ಕೇಳಬಯಸುವಿರೇನು ಇವರ ಕಥೆಯ

Team Udayavani, May 24, 2019, 6:00 AM IST

ಹೆದ್ದಾರಿಯ ಎರಡೂ ಬದಿಯಲ್ಲೂ ಸಾಲು ಸಾಲು ಮರಗಳು.ಅವುಗಳನ್ನು ನೋಡುತ್ತಿದ್ದರೆ ಕಣ್ಣಿಗೇನೋ ಹಬ್ಬ. ಅದೆಷ್ಟು ವರುಷಗಳು ಬೇಕಾಯಿತೋ ಆ ಗಿಡಗಳು ಹೆಮ್ಮರವಾಗಿ ಬೆಳೆಯಲು. ಗಿಡವಾಗಿದ್ದಂಥವು ಇಂದು ಮರವಾಗಿ ಬೆಳೆದು ಜೀವಸಂಕುಲಕ್ಕೆ ಆಶ್ರಯದಾಣವಾಗಿವೆ. ಬಳಲಿ ಬಂದವರಿಗೆ ಜಾತಿ-ಧರ್ಮ ಎಂಬ ಭೇದ-ಭಾವವಿಲ್ಲದೆ ಪ್ರತಿಯೊಂದು ಜೀವಿಗೂ ನಾವಿದ್ದೇವೆ ಬಾ ಎಂದು ಕೈ ಬೀಸಿ ಕರೆಯುತ್ತವೆ.

ಆ ಪ್ರದೇಶದಲ್ಲಿದ್ದ ಸಾಲುಸಾಲು ಮರಗಳನ್ನು ಕಂಡ ಪ್ರತಿಯೊಬ್ಬರಲ್ಲಿಯೂ ಒಮ್ಮೆ ಆಶ್ಚರ್ಯಚಕಿತರಾಗಿ ಸಾಲು ಮರದ ತಿಮ್ಮಕ್ಕ ಏನಾದರೂ ಈ ಮರಗಳನ್ನು ಪಾಲನೆ ಮಾಡಿದ್ದಾರಾ, ಎಂಬ ಪ್ರಶ್ನೆ ಮೂಡಿದರೂ ತಪ್ಪಾಗ‌ಲಾರದು. ಅಷ್ಟೊಂದು ಸುಂದರವಾಗಿತ್ತು ಆ ಪ್ರದೇಶ. ಅಂದ ಹಾಗೆ, ಈ ಪ್ರದೇಶ ಬೇರೆ ಎಲ್ಲಿಯೋ ಇರುವುದಲ್ಲ, ರಾಷ್ಟ್ರೀಯ ಹೆದ್ದಾರಿ 73ರ ಮಂಗಳೂರಿನಿಂದ ಬೆಂಗಳೂರಿಗೆ ಪ್ರಯಾಣಿಸುವಾಗ ಕಂಡುಬರುವ ನಯನಮನೋಹರ ಮರಗಳ ಚಿತ್ರಣವಿದು.

ವಿಪರ್ಯಾಸವೆಂದರೆ, ಇನ್ನು ಮುಂದೆ ಈ ಮರಗಳ ನೆನಪು ಕೇವಲ ನೆನಪಾಗಿಯೇ ಉಳಿಯಬೇಕಷ್ಟೆ. ಮಾನವ ತನ್ನ ಸ್ವಾರ್ಥಕ್ಕಾಗಿ ಏನೆಲ್ಲ ಮಾಡುತ್ತಿರುವಾಗ, ಇನ್ನು ದಷ್ಟಪುಷ್ಟವಾಗಿ ಬೆಳೆದಿರುವ ಈ ಮರಗಳು ಅವನಿಗೆ ಯಾವ ಲೆಕ್ಕ. ಹೆದ್ದಾರಿಯನ್ನು ಅಗಲೀಕರಣ ಮಾಡುವುದರ ಮೂಲಕ ಮಂಗಳೂರು-ಬೆಂಗಳೂರು ನಡುವಿನ ಪ್ರಯಾಣ ಸಮಯವನ್ನು ಕಡಿಮೆಗೊಳಿಸುವುದು ಈ ಯೋಜನೆಯ ಉದ್ದೇಶ. ಆದರೆ, ರಸ್ತೆ ಅಗಲೀಕರಣ ಎಂಬ ಹೆಸರಿನಲ್ಲಿ ಹೆದ್ದಾರಿಯ ಬದಿಯಲ್ಲಿರುವ ಸಾಲು-ಸಾಲು ಮರ, ಮನೆ, ಅಂಗಡಿ-ಮುಂಗಟ್ಟು, ಗದ್ದೆ-ತೋಟಗಳು ಸರ್ವನಾಶವಾಗಿದೆ. ಇದಕ್ಕೆ ಪ್ರತಿಯಾಗಿ ಸರ್ಕಾರ ಧನಸಹಾಯವನ್ನು ನೀಡಿದೆ. ಆದರೆ, ಶತಮಾನಗಳಿಂದ ಬೆಳೆದು ಬಂದು ಜೀವಸಂಕುಲವನ್ನೇ ರಕ್ಷಿಸುತ್ತಿದ್ದ ಈ ಸಹಸ್ರಾರು ಮರಗಳ ಋಣವನ್ನು ತೀರಿಸಲು ಅದೆಷ್ಟೇ ಧನ ಸೌಲಭ್ಯ ನೀಡಿದರೂ ಸಾಧ್ಯವಿಲ್ಲ.

ಅಯ್ಯೋ! ನಮಗಿನ್ನಿರುವುದು ಕೇವಲ ಕೆಲವೇ ದಿನಗಳು. ನಾವು ಕೊನೆ ಕಾಣುತ್ತಿದ್ದೇವೆ. ಈ ನೀಚ ಮನುಜ ತನ್ನ ಸ್ವಾರ್ಥಕ್ಕಾಗಿ ನಮ್ಮ ಸಂಕುಲವನ್ನೇ ನಾಶ ಮಾಡುತ್ತಿದ್ದಾನೆ- ಎಂದು ಮರಗಳು ರೋದಿಸುತ್ತಿದ್ದರೆ, ಅವುಗಳ ಮೂಕ ವೇದನೆಯನ್ನು ಕೇಳುವವರು ಯಾರೂ ಇಲ್ಲ. ದಿನಕ್ಕೆ ಸುಮಾರು 5-6 ಮರಗಳು ನೆಲಕ್ಕೆ ಉರುಳುತ್ತಿದ್ದವು. ಅವುಗಳನ್ನು ತುಂಡು ತುಂಡಾಗಿ ಕತ್ತರಿಸಿ ಸಾಗಿಸುತ್ತಿರುವುದನ್ನು ಕಂಡರೆ ಕರುಣೆ ಇದ್ದವರಿಗೆ ಒಮ್ಮೆ ಎದೆಗೆ ಚೂರಿ ಹಾಕಿದ ಅನುಭವವಾಗದೇ ಇರದು. ಮರಗಳನ್ನು ಕಡಿಯಲು ಮುಂದಾಗಿರುವ ಸರ್ಕಾರ ಗಿಡಗಳನ್ನು ನೆಡುವ ಬಗ್ಗೆಯಾಗಲಿ, ಪರಿಸರ ಸಂರಕ್ಷಣೆಗಾಗಲಿ ಯಾವುದೇ ಪರ್ಯಾಯ ಕ್ರಮವನ್ನೂ ಕೈಗೊಂಡಿಲ್ಲ.

ಮಾನವ ಎಷ್ಟು ಕ್ರೂರಿ ಅಲ್ಲವೆ? ತನ್ನ ಸುಖಕ್ಕಾಗಿ ಯಾರನ್ನೂ, ಹೇಗೆ ಬೇಕಾದರೂ ಪಳಗಿಸುತ್ತಾನೆ. ನಗರ ಪ್ರದೇಶದಲ್ಲಂತೂ ಮರಗಳ ಸುಳಿವೇ ಇಲ್ಲ ! ಇನ್ನು ಹಳ್ಳಿಯಲ್ಲಿದ್ದ ಮರಗಳ ಮೇಲೂ ಅವನ ವಕ್ರ ದೃಷ್ಟಿ ಬಿದ್ದು ಅವುಗಳೂ ಇಂದು ನಾಶದ ಅಂಚಿನಲ್ಲಿದೆ. ಅಂದು ರಾಜನಾಗಿದ್ದ ಅಶೋಕ ತನ್ನ ಪ್ರಜೆಗಳ ಹಿತಾಸಕ್ತಿಗೆಂದು ರಸ್ತೆಯ ಬದಿಯಲ್ಲಿ ಮರಗಳನ್ನು ಬೆಳೆಸಿದ್ದರು. ಆದರೆ, ಇಂದು ಜನರ ಆಸಕ್ತಿಗಾಗಿಯೇ ಮರಗಳ ನಾಶವಾಗುತ್ತಿದೆ. ಎಂಥ ಕಾಲ ಬಂತು ನೋಡಿ! ಸ್ವಾರ್ಥಕ್ಕಾಗಿಯೋ, ನಗರಾಭಿವೃದ್ಧಿ ಯೋಜನೆಗಾಗಿಯೋ ಈ ಥರ ಏಕಾಏಕಿ ಬೇಕಾ ಬಿಟ್ಟಿ ಮರಗಳನ್ನು ಕಡಿಯುವ ಮೊದಲು ಸ್ವಲ್ಪ ಮಟ್ಟಿನ ಚಿಂತನೆ ನಡೆಸಿ ಮರಗಿಡಗಳನ್ನು ಬೆಳೆಸಿ ಉಳಿಸುವ ಕೆಲಸವಾಗ ಬೇಕು.

ಸುಷ್ಮಾ ಎಂ. ಎಸ್‌.
ತೃತೀಯ ಪತ್ರಿಕೋದ್ಯಮ ವಿದ್ಯಾರ್ಥಿನಿ,
ವಿವೇಕಾನಂದ ಕಾಲೇಜು, ನೆಹರುನಗರ, ಪುತ್ತೂರು

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

  • ಅದು ಜುಲೈ ತಿಂಗಳ ಕೊನೆಯ ವಾರ. ಜೀವನದ ಹೊಸ ಮೆಟ್ಟಿಲು ಏರುತ್ತಿರುವ ಸಂತೋಷ ಒಂದೆಡೆಯಾದರೆ, ವಿದ್ಯಾರ್ಥಿ ಜೀವನದ ಕೊನೆಯ ಹಂತ ಎನ್ನುವ ಬೇಸರ ಇನ್ನೊಂದೆಡೆ. ಅದು...

  • ಪುಟ್ಟ ಪುಟ್ಟ ಹೆಜ್ಜೆಗಳನ್ನಿಡುತ್ತ, ಬ್ಯಾಗ್‌ ಹಾಕಿಕೊಂಡು ಶಾಲೆಗೆ ಹೋಗುವ ಮಕ್ಕಳನ್ನು ನೋಡುವಾಗ, ನನಗೆ ನನ್ನ ಶಾಲಾ ಜೀವನದ ಆ ಸುಂದರ ಕ್ಷಣಗಳ ನೆನಪಾಗುತ್ತದೆ....

  • ಆಗಷ್ಟೆ ಸೂರ್ಯ ಮುಳುಗಲಾರಂಭಿಸಿದ್ದ. ಪಕ್ಷಿಗಳೆಲ್ಲ ಚಿಲಿಪಿಲಿ ಗುಟ್ಟುತ್ತ ತಮ್ಮ ತಮ್ಮ ಗೂಡುಗಳಿಗೆ ಮರಳಲು ಹೊರಡುತ್ತಿದ್ದವು. ಇತ್ತ ಚಂದಿರ ತನ್ನ ಕರ್ತವ್ಯ ನಿರ್ವಹಿಸುವ...

  • ಕೆಲ ದಿನಗಳ ಹಿಂದಷ್ಟೇ ರಸ್ತೆ ಬದಿಯಲ್ಲಿ ನಿಂತು ಬಸ್ಸಿಗಾಗಿ ಕಾಯುತ್ತಿದ್ದಾಗ ಪುಟ್ಟ ಹಕ್ಕಿಯೊಂದು "ಚಿಂವ್‌... ಚಿಂವ್‌' ಎನ್ನುತ್ತ ಅತ್ತಿಂದಿತ್ತ ಹಾರಾಡುತ್ತಿತ್ತು....

  • ಅಮ್ಮ ಎಂದರೆ ಮೊದಲಿಗೆ ನೆನಪಾಗುವುದು ಪ್ರೀತಿ, ಮಮತೆ, ಅಕ್ಕರೆ. ಅಮ್ಮನ ಬಗ್ಗೆ ಎಷ್ಟೇ ಹೇಳಿದರೂ ಸಾಲದು ಎಂದು ಹೇಳಿದರೆ ಯಾರು ಇಲ್ಲವೆನ್ನುತ್ತಾರೆ ! ಶಾಲಾ-ಕಾಲೇಜಿಗೆ...

ಹೊಸ ಸೇರ್ಪಡೆ