ಜೈ ಭಾರತ ಜನನಿಯ ತನುಜಾತೆ

ಭಾಷೆ ಎಂದರೆ ಹೆಣ್ಣು . ಕನ್ನಡ ಎಂದರೆ ಭುವನೇಶ್ವರಿ!

Team Udayavani, Nov 1, 2019, 4:55 AM IST

ಕನ್ನಡ ಎಂದ ಕೂಡಲೇ “ದೇವಿ’ಯ ಚಿತ್ರವೊಂದು ಕಣ್ಣೆದುರು ಸುಳಿಯುತ್ತದೆ. ಅವಳು ಭುವನೇಶ್ವರಿ. “ಕನ್ನಡ ಭುವನೇಶ್ವರಿ’. ಕನ್ನಡ ವೆಂದರೆ ಅಲೌಕಿಕ ಅರ್ಥದಲ್ಲಿ ದೇವಿ. ಲೌಕಿಕ ಅರ್ಥದಲ್ಲಿ ತಾಯಿ. “ನಿಮ್ಮ ಮಾತೃಭಾಷೆ ಯಾವುದು?’ ಎಂದು ಕೇಳುತ್ತೇವೆಯೇ ಹೊರತು, “ನಿಮ್ಮ ಪಿತೃಭಾಷೆ ಯಾವುದು?’ ಎಂದು ಕೇಳುವ ಪರಿಪಾಠವಿಲ್ಲ. ಮಾತೆಗೂ ಭಾಷೆಗೂ ತಾಯಿಗೂ ಒಂದು ಬಗೆಯೆ ಅವಿನಾಸಂಬಂಧ. ಹಾಗಾಗಿ, ನಿಮ್ಮ ಮಾತೃಭಾಷೆ ಯಾವುದು ಎಂದು ಕೇಳಿದರೆ ನಮ್ಮ ಉತ್ತರ “ಕನ್ನಡ’ ಎಂದಾಗಿರುತ್ತದೆ. ಹಾಗಾಗಿ, ಕನ್ನಡವೇ ತಾಯಿ. “ಕನ್ನಡಮ್ಮ’ ಎಂಬ ಪದದಲ್ಲಿಯೇ ಒಂದು ಬಗೆಯ ವಾತ್ಸಲ್ಯದ ಭಾವವಿರುತ್ತದೆ.ತಾಯಿ ಮೊದಲು ಕಲಿಸುವ ಭಾಷೆ ಕನ್ನಡ. ಶಾಲೆಗಳಲ್ಲಿ ಕಲಿಸುವುದಕ್ಕಿಂತ ಮೊದಲೇ ಅಮ್ಮ ಭಾಷೆಯನ್ನು ಕಲಿಸಿರುತ್ತಾಳೆ. ಭಾಷೆಗೂ ಅಮ್ಮನಿಗೂ ಹತ್ತಿರದ ಸಂಬಂಧ.ದೇಶ-ಭಾಷೆಗಳನ್ನು “ಹೆಣ್ಣು’ ಎಂದು ಪರಿಗಣಿಸುವ ಪರಂಪರೆ ನಮ್ಮದು. ಭಾರತ ದೇಶ ತಂದೆಯಲ್ಲ, ತಾಯಿ! “ಭರತ ಮಾತೆ ನನ್ನ ತಾಯಿ ನನ್ನ ಪೊರೆದ ತೊಟ್ಟಿಲು’ ಎಂದು ಹಾಡುತ್ತೇವೆ. ಭಾರತ ಎಂಬ ಪದ ನಿಷ್ಪತ್ತಿಗೆ ಹಲವು ಮೂಲಗಳುಂಟು.

“ಭ’ ಎಂದರೆ ಬೆಳಕು ಎಂದು ವ್ಯಾಖ್ಯಾನಿಸುವವ‌ರಿದ್ದಾರೆ. ಆದರೆ, ಒಂದು ತಿಳುವಳಿಕೆಯ ಪ್ರಕಾರ ಭಾರತದ ಮೂಲ ಭಾರತಿ. ಭಾರತದಿಂದ ಭಾರತಿಯೊ, ಭಾರತಿಯಿಂದ ಭಾರತವೊ; ಬಲ್ಲವರಾರು ! ಇರಲಿ. ಭಾರತಿ ಎಂದರೆ “ಭಾಷೆ’ ಎಂದೇ ಅರ್ಥ. ಭಾರತಿ ಎಂದರೆ ಸ್ತ್ರೀವಾಚಕ. ಹಾಗಾಗಿ, ಭಾಷೆ ಎಂದರೆ ಹೆಣ್ಣೇ ಹೊರತು ಗಂಡಲ್ಲ.ಕನ್ನಡವನ್ನು ನಾವು “ಜೈ ಭಾರತ ಜನನಿಯ ತನುಜಾತೆ’ ಎಂದು ಕೊಂಡಾಡುತ್ತೇವೆ. ಕನ್ನಡನಾಡು ಭಾರತ ಮಾತೆಯ ಮಗನಲ್ಲ, ಮಗಳು! ಭಾಷೆ ಮಾತ್ರವಲ್ಲ ಪ್ರಕೃತಿಯಲ್ಲಿ , ಸಂಸ್ಕೃತಿಯಲ್ಲಿ ಗೌರವ ಯುತವಾಗಿ ನಾವು ಕಾಣುವ ವಸ್ತುವಿಶೇಷಗಳನ್ನು ಪರಿಗಣಿಸುವುದು ಹೆಣ್ಣಾಗಿಯೇ. ಮರವೆಂದರೆ ದೇವಿ; ಹಾಗಾಗಿ, ಆಕೆ ವೃಕ್ಷದೇವತೆ. ಗಂಡು ಹೆಸರುಗಳಿರುವ ನದಿಯಿಲ್ಲ. ನೀರನ್ನು “ಗಂಗಾ ಭವಾನಿ’ ಎಂದು ತಿಳಿಯುತ್ತೇವೆ. ಗಂಗೆಯೆಂದಾಗ ಕಣ್ಣೆದುರಿಗೆ ಚಿತ್ರ ಬರುವುದು ಆಕಾಶದಿಂದ ಇಳಿಯುವಂಥ ಸೀರೆ ಉಟ್ಟಂಥ ನಾರಿಯ ಚಿತ್ರ ! ಕಲ್ಲನ್ನು “ಮಹಾಸತಿ’ಯ ಪ್ರತೀಕವಾಗಿ ಪೂಜಿಸುತ್ತ, ಅದನ್ನು “ಮಾಸ್ತಿಕಲ್ಲು’ ಎಂದು ಕರೆಯುತ್ತೇವೆ. ನಿಸರ್ಗವನ್ನು ದೇವತೆ ಎಂದು ಭಾವಿಸಿ, ಹಸಿರು ಹಾಸನ್ನು ಅವಳ ಸೆರಗು ಎಂದು ವರ್ಣಿಸುತ್ತೇವೆ. ಆಡುವ ಮಾತಿಗೆ “ವಾಣಿ’ ಎನ್ನುತ್ತೇವೆ. ವಾಣಿ ಎಂದರೆ ಶಾರದೆ. ಮಾತಿಗೂ ಅಧಿದೇವತೆ ಹೆಣ್ಣೇ. ಮಾತಿಗೆ ಮಾಧ್ಯಮವಾಗಿರುವ ಭಾಷೆಯೂ ಹೆಣ್ಣೆಂದು ಪರಿಗಣಿತವಾಗಿರುವುದರಲ್ಲಿ ಯಾವ ಅಚ್ಚರಿಯೂ ಇಲ್ಲ.ಭಾಷೆ ಮತ್ತು ರಾಜಕೀಯಕನ್ನಡ ಎಂಬುದು ಒಂದು ಪ್ರಾಂತ್ಯದ ಭಾಷೆಯಾಗಿತ್ತು. ಆ ಪ್ರಾಂತ್ಯದ ಗಡಿರೇಖೆಗಳು ಸ್ಪಷ್ಟವಾಗಿ ನಿರ್ಧರಿತವಾದದ್ದು ಪ್ರಥಮ ಸ್ವಾತಂತ್ರ್ಯದ ಸಂಭ್ರಮದ ಬಳಿಕ. ಇದಿಷ್ಟು ಭಾಗ ಕನ್ನಡಕ್ಕೆ , ಅಷ್ಟು ಪರಿಧಿ ತಮಿಳಿಗೆ, ಒಂದಷ್ಟು ಅವಕಾಶ ತೆಲುಗಿಗೆ- ಎಂಬಂಥ ನಿರ್ದಿಷ್ಟವಾದ ವಿಭಾಗ ಕ್ರಮ ಮೊದಲು ಇರಲಿಲ್ಲ.

ಪ್ರಾಂತ್ಯ ಎಂಬುದರ ಅಸ್ತಿತ್ವ ಒಂದು ರಾಜಕೀಯವಾದ ಆಡಳಿತಾತ್ಮಕವಾದ ಬೆಳವಣಿಗೆ. ಇದಕ್ಕೆ ಮುಖ್ಯವಾಗಿ ಭಾಷೆಯನ್ನು ಆಧಾರವಾಗಿ ಬಳಸಲಾಗಿತ್ತು. ಒಂದು ಸಂಸ್ಕೃತಿಯನ್ನು ಪರಿಗಣಿಸಿ ಒಂದು ಪ್ರಾಂತ್ಯವನ್ನು ರಚಿಸಲು ಸಾಧ್ಯವೆ? ಒಂದು ಜಾತಿಯನ್ನು ಗಮನಿಸಿ ಒಂದು ನಾಡಿನ ಪರಿಧಿಯನ್ನು ನಿರ್ಧರಿಸಲು ಸಾಧ್ಯವೆ? ಹಾಗಾಗಿ, ಎಲ್ಲಕ್ಕೂ ಆತೀತವಾದ ಭಾಷೆಯನ್ನು ಸೂಕ್ತ ಮಾನದಂಡ ಎಂದು ಪರಿಗಣಿಸಲಾಯಿತು. ಕನ್ನಡವನ್ನು ಎಲ್ಲ ವರ್ಗದವರು, ಎಲ್ಲ ಜಾತಿಯವರು ಮಾತನಾಡುತ್ತಾರೆ. ಹಾಗಾಗಿಯೇ ಕನ್ನಡ ನಾಡನ್ನು “ಸರ್ವ ಜನಾಂಗದ ಶಾಂತಿಯ ತೋಟ’ ಎಂದು ಕರೆದರು. ಇಂಥ ಕನ್ನಡ ಮಾತನಾಡುವ ಜನರಿರುವ ಪ್ರಾದೇಶಿಕ ಪರಿಸರ “ಕರ್ನಾಟಕ’ ರಾಜ್ಯವಾಯಿತು.ದೇಶವಾಗಲಿ, ಭಾಷೆಯಾಗಲಿ- ದೇವರ ಸಮಾನವಾದ ಗೌರವ ವನ್ನು ಪಡೆದದ್ದು ವಸಾಹತುಶಾಹಿ ನಂತರದ ಒಂದು ವಿಶೇಷವಾದ ಬೆಳವಣಿಗೆ. ಜನ್ಮಭೂಮಿಯನ್ನು “ಜನನಿ’ ಎಂದು ಭಾವಿಸುವುದು ಆಷೇಯ ಕಾಲದಿಂದಲೂ ಇದೆ. ಸ್ವಾತಂತ್ರ್ಯಪೂರ್ವದಲ್ಲಿ ಇಂಥ ದೇವ- ದೇವತೆಯರ ಕಲ್ಪನೆಗಳು ಇರಲಿಲ್ಲವೆಂದಲ್ಲ, ಆದರೆ, ಸ್ವಾತಂತ್ರ್ಯದ ಬಳಿಕ ಇದು ಹೆಚ್ಚು ಜಾಗೃತವಾಯಿತು. ಕನ್ನಡ ನಾಡು ಮತ್ತು ಕನ್ನಡ ನುಡಿ ದೇವರಾಗಿ, ಅದರಲ್ಲೂ “ದೇವಿ’ಯರಾಗಿ ಪೂಜ್ಯಸ್ಥಾನಕ್ಕೆ ಪಾತ್ರವಾದವು.ಸಮಾಜದಲ್ಲಿ ಹೆಣ್ಣಿಗೆ ಪೂಜ್ಯ ಸ್ಥಾನಸಮಾಜದಲ್ಲಿ ಹೆಣ್ಣಿನ ಬಗ್ಗೆ ಒಂದು ಗೌರವದ ಸ್ಥಾನವಿದೆ. “ಇತ್ತು’ ಎನ್ನಿ; ಈಗ ಇಲ್ಲ ಎಂಬರ್ಥದಲ್ಲಿ. ಮೊದಲೆಲ್ಲ ಹೆಣ್ಣುಮಕ್ಕಳನ್ನು “ತಾಯಿ’ ಎಂದು ಕರೆಯುವ ಪರಿಪಾಠವಿತ್ತು.

ಮನೆಯ ಮುಂದೆ ತರಕಾರಿ, ಮೀನು ಮಾರಾಟ ಮಾಡಲು ಬರುವವರೂ ಕೂಡ “ಅಕ್ಕ’ ಎಂದೇ ಸಂಬೋಧಿಸುತ್ತಾರೆ. ಭಿಕ್ಷೆ ಬೇಡಲು ಬರುವವರು “ಅಮ್ಮ, ತಾಯಿ’ ಎಂಬ ದ್ವಿರುಕ್ತಿಯನ್ನು ಬಳಸುತ್ತಾರೆ. ಹೆಣ್ಣುಮಕ್ಕಳಂತೂ- ಬಾಲಕಿಯಿಂದ ಮುದುಕಿಯರವರೆಗೆ ಎಲ್ಲರೂ “ತಾಯಿ’ಯ ಗೌರವಕ್ಕೆ ಪಾತ್ರರಾಗಬಲ್ಲರು. ಪುಟ್ಟ ಹುಡುಗಿಯನ್ನು “ತಾಯಿ’ ಎಂದು ಕರೆದರೂ ಅಸಂಗತವೇನೂ ಅಲ್ಲ. ಹಾಗಾಗಿ, ನಾಡನ್ನು, ನುಡಿಯನ್ನು “ತಾಯಿ’ ಎಂದು ಸಂಬೋಧಿಸಿದರೆ ಅದು ಒಂದು ಬಗೆಯಲ್ಲಿ ವಿಶೇಷ ಗೌರವ ಕೊಡುವ ವಿಧಾನ.ಹೆಣ್ಣಿನ ಕುರಿತ ಗೌರವ ಭಾವನೆಯಿಂದ ನಾಡುನುಡಿಯನ್ನು “ದೇವಿ’ಯೆಂದು ಪರಿಗಣಿಸಿದ್ದೇವೆಯೋ ; ಜೊತೆಗೆ ನಾಡು- ನುಡಿಯನ್ನು “ಹೆಣ್ಣು’ ಎಂದು ಪರಿಗಣಿಸಿದ ಕಾರಣದಿಂದ ಹೆಣ್ಣು ಮಕ್ಕಳ ಗೌರವವೂ ಅಧಿಕವಾಯಿತೋ… ತರ್ಕಿಸುವ ಅಗತ್ಯವಿಲ್ಲ. ಇದು ಒಂದಕ್ಕೊಂದು ಪೂರಕ ಸಂಗತಿಗಳು.”ಜನನಿ ತಾನೆ ಮೊದಲ ಗುರುವು’ ಎಂಬ ಮಾತಿದೆ. ಶಾಲೆಗಳಲ್ಲಿ ಅಧ್ಯಾಪಕಿಯರು ಏನನ್ನೇ ಕಲಿಸಲಿ, ಆದರೆ ತಾಯಿಯ ಕಲಿಕೆಗೆ ಅದಕ್ಕಿಂತ ಮೊದಲೇ ಆರಂಭವಾಗಿರುತ್ತದೆ. “ಅಮ್ಮ’ ಎಂದು ಉಚ್ಚರಿಸುವ ಪದದ ಮೊದಲ ಅಕ್ಷರ “ಅ’ವಾಗಿರುತ್ತದೆ. ಕನ್ನಡ ವರ್ಣಮಾಲೆಯ ಮೊದಲ ಅಕ್ಷರವೂ “ಅ’ವೇ. ಅದು ಅಮ್ಮನಿಂದ ಸಹಜವಾಗಿ ಕಲಿಯುವ ಮೊದಲ ಸ್ವರಾಕ್ಷರ. ಆದರೆ, ಇವತ್ತು ಮಕ್ಕಳು “ಮಮ್ಮಿ’ ಎಂದು ಉಚ್ಚರಿಸುತ್ತಾರೆ. ಅದು ಇಂಗ್ಲಿಶ್‌ ಕಲಿಕೆಯ ಪ್ರಭಾವ. “ಮಮ್ಮಿ’ಯ ಮೊದಲ ಅಕ್ಷರ “ಮ’. ಕನ್ನಡ ವರ್ಣಮಾಲೆಯಲ್ಲಿ ಇದು ಒಂದು ವ್ಯಂಜನಾಕ್ಷರ. ಮೊದಲ ಅಕ್ಷರವೇನೂ ಅಲ್ಲ.

ಇಂಗ್ಲಿಶ್‌ನಲ್ಲಿಯೂ ಅದಕ್ಕೆ ಮೊದಲ ಸ್ಥಾನವಿಲ್ಲ. ಹಾಗೆಂದು, ಇಂಗ್ಲಿಶ್‌ ನೆಲದಲ್ಲಿಯೇ ಹುಟ್ಟಿದವರಿಗೆ ಇದು ಅಸಹಜವೇನೂ ಅನ್ನಿಸಲಾರದು. “ಮಾ’ ಎಂದರೆ ಹಿಂದಿ ಭಾಷೆಯಲ್ಲಿ ತಾಯಿ ಎಂದರ್ಥ. ಆ ಭಾಷೆಗೆ ಅದು ಸರಿ. ಸುಲಭವಾಗಿ “ಅಮ್ಮ’ ಎಂದು ಹೇಳುವುದಕ್ಕೆ ಸಾಧ್ಯವಾಗುವ ಆಪ್ತ ಭಾಷೆ ನಮ್ಮದಾಗಿರುವಾಗ ನಾವು ಯಾಕೆ ಅದನ್ನು ದೂರವಿಟ್ಟು ಬೇರೆ ಭಾಷೆಯನ್ನು ಆಲಂಗಿಸಬೇಕು. ಹಾಗಿದ್ದರೆ, “ಕನ್ನಡಮ್ಮ’ ಎಂಬ ಪದಕ್ಕೆ ಏನರ್ಥ. ಕನ್ನಡವನ್ನು ದೂರವಿಟ್ಟರೆ ನಮ್ಮ ತಾಯಿಯನ್ನು ದೂರವಿಟ್ಟ ಹಾಗಾಗುವುದಿಲ್ಲವೆ?ಕನ್ನಡ ಭಾಷೆ ಎಂದರೆ “ಅಮ್ಮ’ ಎಂಬುದು ಸರಿಯೇ. ಜೊತೆಗೆ ನಮ್ಮೆಲ್ಲರ ಅಮ್ಮಂದಿರು ಆಡುವ ಭಾಷೆಯೂ ಅದೇ. “ಅಮ್ಮಾ’ ಎಂದು ಉಚ್ಚರಿಸುವುದು ಕೇವಲ ಅಮ್ಮನೆಂಬ ಜೀವಿಯನ್ನು ಕರೆಯುವ ಸಂಬೋಧನೆಯಾಗಿ ಮಾತ್ರವಲ್ಲ ; ಕಾಲಿಗೆ ಏನಾದರೂ ಚುಚ್ಚಿದಾಗ ಅದೇ ಉದ್ಗಾರ ನಮ್ಮ ಬಾಯಿಯಿಂದ ಹೊರಡುತ್ತದೆ. ಮೈಗೆಲ್ಲದಾರೂ ನೋವಾದಾಗ‌ ಯಾರಾದರೂ “ಹಾ! ಮಮ್ಮಿ’ ಎಂದು ಉದ್ಗರಿಸುತ್ತಾರೆಯೆ? ಅಮ್ಮ ಎಂದರೆ ಬಹಿರಂಗದಲ್ಲಿ ಕರೆಯುವ ಸಂಬೋಧನೆಯಷ್ಟೇ ಅಲ್ಲ , ಅದು ಅಂತರಂಗದ ಧ್ವನಿಯೂ ಹೌದು.

ಸಂತೋಷವಾದಾಗಲೂ ನೋವಾದಾಗಲೂ ಅದೇ ಶಬ್ದವನ್ನು ಉಚ್ಚರಿಸುತ್ತೇನೆ. “ಅಮ್ಮ’ ಎಂಬುದು ನಮ್ಮೊಳಗೆಯೇ ಇರುವಂಥಾದ್ದು.ಅದು ನಮ್ಮೊಳಗಿರುವ ಕನ್ನಡ! ಹಾಗಾಗಿಯೇ ಕನ್ನಡ ನಮ್ಮ ತಾಯಿ.ಒಂದು ಸರಳ ಸಮೀಕ್ಷೆಯ ಪ್ರಕಾರ ಭಾಷೆಯನ್ನು ನಿಜವಾಗಿ ಉಳಿಸುವವರು ಹೆಣ್ಣುಮಕ್ಕಳೇ ಹೊರತು ಹುಡುಗರಲ್ಲ. ಗೃಹಿಣಿಯರು ಹೆಚ್ಚಾಗಿ ಮನೆಯಲ್ಲಿಯೇ ಇರುವವರು. ಹಾಗಾಗಿ, ಅವರಿಗೆ ಸ್ವಂತ ಭಾಷೆ ಮಾತನಾಡುವುದು ಅನಿವಾರ್ಯ. ಈಗ ಹೆಣ್ಣು ಮಕ್ಕಳು ಉದ್ಯೋಗಕ್ಕೆ ಹೋಗಿ ಸ್ವತಂತ್ರರಾಗಿರಬಹುದು. ಆದರೂ ಅವರಿಗೆ ಮನೆಯ “ಎಟ್ಯಾಚ್‌ಮೆಂಟ್‌’. ಹಾಗಾಗಿ, ತಮ್ಮ ಭಾಷೆಯನ್ನು ಅನುಸರಿಸುತ್ತಾರೆ. ನಿಜವಾದ ಭಾವವನ್ನು ಅನಾವರಣಗೊಳಿಸುವುದು ಮಾತೃಭಾಷೆಯಲ್ಲವೆ? ಹಾಗೆ ನೋಡಿದರೆ ಕನ್ನಡದಂಥ ಭಾಷೆಯ ಕುರಿತು ಕೂಡ ಹೆಣ್ಣುಮಕ್ಕಳಲ್ಲಿಯೇ ಅಭಿಮಾನ ಅಧಿಕ !ವಸುಧಾ ರಾವ್‌

ವಸುಧಾ ರಾವ್‌

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ