CONNECT WITH US  

ಯಶಸ್ವಿ ಇದ್ದರೆ ಯಶಸ್ಸು ಗ್ಯಾರಂಟಿ

ಅಂಗವೈಕಲ್ಯವನ್ನು ಮೆಟ್ಟಿನಿಂತ ಚದುರಂಗದ ಚತುರೆ

ಯಶಸ್ವಿಗೆ ಚೆಸ್‌ನಲ್ಲಿ ಭಾರೀ ಆಸಕ್ತಿ. ಪ್ರಾಥಮಿಕ ಶಾಲೆಯಲ್ಲಿದ್ದಾಗಲೇ, ಸಾಮಾನ್ಯ ಮಕ್ಕಳ ಚೆಸ್‌ ಸ್ಪರ್ಧೆಗಳಲ್ಲಿ ಭಾಗವಹಿಸಿ ಹಲವಾರು ಪ್ರಶಸ್ತಿಗಳನ್ನು ಗೆದ್ದಿದ್ದಾಳೆ. 2016-17 ರಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ನಡೆಸಿದ ರಾಜ್ಯ ಮಟ್ಟದ ಚೆಸ್‌ ಸ್ಪರ್ಧೆಯಲ್ಲಿ ಆಯ್ಕೆಯಾಗಿ, ಕೇರಳದ ತ್ರಿಶೂರ್‌ನಲ್ಲಿ ನಡೆದ ರಾಷ್ಟ್ರ ಮಟ್ಟದ ಶ್ರವಣ ದೋಷ ಮಕ್ಕಳ ಚೆಸ್‌ ಪಂದ್ಯಾಟದಲ್ಲಿ ರಾಜ್ಯವನ್ನು ಪ್ರತಿನಿಧಿಸಿ, ಪ್ರಥಮ ಬಹುಮಾನ ಪಡೆದಿದ್ದಾಳೆ.

ದೈಹಿಕವಾಗಿ ಸಂಪೂರ್ಣ ಆರೋಗ್ಯದಿಂದ ಇದ್ದವರಷ್ಟೇ ಕ್ರೀಡೆಯಲ್ಲಿ ದೊಡ್ಡ ಯಶಸ್ಸು ಪಡೆಯಲು ಸಾಧ್ಯ ಎಂಬ ತಪ್ಪು ಕಲ್ಪನೆ ನಮ್ಮಲ್ಲಿ ಹಲವರಿಗಿದೆ. ಅಂಗವಿಕಲರು, ಅದರಲ್ಲೂ ಶ್ರವಣ ಸಮಸ್ಯೆ ಹೊಂದಿದ ಕ್ರೀಡಾಪಟುಗಳನ್ನು ನಿರ್ಲಕ್ಷ್ಯದಿಂದ ನೋಡುವವರೇ ಜಾಸ್ತಿ. ಇಂಥ ಸಂದರ್ಭದಲ್ಲಿ, ಶ್ರವಣ ಸಮಸ್ಯೆಯ ತೊಂದರೆಯನ್ನು ಮೆಟ್ಟಿ ನಿಂತು, ಚೆಸ್‌ ಆಟದಲ್ಲಿ ಪದಕಗಳನ್ನೂ ಬಾಚಿಕೊಳ್ಳುತ್ತಿರುವ ಬಾಲೆಯೊಬ್ಬಳು ಎಲ್ಲರ ಗಮನ ಸೆಳೆಯುತ್ತಿದ್ದಾಳೆ. ಆಕೆಯೇ ಯಶಸ್ವಿ. 

ಬಂಟ್ವಾಳ ತಾಲೂಕು ಕೆದಿಲ ಗ್ರಾಮದ ಕುದುಮಾನು ಎಂಬಲ್ಲಿನ ರೈತಾಪಿ ಕುಟುಂಬದ ತಿಮ್ಮಪ್ಪ ಎಂ.ಕೆ. ಹಾಗೂ ಯಶೋಧರ ದಂಪತಿಯ ದ್ವಿತೀಯ ಕುಡಿ, ಯಶಸ್ವಿ  ಕೆ. 2002ರ ಡಿ.14ರಂದು ಜನಿಸಿದ ಈಕೆಗೆ 2 ವರ್ಷ ಆಗುವವರೆಗೂ ಹೆತ್ತವರಿಗೆ ಮಗುವಿನ ಅಂಗವೈಕಲ್ಯದ ಬಗ್ಗೆ ಗೊತ್ತೇ ಆಗಿರಲಿಲ್ಲ. ಚಿಟಿಕೆ ಹೊಡೆದಾಗ ಕಿಲಕಿಲನೆ ನಕ್ಕು, ತೊದಲು ಮಾತಿನಲ್ಲಿ ಅಮ್ಮಾ ಎನ್ನಬೇಕಿದ್ದ ಮಗು ಯಾವುದಕ್ಕೂ ಪ್ರತಿಕ್ರಿಯೆ ನೀಡುತ್ತಿರಲಿಲ್ಲ. ಆಮೇಲಷ್ಟೇ ಅವರಿಗೆ, ಮಗುವಿಗೆ ಮಾತು ಬರುವುದಿಲ್ಲ ಹಾಗೂ ಶ್ರವಣ ದೋಷವಿದೆ ಎಂದು ಅರಿವಾಯ್ತು. ವಾಸ್ತವ ಗೊತ್ತಾದ ಕೂಡಲೇ ಆಕೆಯನ್ನು ದೊಡ್ಡ ದೊಡ್ಡ ಆಸ್ಪತ್ರೆಗಳಿಗೆ, ಇದ್ದಬದ್ದ ದೇವಸ್ಥಾನಗಳಿಗೆ ಹೊತ್ತೂಯ್ದರು. ಏನೂ ಪ್ರಯೋಜನವಾಗಲಿಲ್ಲ. ಕಿವುಡಿ ಎಂದು ಆಕೆಯನ್ನು ಮೂಲೆಗುಂಪು ಮಾಡದೆ, ಯಶಸ್ವಿಯನ್ನು ಶ್ರವಣ ದೋಷ ಮುಕ್ತ ಶಿಬಿರಗಳಿಗೆ ಕಳಿಸಿದರು. 

ಐದು ವರ್ಷ ತುಂಬಿದ ನಂತರ ಯಶಸ್ವಿ, ಇತರೆ ಸಾಮಾನ್ಯ ಮಕ್ಕಳಂತೆ ಕೆದಿಲದ ಸರ್ಕಾರಿ ಶಾಲೆಗೆ ಸೇರಿದಳು. ಅಂಗವೈಕಲ್ಯವನ್ನು ಮೆಟ್ಟಿ ನಿಂತು ಚಿತ್ರಕಲೆ, ನೃತ್ಯ, ಭರತನಾಟ್ಯ, ಚದುರಂಗ, ಛದ್ಮವೇಷಗಳಂಥ ಚಟುವಟಿಕೆಗಳಲ್ಲಿ ಲವಲವಿಕೆಯಿಂದ ತೊಡಗಿಸಿಕೊಂಡಳು. ವೇದಿಕೆಯೇರಿ ನವಿಲಿನಂತೆ ನರ್ತಿಸಿ, ಬಣ್ಣದ ಗೆರೆಗಳ ಮೂಲಕವೇ ಭಾವನೆಗಳನ್ನು ವ್ಯಕ್ತಪಡಿಸಿ ಎಲ್ಲರಿಂದ ಶಹಬ್ಟಾಸ್‌ಗಿರಿ ಪಡೆದಳು. ಪ್ರತಿಭಾ ಕಾರಂಜಿಯಿರಲಿ, ತಾಲೂಕು ಹಾಗೂ ಜಿಲ್ಲಾ ಮಟ್ಟದ ಯಾವುದೇ ಸ್ಪರ್ಧೆ ಇರಲಿ ಯಶಸ್ವಿಗೆ ಯಶಸ್ಸು ಗ್ಯಾರಂಟಿ! ವಿದ್ವಾನ್‌ ದೀಪಕ್‌ ಕುಮಾರ್‌ ಅವರಲ್ಲಿ ಭರತನಾಟ್ಯ ಅಭ್ಯಸಿಸಿ, ಜ್ಯೂನಿಯರ್‌ ಪರೀಕ್ಷೆಯನ್ನು ಪ್ರಥಮ ದರ್ಜೆಯಲ್ಲಿ ಪಾಸ್‌ ಮಾಡಿದ್ದಾಳೆ. ಚಿತ್ರಕಲೆಯಲ್ಲಿ ಲೋವರ್‌ ಗ್ರೇಡ್‌ನ‌ಲ್ಲೂ ಪ್ರಥಮ ದರ್ಜೆಯಲ್ಲಿ ತೇರ್ಗಡೆಯಾಗಿದ್ದಾಳೆ. ಕಲಿಕೆಯಲ್ಲಿಯೂ ಈಕೆ ಹಿಂದೆ ಬಿದ್ದವಳಲ್ಲ. ಈಗ  ಕಡೇಶ್ವಾಲ್ಯದ ಸರಕಾರಿ ಪ್ರೌಢ ಶಾಲೆಯಲ್ಲಿ  9ನೇ ತರಗತಿ ಓದುತ್ತಿದ್ದಾಳೆ. 

ಚದುರಂಗದ ಚತುರೆ
ಯಶಸ್ವಿಗೆ ಚೆಸ್‌ನಲ್ಲಿ ಭಾರೀ ಆಸಕ್ತಿ. ಪ್ರಾಥಮಿಕ ಶಾಲೆಯಲ್ಲಿದ್ದಾಗಲೇ, ಸಾಮಾನ್ಯ ಮಕ್ಕಳ ಚೆಸ್‌ ಸ್ಪರ್ಧೆಗಳಲ್ಲಿ ಭಾಗವಹಿಸಿ ಹಲವಾರು ಪ್ರಶಸ್ತಿಗಳನ್ನು ಗೆದ್ದಿದ್ದಾಳೆ. 2016-17 ರಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ನಡೆಸಿದ ರಾಜ್ಯ ಮಟ್ಟದ ಚೆಸ್‌ ಸ್ಪರ್ಧೆಯಲ್ಲಿ ಆಯ್ಕೆಯಾಗಿ, ಕೇರಳದ ತ್ರಿಶೂರ್‌ನಲ್ಲಿ ನಡೆದ ರಾಷ್ಟ್ರ ಮಟ್ಟದ ಶ್ರವಣ ದೋಷ ಮಕ್ಕಳ ಚೆಸ್‌ ಪಂದ್ಯಾಟದಲ್ಲಿ ರಾಜ್ಯವನ್ನು ಪ್ರತಿನಿಧಿಸಿ, ಪ್ರಥಮ ಬಹುಮಾನ ಪಡೆದಿದ್ದಾಳೆ. ಕಳೆದ ನವೆಂಬರ್‌ನಲ್ಲಿ ಮೈಸೂರಿನಲ್ಲಿ ನಡೆದ ರಾಜ್ಯಮಟ್ಟದ ಚೆಸ್‌ ಸ್ಪರ್ಧೆ ಹಾಗೂ ಡಿಸೆಂಬರ್‌ನಲ್ಲಿ ಮಧ್ಯಪ್ರದೇಶದಲ್ಲಿ ನಡೆದ ರಾಷ್ಟ್ರ ಮಟ್ಟದ ಚೆಸ್‌ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಸಿಕ್ಕಿದೆ. ಯಶಸ್ವಿಯ ಸಾಧನೆಯನ್ನು ಗುರುತಿಸಿ ಹಲವಾರು ಸಂಘ ಸಂಸ್ಥೆಗಳು ಆಕೆಯನ್ನು ಸನ್ಮಾನಿಸಿವೆ. "ಇಲ್ಲ'ಗಳ ನಡುವೆಯೂ ಎಲ್ಲರನ್ನೂ ಮೀರಿದ ಸಾಧನೆ ಮಾಡುತ್ತಿರುವ ಯಶಸ್ವಿಗೆ ಇನ್ನಷ್ಟು ಯಶಸ್ಸು ಸಿಗಲಿ. 

ಅನುಷಾ ಶೈಲಾ

Trending videos

Back to Top