ಅವನು ಮೀನು ಪ್ರಿಯ ನಾನು ಕೋಳಿ ಪ್ರಿಯೆ!

Team Udayavani, Feb 12, 2019, 12:30 AM IST

“ನಿಮ್ಮ ಮನೆಯಲ್ಲಿ ಏನಂದ್ರು?’ ಅಂತ ನೀನು ಮೆಸೇಜ್‌ ಮಾಡಿದಾಗ, “ಗೊತ್ತಿಲ್ಲ’ ಎಂದು ಸುಳ್ಳು ಹೇಳಿದೆ. ಆದಾಗಲೇ ಮನೆಯಲ್ಲಿ ನಿನ್ನನ್ನು ಒಪ್ಪಾಗಿತ್ತು. ನನ್ನ ಒಪ್ಪಿಗೆಯ ಮುದ್ರೆಗಾಗಿ ಅವರೆಲ್ಲ ಕಾಯುತ್ತಿದ್ದರು. ಪರವಾಗಿಲ್ಲ, ಕಡೆಗೂ ನೀನು ನನ್ನ ಒಲಿಸಿಕೊಂಡುಬಿಟ್ಟೆ!

ದೂರದ ಮಾಯಾನಗರಿಯವಳು ನಾನು,  ಸಮುದ್ರ ತೀರದವನು ನೀನು. ನಮ್ಮಿಬ್ಬರ ಪರಿಚಯಕ್ಕೆ ದಾರಿ ಮಾಡಿಕೊಟ್ಟಿದ್ದೇ ನಮ್ಮ ಮನೆಯವರು. “ಸಾಕಿನ್ನು ನಿನ್ನ ಸಾಧನೆ-ಸಾಹಸ, ಇನ್ನಾದರೂ ಮದುವೆಯಾಗೇ’ ಎಂಬುದು ನನಗೆ ನಿತ್ಯದ ಉಪದೇಶವಾಗಿತ್ತು. ನಿಂಗೂ ಅಷ್ಟೇ ಅಂತ ಕೇಳ್ಪಟ್ಟೆ. ದೂರದ ಊರುಗಳಲ್ಲಿದ್ದ ನಮ್ಮಿಬ್ಬರ ಮನ ಒಂದಾಗಲು ಮೂರ್ನಾಲ್ಕು ತಿಂಗಳು ಬೇಕಾದವು. ಅಲ್ಲಿಯವರೆಗೂ ಅನುಮಾನ, ಗೊಂದಲಗಳಲ್ಲಿ ನಮ್ಮ ಮನಸ್ಸುಗಳು ಅನುಭವಿಸಿದ ಯಾತನೆಯ ಹಿತ ನಮಗಷ್ಟೇ ತಿಳಿದಿದೆ.

“ಅವನು ಸಮುದ್ರದೂರಿನವ, ನಾನು ಸದಾ ಓಡುತ್ತಲೇ ಇರುವ ಮಾಯಾನಗರಿಯವಳು. ನಮ್ಮಿಬ್ಬರ ಯೋಚನೆ-ಚಿಂತನೆ ಒಂದೇ ಬಗೆಯದ್ದಾಗಿರುತ್ತ? ನಾವಿಬ್ಬರು ಒಂದಾದರೆ ಬದುಕು ಚೆನ್ನಾಗಿರಬಹುದಾ?’ ಅಂತೆಲ್ಲಾ ತಲೆಯಲ್ಲಿ ಹುಳ ಬಿಟ್ಟುಕೊಂಡಿದ್ದಾಯಿತು. ಅವನು ಮೀನು ಪ್ರಿಯನಾದರೆ, ನಾನು ಕೋಳಿ ಪ್ರೇಮಿ. ಅವನು ಶಾಂತಸ್ವರದವನು. ನಾನೋ ಆರ್ಭಟಿಸುವ ಅಮ್ಮಣ್ಣಿ.  ಊಟ-ತಿಂಡಿ, ಉಡುಗೆ-ತೊಡುಗೆ, ಊರು-ಕೇರಿ, ಬೆಳೆದು ಬಂದ ಪರಿಸರ ಎಲ್ಲವೂ ಭಿನ್ನ ವಿಭಿನ್ನ. ಇಬ್ಬರಲ್ಲೂ ಹೇಳಿಕೊಳ್ಳುವಂಥ ಒಂದೇ ಒಂದು ಸಮಾನ ಅಂಶಗಳಿಲ್ಲ. ಹೀಗೆಂದುಕೊಂಡೇ ದಿನ ತಳ್ಳುತ್ತಿದ್ದೆ.

ಮಾರ್ಡನ್‌ ಉಡುಗೆ ಮೋಹ ನನಗೆ, ಸಾಂಪ್ರದಾಯಿಕ ಉಡುಗೆಯೆಂದರೆ ಅವನಿಗೆ ಪ್ರೀತಿ. ನಾನು ಬೋಲ್ಡ್‌, ಅವನು ಅಂಜುಬುರಕ. ನಾನು ಕಲ್ಲುಬಂಡೆಗೂ ಮಾತು ಬರಿಸುವಳು, ಅವನದು ಮೀನಿನ ಹೆಜ್ಜೆ ಕೇಳುವಂಥ ಮೌನ. ಹೀಗಿರುವ ನಾವು ಸಪ್ತಪದಿ ತುಳಿಯುವುದು ಹೇಗಪ್ಪಾ ಎಂದು ಹೆದರಿದ್ದೆ. ಆದರೆ ಅದ್ಯಾವ ಗಳಿಗೆಯಲ್ಲಿ ನಿನ್ನ ಮೇಲೆ ಧುಮ್ಮಿಕ್ಕುವ ಪ್ರೀತಿ ಮೂಡಿತೋ ತಿಳಿಯದು.

ಮೊದಲ ಬಾರಿಗೆ ನಿನ್ನೊಂದಿಗೆ ಮಾತಾಡಿದ ಆ ಘಳಿಗೆ ಎದೆಯಲ್ಲಿ ಸಣ್ಣ ಕಂಪನ. ಆದರೆ ನೀನೇ ಈ ಬದುಕಿನ ವಾರಸುದಾರ ಆಗುತ್ತೀಯೆಂಬ ಕಲ್ಪನೆ ಖಂಡಿತಾ ಇರಲಿಲ್ಲ. ಆ ದಿನ ಮಳೆ ಬೀಳುವ ಹೊತ್ತಿಗೆ ನಾನೇ ಕರೆ ಮಾಡಿದೆ. ನೀನು ಕುಂಟು ನೆಪ ಹೇಳಿ ತಪ್ಪಿಸಿಕೊಂಡೆ. ಮತ್ತೆ ನಿನ್ನಿಂದ ಕರೆ, ಸಂದೇಶ ಬಂದರೂ ನಾನು ಮಹಾಮೌನಿಯಂತೆ ನಟಿಸಿದೆ. ಅದೊಂಥರಾ ಅಪ್ಯಾಯಮಾನ ಘಳಿಗೆ. ಮೊದಲ ಬಾರಿಗೆ ಮೌನದ ಹಿತ ಅನುಭವಿಸಿದೆ. “ನಿಮ್ಮ ಮನೆಯಲ್ಲಿ ಏನಂದ್ರು?’ ಅಂತ ನೀನು ಮೆಸೇಜ್‌ ಮಾಡಿದಾಗ, “ಗೊತ್ತಿಲ್ಲ’ ಎಂದು ಸುಳ್ಳು ಹೇಳಿದೆ. ಆದಾಗಲೇ ಮನೆಯಲ್ಲಿ ನಿನ್ನನ್ನು ಒಪ್ಪಾಗಿತ್ತು. ನನ್ನ ಒಪ್ಪಿಗೆಯ ಮುದ್ರೆಗಾಗಿ ಅವರೆಲ್ಲ ಕಾಯುತ್ತಿದ್ದರು. ಪರವಾಗಿಲ್ಲ, ಕಡೆಗೂ ನೀನು ನನ್ನ ಒಲಿಸಿಕೊಂಡುಬಿಟ್ಟೆ!

ಆ ದಿನ ನೀನು ಹೊಸ ನಂಬರ್‌ನಿಂದ ಕರೆ ಮಾಡಿ ಮಾತಾಡಿದಾಗಲೇ ನಿನ್ನ ದನಿಗೆ ಸೋತು ಹೋಗಿದ್ದೆ. ಅಷ್ಟು ಚಂದನೆಯ ನಿನ್ನ ಮನಕ್ಕೆ ಅರಸಿಯಾಗದಿರಲು ಮನಸ್ಸಾಗಲಿಲ್ಲ. ನನ್ನ ವೃತ್ತಿ ಬಗ್ಗೆ ಗೌರವ, ಕೋಳಿ ಪ್ರೀತಿ ಬಗ್ಗೆ ನಿಂಗಿಲ್ಲದ ಬೇಸರ, ಎಲ್ಲಕ್ಕಿಂತ ಹೆಚ್ಚಾಗಿ ನನ್ನ ಬಾಲ್ಯದ ಸ್ನೇಹಿತರ ಬಗ್ಗೆ ನೀ ತೋರಿದ ಅಭಿಮಾನ ನನ್ನಲ್ಲಿ ಆತ್ಮವಿಶ್ವಾಸ ಮೂಡಿಸಿತ್ತು. ಇವೆಲ್ಲ ಕಾರಣಗಳಿಂದಲೇ ನಿನ್ನನ್ನು ಒಪ್ಪಿಬಿಟ್ಟೆ ಕಣೋ. ನಿನಗಾಗಿ ಹಂಬಲಿಸಿದ್ದು, ಧ್ಯಾನಿಸಿದ್ದು ಗುಟ್ಟಾಗಿ ಪ್ರಾರ್ಥಿಸಿದ್ದು ಯಾಕೇಂತ ಈಗಲಾದ್ರೂ ಗೊತ್ತಾಯ್ತ? 

ಇಂತಿ ನಿನ್ನವಳು 
ಶ್ರುತಿ ಮಲೆನಾಡತಿ

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

  • ಶ್ರೀಮಂತಿಕೆ ಪ್ರದರ್ಶನದ ಸೋಗಿನಲ್ಲಿ ಅಗತ್ಯವಿಲ್ಲದಿದ್ದರೂ ಸಭೆ, ಸಮಾರಂಭಗಳಲ್ಲಿ ಯಥೇಚ್ಛವಾಗಿ ಅಡುಗೆ ಮಾಡಿಸಿ ಉಳಿದ ಆಹಾರವನ್ನು ಬೀದಿಗೆ ಚೆಲ್ಲುವ ಸಂದರ್ಭದಲ್ಲೇ...

  • ಇತ್ತೀಚೆಗೆ, ಯುವಕರಲ್ಲಿ ಮಿಲಿಟರಿಗೆ ಸೇರುವ ಹುಮ್ಮಸ್ಸು ಹೆಚ್ಚಾಗುತ್ತಿದೆ. ಮಿಲಿಟರಿಯ ವಿಸ್ತರಣಾ ರೂಪವಾಗಿ ಕಾಣುವ ಪೊಲೀಸ್‌ ಇಲಾಖೆಯಲ್ಲೂ ಅನೇಕ ಹುದ್ದೆಗಳಿವೆ....

  • ಮಕ್ಕಳು ಪಿಯುಸಿ ದಾಟಿದ ನಂತರವೂ, ಅವರನ್ನು ಸಣ್ಣವರೆಂದೇ ಭಾವಿಸಿ ಅವರ ಎಲ್ಲ ಕೆಲಸವನ್ನೂ ತಾವೇ ಮಾಡಲು ಕೆಲವು ಪೋಷಕರು ಮುಂದಾಗುತ್ತಾರೆ. ಇದರಿಂದ ಮಕ್ಕಳು ಇನ್ನೊಬ್ಬರ...

  • ಹಳ್ಳಿ ಹುಡುಗರೂ ಬುದ್ಧಿ ವಂತಿಕೆ ಪೇಟೆ ಮಕ್ಕಳಿಗೇ ಸವಾಲು ಹಾಕುವಂತಿದೆ. ಇವರು ಹೈಳಿ ಹೈಕ್ಳು ಅನ್ನೋ ಹಾಗಿಲ್ಲ. ಏಕೆಂದರೆ, ಈಸಲದ ಪಿಯುಸಿಯಲ್ಲಿ ಇವರೇ ಮುಂದು. ದಿನೇ...

  • ನನ್ನೆಲ್ಲಾ ಶಕ್ತಿಗಳನ್ನು ಒಂದುಗೂಡಿಸಿಕೊಂಡೆ. ನನ್ನ ಪ್ರೀತಿಯ ಪಾಲಿಗೆ ಇಂದು ಈ ಕ್ಷಣವೇ ಅಚ್ಚೆ ದಿನ್‌ ಆಗಬಹುದೆಂದು ಎಣಿಸಿದೆ. ಜೊತೆಯಲ್ಲಿ ಏಳು ಹೆಜ್ಜೆ, ಒಂದು...

ಹೊಸ ಸೇರ್ಪಡೆ