CONNECT WITH US  

ಸಮೂಹ ಭರತನಾಟ್ಯದ ಸುಂದರ ಪ್ರಸ್ತುತಿ

ಸನಾತನ ನಾಟ್ಯಾಲಯದ ವತಿಯಿಂದ ಮಂಗಳೂರು ಪುರಭವನದಲ್ಲಿ ನಡೆದ ಸುಂದರ-ಮುರಳಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಹಿರಿಯ ಸಂಗೀತ ವಿದ್ವಾಂಸರಾದ ದಿ| ಎನ್‌.ಕೆ. ಸುಂದರಾಚಾರ್ಯ ಮತ್ತು ನಾಟ್ಯಾಚಾರ್ಯ ದಿ| ಕೆ. ಮುರಳೀಧರ ರಾವ್‌ ಸಂಸ್ಮರಣಾ ಕಾರ್ಯಕ್ರಮದ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಸನಾತನ ನಾಟ್ಯಾಲಯದ ನೃತ್ಯಗುರು ಕಲಾಶ್ರೀ ವಿ|ಶಾರದಾಮಣಿ ಶೇಖರ್‌ ಮತ್ತು ವಿ| ಶ್ರೀಲತಾ ನಾಗರಾಜ್‌ ಅವರ ಶಿಷ್ಯೆಯರಾದ ಶಾಶ್ವತಿ ಸಚಿನ್‌ ಜೈನ್‌, ಧನಲಕ್ಷ್ಮೀ ದೀಪಕ್‌ ಕುಮಾರ್‌ ಬಿ., ಭಾಗ್ಯಶ್ರೀ ಶೆಟ್ಟಿ, ಅಂಜನಾ ಟಿ.ವಿ., ಕೌಸಲ್ಯ ಕೆ. ನಾಯ್ಕ, ವಾಣಿಶ್ರೀ ವಿ., ವರ್ಷಾ ಕಾಕತ್ಕಾರ್‌, ಪ್ರಜ್ಞಾ , ವಿಶಾಖ ಎ. ಮತ್ತು ಸ್ಫೂರ್ತಿ ಎಸ್‌. ಭಟ್‌ ಪ್ರಸ್ತುತ ಪಡಿಸಿದ ಸಮೂಹ ಭರತನಾಟ್ಯ ಅರ್ಥಪೂರ್ಣವಾಗಿ ಮೂಡಿ ಬಂತು. 

ಪ್ರಾರಂಭದಲ್ಲಿ ಗೋಪಾಲಕೃಷ್ಣ ಭಾರತಿಯವರ ವಸಂತ ರಾಗ, ಖಂಡಜಾತಿ, ಅಟ್ಟತಾಳದ ಶಿವನ ಕುರಿತಾದ ಕೀರ್ತನೆಯ ನೃತ್ಯದ ಬಳಿಕ ಪ್ರಸ್ತುತ ಪಡಿಸಿದ ದರುವರ್ಣದ ಸಮೂಹ ಪ್ರಯೋಗ ಆಕರ್ಷಣೀಯವಾಗಿತ್ತು. ಮಲಯಧ್ವಜದ ಪಾಂಡ್ಯರಾಜನ ಮಗಳಾದ ಪಾರ್ವತಿಯನ್ನು ವರ್ಣಿಸುತ್ತಾ ಸುಂದರವಾದ ಶರೀರವುಳ್ಳವಳು, ಹಣೆಯಲ್ಲಿ ಚಂದ್ರಾಂಕಿತವನ್ನು ಹೊಂದಿರುವ ಹೇ... ಚಾಮುಂಡೇಶ್ವರಿಯೇ ನಿನ್ನ ಭಕ್ತರನ್ನು ಸಲಹಮ್ಮ ಎಂದು ವರ್ಣಿಸುವ ಈ ದರುವರ್ಣಕ್ಕೆ 10 ಜನ ಕಲಾವಿದರು ಪ್ರಸ್ತುತ ಪಡಿಸಿದ ಸಮೂಹ ಭರತನಾಟ್ಯ ಸುಂದರವಾಗಿ ಮೂಡಿಬಂತು. ಬಳಿಕ ಪಾರ್ವತಿ, ಲಕ್ಷ್ಮೀ, ಸರಸ್ವತಿ, ಮುಂತಾದ ದೇವರನ್ನು ಸ್ತುತಿಸುವ ರಾಗಮಾಲಿಕೆ ಆದಿತಾಳದ ನೃತ್ಯವನ್ನು ಪ್ರದರ್ಶಿಸಿ ಕೊನೆಯಲ್ಲಿ ಮಧುರೈ ಕೃಷ್ಣನ್‌ರವರ ರಚನೆಯ ಕೃಷ್ಣನನ್ನು ವರ್ಣಿಸುವ ಬೃಂದಾವನ ಸಾರಂಗಿ ರಾಗದ ಆದಿತಾಳದ ತಿಲ್ಲಾನದೊಂದಿಗೆ ಮುಕ್ತಾಯಗೊಳ್ಳುತ್ತದೆ. ಹಿಮ್ಮೇಳದಲ್ಲಿ, ನಟುವಾಂಗ ವಿದುಷಿ ಶಾರದಾಮಣಿ ಶೇಖರ್‌, ಹಾಡುಗಾರಿಕೆ ಶರತ್‌ ಕುಮಾರ್‌, ಮೃದಂಗ ಬಾಲಚಂದ್ರ ಭಾಗವತ್‌ ಉಡುಪಿ ಹಾಗೂ ಕೊಳಲು ಅಭಿಷೇಕ್‌ ಎನ್‌.ಬಿ. ಸಹಕರಿಸಿದರು.

 ಗೌತಮಿ ಮಂಗಳೂರು 


Trending videos

Back to Top