ರಜಾಕರ ಕೈಯಲ್ಲಿ ಕೈಲಾಸವಾಸಿ : ಈಶ್ವರ ಅಲ್ಲಾ ತೇರೆ ನಾಮ್‌

Team Udayavani, Apr 20, 2019, 10:35 AM IST

ಹಿಂದೂ ಸಂಪ್ರದಾಯದಲ್ಲಿ ಲಿಂಗಕ್ಕೆ ಪೂಜನೀಯ ಸ್ಥಾನವಿದೆ. ಲಿಂಗವನ್ನು ಶಿವನ ಸ್ವರೂಪ ಎಂದೇ ಭಾವಿಸುತ್ತಾರೆ. ಅದನ್ನು ಭಕ್ತಿಭಾವದಿಂದ ಕೊರಳಲ್ಲಿ ಧರಿಸಿಕೊಂಡು ಪೂಜಿಸುತ್ತಾರೆ. ಇಂಥ ಪವಿತ್ರ ಪೀಠಕ ಲಿಂಗ ತಯಾರು ಮಾಡುವವರು ಯಾರು ಗೊತ್ತೆ? ಬೀಳಗಿಯ ಅಬ್ದುಲ್‌ ರಜಾಕ ಖಾಸಿಂ ಸಾಹೇಬರು. ಅಲ್ಲಾನಿಗೆ ತೋರುವ ಭಕ್ತಿಯನ್ನೇ ಪುಟ್ಟ ಲಿಂಗ ತಯಾರಿಸುವುದರಲ್ಲೂ ತೋರುತ್ತಿದ್ದಾರೆ. ಮೂರು ತಲೆಮಾರುಗಳಿಂದ ರಜಾಕರ ವಂಶ ಈ ಪೀಠಕ ತಯಾರಿಕೆಯಲ್ಲಿ ನಿರತವಾಗಿದೆ.

ಲಿಂಗ ನೋಡಿದ್ದೀರಲ್ಲ? ಅದರೊಳಗೆ ಪೀಠಕ ಅಂತ ಇನ್ನೊಂದು ಪುಟ್ಟಲಿಂಗ ಇರುತ್ತದೆ. ಲಿಂಗ ಧರಿಸುವ ಪ್ರತಿಯೊಬ್ಬರ ಕೊರಳಲ್ಲಿ ಇದು ಇರುತ್ತದೆ. ಈ ಪೀಠಕಗಳನ್ನು ತಯಾರು ಮಾಡುವುದು ಬೇರಾರೂ ಅಲ್ಲ; ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲೂಕಿನ ಪುಟ್ಟದಾದ ಕೊಪ್ಪ ಎಸ್‌ಕೆ ಗ್ರಾಮದ ಅಬ್ದುಲ್‌ರಜಾಕ ಖಾಸಿಂ ಸಾಬ ನೂರಪ್ಪನವರ ಕುಟುಂಬ. ದೇಶ, ವಿದೇಶಗಳಿಗೆ ಇವರಿಂದಲೇ ಪೀಠಕ ಲಿಂಗಗಳು ಸಪ್ಲೈ ಆಗುವುದು.

“ಈಶ್ವರ ಅಲ್ಲಾ ತೇರೆ ನಾಮ್‌’ ಎಂಬ ಮಂತ್ರ ಜಪಿಸುತ್ತಾ ತಲೆ ಮೇಲೆ ಟೋಪಿ ಹಾಕಿಕೊಂಡು, ಕೈಯಲ್ಲಿರುವ ಕಲ್ಲಿಗೆ ಪವಿತ್ರ ಶಿವಲಿಂಗ ರೂಪದ ಪೀಠಕ ರೂಪ ಕೊಡುತ್ತಾರೆ. ಅಬ್ದುಲ್‌ರಜಾಕರ ವಂಶ ಎರಡು-ಮೂರು ತಲೆಮಾರಿನಿಂದ ಪೀಠಕ ಕಾಯಕವನ್ನು ಮುಂದುವರೆಸಿಕೊಂಡು ಬಂದಿದೆ. ದೇಶದಲ್ಲಿ ಇದು ಒಂದೇ ಒಂದು ಕುಟುಂಬ ಮಾತ್ರ ಈ ಕೆಲಸ ಮಾಡುತ್ತಿದೆ ಎನ್ನುವ ಹೆಗ್ಗಳಿಕೆ ಕೂಡ ಇದೆ. ಪ್ರತಿದಿನ ರಜಾಕರ ಮನೆಯಲ್ಲಿ ಪೀಠಕ ಶಿವಲಿಂಗಗಳು ನಲಿದಾಡುತ್ತವೆ. ಈ ಪುಟಾಣಿ ಲಿಂಗ ತಯಾರಿಸಲು ಸಹನೆ ಇರಬೇಕು. ಭಕ್ತಿ ಭಾವವೂ ಅದಕ್ಕೆ ಜೊತೆಯಾಗಬೇಕು.


ಪೀಠಕ ಎಂದರೇನು ?

ಕೊರಳಲ್ಲಿ ಲಿಂಗಾಧಾರಣೆ ಮಾಡುವ ಲಿಂಗದೊಳಗೆ ಸಣ್ಣ ಗಾತ್ರದ ಶಿವಲಿಂಗ ಇರುತ್ತದೆ. ಕಂತಿ ಮಾಡಿದ ಲಿಂಗದೊಳಗಿನ ಚಿಕ್ಕ ಗಾತ್ರದ ಶಿವಲಿಂಗಕ್ಕೆ ಪೀಠಕ ಎಂದು ಹೆಸರು. ಪೀಠಕ ಇರದೇ ಲಿಂಗವಿಲ್ಲ. ಇದರಲ್ಲಿ ಮೂರು ವಿಧ. ಸಾದಾ ಲಿಂಗ, ಜ್ಯೋತಿರ್ಲಿಂಗ ಹಾಗೂ ಪಂಚಸೂತ್ರ ಲಿಂಗ. ಈ ಪಂಚಸೂತ್ರ ಶಿವಲಿಂಗಗಳನ್ನು ದೇಶದ ದೊಡ್ಡ ದೊಡ್ಡ ಮಠಗಳಲ್ಲಿ ನಡೆಯುವ ಹೋಮಗಳಲ್ಲಿ ಬಳಸುತ್ತಾರೆ. ಮಠಗಳಲ್ಲಿ ಲಿಂಗ ದೀಕ್ಷೆಗಳಲ್ಲಿ ಇದು ಪ್ರಾಮುಖ್ಯತೆ ಪಡೆದಿವೆ.

ಪೀಠಕ ಲಿಂಗವನ್ನು ತಯಾರಿಸಲು ಕಟಕದ ಕಲ್ಲು (ಲಿಂಗದ ಕಲ್ಲು) ಬಳಸುತ್ತಾರೆ. ಇದು ಪದರುಗಳನ್ನು ಸರಳವಾಗಿ ಬಿಚ್ಚುತ್ತದೆ ಮತ್ತು ಮೃದುವಾಗಿರುತ್ತದೆ ಎನ್ನುವ ಕಾರಣಕ್ಕಾಗಿ ಈ ಕಲ್ಲನ್ನೇ ಉಪಯೋಗಿಸುತ್ತಾರೆ. ಈ ಕಲ್ಲು ಉದಗಟ್ಟಿ ಗ್ರಾಮದಲ್ಲಿ ದೊರೆಯುತ್ತದೆ. ಅಲ್ಲಿಂದ ತಂದು ಮೊದಲು ಸಣ್ಣ ಸಣ್ಣ ಕೋಲಿನ ತುಂಡುಗಳಂತೆ ಕೆತ್ತಿಕೊಳ್ಳುತ್ತಾರೆ. ನಂತರ ಅದನ್ನು ಸಾಣೆ ಯಂತ್ರಕ್ಕೆ ಹಿಡಿದು ಪುಟಾಣಿ ಶಿವಲಿಂಗದ ರೂಪ ನೀಡುತ್ತಾರೆ.

ಒಂದು ಪರಿಪೂರ್ಣ ಪೀಠಕ ತಯಾರಾಗಲು ಐದು ಬಾರಿ ಉಳಿ ಏಟು ಬೀಳಬೇಕು. ಹೀಗೆ ತಯಾರಾದ ಪೀಠಕಗಳಿಗೆ ಕಪ್ಪು ಬಣ್ಣದ ಕಂತಿ ಲೇಪನ ಮಾಡಿ ಲಿಂಗದ ರೂಪ ಕೊಡುತ್ತಾರೆ. ಲಿಂಗಗಳು ದೇಶದ ನಾನಾ ಮೂಲೆಗಳಲ್ಲಿಯೂ ತಯಾರಾಗುತ್ತವೆ. ಆದರೆ ಅವುಗಳಿಗೆ ಅವಶ್ಯವಿರುವ ಪೀಠಕಗಳು ಮಾತ್ರ ಈ ಎಸ್‌.ಕೆ. ಕೊಪ್ಪ ಗ್ರಾಮದಲ್ಲಿ ಮಾತ್ರ ದೊರೆಯುತ್ತವೆ ಎನ್ನುವುದೇ ವಿಶೇಷ.

ಅಬ್ದುಲ್‌ ರಜಾಕ ಕುಟುಂಬ ವರ್ಷಪೂರ್ತಿ ಈ ಪೀಠಕ ತಯಾರಿಕೆಯಲ್ಲಿ ತೊಡಗಿರುತ್ತದೆ. ಶಿವರಾತ್ರಿ ಸಂದರ್ಭದಲ್ಲಿ ಇವರಿಗೆ ಬಿಡುವೇ ಇರುವುದಿಲ್ಲ. ಕುಟುಂಬದಲ್ಲಿನ ಮಹಿಳೆಯರು ಸೇರಿದಂತೆ ಎಲ್ಲರೂ ಪೀಠಕಗಳ ತಯಾರಿಕೆಯಲ್ಲಿ ತೊಡಗುತ್ತಾರೆ. ತಿಂಗಳಿಗೆ ಅಂದಾಜು 20 ಸಾವಿರದಂತೆ, ವರ್ಷಕ್ಕೆ ಸುಮಾರು 2.50 ರಿಂದ 3 ಲಕ್ಷದವರೆಗೆ ಪೀಠಕಗಳನ್ನು ತಯಾರಿಸುವುದಿದೆ. ಸಾದಾ ಲಿಂಗಗಳಿಗೆ ಒಂದು ರೂ. ಒಂದು ಸಾವಿರ ಜ್ಯೋತಿರ್ಲಿಂಗ, ಪಂಚಸೂತ್ರ ಲಿಂಗಗಳಿಗೆ ತಲಾ ಮೂರು ರೂಪಾಯಿಯಂತೆ ಮಾರಾಟ ಮಾಡುತ್ತಾರೆ. ಈ ಪೀಠಕಗಳಿಂದ ಈ ಕುಟುಂಬದ ಪ್ರತಿಯೊಬ್ಬರ ಪ್ರತಿದಿನದ ದುಡಿಮೆ 600 ರೂಪಾಯಿ. ಒಂದು ವರ್ಷಕ್ಕೆ 1.50 ರಿಂದ 1.75 ಲಕ್ಷದವರೆಗೆ ದುಡಿಯುತ್ತಾರೆ.

ಕಾಶ್ಮೀರ ಟು ಕನ್ಯಾಕುಮಾರಿ
ಅಬ್ದುಲ್‌ರಜಾಕರು ತಯಾರಿಸುವ ಪೀಠಕಗಳು ದೇಶಾದ್ಯಂತ ಪೂರೈಕೆಯಾಗುತ್ತಿವೆ. ಕಾಶ್ಮೀರದಿಂದ ಕನ್ಯಾಕುಮಾರಿವರೆಗೂ ಇಲ್ಲಿನ ಪೀಠಕಗಳಿಗೆ ಬೇಡಿಕೆ ಇದೆ. ಪಂಚ ಜಗದ್ಗುರು ಪೀಠಗಳಾದ ಕಾಶಿ, ಉಜ್ಜಯಿನಿ, ರಂಭಾಪುರಿ, ಕೇದಾರ ಮತ್ತು ಶೀಶೈಲ ಸೇರಿದಂತೆ ಪ್ರಸಿದ್ದ ಧಾರ್ಮಿಕ ಕ್ಷೇತ್ರಗಳು, ಮಠ ಮಾನ್ಯಗಳಿಗೂ ಈ ಮುಸ್ಲಿಂ ಕುಟುಂಬದ ಪೀಠಕಗಳೇ ರವಾನೆಯಾಗುವುದು. ಅದಲ್ಲದೇ ಯಾವುದೇ ಕ್ಷೇತ್ರಗಳಲ್ಲಿ ಹೋಮ ಹವನ, ಲಿಂಗದೀಕ್ಷೆ ಕಾರ್ಯಕ್ರಮಗಳಿಗೂ ಇಲ್ಲಿನ ಪೀಠಕಗಳನ್ನೂ ಕೊಂಡೊಯ್ಯುತ್ತಾರೆ. ಅತಿಹೆಚ್ಚು ಪೀಠಕಗಳು ಮಹಾರಾಷ್ಟ್ರಕ್ಕೆ ರವಾನೆಯಾಗುತ್ತವೆ ಎನ್ನುತ್ತಾರೆ ರಜಾಕರು.

— ರೇವಣ್ಣ ಅರಳಿ ; ಚಿತ್ರಗಳು: ವಿಠ್ಠಲ ಮೂಲಿಮನಿ

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

  • "ಶಾಂತಿ ಹುಟ್ಟುವುದೇ ನಗುವಿನಿಂದ' ಎನ್ನುವ ಜೀವನತತ್ತ್ವದಲ್ಲಿ ನಂಬಿಕೆಯಿಟ್ಟು, ದೀನರ, ರೋಗಿಗಳ, ನಿರ್ಗತಿಕರಿಗೆ ವಾತ್ಸಲ್ಯದ ಚಿಕಿತ್ಸೆ ನೀಡಿದವರು, ಮದರ್‌ ತೆರೇಸಾ....

  • ರಾಜಧಾನಿ ಬೆಂಗಳೂರಿಗೆ ಬಂದವರೆಲ್ಲರೂ ಭೇಟಿ ನೀಡುವ ದೇವಸ್ಥಾನ, ಶ್ರೀ ರಾಧಾಕೃಷ್ಣ ಮಂದಿರ ಅಥವಾ ಇಸ್ಕಾನ್‌. ರಾಜಾಜಿನಗರದ ಹರೇ ಕೃಷ್ಣ ಬೆಟ್ಟದ ಮೇಲಿರುವ ಈ ದೇಗುಲ,...

  • ಕ್ರಿಕೆಟ್‌ ಮೈದಾನದಲ್ಲಿದ್ದಾಗ ಉರಿಉರಿದು ಬೀಳುತ್ತಿದ್ದ ಭಾರತ ಕ್ರಿಕೆಟ್‌ ತಂಡದ ಮಾಜಿ ವೇಗದ ಬೌಲರ್‌ ಎಸ್‌.ಶ್ರೀಶಾಂತ್‌, ಈಗ ತಣ್ಣಗಾಗಿದ್ದಾರೆ. 2011ರ ನಂತರ ಅವರ...

  • ವಿಶ್ವ ಕ್ರಿಕೆಟ್‌ನ ದೇವರೆಂದೇ ಒಂದುಕಾಲದಲ್ಲಿ ಅಭಿಮಾನಿಗಳಿಂದ ಆರಾಧಿಸಲ್ಪಟ್ಟಿದ್ದ ಸಚಿನ್‌ ತೆಂಡುಲ್ಕರ್‌ರ ಒಂದೊಂದೇ ದಾಖಲೆಗಳು ಹಿಂದಕ್ಕೆ ಬೀಳುತ್ತಿವೆ....

  • ಪ್ರಕೃತಿ ನಿರ್ಮಿತ ಸುಂದರ ಮಡಿಲಿನಲ್ಲಿ, ಹಚ್ಚ ಹಸಿರಿನ ಬೆಟ್ಟಗಳ ಮಧ್ಯದಲ್ಲಿರುವ ಸಿದ್ಧೇಶ್ವರ ಇಲ್ಲಿ ಸ್ವಯಂಭೂ ಲಿಂಗ ಸ್ವರೂಪಿ. ಬೆಳಗಾವಿ ಜಿಲ್ಲೆಯ ರಾಮದುರ್ಗ...

ಹೊಸ ಸೇರ್ಪಡೆ