ಅತ್ತ ಝರಿ, ಇತ್ತ ಸುಂದರಿ

ಬದಲಾದ ಬಾದಾಮಿಯ ಆಲ್ಬಮ್ಮು...

Team Udayavani, Sep 14, 2019, 5:30 AM IST

ಚಾಲುಕ್ಯರ ರಾಜಧಾನಿ ಅಚ್ಚರಿಯ ರೂಪದಿಂದ ಸೆಳೆಯುತ್ತಿದೆ. ಪುರಾತತ್ವ ಇಲಾಖೆಯ ಕಾಯಕಲ್ಪದ ಸ್ಪರ್ಶದಿಂದ, ಕಮರಿದ್ದ ಕಲೆಯ ಬಲೆಯಲ್ಲೀಗ ನವಚೇತನ ತುಂಬಿಕೊಂಡಿದೆ. ಮಹಾಮಳೆಯ ಕಾರಣ, ಕೊಳಕೆಲ್ಲ ಕೊಚ್ಚಿ ಹೋಗಿದೆ. ಪಕ್ಕದಲ್ಲೇ ಒಂದು ಪುಟ್ಟ ಜೋಗ ಹುಟ್ಟಿದೆ. ಅಗಸ್ತ್ಯತೀರ್ಥವೂ ಸ್ವಚ್ಛ, ಸುಂದರ…

ಮಹಾಸಾಮ್ರಾಜ್ಯದ ರಾಜಧಾನಿಯಾಗಿ ಮೆರೆದ, ಬಾದಾಮಿಯ ಆ ಕಾಲದ ವೈಭವವನ್ನು ಯಾರೂ ಕಂಡವರಿಲ್ಲ. ಬಂಡೆಗಳಲ್ಲಿ ಜೀವ ಹಿಡಿದಿಟ್ಟುಕೊಂಡು, ಅವುಗಳೆದೆ ಮೇಲೆ ಕೆತ್ತಿದ ಶಿಲ್ಪಕಲೆಗಳಲ್ಲಿ ಭಾವ ತುಂಬಿಕೊಂಡು, ವಿಜೃಂಭಿಸಿದ ಬಾದಾಮಿ, ಕಾಲ ಸರಿದಂತೆ ಸಹಜವಾಗಿ ಮಸುಕಾಗಿತ್ತು. ಐತಿಹಾಸಿಕ ಚೆಲುವು ಎಲ್ಲೋ ಹೂತು ಹೋಗಿ, ಅದರ ನೈಜತೆಯೆಲ್ಲಾ ಮಂಕಾಯಿತೇನೋ ಎಂದು ಆತಂಕಪಡುವ ಹೊತ್ತಿನಲ್ಲೇ, ಬಾದಾಮಿ ರೂಪ ಬದಲಿಸಿಕೊಂಡಿದೆ. ಕಮರಿದ್ದ ಕಲೆಯ ಬಲೆಯಲ್ಲೀಗ ನವಚೇತನ ತುಂಬಿಕೊಂಡಿದೆ.

ಪುರಾತತ್ವ ಇಲಾಖೆಯ ಕಾಯಕಲ್ಪದ ಸ್ಪರ್ಶದಿಂದ, ಶಿಥಿಲಗೊಂಡ ಮೂರ್ತಿಗಳು, ಕೋಟೆ, ಹುಡೆ, ಬುರುಜು ಮರುಜೀವ ಪಡೆದಿವೆ. ಮನಮೋಹಕ ವಸ್ತುಸಂಗ್ರಹಾಲಯ, ಬಾದಾಮಿಯ ಗತವೈಭವದ ಕತೆ ಹೇಳುತಿದೆ. ಅಳಿವಿನ ಅಂಚಿನಲ್ಲಿದ್ದ ಕಪ್ಪೆ ಅರಭಟ್ಟನ ಶಾಸನ ಕಳೆಗಟ್ಟಿದೆ. ಅಲ್ಲಿಗೆ ಹೋಗಲು ಹಾದಿ ಸಜ್ಜಾಗಿದೆ. ಕಂಟಿಗಳ, ಪೊದೆಗಳ ತಂಟೆ ಇಲ್ಲದಾಗಿದೆ. ಬಯಲು ಶೌಚಾಲಯ ಕಣ್ಮರೆಯಾಗಿದೆ. ಸ್ವಚ್ಚತಾಯಜ್ಞದ ಫ‌ಲವಾಗಿ, ಆ ಪರಿಸರದಲ್ಲಿ ಹಸಿರು ಹುಲ್ಲು ನಳನಳಿಸುತ್ತಿದೆ. ಬಣ್ಣ ಬಣ್ಣದ ಗಿಡಗಳು, ಹೂ ಮುಡಿದು ಹಾಡತೊಡಗಿವೆ. ಕೊಳಕು ಕೊಚ್ಚಿ ಹೋಗಿದೆ. ಅಗಸ್ತ್ಯ ತೀರ್ಥದ ಮೆಟ್ಟಿಲುಗಳಲ್ಲಿ ಹೆಜ್ಜೆ ಇಡುವುದಕ್ಕೂ ಈಗೇನೋ ಒಂದು ಧೈರ್ಯ.

ಎಲ್ಲದಕ್ಕೂ ಹೊಸ ಸ್ಪರ್ಶ
ಅಗಸ್ತ್ಯತೀರ್ಥದ ಉತ್ತರಕ್ಕೆ ಚಾರಣಪ್ರಿಯರ, ಶಿಲಾರೋಹಿಗಳ ಸ್ವರ್ಗವಾಗಿರುವ ಭವ್ಯ ಬಂಡೆಗಳು, ರಣಮಂಡಲ ಕೋಟೆ, ಶಿವಾಲಯಗಳು ಚೆಲುವು ತುಂಬಿಕೊಂಡಿವೆ. ವಾಸ್ತುಶಿಲ್ಪದ ಗಣಿಯಾಗಿರುವ ಗುಹಾಲಯಗಳು, ಮಾನವ ವಿಕಾಸದ ಕತೆ ಹೇಳುವ ಮಾನವ ಪಾರ್ಕ್‌; ಪಶ್ಚಿಮದ ದಡದಲ್ಲಿರುವ ಯಲ್ಲಮ್ಮನ ಗುಡಿ, ಪೂರ್ವಕ್ಕೆ ನೀರಿನಲ್ಲಿ ತೇಲುವಂತೆ ಕಾಣುವ ಭೂತನಾಥಗುಡಿಗಳ ಸಂಕೀರ್ಣ, ಕುಷ್ಟುರಾಯನ ಗುಡಿ, ವಿಶಾಲ ಜಲಾಶಯ… ಹೀಗೆ ಒಂದೊಂದೂ, ಒಂದೊಂದು ಬಗೆಯ ರೂಪಲಾವಣ್ಯಗಳಿಂದ ಆಕರ್ಷಿಸುತ್ತಿದೆ.

ಅಲ್ಪಾಯು ಜಲಪಾತ…
ಇಷ್ಟೆಲ್ಲ ಕಾಯಕಲ್ಪದ ನಡುವೆ, ಬಾದಾಮಿಯನ್ನು ಇನ್ನಷ್ಟು ರಮಣೀಯವಾಗಿ ಕಂಗೊಳಿಸುವಂತೆ ಮಾಡಿರುವುದು ಪ್ರಕೃತಿ. ಧೋ ಎಂದು ಸುರಿದ ಮುಂಗಾರು ಮಳೆಗೆ ಇಡೀ ಬಾದಾಮಿಯೇ ಸ್ವತ್ಛ ಸುಂದರ. ಗುಡ್ಡವೆಲ್ಲ ಹಸಿರಿನ ಸೀರೆ ಹೊದ್ದಿದೆ. ಚಾಲುಕ್ಯ ಕಲಾಶಾಲೆ ಕಳೆಗಟ್ಟಿದೆ. ನಸುಗೆಂಪು ಬಣ್ಣದ ಬಂಡೆಗಳ ಗುಡ್ಡದ ಮೇಲ್ಭಾಗದಲ್ಲಿ ಸಮತಟ್ಟಾದ ಪ್ರದೇಶವು ಅಗಸ್ತ್ಯತೀರ್ಥದತ್ತ ಸ್ವಲ್ಪ ಇಳಿಜಾರಾಗಿದೆ. ಜಡಿಮಳೆಯಿಂದ ಸಂಗ್ರಹವಾದ ನೀರು ಅಬ್ಬರಿಸುತ್ತಾ, ರಭಸದಿಂದ ಅಗಸ್ತ್ಯತೀರ್ಥದತ್ತ ಹರಿಯುತ್ತಿದೆ. ಕಡಿದಾದ ಬಂಡೆಗಳ ಮೇಲೆ ಧುಮ್ಮಿಕ್ಕಿ ಬೀಳುವ ದಿಡಗು (ಅಲ್ಪಾಯು ಜಲಪಾತ) ನಯನ ಮನೋಹರ! ಬೆಟ್ಟದ ತುದಿಯಿಂದ ಶ್ವೇತ ಸುಂದರಿಯಂತೆ ಬಳುಕುತ್ತಾ, ಬಂಡೆಗಲ್ಲಿನ ನಡುವೆ ಅಂಕುಡೊಂಕಾಗಿ ಹರಿಯುವ ಈ ಜಲಧಾರೆಯ ಚೆಲುವು ಮನಮೋಹಕ.

ಜೋಗವ ನೆನಪಿಸುತಾ…
ಸುಮಾರು 250 ಅಡಿ ಎತ್ತರದಿಂದ ಧುಮ್ಮಿಕ್ಕುವ ನೀರು, ಬಂಡೆಗಳಿಗೆ ಅಪ್ಪಳಿಸಿದಾಗ ಮುತ್ತಿನ ಮಣಿಗಳು ತೂರಿದಂತೆ ತೋರುತ್ತದೆ. ಆ ನೀರು, ಕಲ್ಲುಬಂಡೆಗಳ ಸಂದಿಗೊಂದಿಗಳಲ್ಲಿ ಸದ್ದುಮಾಡುತ್ತಾ, ನೊರೆನೊರೆಯಾಗಿ ಹರಿಯುವಾಗ, ಹಾಲಿನ ಹೊಳೆ ರೂಪುಗೊಳ್ಳುತ್ತದೆ. ಈ ಅಲ್ಪಾಯು ಜೋಗದ ಹಿಂದೆ ಸೂರ್ಯನ ಕಿರಣಗಳು ಚೆಲ್ಲಾಡುತ್ತಾ, ನೃತ್ಯಗೈಯ್ಯುವ ಹೊತ್ತಿನಲ್ಲೇ, ಕಾಮನಬಿಲ್ಲೊಂದು ಆಗಸದಿಂದ ಭುವಿಗೆ ಬಣ್ಣದ ತೋರಣ ಕಟ್ಟಿರುತ್ತದೆ. ದಿಡಿಗಿನ ಮಗ್ಗಲು ಜವಳು ನೆಲದಲ್ಲಿ ಊಟಿ ಕೀಳುವುದರಿಂದ ಕಾಣುವ ಕಾರಂಜಿಗಳ ವೈವಿಧ್ಯಮಯ ವಯ್ನಾರ ವರ್ಣಿಸಲಸದಳ. ಈ ಜಲಪಾತದ ಕುರಿತು, ಚಾಲುಕ್ಯರ ತಾಮ್ರ ಶಾಸನದಲ್ಲೂ ಉಲ್ಲೇಖಗಳಿವೆ. ಬಾದಾಮಿ ಗತಚೆಲುವಿನ ಸೀರೆ ಉಟ್ಟಿದೆ ಎಂದಿದ್ದೂ ಇದೇ ಕಾರಣಕ್ಕೆ.

ಸುಂದರ ಸಾಹಸ…
– ಬೇಸಿಗೆಯಲ್ಲಿ, ಅಗಸ್ತ್ಯ ತೀರ್ಥ ಬತ್ತಿದಾಗ ಪುರಾತತ್ವ ಇಲಾಖೆಯು ಶಿಥಿಲಗೊಂಡ ಮೆಟ್ಟಿಲುಗಳನ್ನು, ಭೂತನಾಥ ಗುಡಿಗಳ ಸಂಕೀರ್ಣಗಳ ಹಾಳಾದ ಮೆಟ್ಟಿಲುಗಳನ್ನು ಮೂಲಕ್ಕೆ ಚ್ಯುತಿ ಬರದಂತೆ ದುರಸ್ತಿ ಮಾಡಿದೆ.

– ಪುರಸಭೆ, ಅಗಸ್ತ್ಯತೀರ್ಥದ ಹೂಳು ಎತ್ತಿ, ಸ್ವತ್ಛಮಾಡಿದೆ. ಮಳೆ ಬಂದಾಗ ಗುಡ್ಡದಿಂದ ಹರಿದು ಬರುವ ನೀರು ಅಲ್ಲಲ್ಲಿ ಪೋಲಾಗದಂತೆ, ಗೋಡೆ ನಿರ್ಮಿಸಿ, ಹೊಂಡಕ್ಕೆ ಹರಿಯುವಂತೆ ಮಾಡಿದೆ.

– ಅಗಸ್ತ್ಯತೀರ್ಥದ ದಂಡೆ, ತಟಕೋಟೆಯ ಸುತ್ತ, ಕಪ್ಪೆ ಅರಭಟ್ಟನ ಶಾಸನಕ್ಕೆ ಹೋಗುವ ದಾರಿಯ ಇಕ್ಕೆಲಗಳು ಈಗ ಸ್ವಚ್ಛ. ಅಲ್ಲಿ ಹಚ್ಚಹಸುರಿನ ಲಾನ್‌ ಹಾಸಿಕೊಂಡಿದೆ. ಮೂಲ ಸೌಂದರ್ಯಕ್ಕೆ ಧಕ್ಕೆ ಬಾರದ ಹಾಗೆ, ಅಲ್ಲಿ ಇಲ್ಲಿ ಬಿದ್ದ ಕೋಟೆ ಕೊತ್ತಳ, ಬುರುಜುಗಳ ರಿಪೇರಿ ಮಾಡಿದ್ದಾರೆ. ಬಾವನಬಂಡೆಯ ಮೇಲಿರುವ ಶಿವಾಲಯಗಳಿಗೆ ಹೋಗಲು ಚಾಲುಕ್ಯರ ಶೈಲಿಯಲ್ಲೇ ಮನಮೋಹಕ ರಸ್ತೆ ಮಾಡಿದ್ದಾರೆ. ಮಾಲಗಿತ್ತಿ ದೇವಾಲಯಕ್ಕೆ ಹೋಗಲು ಸರಿಯಾದ ಮಾರ್ಗ ಇರಲಿಲ್ಲ. ಅದರ ಹಿಂದೆ ಬಹಳ ದಿನಗಳಿಂದ ಹಾಳು ಬಿದ್ದ ಕೋಟೆಗೂ ಕಾಯಕಲ್ಪದ ಮೋಕ್ಷ ಸಿಕ್ಕಿದೆ.ಇವೆಲ್ಲವೂ ಬಾದಾಮಿಯ ಬೆಡಗನ್ನು ಇನ್ನಷ್ಟು ಹೆಚ್ಚಿಸಿವೆ.

– ಡಾ|| ಕರವೀರಪ್ರಭು ಕ್ಯಾಲಕೊಂಡ

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

  • ಬ್ರಿಟಿಷರ ವಿರುದ್ಧ ಕತ್ತಿ ಝಳಪಿಸಿದ ಮೊದಲ ಭಾರತೀಯ ನಾರಿ ಚೆನ್ನಮ್ಮ. ಈ ಸಂಗತಿ, ಕರುನಾಡಿನ ರೋಮಾಂಚಕ ಪುಳಕ ಕೂಡ. ಆ ಹೆಮ್ಮೆಯಲ್ಲೇ ಬದುಕುತ್ತಿರುವ ಆಕೆಯ ವಂಶಸ್ಥರ...

  • ಯಾವುದೇ ಕಛೇರಿ ಇರಲಿ... ಅದರ ಆರಂಭಕ್ಕೂ ಮುನ್ನ, ಕಣ್ಮುಚ್ಚಿಕೊಂಡು ಶಾರದೆಯನ್ನು ಧ್ಯಾನಿಸಿಯೇ, ಕದ್ರಿಯವರು ಸ್ಯಾಕ್ಸೋ ಮೂತಿಗೆ ತುಟಿಯೊಡ್ಡುತ್ತಿದ್ದರು. ಕದ್ರಿಯವರ...

  • ಇತ್ತೀಚೆಗೆ ಭಾರತ ಮತ್ತು ಚೀನಾದ ಅನೌಪಚಾರಿಕ ಶೃಂಗಸಭೆಗೆ ಸಾಕ್ಷಿಯಾದ, ಮಹಾಬಲಿಪುರಂ ದೇಗುಲವು ಶಿಲ್ಪಶಾಸ್ತ್ರದ ಮಹಾಪಾಠಶಾಲೆ. ಪಲ್ಲವರ ಕಾಲದ ಕಲಾಸೃಷ್ಟಿ ಇದು....

  • ಇದು ಒಬ್ಬ ಅಪರೂಪದ ಪೊಲೀಸಪ್ಪನ ಕತೆ. ಮಡಿದ ಮೇಲೆ ಕಣ್ಣುಗಳು, ಮಣ್ಣುಪಾಲಾಗದೇ ಇರಲಿಯೆಂಬ ಕಳಕಳಿ ಇಟ್ಟುಕೊಂಡ ಮನುಷ್ಯ. ಈ ಕಾರಣ, ಹೋದಲ್ಲೆಲ್ಲ ನೇತ್ರದಾನದ ಕುರಿತು...

  • ಇಂಡೋನೇಷ್ಯಾದಲ್ಲಿ ನಡೆಯುವ ಈ ಜಾನುವಾರುಗಳ ಓಟ ಸ್ಪರ್ಧೆ, ನಮ್ಮ ದಕ್ಷಿಣ ಕನ್ನಡದ ಕಂಬಳವನ್ನೇ ಹೋಲುತ್ತದೆ. ಸುಮಾತ್ರ ದ್ವೀಪದ "ದಾನಹ್‌ ದಾತರ್‌' ಎಂಬ ಹಳ್ಳಿಯಲ್ಲಿ...

ಹೊಸ ಸೇರ್ಪಡೆ