ಉಭಯ ತಿಟ್ಟುಗಳ ಕೂಡಾಟದ ಸವಿ ನೀಡಿದ ಯಕ್ಷೋತ್ಸವ

Team Udayavani, Sep 27, 2019, 5:00 AM IST

ಯಕ್ಷಗಾನ ಸಂಘಟಕ ಕೊಲ್ಲಬೆಟ್ಟು ರವೀಂದ್ರ ಶೆಟ್ಟಿ ಯಕ್ಷಗಾನಾಭಿಮಾನಿ ಬಳಗದೊಂದಿಗೆ ಸಂಯೋಜಿಸಿದ ಆಟಕ್ಕೂ ಬನ್ನಿ-ಊಟಕ್ಕೂ ಬನ್ನಿ  ಕಾರ್ಯಕ್ರಮ ಶಿರ್ವ ದಲ್ಲಿ ಸುಮಾರು ಎರಡೂವರೆ ಸಾವಿರದಷ್ಟು ಯಕ್ಷರಸಿಕರ ಹೃನ್ಮನ ತಣಿಸುವಲ್ಲಿ ಯಶಸ್ವಿಯಾಯಿತು.

ಈ ಬಾರಿ ಕುಶ-ಲವ, ಭಕ್ತ ಸುಧನ್ವ ಅವಳಿ ಪ್ರಸಂಗಗಳಲ್ಲಿ ತೆಂಕು ಬಡಗು ಶೈಲಿಗಳನ್ನು ಏಕಕಾಲಕ್ಕೆ ಆಸ್ವಾದಿಸುವ ಅವಕಾಶವನ್ನು ಯಕ್ಷರಸಿಕರು ಸಂಭ್ರಮಿಸಿದರು.ಪೂರ್ವಾರ್ಧದಲ್ಲಿ ಪ್ರದರ್ಶನಗೊಂಡ ಕುಶ-ಲವ ಆಖ್ಯಾನದಲ್ಲಿ ಕೊಳಗಿ ಕೇಶವ ಹೆಗಡೆ ಹಾಗೂ ಕಾವ್ಯಶ್ರೀ ಅಜೇರು ಅವರ ಶ್ರೇಷ್ಠ ಸ್ವರ ಮಾಧುರ್ಯವನ್ನು ಹೊರಹೊಮ್ಮಿತು.ಮೇರು ಕಲಾವಿದ ಜಯಪ್ರಕಾಶ ಶೆಟ್ಟಿ ಪೆರ್ಮುದೆ ಶತ್ರುಘ್ನನಾಗಿ ವೇಷ ನೃತ್ಯ,ಅಭಿನಯ, ಮಾತುಗಾರಿಕೆಗಳ ಮೂಲಕ ಸಾಮರ್ಥಯ ಮತ್ತು ಪ್ರತಿಭೆಯನ್ನು ಅನಾವರಣಗೊಳಿಸಿದರು. ಶಂಕರ ಉಳ್ಳೂರರು (ಸೀತೆ) ಸ್ತ್ರೀ ಸಂವೇದನೆಯ ಅಭಿವ್ಯಕ್ತಿಯನ್ನು ಉತ್ತಮವಾಗಿ ನಿರ್ವಹಿಸಿದರು.ವಿಶ್ವನಾಥ ಹೆನ್ನಾಬೈಲು(ಲವ), ದಿವಾಕರ ರೈ ಸಂಪಾಜೆ (ಕುಶ) ನೃತ್ಯ ವೈವಿಧ್ಯತೆ, ಚುರುಕಿನ ಹೆಜ್ಜೆಗಾರಿಕೆಯಿಂದ ಮನೋಜ್ಞವಾಗಿ ಅಭಿನಯಿಸಿದರು. ಮಾಣಿಯಾಗಿ ಹಳ್ಳಾಡಿ ಜಯರಾಮ ಶೆಟ್ಟಿ ಅತಿರೇಕವಲ್ಲದ ನವಿರು ಹಾಸ್ಯದೊಂದಿಗೆ ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಿಸಿದರು. ದೂತನಾಗಿ ರಂಗ ಪ್ರವೇಶ ಮಾಡಿದ ದಿನೇಶ್‌ ಕೋಡ ಪದವು ಉತ್ತಮ ನಿರ್ವಹಣೆ ನೀಡಿದರು. ರಾಮಚಂದ್ರ ಹೆಗಡೆ ಕೊಂಡದಕುಳಿ ಶ್ರೀ ರಾಮನ ಪಾತ್ರದಲ್ಲಿ ಪ್ರಬುದ್ಧ ಅಭಿನಯ ನೀಡಿದರು. ವಟುಗಳಾಗಿ ನಿಖೀತ್‌,ಉದಯ, ವಿವೇಕ್‌ ಪ್ರಭು ಚಿಕ್ಕ ಪಾತ್ರಗಳನ್ನು ಚೊಕ್ಕದಾಗಿ ಅಭಿನಯಿಸಿದರು.

ಉತ್ತರಾರ್ಧದಲ್ಲಿ ನಡೆದ ” ಭಕ್ತ ಸುಧನ್ವ” ಸಂಪೂರ್ಣವಾಗಿ ಯಕ್ಷಲೋಕದಲ್ಲಿ ವಿಹರಿಸುವಂತೆ ಮಾಡಿತು.ರವಿಚಂದ್ರ ಕನ್ನಡಿಕಟ್ಟೆ ಹಾಗೂ ಸುರೇಶ್‌ ಶೆಟ್ಟಿಯವರ ತೆಂಕು ಬಡಗು ಶೈಲಿಯ ದ್ವಂದ್ವ ಗಾಯನ ಪ್ರದರ್ಶನಕ್ಕೆ ಹೆಚ್ಚಿನ ಮೆರುಗನ್ನು ತಂದುಕೊಟ್ಟಿತು. ಅರ್ಜುನನಾಗಿ ಮಿಂಚಿನ ರಂಗ ಪ್ರವೇಶ ಮಾಡಿದ ಗಣೇಶ್‌ ಶೆಟ್ಟಿ ಕನ್ನಡಿಕಟ್ಟೆ ತಮ್ಮ ಸುಂದರ ವೇಷಗಾರಿಗೆ ಹಾಗೂ ಪ್ರೌಢ ಮಾತುಗಾರಿಕೆಯಿಂದ ಗಮನ ಸೆಳೆದರು. ಶಶಿಕಾಂತ ಶೆಟ್ಟಿಯವರು ಸುಧನ್ವ ಪಾತ್ರದ ಒಳಹೊಕ್ಕು ಪುರುಷ ವೇಷದ ನಡೆಗೆ ಕೊಂಚವೂ ಕೊರತೆ ಬಾರದಂತೆ ಸಮರ್ಥವಾಗಿ ಅಭಿನಯಿಸಿದರು. ಸುಧನ್ವ -ಅರ್ಜುನರ ಸಂಭಾಷಣೆ ತುಸು ಅತಿ ಎನಿಸಿದರೂ ಅವರಿಬ್ಬರ ಪುರಾಣಾನುಭವ ,ವಾದ ಮಂಡನೆ-ಖಂಡನೆ ಖುಷಿ ನೀಡಿತು. ತಮ್ಮ ಮೋಹಕ ರೂಪ ಲಾವಣ್ಯ, ಹಾವ ಭಾವ ಮನಮೋಹಕ ಮಾತುಗಳಿಂದ ಪ್ರೇಕ್ಷಕರ ಮೈನವಿರೇಳುವಂತೆ ಮಾಡಿದ ರಕ್ಷಿತ್‌ ಶೆಟ್ಟಿ ಪಡ್ರೆ ಪ್ರಭಾವತಿಯಾಗಿ ಪ್ರೌಢ ಅಭಿನಯ ನೀಡಿದರು. ಹಿರಿಯ ಕಲಾವಿದ ವಾಸುದೇವ ಸಾಮಗರು ದೊರಕಿದ ಕಿರು ಅವಧಿಯಲ್ಲಿ ಕೃಷ್ಣನ ಪಾತ್ರಕ್ಕೆ ನ್ಯಾಯ ನೀಡಿದರು. ಕೋಟ ಶಿವಾನಂದ- ಚೈತನ್ಯ ಪದ್ಯಾಣ ಅವರ ಚೆಂಡೆಯ ನಿನಾದ, ರಾಘವೇಂದ್ರ ಯಲ್ಲಾಪುರ, ಗುರುಪ್ರಸಾದ್‌ ಬೊಳಿಂಜಡ್ಕ ಅವರ ಮದ್ದಳೆಯ ಝೆಂಕಾರ ಪ್ರದರ್ಶನದ ಒಟ್ಟು ಅಂದಕ್ಕೆ ಕಾರಣವಾಯಿತು.

ಅನಂತ ಮೂಡಿತ್ತಾಯ, ಶಿರ್ವ

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ