ದೇಹ ಕಾಯೋ ಸೈನಿಕ

Team Udayavani, Nov 9, 2019, 5:00 AM IST

ನಮ್ಮ ಸುತ್ತಲೂ ಕಾಯಿಲೆ ಹರಡುವ ವೈರಸ್‌ಗಳು, ಬ್ಯಾಕ್ಟೀರಿಯಾಗಳು ಮತ್ತು ಪರಾವಲಂಬಿ ಜೀವಿಗಳು ಬೇಕಾದಷ್ಟಿವೆ. ಹಾಗಿದ್ದೂ ನಾವ್ಯಾಕೆ ಪದೇ ಪದೆ ಕಾಯಿಲೆ ಬೀಳುವುದಿಲ್ಲ ಗೊತ್ತಾ? ನಮ್ಮೊಳಗೂ ಸೈನಿಕರಿದ್ದಾರೆ!

ಇಂದು ಬಹುತೇಕ ರಾಷ್ಟ್ರಗಳು ಸೇನೆಯನ್ನು ಹೊಂದಿವೆ. ನೆರೆಹೊರೆಯ ರಾಷ್ಟ್ರಗಳಿಂದ ಅದೆಂಥದ್ದೇ ತೊಂದರೆ ಎದುರಾದರೂ ಸೇನೆ ರಕ್ಷಣೆ ಒದಗಿಸುತ್ತದೆ. ದೇಶಕ್ಕೆ, ಸೇನಾ ವ್ಯವಸ್ಥೆ ಯಾವ ರೀತಿ ಬಲವನ್ನು ನೀಡುತ್ತದೆಯೋ ಅದೇ ರೀತಿ ನಮ್ಮ ದೇಹದಲ್ಲೂ ಒಂದು ರಕ್ಷಣಾ ವ್ಯವಸ್ಥೆ ಇದೆ ಎನ್ನುವುದು ಸೋಜಿಗದ ಸಂಗತಿ. ನಮ್ಮ ದೇಹದೊಳಗಿರುವ ರಕ್ಷಣಾ ವ್ಯವಸ್ಥೆ, ರೋಗ ರುಜಿನಗಳು ಮತ್ತು ಬಾಹ್ಯ ಪರಿಸರದಲ್ಲಿನ ಕಲ್ಮಶಗಳಿಂದ ನಮಗೆ ರಕ್ಷಣೆಯನ್ನು ಒದಗಿಸುತ್ತದೆ.

ಭದ್ರವಾದ ರಕ್ಷಣಾ ವ್ಯವಸ್ಥೆ
ನಮ್ಮ ದೇಹದ ರಕ್ಷಣಾ ವ್ಯವಸ್ಥೆ ಸದೃಢವಾಗಿದ್ದಾಗ ವೈರಸಳ ಕಾಟ, ಆಟ ನಡೆಯುವುದಿಲ್ಲ. ಅವುಗಳು ಶಕ್ತಿ ಕಳೆದುಕೊಂಡು ದುರ್ಬಲವಾಗಿಬಿಡುತ್ತವೆ. ಅದಕ್ಕೆ ಮುಖ್ಯ ಕಾರಣ- ನಮ್ಮ ರಕ್ತದಲ್ಲಿರುವ ಕಣಗಳು. ಅದರಲ್ಲೂ ರೋಗ ನಿರೋಧಕ ಶಕ್ತಿಯನ್ನು ಹೊಂದುವಲ್ಲಿ ಟಿ ಕೋಶಗಳು ಪ್ರಮುಖ ಪಾತ್ರ ವಹಿಸುತ್ತವೆ. ಎಳೆಯ ವಯಸ್ಸಿನಲ್ಲಿ ಮನುಷ್ಯನ ದೇಹ ಅತಿ ಹೆಚ್ಚು ಟಿ ಕೋಶಗಳನ್ನು ಉತ್ಪಾದಿಸುತ್ತದೆ. ಹೀಗಾಗಿ ಚಿಕ್ಕ ವಯಸ್ಸಿನಲ್ಲಿ ರೋಗ ಹರಡುವ ವೈರಸ್‌ ಪ್ರವೇಶಿಸಿದಾಗ, ಒಂದೋ ದೇಹದ ರಕ್ಷಣಾ ವ್ಯವಸ್ಥೆ ಅದನ್ನು ಹೊಡೆದೋಡಿಸುತ್ತದೆ, ಇಲ್ಲವೇ ಕಾಯಿಲೆಗೆ ತುತ್ತಾದರೂ ದೇಹ ಬಹಳ ಬೇಗ ಚೇತರಿಸಿಕೊಂಡುಬಿಡುತ್ತದೆ. ವಯಸ್ಸಾಗುತ್ತಿದ್ದಂತೆ ರಕ್ತದಲ್ಲಿ ಟಿ ಕೋಶಗಳ ಉತ್ಪಾದನೆ ಕಡಿಮೆಯಾಗುತ್ತಾ ಹೋಗುತ್ತದೆ. ಹೀಗಾಗಿಯೇ ಮುಪ್ಪಿನಲ್ಲಿ ಕಾಯಿಲೆಗಳಿಗೆ ತುತ್ತಾಗುವ ಸಾಧ್ಯತೆ ಹೆಚ್ಚು, ಜತೆಗೆ ಕಾಯಿಲೆಗೆ ತುತ್ತಾದಾಗ ಅದರಿಂದ ಚೇತರಿಕೆಯೂ ನಿಧಾನ. ಟಿ ಕೋಶಗಳಂತೆಯೇ ನಮ್ಮ ರಕ್ಷಣಾ ವ್ಯವಸ್ಥೆಯಲ್ಲಿ ಹಲವು ಬಗೆಯ ಸೈನಿಕ ಕೋಶಗಳಿವೆ. ಅವೆಲ್ಲ, ನಮಗೆ ರಕ್ಷಣೆ ನೀಡುವ ಕೆಲಸದಲ್ಲಿ ನಿರತವಾಗಿರುತ್ತವೆ.

ವಯಸ್ಸಾದಾಗ ಏನಾಗುತ್ತದೆ?
ಮನುಷ್ಯನ ದೇಹಕ್ಕೆ ಆಯಸ್ಸು ಎಂಬುದಿರುವಂತೆಯೇ ನಮ್ಮ ರಕ್ಷಣಾ ವ್ಯವಸ್ಥೆಯಲ್ಲಿರುವ ಕೋಶಗಳಿಗೂ ಆಯಸ್ಸು ಇರುತ್ತದೆ. ಅದು ಮುಗಿದಾಗ ಮತ್ತೆ ಅದರ ಸ್ಥಾನವನ್ನು ತುಂಬಲು ಹೊಸ ಟಿ ಕೋಶಗಳು ಹುಟ್ಟಿಕೊಳ್ಳುತ್ತವೆ. ಇದು ನಿರಂತರ ಪ್ರಕ್ರಿಯೆ. ಮೊದಲೇ ಹೇಳಿದಂತೆ, ಮನುಷ್ಯನಿಗೆ ವಯಸ್ಸಾಗುತ್ತಿದ್ದಂತೆ ಟಿ ಕೋಶಗಳ ಉತ್ಪಾದನೆ ಕಡಿಮೆಯಾಗುತ್ತಾ ಹೋಗುತ್ತದೆ. ಮುದಿ ಟಿ ಕೋಶಗಳು ಅವಸಾನಗೊಳ್ಳುತ್ತವೆ, ಹೊಸ ಟಿ ಕೋಶಗಳ ಉತ್ಪಾದನೆ ನಿಲ್ಲುತ್ತದೆ. ಅಯ್ಯಯ್ಯೋ, ಹಾಗಾದರೆ ನಮ್ಮ ದೇಹದ ರಕ್ಷಣಾ ವ್ಯವಸ್ಥೆ ದುರ್ಬಲವಾಗುವುದಿಲ್ಲವೇ? ಎಂಬ ಪ್ರಶ್ನೆ ಮೂಡುವುದು ಸಹಜ. ಅಲ್ಲೇ ಇರುವುದು ಸ್ವಾರಸ್ಯ. ವಯಸ್ಸಾಗುತ್ತಿದ್ದಂತೆಯೇ ಹೊಸ ಕೋಶಗಳ ಉತ್ಪಾದನೆ ನಿಲ್ಲುತ್ತದೆ ನಿಜ, ಆದರೆ ಅದೇ ಸಮಯಕ್ಕೆ ದೇಹದಲ್ಲಿ ಮೊದಲೇ ಇರುವ ಟಿ ಕೋಶಗಳ ಆಯಸ್ಸು ಹೆಚ್ಚುತ್ತಾ ಹೋಗುತ್ತದೆ. ಅಂದರೆ, ಅವು ಬಹಳ ಬೇಗ ಅವಸಾನಗೊಳ್ಳುವುದಿಲ್ಲ. ಅವು ದೇಹದ ಬದಲಾದ ಪರಿಸ್ಥಿತಿಗೆ ಹೊಂದಿಕೊಂಡು ಭದ್ರವಾಗಿ ನೆಲೆಯೂರಿಬಿಡುತ್ತವೆ. ಹೀಗಾಗಿ, ಕಡೆಯವರೆಗೂ ದೇಹದಲ್ಲಿ ಆರೋಗ್ಯಕರ ಸಂಖ್ಯೆಯ ಟಿ ಕೋಶಗಳು ಇದ್ದೇ ಇರುತ್ತವೆ.

ನಮ್ಮ ದೇಹದ ರಕ್ಷಣಾ ವ್ಯವಸ್ಥೆ ವಯಸ್ಸಾದ ಮೇಲೂ ಚೆನ್ನಾಗಿ ಇರಬೇಕೆಂದರೆ, ನಾವು ಕೆಲ ಆರೋಗ್ಯಕರ ಅಭ್ಯಾಸಗಳನ್ನು ರೂಢಿಸಿಕೊಳ್ಳಬೇಕು.

– ಒಳ್ಳೆಯ ನಿದ್ದೆ
– ಹಣ್ಣು , ತರಕಾರಿ ಸೇವನೆ
– ನೀರು ಸೇವನೆ
– ವ್ಯಾಯಾಮ

- ಹರ್ಷವರ್ಧನ್‌ ಸುಳ್ಯ

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

  • ಬದುಕೆಂಬುದು ಒಂದು ವರ.ಅದನ್ನು ಆನಂದಿಸಲು ಆರೋಗ್ಯದಿಂದಿರಬೇಕು.ಇಂದಿನ ತಾಂತ್ರಿಕ ಜಗತ್ತಿನಲ್ಲಿ ನಮ್ಮದೇ ಆದ ಮೌಲ್ಯಯುತ ಬದುಕನ್ನು ಯಾಂತ್ರಿಕವಾಗಿಸಿಕೊಂಡು...

  • ಆನೆ ಶಿಬಿರಕ್ಕೆ ಪ್ರವಾಸಿಯೊಬ್ಬ ತೆರಳಿದ್ದ. ಅಲ್ಲಿ ಆನೆಗಳನ್ನು ಹಗ್ಗ ಅಥವಾ ಸರಪಳಿಯಿಂದ ಮರಗಳಿಗೆ ಕಟ್ಟಿ ಹಾಕಿದ್ದನ್ನು ನೋಡಿ ಚಕಿತನಾದ. ಆತನಿಗೊಂದು ಯೋಚನೆ...

  • ದಿನವೂ ಸಂತೋಷವಾಗಿರಬೇಕು ಎಂದು ಬಯಸುತ್ತೇವೆ ಆದರೆ ಹಾಗೆ ಇರಲು ಏನು ಮಾಡಿದರೆ ಸೂಕ್ತ ಎಂಬುದನ್ನು ಎಂದಿಗೂ ಯೋಚನೆ ಮಾಡಿರುವುದಿಲ್ಲ. ತುಂಬಾ ಇಷ್ಟಪಡುತ್ತಿದ್ದ...

  • ಗೆಲುವು ಎಲ್ಲರಿಗೂ ಅಗತ್ಯ. ಅದಕ್ಕಿಂತಲೂ ಹೆಚ್ಚಾಗಿ ಗೆಲುವು ಆತ್ಮ ವಿಶ್ವಾಸವನ್ನು ನೀಡುತ್ತದೆ. ಅದು ಹಾಗೇ ಅಲ್ವೇ.. ಮಾತೊಂದರಂತೆ ಗೆದ್ದ ಎತ್ತಿನ ಬಾಲ ಹಿಡಿಯಬೇಕು...

  • ಜೀವನ ಎನ್ನುವುದು ನಿಂತ ನೀರಲ್ಲ. ಸದಾ ಚಲಿಸುತ್ತಿರುವುದೇ ಅದರ ರೀತಿ. ಈ ವೇಗದ ಓಟದಲ್ಲಿ ನಾವು ಇತರರಿಗೆ ಮಾದರಿಯಾಗಲು ಸಾಧನೆಯ ಶಿಖರ ಏರಬೇಕು. ಇಗುರಿ ಸಾಧಿಸಬೇಕು. ಆತ...

ಹೊಸ ಸೇರ್ಪಡೆ