚನೆ ಬರೋದು ಸಹಜವೇ ಎನ್ನಿ. ಇದಕ್ಕೆಲ್ಲಾ ಎಷ್ಟಾಗಬಹುದು?ಎಂದು ಎಂಜಿನಿಯರ್‌ನ ಕೇಳಿದರು. ಒಂದು ಐದು ಲಕ್ಷ ಆಗಬಹುದು… ಅನ್ನೋ ಉತ್ತರ ಬಂತು. ಹೇಗಾದರೂ ಸರಿ, ಶುರು ಮಾಡಿಯೇ ಬಿಡೋಣ ಅಂತ ತೀರ್ಮಾನಿಸಿದರು.

ಆದರೆ, ಹೇಗೆ ಶುರು ಮಾಡೋದು? ಚಿಪ್ಲಿಗೆ ಹೆಚ್ಚೇನೂ ಸಮಸ್ಯೆ ಆಗಲಿಲ್ಲ. ಏಕೆಂದರೆ, ಶಿರಸಿಯಲ್ಲಿ , ಸಮುದಾಯ ಆಧಾರಿತವಾಗಿ ಕೆರೆ ಹೂಳು ತೆಗೆಯಬಹುದಾದ ಸಾಧ್ಯತೆಯನ್ನು ಜಲತಜ್ಞ ಶಿವಾನಂದ ಕಳವೆ ತೋರಿಸಿದ್ದರು. ಹೀಗಾಗಿ, ಜಯಪ್ರಕಾಶ್‌ ಗೋಳಿಕೊಪ್ಪ, ಅಕ್ಷರ ಎಲ್‌, ಚಿತ್ರನಟ ಏಸುಪ್ರಕಾಶ್‌ ಮೊದಲಾದವರು ಚಿಪ್ಲಿ ಅವರ ಮಾತಿಗೆ ಜೈ ಅಂದರು. ಆವತ್ತಿನ ಸ್ಥಳೀಯ ಎ.ಸಿ. ನಾಗರಾಜ್‌ ಸಿಂಗ್ರೇರ್‌, ಡಿವೈಎಸ್‌ಪಿ ಮಂಜುನಾಥ ಕವರಿ  ಮೊದಲಾದವರು ಸಾಥ್‌ ನೀಡಿದರು!ಆಗ ಶುರುವಾಗಿದ್ದೇ-ಸಾಗರ ಜೀವಜಲ ಕಾರ್ಯಪಡೆ.

ಎಂಜಿನಿಯರ್‌ ಹೇಳಿದಂತೆ, ಐದು ಲಕ್ಷ ತಾನೆ ಹೇಗಾದರೂ ಮಾಡಿ ಹೊಂದಿಸೋಣ ಅಂತ ಚಿಪ್ಲಿ ಅಂಡ್‌ ಟೀಂ ಕೈಯಿಂದ ಒಂದಷ್ಟು ಹಣ ಹಾಕಿದರು. ಅವರಿವರ ಹತ್ತಿರ, ಕೆರೆ ಸರಿ ಇದ್ದರೆ ಬದುಕು ಸರಿ ಇರುತ್ತೆ ಅಂತ ಹೇಳಿ ಹಣ ಪಡೆದರು. ಕೆರೆಯ ಕಟ್‌ ಓಪನ್‌ ಮಾಡಿ, ನೀರು ತೆಗೆದು, ಒಂದಷ್ಟು ಗಟ್ಟಿ ಜಾಗದಲ್ಲಿ ಹಿಟಾಚಿ ಇಳಿಸಿ, ತಾತ್ಕಾಲಿಕ ರೋಡ್‌ ತೆಗೆದು ಹೂಳು ತೆಗೆಯುತ್ತಾ ಹೋದರು.

ಊರಿನ ಒಂದಷ್ಟು ಮಂದಿ, ಹಾಪ್‌ಕಾಮ್ಸ್‌ ಉಪಾಧ್ಯಕ್ಷರು ದಿನದ ಚಟುವಟಿಕೆಗಳ ಮೇಲುಸ್ತುವಾರಿ ನೋಡಿಕೊಂಡರು. ನಂತರ ಶುರುವಾಯ್ತು ನೋಡಿ ನಿಜವಾದ ಸಮಸ್ಯೆ.
ಕೆರೆಯ ಹೂಳು ತೆಗೆಯುತ್ತಾ ಹೋದಂತೆ ನೋಡಿದರೆ ಅದು ಗಜಗರ್ಭ, ಖಾಲಿಯಾಗುತ್ತಲೇ ಇಲ್ಲ. ಹುಡುಕಿ, ತಡಕಾಡಿ ಸಂಗ್ರಹಿಸಿದ್ದ ಹಣವೂ ಖಾಲಿ! ಯಾರನ್ನು ದುಡ್ಡು ಕೇಳ್ಳೋದು? ಗೊತ್ತಿಲ್ಲ. ಹಾಗಾಗಿ ಒಂದು ವರ್ಷ ಸುಮ್ಮನೆ ಕೂತರು. ಮತ್ತೆ ಮಂಗಳೂರಿನ ಕರ್ನಾಟಕ ಬ್ಯಾಂಕ್‌ ಅನ್ನು ಸಂಪರ್ಕಿಸಿದರು.

ಹುಡುಗರು ಏನೋ ಮಾಡ್ತಾ ಇದ್ದಾರೆ ಅಂತ ತಿಳಿದು, ನಂಬಿಕೆಯಿಟ್ಟ ಆ ಬ್ಯಾಂಕ್‌ ಐದು ಲಕ್ಷ ರಿಲೀಸ್‌ ಮಾಡಿತು. ಬ್ಯಾಂಕ್‌ನವರೇ ಕೊಟ್ಟಿದ್ದಾರಲ್ಲಾ?, ನಾವು ಸುಮ್ನಿರೋದು ಸರಿಯಲ್ಲ ಎಂದು ಕೊಂಡು, ಒಂದಷ್ಟು ಜನ ಹಣ ನೀಡಲು ಮುಂದೆ ಬಂದರು. ಹೀಗೆ, ಸಂಗ್ರಹಿಸಿದ ಹಣದಲ್ಲಿ ಕೆರೆ ಕೆಲಸ ಮುಗಿಸುವ ಹೊತ್ತಿಗೆ 17 ಕ್ಯೂಬಿಕ್‌ ಮೀಟರ್‌ ಹೂಳು ಹೊರಬಂತು. ಪರಿಣಾಮ ಏನಾಯಿತು ಗೊತ್ತೆ? ಕೇವಲ 10 ಲಕ್ಷ ಲೀಟರ್‌ ನೀರು ಹಿಡಿದಿಟ್ಟುಕೊಳ್ಳುತ್ತಿದ್ದ ಬಂಗಾರಮ್ಮನ ಕೆರೆ, ಈಗ 2 ಕೋಟಿ ಲೀಟರ್‌ ನೀರನ್ನು ತುಂಬಿಸಿಕೊಂಡಿದೆ. ಪ್ರಾಣಿ, ಪಕ್ಷಿಗಳಿಗೆ ಅಷ್ಟೇಕೆ, ಸಾಗರದ ಸುತ್ತಮುತ್ತಲ ಅಂತರ್ಜಲ ಹೆಚ್ಚಲು ಇದು ನೆರವಾಗಿದೆ.

“ಕೆಲಸ ಆಯ್ತು ಅಂತ ನಾವೇನು ಸುಮ್ಮನೆ ಕೂತಿಲ್ಲ. ಆನೆ ಸೊಂಡ್ಲು ಕೆರೆ, ಯೋಗೀಶ್ವರ ಕೆರೆ, ಹುಣಸೆಕಟ್ಟೆ ಕೆರೆ, ಚಿಪ್ಲಿ ಕೆರೆ, ದೊಣ್ಣೆ ಕೆಂಚನ ಕೆರೆ, ಕಂಬಳಿಕೊಪ್ಪ ಕೆರೆ, ಕೊನೆಗೆ ಗಣಪತಿ ಕೆರೆ… ಹೀಗೆ, 7 ಕೆರೆಗಳ ಚೈನ್‌ಲಿಂಕ್‌ ಇದೆ. ಎಲ್ಲಾ ಕೆರೆಗಳ ಹೂಳೆತ್ತಿ, ಅವುಗಳ ಆರೋಗ್ಯ ಕಾಪಾಡುವ ಗುರಿ ಇಟ್ಟುಕೊಂಡಿದ್ದೇವೆ’ ಎನ್ನುತ್ತಾರೆ ಅಖೀಲೇಶ್‌ ಚಿಪ್ಲಿ.

ಈ ಯುವಕರ ನೀರ ಸೇವೆ ಫ‌ುಲ್‌ಪ್ಲಡ್ಜ್ ಅಂತಾರಲ್ಲ ಹಾಗೇ. ಪ್ರತಿ ರುಪಾಯಿಗೂ ಲೆಕ್ಕ, ಇದಕ್ಕಾಗಿ ವಾಟ್ಸಾಪ್‌ ಗ್ರೂಪ್‌ ಇದೆ. ಅದರಲ್ಲಿ ಯಾವ ಕೆರೆ ಅಭಿವೃದ್ಧಿ ಶುರು ಮಾಡಬೇಕು, ಖರ್ಚು ಎಷ್ಟು, ಅಂತೆಲ್ಲ ಚರ್ಚೆಗಳು ನಡೆಯುತ್ತವೆ. ಮಾಡಿದ ಖರ್ಚನ್ನು ಸಾಕ್ಷಿ ಸಮೇತ ಗ್ರೂಪಲ್ಲಿ ಹಾಕುತ್ತಾರೆ. ಬೇಸಿಗೆಯ 3 ತಿಂಗಳು ಕೆರೆ ಅಭಿವೃದ್ಧಿ ಮಾಡಲು ಎತ್ತಿಟ್ಟುಕೊಂಡಿದ್ದಾರೆ. ಈಗ ಕಣ್ಣ ಮುಂದೆ ಇರುವುದು ಆನೆ ಸೊಂಡ್ಲು ಕೆರೆ. ಇಲ್ಲಿ ಕೆರೆ ಇದೆ ಅಂತಲೇ ಕಾಣದಷ್ಟು ಹೂತು ಹೋಗಿದೆ. ಅದನ್ನು ಹುಡುಕಿ ಕೆಲಸ ಶುರು ಮಾಡಲು, ಡಿಸೆಂಬರ್‌ ಬರಲಿ ಅಂತ ಕಾಯುತ್ತಿದ್ದಾರೆ. ಈಗಾಗಲೇ ಕರ್ನಾಟಕ ಬ್ಯಾಂಕ್‌ 2 ಲಕ್ಷ ರೂ.ಗಳನ್ನು ಕೊಡುವುದಾಗಿ ಭರವಸೆ ನೀಡಿದೆ. ತಂಡದ ಸದಸ್ಯರು ಕೈಯಿಂದ ದುಡ್ಡು ಹಾಕಿ, ಬೇರೆ ಬೇರೆ ಕಡೆಯಿಂದ ಹಣ ಒಟ್ಟು ಗೂಡಿಸುವ ಕೆಲಸ ಶುರುವಾಗಿದೆ.
ನೀರಾವರಿ ಸೇವೆ ಅಂದರೆ ಹೀಗಲ್ಲವೇ?

ನೀರ ಕೆಲಸಕ್ಕೆ ಎಲ್ರೂ ಸಿದ್ಧ
ಸಾಗರ-ಶಿವಮೊಗ್ಗ ರಸ್ತೆಯಲ್ಲಿ ಆ ಕಡೆ ನೀಚಡಿ ಅಂತ ಹಳ್ಳಿ ಇದೆ. ಇಲ್ಲಿ ನೀರ ಸಮಸ್ಯೆ, ಕೆರೆಯ ಹೂಳೆತ್ತಬೇಕು ಅಂದರೆ ಇಡೀ ಹಳ್ಳಿಗೆ ಹಳ್ಳಿಯೇ ಪಂಚೆ ಎತ್ತಿ ಕಟ್ಟಿ ರೆಡಿಯಾಗಿಬಿಡುತ್ತದೆ. ಗಂಡಸರೆಲ್ಲ ಕೆರೆಗೆ ಇಳಿದರೆ, ಹೆಂಗಸರು, ಮಕ್ಕಳೆಲ್ಲ ಮಧ್ಯಾಹ್ನದ ಊಟ, ತಿಂಡಿ ಮಾಡಲು ನಿಂತು ಬಿಡುತ್ತಾರೆ. ಈ ಮೊದಲು, ಯುವಕ ಸಂಘದ ಅಡಿ ಎಲ್ಲ ನೀರ ಕಾರ್ಯಗಳು ನಡೆಯುತ್ತಿದ್ದವು. ಈಗ ನೀಚಡಿ ಟ್ರಸ್ಟ್‌ ಅಂತ ಮಾಡಿಕೊಂಡು ಊರಿನವರನ್ನೆಲ್ಲ ಅದರ ಸದಸ್ಯರನ್ನಾಗಿ ಮಾಡಲಾಗಿದೆ. ನೀಚಡಿಯಲ್ಲಿ 45 ಮನೆಗಳು ಇರಬಹುದು. ಹೀಗೆ, ಒಂದು ಬೇಸಿಗೆಯಲ್ಲಿ ಬರ ಎದುರಾಗಿ, ಕುಡಿಯಲು ನೀರು ಸಹ ಸಿಗದಂತಾಯಿತು. ಅದೇ ಹಳ್ಳಿಯ ಶ್ರೀನಾಥ್‌, ಯೋಗೀಶ್‌, ರಾಜೇಶ್‌, ಸುಬ್ರಮಣ್ಯ, ಸತ್ಯಮೂರ್ತಿ ಮೊದಲಾದವರೆಲ್ಲ ಇದಕ್ಕೇನಾದ್ರು ಮಾಡಬೇಕಲ್ಲ ಅಂತ ಇಂಗು ಗುಂಡಿಗಳನ್ನು ಮಾಡಲು ಶುರು ಮಾಡಿದರು. ಹಳ್ಳಿಗೆ ಎರಡು ಗುಡ್ಡ ಮಧ್ಯೆ ಆ ಕಡೆ ಈ ಕಡೆ ಎರಡು ಕೆರೆ ಇದೆ. ಒಂದು ಚೌಡಿಕೆರೆ ಅಂತ. ಇನ್ನೊಂದು, ಸಣ್ಣ ಚೌಡಿ ಕೆರೆ. ಅದರ ಹತ್ತಿರ ಊರವರೆಲ್ಲ ಸೇರಿ, ಇಂಗು ಗುಂಡಿಗಳನ್ನು ತೋಡಿದರು. ಮನೆ ಬಾವಿಗಳಲ್ಲಿ ನೀರು ತುಳುಕಿತು. ಆಮೇಲೆ ದೊಡ್ಡ ಚೌಡಿ ಕೆರೆಗೆ ಕೈ ಹಾಕಿದರು. ಹಣ? ಊರವರ ಜೇಬಿಂದ ಹಣ ಬಿದ್ದರೂ ಸಾಲಲಿಲ್ಲ. ಹಾಗಾಗಿ, ಊರು ಬಿಟ್ಟು ಬೆಂಗಳೂರು, ಮುಂಬಯಿ, ಅಮೆರಿಕ ಇಲ್ಲೆಲ್ಲ ವಾಸವಾಗಿರುವವರು ಕೈ ಜೋಡಿಸಿದ್ದರಿಂದ 7 ಲಕ್ಷ ಭರ್ತಿಯಾಯಿತು. ಧರ್ಮಸ್ಥಳ ಸಂಘದವರು ಒಂದಷ್ಟು ಹಣ ಕೊಟ್ಟರು. ಹಾಗಾಗಿ, 20 ಲಕ್ಷದಲ್ಲಿ ದೊಡ್ಡ ಚೌಡಿಕೆರೆ ಹೂಳು ಎಲ್ಲವೂ ಹೊರಗೆ ಬಿತ್ತು. ಈ ಸಲ ಗುಡ್ಡದ ನೀರು ನೇರ ಕೆರೆಗೆ ಇಳಿಯಬಾರದು ಅಂತ ಸುತ್ತ ಟ್ರಂಚ್‌ ಮಾಡಿದ್ದಾರೆ.

ವಿಶೇಷ ಅಂದರೆ, ನಮ್ಮ ಕೆರೆ ಹಿಂಗಿದೆ, ನಿಮ್ಮದನ್ನೂ ಹೀಗೆ ಮಾಡ್ಕೊಳ್ಳಿ ಅಂತ ಸುತ್ತಮುತ್ತಲ ಹಳ್ಳಿಯವರನ್ನು ಕರೆದು ತೋರಿಸಲು ಹಳ್ಳಿಗರೆಲ್ಲ ಸೇರಿ ಪ್ರತಿ ವರ್ಷ ಕೆರೆ ಹಬ್ಬ ಅಂತ ಮಾಡುತ್ತಾರೆ. ಪರಿಣಾಮ, ಬೆಳಂದೂರು, ತ್ಯಾಗರ್ತಿ, ಮಳ್ಳ ಮುಂತಾದ ಹಳ್ಳಿಗಳಲ್ಲಿ 7-8 ಕೆರೆಗಳು ಆರೋಗ್ಯವಾಗಿವೆ. “ಹುಡುಗರೆಲ್ಲ ಪಟ್ನ ಸೇರ್ತಾವರೆ. ನಾವೇನು ಮಾಡಬೇಕು ಹೇಳಿ? ಜಲ ಸ್ವಾವಲಂಬನೆ ಮಾಡ್ಕೊಬೇಕು, ಅದಕ್ಕೇ ಹೀಗೆಲ್ಲ ಮಾಡ್ತೀವಿ. ಇನ್ನು ಮುಂದೆ, 10 ಎಕರೆ ಜಾಗದಲ್ಲಿ ಔಷಧ ವನ ಮಾಡಬೇಕು ಅಂತ ಪ್ಲಾನ್‌ ಮಾಡ್ಕೊಂಡಿದೀವಿ’ ಅಂತಾರೆ ಟ್ರಸ್ಟ್‌ನ ಶ್ರೀನಾಥ್‌.

ಮಾವೆಂಸ

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.ಈ ವಿಭಾಗದಿಂದ ಇನ್ನಷ್ಟು

  • ಜಾಸ್ತಿ ಬರಬೇಕು ಅನ್ನೋದು ಉದ್ಯೋಗದ ನಿಯಮ. ಹೀಗಾಗಿ, ನಮ್ಮ ಬದುಕನ್ನು ನಾವೇ ಚಂದಗಾಣಿಸಿಕೊಳ್ಳಬೇಕು. ಅದಕ್ಕೆ ಡಿಸೈನಿಂಗ್‌ ಕೋರ್ಸ್‌ ಮಾಡಬೇಕು. ಬೆಳಗ್ಗೆ ಎದ್ದು...

  • ಮೊಬೈಲ್‌ ಕಿತ್ತುಕೊಂಡರು ಅಂತ ಮಗ ಅಪ್ಪನನ್ನೇ ಕೊಲೆಗೈದ ಧಾರುಣ ಘಟನೆ ಮೊನ್ನೆಯಷ್ಟೇ ನಡೆದಿದೆ. ಈ ಕಾಲದ ಮಕ್ಕಳಿಗೆ, ಹೆತ್ತು ಹೊತ್ತು ಬೆಳೆಸಿದವರ ಮೇಲೆ ಸ್ವಲ್ಪವೂ...

  • ಹಳ್ಳಿಗಳಿಂದ ಬಂದವರಿಗೆ ಬೆಂಗಳೂರಿನಂಥ ದೊಡ್ಡ ದೊಡ್ಡ ಮಹಾನಗರಗಳಲ್ಲಿ ಒಂಟಿತನ ಕಾಡಲು ಶುರುವಾಗಿಬಿಡುತ್ತದೆ. ಇಲ್ಲಿನವರಲ್ಲಿ ಬಹುತೇಕರು ತಾವಾಯ್ತು ತಮ್ಮ...

  • ಇಡೀ ವಿಶ್ವವೇ ಎದುರು ನೋಡುತ್ತಿದ್ದ ಚಂದ್ರಯಾನ-2 ಕ್ಷಣಗಳನ್ನು ಕಣ್ತುಂಬಿಕೊಳ್ಳಲು ಬಿಸಿಲೂರಿನ ಬಾಲೆಯೂ ಹೋಗಿದ್ದಳು. ಆಕೆಗೆ ಐತಿಹಾಸಿಕ ಪ್ರಸಂಗಕ್ಕೆ ಸಾಕ್ಷಿಯಾಗುವ...

  • ಬಟ್ಟೇನ ಈ ಮಟ್ಟಕ್ಕೆ ಕೊಳೆ ಮಾಡ್ಕೊಂಡು ಬಂದಿದೀಯಲ್ಲ, ನಾಳೆ ಸ್ಕೂಲ್‌ಗೆ ಯಾವ ಡ್ರೆಸ್‌ನಲ್ಲಿ ಹೋಗ್ತೀಯಾ? ನಾಲ್ಕು ಬಿಟ್ರೆ ನಿಂಗೆ ಶಿಸ್ತು ಬರೋದು ಎಂದು ರೇಗುತ್ತಾ...

ಹೊಸ ಸೇರ್ಪಡೆ