ಕಡಲು ಮತ್ತು ತನು ಪುಟ್ಟಿ

Team Udayavani, Aug 29, 2019, 5:00 AM IST

ಪುಟ್ಟ ಹುಡುಗಿ ತನು ಮರಳಿನಲ್ಲಿ ಕಟ್ಟಿದ್ದ ಅರಮನೆಯನ್ನು ಕಡಲು ಪದೇ ಪದೆ ಅಳಿ ಸಿಹಾಕುತ್ತಿತ್ತು. ಕಡೆಗೊಮ್ಮೆ ತನು ಕಡಲಿನ ಜೊತೆಗೆ ಪಂದ್ಯ ಕಟ್ಟಿದಳು. ಗೆದ್ದವರು ಯಾರು?

ಅಮ್ಮ-ಅಪ್ಪ ಕಡಲ ಕಿನಾರೆಯ ಮರಳು ದಂಡೆಯಲ್ಲಿ ಕುಳಿತಿದ್ದರು. ಮಗಳು ತನು ಮರಳಲ್ಲಿ ಆಡುತ್ತಿದ್ದಳು. “ಜೋಪಾನ ತನು’ ಎಂದರು ಅಪ್ಪ ಅಮ್ಮ.

ತನು ಮರಳಲ್ಲಿ ಆಡುತ್ತ ಗುಡ್ಡ, ಮನೆ, ಸೇತುವೆ, ಸುರಂಗ ಮಾಡುತ್ತ ತನ್ನದೇ ಲೋಕದಲ್ಲಿದ್ದಳು. ಅಷ್ಟರಲ್ಲಿ ಸಮುದ್ರದ ಅಲೆಯೊಂದು ಸದ್ದು ಜೋರಾಗಿ ಸದ್ದು ಮಾಡುತ್ತಾ ತೇಲಿಬಂದಿತು. ತನು ಹಿಂದೆ ಸರಿದಳು. ಮರಳಿನಲ್ಲಿ ಕಟ್ಟಿದ್ದ ಸೇತುವೆ, ಸುರಂಗಗಳೆಲ್ಲ ನೀರಿನಲ್ಲಿ ಕರಗಿ ಹೋದವು. ತನು ಬೇಸರ ಪಟ್ಟುಕೊಂಡಳು. ಯಾರೋ ನಕ್ಕ ಹಾಗಾಯಿತು. ತನು ಸುತ್ತಲೂ ನೋಡಿದಳು. ನಗು ಇನ್ನೂ ಜೋರಾಯಿತು. ದನಿಯೊಂದು ಕೇಳಿಸಿತು. “ಹ್ಹಹ್ಹಹ್ಹಾ ಏನು ಮಾಡಿದೆ ನೋಡಿದೆಯಾ?’. ಮಾತಾಡಿದ್ದು ಯಾರೆಂದು ತನು ಸುತ್ತಲೂ ನೋಡಿದಳು. ಸಮುದ್ರ ಮಾತಾಡುತ್ತಿತ್ತು. “ಓ ಸಮುದ್ರಣ್ಣ, ನೀನಾ? ನೀನು ಮಾಡಿದ್ದು ಸರಿಯಿಲ್ಲ’ ಎಂದಳು ತನು. ಈ ಬಾರಿ ಇನ್ನೂ ಸ್ವಲ್ಪ ಎತ್ತರದಲ್ಲಿ ಮರಳಿನ ಅರಮನೆಯನ್ನು ಕಟ್ಟಿದಳು. ಮತ್ತೆ ಸಮುದ್ರ ಅಲೆ ಬಂದು ಅದನ್ನು ಮುಳುಗಿಸಿತು. ಮತ್ತೆ ನಗು ಕೇಳಿಬಂತು. ತನು ಕೋಪದಿಂದ “ಏ ಸಮುದ್ರಣ್ಣ, ಹೀಗೆ ಕೆಟ್ಟದಾಗಿ ನಗಬೇಡ. ನಾನು ಮನಸ್ಸು ಮಾಡಿದರೆ ನಿನ್ನನ್ನು ಸೋಲಿಸಬಲ್ಲೆ’ ಎಂದಳು. “ನನ್ನನ್ನು ಸೋಲಿಸ್ತೀಯಾ? ಅದು ಸಾಧ್ಯವಿಲ್ಲ. ನಾನು ನಿನಗಿಂತ ಬಲಶಾಲಿ.’ ಎಂದಿತು ಸಮುದ್ರ. “ಜಂಭ ಪಡಬೇಡ ಸಮುದ್ರಣ್ಣ. ನನಗೆ ನಿನಗಿಂತ ಹೆಚ್ಚು ಸ್ನೇಹಿತರಿದ್ದಾರೆ. ಅವರ ಸಹಾಯದಿಂದ ನಿನ್ನನ್ನು ಸೋಲಿಸಬಲ್ಲೆ. ಅಲ್ಲಿ ನೋಡು. ಆ ಹಕ್ಕಿ ನಿನ್ನ ಮೇಲೆ ಹಾರುತ್ತಿದೆ. ನೀನು ಅದಕ್ಕೆ ಏನೂ ಮಾಡಲಾರೆ. ನಾನೂ ನನ್ನ ಸ್ನೇಹಿತರ ಸಹಾಯದಿಂದ ಆಕಾಶದೆತ್ತರಕ್ಕೆ ಹಾರಬಲ್ಲೆ. ಮತ್ತೆ ನೀನೇ ಸೋತೆ!’ ಎಂದಳು ತನು. “ನನ್ನ ಗಾತ್ರ ನೋಡು. ದಡಗಳೇ ಕಾಣದಷ್ಟು ಅಗಲ ನಾನು.’ ಎಂದು ಸಮುದ್ರಣ್ಣ ಅಂದಾಗ ತನು “ನೀನು ದೊಡ್ಡವನಾದರೇನು? ನೀನು ಮಾಯವಾಗುವಂತೆ ಮಾಡುತ್ತೇನೆ’ ಎಂದು ಹೇಳಿ ತನು ಕಣ್ಮುಚ್ಚಿದಳು. “ನೋಡು, ನೀನೀಗ ನನಗೆ ಕಾಣುತ್ತಲೇ ಇಲ್ಲ. ನಾನೇ ಮತ್ತೆ ಗೆದ್ದೆ, ನೀನೇ ಸೋತೆ’.

“ನನ್ನ ಮೊರೆತ ಕೇಳಿದ್ದೀಯ. ಭಯಂಕರವಾಗಿರುತ್ತದೆ’
“ನನ್ನ ಸ್ನೇಹಿತರನ್ನೆಲ್ಲಾ ಕರೆದುಕೊಂಡು ಬರುತ್ತೇನೆ. ಅವರೆಲ್ಲ ಚೆನ್ನಾಗಿ ಹಾಡಬಲ್ಲರು, ಕುಣಿಯಬಲ್ಲರು. ಅವರೆಲ್ಲ ಒಟ್ಟಾಗಿ ಧ್ವನಿವರ್ಧಕದ ಸಹಾಯದಿಂದ ಹಾಡಿದರೆ ನಿನ್ನ ಮೊರೆತವೇ ಕೇಳುವುದಿಲ್ಲ.. ಅಲ್ಲದೆ ನಿನ್ನ ಮೊರೆತ ಕರ್ಕಶವಾಗಿರುತ್ತದೆ. ನನ್ನ ಸ್ನೇಹಿತರು ಇಂಪಾಗಿ ಹಾಡಬಲ್ಲರು. ಹೇ… ನಾನು ಮತ್ತೆ ಗೆದ್ದೆ, ನೀನು ಸೋತೆ.’

“ನಾನು ಮನಸ್ಸು ಮಾಡಿದರೆ ಎಲ್ಲವನ್ನೂ ನನ್ನ ಹೊಟ್ಟೆಗೆ ಹಾಕಿಕೊಳ್ಳಬಲ್ಲೆ. ನಿನ್ನನ್ನೂ ಕೂಡ.’  “ಹೆದರಿಸಬೇಡ ಸಮುದ್ರಣ್ಣ, ನಾ ಹೆದರುವುದಿಲ್ಲ. ನೀನೊಬ್ಬ ಹೊಟ್ಟೆಬಾಕ ನಿಜ! ಆದರೆ ತಿಂದದ್ದು ಏನೂ ನಿನಗೆ ಜೀರ್ಣ ಆಗಲ್ಲ. ಅದಕ್ಕೇ ತಿಂದದ್ದನ್ನೆಲ್ಲ ದಡಕ್ಕೆ ತಂದು ತಂದು ಹಾಕುತ್ತೀಯೆ.’. ಈಗ ಸಮುದ್ರಣ್ಣನಿಗೆ ಕೋಪ ಬಂದಿತು. ಅವನು “ಏಯ್‌ ಹುಡುಗಿ ನಿನಗಿನ್ನು ನನ್ನ ಶಕ್ತಿಯ ಅರಿವಿಲ್ಲ. ನಾನು ಮನಸ್ಸು ಮಾಡಿದರೆ ಹಡಗುಗಳನ್ನೆಲ್ಲ ಮುಳುಗಿಸಿ ಬಿಡುತ್ತೇನೆ. ತನು “ಸ್ವಲ್ಪ ನಿಲ್ಲು ಮಹರಾಯ, ಗಾಳಿ, ಗುರುತ್ವಾಕರ್ಷಣಾ ಶಕ್ತಿ ಇಲ್ಲದೆ ನೀನು ಏನೂ ಮಾಡಲಾರೆ. ಮತ್ತೆ ನೀನೇ ಸೋತೆ. ಒಪ್ಪಿಕೊಂಡು ಬಿಡು’.

ಪುಟ್ಟ ಹುಡುಗಿಯ ಮುಂದೆ ಸೋತದ್ದಕ್ಕೆ ಸಮುದ್ರಣ್ಣನಿಗೆ ಬೇಸರವಾಗಲಿಲ್ಲ. ಬದಲಾಗಿ ನಗು ಬಂದಿತು. “ಈಗೇನು? ನೀನೇ ಗೆದ್ದೆ ಸರೀನಾ? ಹೀಗೆ ಜಗಳ ಆಡ್ತಿರೋಣವೇ ಅಥವಾ ಸ್ನೇಹ ಮಾಡಿಕೊಳ್ಳೋಣವೆ? ಎಂದನು ಸಮುದ್ರಣ್ಣ.
“ನೀನೇ ಶುರು ಮಾಡಿದ್ದು ಜಗಳಾನ. ಇರಲಿ. ಓ ಎಸ್‌ ನಾವಿಬ್ಬರೂ ಸ್ನೇಹಿತರಾಗೋಣ!’

“ಐ ಲವ್‌ ಯು ಸಮುದ್ರಣ್ಣ’ ಅಂತ ತನು ಹಸಿಮರಳಿನ ಮೇಲೆ ಬರೆದಳು. ಸಮುದ್ರದ ಅಲೆಗಳು ಭೋರ್ಗರೆಯುತ್ತ ಬಂದವು. ಆದರೆ ಮರಳಿನಲ್ಲಿ ಬರೆದ ಅಕ್ಷರಗಳನ್ನು ಅಳಿಸದೆ ಹಿಂತಿರುಗಿ ಹೋಗಿಬಿಟ್ಟವು. ತನು ಖುಷಿಯಿಂದ ಕುಪ್ಪಳಿಸಿದಳು.

– ಮತ್ತೂರು ಸುಬ್ಬಣ್ಣ

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

  • ಡೈನೋಸಾರ್‌ ಅಂದಾಕ್ಷ ಣ ಕಣ್ಣ ಮುಂದೆ ಬರುವುದು ದೈತ್ಯಾಕಾರದ ಪ್ರಾಣಿ. ಇದು ಬದುಕಿತ್ತ? ಬದುಕಿದ್ದರೆ ಯಾವಾಗ? ಹೇಗೆ ಅಂತೆಲ್ಲ ಕುತೂಹಲ ಹುಟ್ಟುತ್ತದೆ. ಇದನ್ನು ತಣಿಸಲೆಂದೇ...

  • ಪ್ರಪಂಚದಲ್ಲಿ ಎಷ್ಟು ಭೂಖಂಡಗಳಿವೆ ಎಂದು ಕೇಳಿದರೆ ಯಾರು ಬೇಕಾದರೂ "ಏಳು' ಎಂಬ ಉತ್ತರವನ್ನು ನೀಡುತ್ತಾರೆ. ಭೂಗೋಳ, ನಕಾಶೆ ಪುಸ್ತಕವನ್ನು ನೋಡಿದರೆ ಈ 7 ಖಂಡಗಳು ಭೂಮಿಯ...

  • ಪ್ರಮುಖ ವ್ಯಕ್ತಿಗಳ ಪರಿಚಯವನ್ನು ಕೇವಲ ಹತ್ತೇ ಹತ್ತು ಪಾಯಿಂಟ್‌ಗಳಲ್ಲಿ ಕಟ್ಟಿ ಕೊಡುವ ಪ್ರಯತ್ನವಿದು... 1. ಭಾರತೀಯ ಬಾಹ್ಯಾಕಾಶ ಸಂಸ್ಥೆ (ಇಸ್ರೋ)ಯ ಈಗಿನ ಅಧ್ಯಕ್ಷ,...

  • ನೀವು ಗಮನಿಸಿರಬಹುದು. ಈ ಜಾದೂಗಾರ ಅಂದಾಕ್ಷಣ ಕಣ್ಣ ಮುಂದೆ ಬರುವ ಚಿತ್ರ ಕೈಯಲ್ಲೊಂದಷ್ಟು ಇಸ್ಪೀಟ್‌ ಕಾರ್ಡ್‌ಗಳು. ಹೌದು, ಇದು ಜಾದುವಿನ ಚುಂಬಕ ಚಿಹ್ನೆ. ಕಾಲಿ...

  • ಕಾಡಿನ ನಡುವೆ ವನರಾಜ ಸಿಂಹದ ನೇತೃತ್ವದಲ್ಲಿ ಪ್ರಾಣಿಗಳ ಸಭೆ ನಡೆಯುತ್ತಿತ್ತು. ಜಿಂಕೆ "ಇತ್ತೀಚೆಗೆ ಬೇಟೆಗಾರನ ಉಪಟಳ ವಿಪರೀತವಾಗುತ್ತಿದೆ. ಇದು ಹೀಗೆ ಮುಂದುವರಿದರೆ...

ಹೊಸ ಸೇರ್ಪಡೆ