ಪ್ರೀತಿ ಮತ್ತು ವಾಸ್ತವ

Team Udayavani, Jul 20, 2018, 6:00 AM IST

ಪ್ರೀತಿಸುವುದು ತಪ್ಪಲ್ಲ. ಆದರೆ ಪ್ರೀತಿ-ಪ್ರೇಮ ಎಂಬ ಕಮರಿಯಲ್ಲಿ ಬೀಳುವ ಮುನ್ನ ವಾಸ್ತವ ಬದುಕಿನ ಅರಿವೂ ಬಹಳ ಮುಖ್ಯ. ಪ್ರೀತಿಸಿದ್ದೇ ಆದರೆ ಅವರನ್ನೇ ಮದುವೆಯಾಗಿ ಜೀವನಪೂರ್ತಿ ಬಾಳುವ ಗಟ್ಟಿ ನಿರ್ಧಾರವೂ ಅಷ್ಟೇ ಮುಖ್ಯ. ಮದುವೆ-ಮಕ್ಕಳು ಎನ್ನುವುದು ಒಂದು ಸಂಸಾರ ಸಾಗರ. ಹಾಲಿಗೆ ಒಂದು ತೊಟ್ಟು ಹುಳಿ ಬಿದ್ದರೆ ಹಾಲು ಪೂರ್ತಿ ಕೆಟ್ಟುಹೋಗುವಂತೆ, ಸಂಸಾರದಲ್ಲೂ ಒಂದು ಕಪ್ಪು ಚುಕ್ಕೆ ಬಂದಿತೆಂದರೆ ಅದರ ಕಾವು ಮನೆಯ ಎಲ್ಲಾ ಸದಸ್ಯರಿಗೂ ತಟ್ಟುತ್ತದೆ.

ಘಟನೆ-1
“”ಮೇಡಂ, ನಮ್ಮ ಪಿಂಕಿಗೆ ಸ್ವಲ್ಪ ಬುದ್ಧಿ ಹೇಳಿ ಮೇಡಂ. ಯಾಕೋ ಎರಡು-ಮೂರು ತಿಂಗಳಿಂದೀಚೆಗೆ ಅವಳ ಸ್ವಭಾವ ತುಂಬಾ ಬದಲಾಗಿದೆ. ಮನೆಯಲ್ಲೂ ಎಲ್ಲರ ಹತ್ತಿರ ಜಗಳ. ಎಲ್ಲಾ ವಸ್ತುಗಳನ್ನೂ ಬಿಸಾಡುತ್ತಾಳೆ. ಕೋಪ ಅಂದರೆ ಕೋಪ. ಅಕ್ಕಪಕ್ಕದ ಮನೆಮಕ್ಕಳ ಜೊತೆಯೂ ಸೇರೋಲ್ಲ. ಕೆಲವರಿಗೆ ಹೊಡೆದೂ ಬಿಡುತ್ತಾಳೆ. ನಮ್ಮ ತಾಳ್ಮೆಯನ್ನು ಪರೀಕ್ಷಿಸುತ್ತಿದ್ದಾಳೆ ಮೇಡಂ. ದಯವಿಟ್ಟು ಏನಾದರೂ ಮಾಡಿ. ಅದ್ಸರಿ ಯಾಕೋ ಬರಬೇಕೂಂತ ಹೇಳಿ ಕಳ್ಸಿದ್ರಲ್ಲಾ ಏಕೆ” ಪಿಂಕಿಯ ಅಜ್ಜ ಕೇಳಿದರು.

“”ನಾನೂ ನಿಮ್ಮನ್ನು ಕರ್ಸಿದ್ದು ಅವಳದ್ದೇ ವಿಷಯಕ್ಕೆ. ಅವಳು ಕ್ಲಾಸಿನಲ್ಲೂ ಒಂದು ರೀತಿಯಾಗಿರ್ತಾಳೆ. ಯಾರ ಹತ್ರವೂ ಮಾತಾಡಲ್ಲ, ಬೆರೆಯೋಲ್ಲ, ಪಾಠಗಳಲ್ಲೂ ಹಿಂದೆ ಬಿದ್ದಿದ್ದಾಳೆ. ಎಲ್ಲಾ ವಿಷಯಗಳಲ್ಲೂ ಅ+ ತೆಗೆದುಕೊಳ್ಳುತ್ತಿದ್ದವಳು ಈ ಸಲ ಟೆಸ್ಟಿನಲ್ಲಿ ಒಂದು ವಿಷಯದಲ್ಲಿ ಫೇಲ್‌ ಬೇರೆ ಆಗಿದ್ದಾಳೆ. ಯಾಕೆ ಹೀಗಾಯ್ತು. ಅವಳ ಮನಸ್ಸಿಗೆ ಆಘಾತವಾಗೋ ಅಂತ ವಿಷಯ ಏನಾದ್ರೂ ಮನೇಲಿ ನಡೀತಾ? ನೀವೇನಾದ್ರೂ ಗಮನಿಸಿದ್ದೀರಾ” ಟೀಚರ್‌ ಕೇಳಿದರು.

ಮೇಡಂನ ಮಾತಿಗೆ ಪಿಂಕಿಯ ಅಜ್ಜ ತಲೆತಗ್ಗಿಸಿ ಸೂಕ್ಷ್ಮವಾಗಿ ಹೇಳಿದ ವಿಷಯ ತಿಳಿದು ಮೇಡಂಗೆ ಆಶ್ಚರ್ಯವಾಗಿ ಪಿಂಕಿಯನ್ನು ಕನಿಕರದಿಂದ ನೋಡಿ ತಲೆಸವರಿದರು. ಕಣ್ಣಲ್ಲಿ ನೀರೂ ಬಂದಿತು. ಪಿಂಕಿಯ ವಿಷಯ ಬೇರೆಯವರಿಂದ ಅವರಿಗೆ ತಿಳಿಯಿತು.

ಪಿಂಕಿಯ ತಾಯಿ ಹೈಸ್ಕೂಲಿನಲ್ಲಿರುವಾಗಲೇ ಪ್ರೇಮಪಾಶಕ್ಕೆ ಸಿಕ್ಕಿಬಿದ್ದಿದ್ದಳು. ವಿಷಯ ಬಹಿರಂಗವಾಗುತ್ತಲೇ ಅವಳ ತಂದೆ ಶಾಲೆ ಬಿಡಿಸಿ ಮದುವೆಯ ತರಾತುರಿ ತೋರಿದರು.  ತಮ್ಮದೇ ಧರ್ಮದ ಒಬ್ಬ ಹುಡುಗನೊಂದಿಗೆ ಆರು ತಿಂಗಳಿನ ಒಳಗೆ ಮದುವೆ ಮಾಡಿ ದೂರದ ಡಿಲ್ಲಿಗೆ ಕಳುಹಿಸಿಯೇ ಬಿಟ್ಟರು. ಮಗಳ ವಿಳಾಸವನ್ನು ಗುಟ್ಟಾಗಿಯೇ ಇಟ್ಟಿದ್ದರು. ಪಿಂಕಿಯ ತಾಯಿ ಗರ್ಭಿಣಿಯಾಗುವವರೆಗೂ ಎಲ್ಲಾ ಸರಿಯಾಗಿಯೇ ಇತ್ತು. ಆದರೆ ಅವಳ ಮುಂಚಿನ ಪ್ರೇಮಿ ಸುಮ್ಮನಿರದೆ ಪ್ರೇಯಸಿಯ ಹೊಸ ವಿಳಾಸವನ್ನು ಸಂಪಾದಿಸಿ ಅಲ್ಲಿಗೆ ಹೋಗಿ ಆಗಾಗ ಅವಳಿಗೆ ಫೋನ್‌ ಮಾಡಲಾರಂಭಿಸಿದ. ಈ ವಿಷಯ ಅವಳ ಗಂಡನಿಗೆ ಗೊತ್ತಾಗುತ್ತಿದ್ದಂತೆ ಹೆಂಡತಿಯನ್ನು ಹೆರಿಗೆಗೆಂದು ತವರಿಗೆ ಕಳುಹಿಸಿದವನು ಹೆಂಡತಿಯನ್ನು ಮತ್ತೆ ತನ್ನ ಬಳಿಗೆ ಕರೆಸಿಕೊಳ್ಳುವುದು ಬಿಡಲಿ, ಮಗುವಿನ ಮುಖವನ್ನು ನೋಡಲೂ ಬರಲಾರದಷ್ಟೂ ಕಠಿಣವಾಗಿಬಿಟ್ಟನು. ಕೆಲವಾರು ತಿಂಗ‌ಳುಗಳಲ್ಲಿ ವಿಚ್ಛೇದನವೂ ಆಗಿತ್ತು.

ಎಷ್ಟು ದಿವಸ ಅಂತ ಸಣ್ಣ ಪ್ರಾಯದ ಮಗಳನ್ನು ಮನೆಯಲ್ಲಿಟ್ಟುಕೊಳ್ಳುವುದು. ಪಿಂಕಿಗೆ 5-6 ವರ್ಷಗಳಾಗುತ್ತಲೇ ಅವಳ ಜವಾಬ್ದಾರಿಯನ್ನು ತಾವು ವಹಿಸಿಕೊಂಡು ಮಗಳಿಗೆ ಮರುಮದುವೆ ಮಾಡಲು ತಯಾರಾದರು ಹಿರಿಯರು. ತನ್ನ ತಾಯಿಗೆ ಇನ್ನೊಂದು ಮದುವೆಯಾಗುತ್ತದೆ. ತನ್ನನ್ನು ಬಿಟ್ಟು ಹೊರಟುಹೋಗುತ್ತಾರೆಂಬ ಕಟುಸತ್ಯ ಆ ಪುಟ್ಟ ಮನಸ್ಸಿಗೆ ಎಷ್ಟು ಆಘಾತವನ್ನುಂಟುಮಾಡಿತ್ತೋ ಏನೋ. ಕ್ರಮೇಣ ಅವಳ ವರ್ತನೆ ಬದಲಾಗುತ್ತಾ ಹೋಯಿತು ಎಂಬ ವಿಷಯ ಮೇಡಂಗೆ ಗೊತ್ತಾಗಿ ಅವರ ಮನಸ್ಸು ಮಗುವಿನ ಬಗ್ಗೆ ಮೃದುಧೋರಣೆ ತಳೆದಿತ್ತು.

ಘಟನೆ-2
ಶಾಂತಿ ತನ್ನ ತಾಯಿ-ತಂದೆಯರ ಇಚ್ಛೆಯಂತೆಯೇ ಅವರು ನೋಡಿದ ಹುಡುಗನನ್ನೇ ಮದುವೆಯಾಗಿದ್ದಳು. ಅವಳಿಗೆ ಮೂರು ಮಕ್ಕಳಾಗುವವರೆಗೆ ಅವರ ಸಂಸಾರ ನೌಕೆ ಯಾವ ಅಡಚಣೆಯಿಲ್ಲದೆ ತೇಲುತ್ತಿತ್ತು. ಆದರೆ, ಹೇಗೋ ಏನೋ ಶಾಂತಿಯ ಮನಸ್ಸು ಐಷಾರಾಮಿ ಬದುಕಿನ ಕಡೆಗೆ ವಾಲಿಕೊಂಡಿತ್ತು. ಆ ಬದುಕನ್ನು ಬದುಕಲು ಗಂಡನ ಸಂಬಳ ಎಳ್ಳಷ್ಟೂ ಸಾಕಾಗುತ್ತಿರಲಿಲ್ಲ. ಆರಕ್ಕೇರದ ಮೂರಕ್ಕಿಳಿಯದೆ ಇದ್ದ ಅವರ ಸಂಸಾರದ ಬಗ್ಗೆ ಶಾಂತಿಗೆ ಜುಗುಪ್ಸೆಯೆನಿಸತೊಡಗಿತು. ತಾನು ಕೆಲಸಕ್ಕೆ ಸೇರಿ ಸಂಪಾದಿಸಲು ತೀರ್ಮಾನಿಸಿದಳು. ಸಂಬಳ ಸ್ವಲ್ಪವೇ ಆದರೂ ಅದು ಅವಳ ಬೇಕು-ಬೇಡಗಳಿಗೆ ಪೂರೈಕೆಯಾಗುತ್ತಿತ್ತು. ಆದರೆ ವಿಧಿಯಾಟ ಬೇರೆಯೇ ಆಗಿತ್ತು. ಅವಳು ಕೆಲಸ ಮಾಡುತ್ತಿದ್ದ ಜಾಗಕ್ಕೆ ಆಗಾಗ ಭೇಟಿಕೊಡುತ್ತಿದ್ದ ಒಬ್ಬ ಯುವಕನ ಪರಿಚಯವಾಗಿ ಪ್ರೇಮಕ್ಕೆ ತಿರುಗಿತ್ತು. ಹತೋಟಿ ತಪ್ಪಿದ ಮನಸ್ಸನ್ನು ಹಿಡಿದಿಟ್ಟುಕೊಳ್ಳಲು ಸಾಧ್ಯವಾಗಲಿಲ್ಲ. ಅವನು ತನಗಿಂತ ಚಿಕ್ಕವನಾದರೂ ಅದು ಅವಳಿಗೆ ಸಮಸ್ಯೆಯೆನಿಸಲಿಲ್ಲ. ಒಂದು ದಿನ ಮೂರು ಮಕ್ಕಳನ್ನೂ , ಗಂಡನನ್ನೂ ಬಿಟ್ಟು ಜೋಡಿಹಕ್ಕಿಗಳು ದೂರಕ್ಕೆ ಹಾರಿಹೋಗಿದ್ದವು.

ಶಾಂತಿಗೆ ಮತ್ತೆ ಮಕ್ಕಳಾಗದಿದ್ದಾಗ ತನ್ನ ಒಂದು ಮಗುವನ್ನು ಪಡೆದುಕೊಳ್ಳಲು ಕಾನೂನಿನ ಮೊರೆಹೊಕ್ಕು ಪತ್ರಗಳೊಂದಿಗೆ ಮತ್ತೆ ಬಂದು ಅದರಲ್ಲಿ ಯಶಸ್ವಿಯೂ ಆದಳು. ಆದರೆ ಗಂಡನ ಶಾಪವೋ, ಅಥವಾ ಮಕ್ಕಳ ಅಸಹಾಯಕತೆಯೋ ಆ ಮಗುವಿನ ಜೀವನವನ್ನು ನಲುಗಿಸಿಬಿಟ್ಟಿತ್ತು. ಸ್ವಲ್ಪ ಬುದ್ಧಿ ಬಂದಿದ್ದ ಆ ಮಗು ತಂದೆ ಮತ್ತು ಒಡಹುಟ್ಟಿದವರನ್ನು ಅಗಲಿರಲಾರದೆ ಮಾನಸಿಕವಾಗಿ ಅಸ್ವಸ್ಥಗೊಂಡು ಶಾಲೆಯಲ್ಲಿ ಅವಿಧೇಯ ವಿದ್ಯಾರ್ಥಿಯಾಗಿ ಬಿಟ್ಟಿತ್ತು. ಕೆಟ್ಟ ಚಾಳಿಗಳನ್ನು ಕರಗತಗೊಳಿಸಿಕೊಂಡು ಬೇರೆ ಮಕ್ಕಳ ವಸ್ತುಗಳನ್ನು ಕದಿಯುವುದಲ್ಲದೆ, ಸರಿಯಾಗಿ ಶಾಲೆಗೂ ಹೋಗದೆ ತಪ್ಪಿಸಿಕೊಳ್ಳಲಾರಂಭಿಸಿದನು. ನಂತರ ಮನೋವೈದ್ಯರ ಸಲಹೆ ಮೇರೆಗೆ ಆ ಮಗುವನ್ನು ಮತ್ತೆ ಮೊದಲಿದ್ದ ಸ್ಥಳಕ್ಕೇ ಬಿಡಬೇಕಾಯಿತು.

ಘಟನೆ-3
ಪತಿಗೆ ಹೊಟೇಲ್‌ ಉದ್ಯಮ, ಮನಸೋ ಇಚ್ಛೆ ಖರ್ಚು ಮಾಡುವಷ್ಟು ಹಣ, ಓಡಾಡಲು ಕಾರು, ವಾಸಿಸಲು ಭವ್ಯವಾದ ಬಂಗಲೆ, ಮುದ್ದಾದ ಮೂರು ಹೆಣ್ಣುಮಕ್ಕಳು. ಮಕ್ಕಳಿಗೆ ಮನೆಯಲ್ಲಿಯೇ ನೃತ್ಯವನ್ನು ಕಲಿಸಲು ಒಬ್ಬ ಡ್ಯಾನ್ಸ್‌ ಮಾಸ್ಟರರನ್ನು ಗೊತ್ತುಮಾಡಿದ್ದಳು. ಕ್ರಮೇಣ ಆ ಮಾಸ್ಟರರ ಮೇಲೆ ಪ್ರೇಮಾಂಕುರವಾಗಿ ತಾನು ಮೂರು ಹೆಣ್ಣು ಮಕ್ಕಳ ತಾಯಿ ಎನ್ನುವುದನ್ನೂ ಮರೆತು, ಅವನ ಜೊತೆ ಪರಾರಿಯಾಗಿದ್ದಳು. ತನ್ನ ಮಕ್ಕಳಿಗೆ ಮಲತಾಯಿಯನ್ನು ತರಲು ಇಷ್ಟವಿಲ್ಲದೆ ತಾನೇ ಅಮ್ಮನ ಸ್ಥಾನದಲ್ಲಿ ನಿಂತು ಮಕ್ಕಳನ್ನು ನೋಡಿಕೊಳ್ಳುತ್ತಿದ್ದಾನೆ ಹೆತ್ತ ತಂದೆ.

ಈ ಮೂರೂ ಘಟನೆಗಳನ್ನು ಅವಲೋಕಿಸಿದಾಗ ತಪ್ಪು ಯಾರದು ಎಂಬ ಪ್ರಶ್ನೆ ಉದ್ಭವಿಸುವುದು ಸಹಜ. ಮೊದಲನೇ ಪ್ರಕರಣದಲ್ಲಿ ತಪ್ಪು- ಸಣ್ಣ ಪ್ರಾಯದಲ್ಲಿಯೇ ಪ್ರೀತಿಗೆ ಸಿಲುಕಿಕೊಂಡ ಹುಡುಗಿಯದೇ. ಅವಳ ಅಭಿಪ್ರಾಯವನ್ನು ಕೇಳದೆ ಬೇರೊಬ್ಬನೊಡನೆ ಮದುವೆ ಮಾಡಿಸಿದ ಹೆತ್ತವರದೇ, ಹುಡುಗಿಗೆ ಮದುವೆಯಾಗಿದ್ದರೂ ಮತ್ತೆ ಅವಳೊಡನೆ ಸಂಪರ್ಕ ಸಾಧಿಸಿಕೊಂಡ ಮಾಜಿ ಪೇಮಿಯದೇ, ತನ್ನ ರಕ್ತ ಹಂಚಿಕೊಂಡು ಹುಟ್ಟಿದ ಮಗುವನ್ನೂ ನೋಡಲೂ ಬಾರದ ಕಟು ಮನಸ್ಸಿನ ಅಪ್ಪನದೇ? ಯಾವುದಕ್ಕೂ ಸರಿಯಾದ ಉತ್ತರ ಸಿಗುವುದಿಲ್ಲ.

ಎರಡನೆಯ ಘಟನೆಯಲ್ಲಿ ಮಾತ್ರ ತನ್ನ ಕರುಳಬಳ್ಳಿಗಳು ಪುಟ್ಟದಾಗಿದ್ದರೂ ಸುಖಲೋಲುಪತೆಗೆ ಓಗೊಟ್ಟು ಪ್ರಿಯಕರನೊಡನೆ ಹಾರಿಹೋದ ಶಾಂತಿಯದ್ದು ಅಕ್ಷಮ್ಯ ಅಪರಾಧ. ಹಾಗೆಯೇ ಎಲ್ಲಾ ಥರದ ಸೌಲಭ್ಯಗಳಿದ್ದೂ, ಐಷಾರಾಮಿ ಜೀವನವನ್ನು ಅನುಭವಿಸುತ್ತಿದ್ದೂ , ನೃತ್ಯ ಶಿಕ್ಷಕನೊಡನೆ ಪರಾರಿಯಾದ ಮಹಿಳೆಯ ಬಗ್ಗೆ ಆಲೋಚನೆ ಮಾಡಿದರೆ ಅವಳಲ್ಲಿ ನಮಗೆ ಪ್ರಧಾನವಾಗಿ ತೋರುವುದು ಕಾಮುಕ ಭಾವನೆ ಮಾತ್ರ. ತನಗಿರುವುದು ಮೂರು ಜನ ಹೆಣ್ಣು ಮಕ್ಕಳು. ಮುಂದೆ ಅವರ ಭವಿಷ್ಯದ ಬಗ್ಗೆ ಆಲೋಚನೆಯನ್ನೂ ಮಾಡದೆ ತನ್ನ ಹೊಸ ಬದುಕನ್ನು ರೂಪಿಸಿಕೊಳ್ಳಲು ಬೇರೆಯ ಪ್ರಪಂಚಕ್ಕೆ ಕಾಲಿಟ್ಟಿದ್ದಳಲ್ಲ ಆ ಮಹಾತಾಯಿ, ನಿಜಕ್ಕೂ ಇಂಥ ಹೆಂಗಸರೂ ಇರುತ್ತಾರೆಯೇ ಎಂದು ಆಶ್ಚರ್ಯವಾಗುತ್ತದೆ.

ಇವುಗಳನ್ನು ಕೂಲಂಕಷವಾಗಿ ವಿಶ್ಲೇಷಿಸಿದಾಗ ಎಲ್ಲರಿಗೂ ತೋರುವುದು ಒಂದೇ, ತನ್ನದಲ್ಲದ ತಪ್ಪಿಗೆ ಶಿಕ್ಷೆ ಅನುಭವಿಸುತ್ತಿರುವುದು ಮುಗ್ಧ ಮಕ್ಕಳು. ಮಕ್ಕಳ ಮನಸ್ಸು ತಿಳಿನೀರಿನಂತೆ ಸ್ವತ್ಛವಾಗಿರುತ್ತದೆ. ಅದಕ್ಕೆ ಒಂದು ಕಲ್ಲು ಬಿಸಾಡಿದರೆ ಏಳುವ ತರಂಗಗಳಂತೆ ಅದು ಆಘಾತಕ್ಕೊಳಪಟ್ಟು ಹೇಳಿಕೊಳ್ಳಲಾರದ ನೋವನ್ನು ಅನುಭವಿಸುತ್ತದೆ. ಆ ನೋವಿನ ಮತ್ತೂಂದು ರೂಪವೇ ನಾವು ಅವರಲ್ಲಿ ಕಾಣುವ ಸುಳ್ಳು , ಕಳ್ಳತನ, ಜಗಳಗಂಟಿತನ ಮುಂತಾದ ಗುಣಗಳು. ಸುಪ್ತ ಮನಸ್ಸು ಆಘಾತಕ್ಕೊಳಗಾದಾಗ ಅವರಲ್ಲಿ ಉಂಟಾಗುವ ಖನ್ನತೆಗಳಿಂದ ಅವು ಅಡ್ಡದಾರಿ ಹಿಡಿಯುವ ಸಂಭವವೂ ಉಂಟು. ಮುಂದೆ ಮಕ್ಕಳು ಪ್ರಾಪ್ತರಾದಾಗ ತನ್ನ ತಾಯಿಯ ದುಷ್ಟತನಕ್ಕೆ ರೋಸಿಹೋಗಿ ಮದುವೆಯನ್ನೇ ನಿರಾಕರಿಸಬಹುದು, ದ್ವೇಷಕ್ಕೊಳಗಾದ ಮನಸ್ಸು ಹೆತ್ತ ತಾಯಿಯನ್ನೇ ಕೊಲ್ಲುವ ಕಠಿಣ ನಿರ್ಧಾರವನ್ನು ತೆಗೆದುಕೊಳ್ಳಬಹುದು.

ಇತ್ತೀಚೆಗೆ ವಿಚ್ಛೇದನಕ್ಕಾಗಿ ಅರ್ಜಿ ಸಲ್ಲಿಸಿದ್ದ ಪತಿ-ಪತ್ನಿಯರು ತಮ್ಮ ಮಗುವಿನ ಬಗ್ಗೆ ಸರಿಯಾಗಿ ನಿರ್ಧಾರ ತೆಗೆದುಕೊಳ್ಳದಿದ್ದರೆ ಮಗುವನ್ನು ತಮ್ಮ ಸುಪರ್ದಿಗೆ ತೆಗೆದುಕೊಂಡು ತಾವೇ ಏನಾದರೂ ಒಂದು ವ್ಯವಸ್ಥೆಯನ್ನು ಮಾಡಿಕೊಡುತ್ತೇವೆ ಎಂದು ಕೋರ್ಟ್‌ ತನ್ನ ತೀರ್ಪನ್ನು ಕೊಟ್ಟಿರುವುದನ್ನು ಇಲ್ಲಿ ಸ್ಮರಿಸಬಹುದು.

ಪ್ರೀತಿಸುವುದು ತಪ್ಪಲ್ಲ. ಆದರೆ ಪ್ರೀತಿ-ಪ್ರೇಮ ಎಂಬ ಕಮರಿಯಲ್ಲಿ ಬೀಳುವ ಮುನ್ನ ವಾಸ್ತವ ಬದುಕಿನ ಅರಿವೂ ಬಹಳ ಮುಖ್ಯ. ಪ್ರೀತಿಸಿದ್ದೇ ಆದರೆ ಅವರನ್ನೇ ಮದುವೆಯಾಗಿ ಜೀವನಪೂರ್ತಿ ಬಾಳುವ ಗಟ್ಟಿ ನಿರ್ಧಾರವೂ ಅಷ್ಟೇ ಮುಖ್ಯ. ಮದುವೆ-ಮಕ್ಕಳು ಎನ್ನುವುದು ಒಂದು ಸಂಸಾರ ಸಾಗರ. ಹಾಲಿಗೆ ಒಂದು ತೊಟ್ಟು ಹುಳಿ ಬಿದ್ದರೆ ಹಾಲು ಪೂರ್ತಿ ಕೆಟ್ಟುಹೋಗುವಂತೆ, ಸಂಸಾರದಲ್ಲೂ ಒಂದು ಕಪ್ಪು ಚುಕ್ಕೆ ಬಂದಿತೆಂದರೆ ಅದರ ಕಾವು ಮನೆಯ ಎಲ್ಲಾ ಸದಸ್ಯರಿಗೂ ತಟ್ಟುತ್ತದೆ.

ಶ್ರೀಮಂತರಂತೆ ಬದುಕಬೇಕೆನ್ನುವ ಹಂಬಲ ಎಲ್ಲರಿಗೂ ಇರುವುದು ಸಹಜ. ಆದರೆ ನಮ್ಮ ಆದಾಯದ ಚೌಕಟ್ಟನ್ನು ದಾಟಿ ಬದುಕನ್ನು ನಡೆಸುವುದು ಮೂರ್ಖತನ. ಅಂಥ ಹೀನ ಬದುಕೇ ಈ ಅನರ್ಥಕ್ಕೆಲ್ಲ ಕಾರಣ. ಎಷ್ಟೋ ಕೋಟ್ಯಂತರ ಗೃಹಿಣಿಯರು ಚೊಕ್ಕವಾಗಿ ಸಂಸಾರ ನಡೆಸುತ್ತ ಬಾಳು ಸವೆಸುತ್ತಿಲ್ಲವೇ. ಅತಿಯಾದ ಆಸೆಯೇ ದುರಂತಕ್ಕೆ ಕಾರಣ. ದುರಾಸೆಯಿಂದ ದೂರವಿದ್ದು, ಅರಿಷಡ್ವರ್ಗಗಳನ್ನು ಜಯಿಸಿ ಬಾಳುವುದೇ ಉತ್ತಮ  ಗೃಹಿಣಿಯ ಲಕ್ಷಣ. ದುಡುಕಿ ತೆಗೆದುಕೊಂಡ ತೀರ್ಮಾನದಿಂದ ಬಾಳು ಹಸನಾಗುವುದಿಲ್ಲ. ಮಕ್ಕಳು ದೇವರ ಹಾಗೆ. ನಿಷ್ಕಳಂಕ ಮನಸ್ಸು ಅವರದು. ಮಾಡದ ತಪ್ಪಿಗೆ, ನಿಮ್ಮ ಹೊಟ್ಟೆಯಲ್ಲಿ ಹುಟ್ಟಿದ ತಪ್ಪಿಗೆ ಅವರಿಗೆ ದಯವಿಟ್ಟು ಶಿಕ್ಷೆ ಕೊಡಬೇಡಿ. ನಿಮ್ಮದೇ ಸಂತೋಷದ ಗುಂಗಿನಲ್ಲಿ ಅವರನ್ನು ಅನಾಥರನ್ನಾಗಿ ಮಾಡಬೇಡಿ. ಸಮಾಜದಲ್ಲಿ ಸತøಜೆಯಾಗಿ ಬದುಕುವಂಥ ಅವಕಾಶವನ್ನು ಮಕ್ಕಳಿಗೆ ನೀಡಿ. “ಗೃಹಿಣಿ ಗೃಹಮುಚ್ಯತೇ’.

ಪುಷ್ಪಾ ಎನ್‌. ಕೆ. ರಾವ್‌


ಈ ವಿಭಾಗದಿಂದ ಇನ್ನಷ್ಟು

  • ಗಂಡನಾದವನು ಸಾಮಾನ್ಯ ನಾಗರಿಕನಾಗಿರುತ್ತಾನೆ ಎಂದಿಟ್ಟುಕೊಳ್ಳಿ. ಸಮಾಜದಲ್ಲಿ ಅವನಿಗೆ ಘನತೆಯ ಸ್ಥಾನಮಾನವೇನೂ ಇರುವುದಿಲ್ಲ. ಹೇಳಿಕೊಳ್ಳುವ ಸಾಧನೆಯನ್ನೇನೂ...

  • ಟಿವಿ ಎಂಬ ಮಾಯಾಂಗನೆಯು ಮನುಷ್ಯನನ್ನು ಆವರಿಸಿಕೊಳ್ಳದ ಕಾಲದಲ್ಲಿ ನನ್ನ ವಿದ್ಯಾಭ್ಯಾಸ ಮುಗಿದಿತ್ತು ಎಂಬುದು ನನ್ನ ಪೂರ್ವಜನ್ಮ ಪುಣ್ಯದ ಫ‌ಲ. ಆಗಿನ ಹಳ್ಳಿಗಳ...

  • ಕಥನ ಸಾಹಿತ್ಯದ ಮೂಲಕ ಅಪಾರ ಓದುಗ ವರ್ಗವನ್ನು ಸೃಷ್ಟಿಸಿದ ಕನ್ನಡದ ಜನಪ್ರಿಯ ಲೇಖಕಿಯರಲ್ಲಿ ಪದ್ಮಾ ಶೆಣೈ ಕೂಡ ಒಬ್ಬರು. ಸ್ವಾತಂತ್ರ್ಯೋತ್ತರ ಅವಧಿಯಲ್ಲಿ ತಮ್ಮ...

  • ರಾಜಕುಮಾರಿ ಮನೆಯೊಳಗೆ ಬಗ್ಗಿ ನೋಡಿದಳಂತೆ. ಆಗ ಕಂಡದ್ದೇನು ಗೊತ್ತಾ? ಅಲ್ಲಿದ್ದಾಕೆಯ ಕೋರೆದಾಡೆಗಳು ಹೊರ ಬಂದಿದ್ದವು. ಇನ್ನೇನು ರಾಜಕುಮಾರಿಯನ್ನು ಸುಟ್ಟು ತಿನ್ನುವ...

  • ದಕ್ಷಿಣದಿಂದ ಉತ್ತರಕ್ಕೆ ಹೋಗಿ ಬಾಲಿವುಡ್‌ ಅಂಗಳದಲ್ಲಿ ತಮ್ಮದೇ ಆದ ಛಾಪು ಮೂಡಿಸಿ ಮಿಂಚುತ್ತಿರುವ ನಟಿಯರ ಸಂಖ್ಯೆ ಸಾಕಷ್ಟು ದೊಡ್ಡದಿದೆ. ಇನ್ನು, ಇತ್ತೀಚೆಗೆ...

ಹೊಸ ಸೇರ್ಪಡೆ