Todays ಸ್ಪೆಷಲ್‌

ಕಾಫ್ ಸಿರಪ್‌ ಗೋಬಿ ಮಂಚೂರಿ 

Team Udayavani, Aug 28, 2019, 5:05 AM IST

ಗೋಬಿಮಂಚೂರಿ ತಿನ್ನುತ್ತಾ- “ಚೆನ್ನಾಗಿದೆ, ಏನೇನು ಹಾಕಿದ್ದೀಯ? ಹೇಗೆ ಮಾಡಿದೆ’ ಅಂತೆಲ್ಲಾ ವಿಚಾರಿಸಿದರು. ನಾನು ಉತ್ಸಾಹದಿಂದ ಎಲ್ಲವನ್ನೂ ವಿವರಿಸಿದೆ. ಇನ್ನೂ ಸ್ವಲ್ಪ ಬಡಿಸಲಾ? ಅಂದಾಗ ಮಾತ್ರ, ಉಹೂಂ, ಅಂದುಬಿಟ್ಟರು. ಎಷ್ಟೇ ಒತ್ತಾಯ ಮಾಡಿದರೂ ಪುನಃ ಹಾಕಿಸಿಕೊಳ್ಳಲಿಲ್ಲ, ಆಗ ನನಗೆ ಅನುಮಾನ ಬಂತು.

ಆಗಿನ್ನೂ ಮದುವೆಯಾದ ಹೊಸದು. ಎಲ್ಲವೂ ರಂಗುರಂಗಾಗಿ ಕಾಣುತ್ತಿದ್ದ, ಕಣ್ಣುಗಳಲ್ಲಿ ಆತ್ಮವಿಶ್ವಾಸದ ಹೊಳಪು ತುಂಬಿಕೊಂಡಿದ್ದ, ಎಲ್ಲವನ್ನೂ ಸಾಧಿಸುವ ಛಲ ಇದ್ದ ಸಮಯ. ಮನೆಯಲ್ಲಿ ನಾವಿಬ್ಬರೇ, ನಮಗೊಂದು ಪುಟ್ಟ ಗೂಡು. ಬದುಕಿನಲ್ಲಿ ಇನ್ನೇನು ತಾನೇ ಬೇಕು?

ಮನೆಯವರು ಬೆಳಗ್ಗೆ ಕೆಲಸಕ್ಕೆ ಹೋದರೆ ಬರುವುದು ಸಂಜೆಯೇ. ಇಡೀ ದಿನ ಮನೆಗೆ ನಾನೇ ರಾಣಿ. ಏನು ಮಾಡಿದರೂ, ಮಾಡದಿದ್ದರೂ ಕೇಳುವವರು ಯಾರೂ ಇರಲಿಲ್ಲ. ಆದರೆ, ಸುಮ್ಮನೆ ಕುಳಿತುಕೊಳ್ಳುವ ಜಾಯಮಾನ ನನ್ನದಲ್ಲ. ಸದಾ ಏನನ್ನಾದರೂ ಮಾಡುತ್ತಲೇ ಇರಬೇಕು, ಸೋಮಾರಿ ಹೌಸ್‌ವೈಫ್ ಅನ್ನಿಸಿಕೊಳ್ಳಬಾರದು ಅಂತ ಮೊದಲೇ ನಿಶ್ಚಯಿಸಿದ್ದೆ. ಅದಕ್ಕಾಗಿಯೇ, ಮದುವೆಯಾಗಿ ಗಂಡನ ಮನೆಗೆ ಬರುವಾಗ, ಹೊಸರುಚಿ ಕಲಿಸುವ ಅಡುಗೆ ಪುಸ್ತಕಗಳನ್ನೂ ಜೊತೆಗೆ ತಂದಿದ್ದೆ. ಹೊಸಬಗೆಯ ಪಾಕ ಪ್ರಯೋಗ ನಡೆಸಲು ಗಂಡನ ಮನೆಯನ್ನೇ ಆರಿಸಿಕೊಂಡಿದ್ದೆ. The way to a man’s heart is through his stomach ಅಂತ (ಗಂಡನ ಹೃದಯವನ್ನು ಗೆಲ್ಲಬೇಕಾದರೆ ರುಚಿರುಚಿಯಾಗಿ ಅಡುಗೆ ಮಾಡಿ ಬಡಿಸಬೇಕೆಂದು) ಅಜ್ಜಿ, ಅಮ್ಮನಿಂದ ಉಪದೇಶಾಮೃತಗಳನ್ನು ಬೇರೆ ಕೇಳಿದ್ದೆನಲ್ಲ!

ದಿನಾ ಬೆಳಗ್ಗೆ ಯಜಮಾನರು ಕೆಲಸಕ್ಕೆ ಹೋದ ತಕ್ಷಣ, ಪುಸ್ತಕಗಳನ್ನು ಹರಡಿಕೊಂಡು ಇವತ್ತಿನ ಅಡುಗೆಯಲ್ಲಿ ಏನೇನು ಹೊಸತನ್ನು ಟ್ರೈ ಮಾಡಬಹುದು, ಅದಕ್ಕೆ ಏನೇನೆಲ್ಲಾ ಸಾಮಗ್ರಿಗಳು ಬೇಕಾಗುತ್ತದೆ…..ಎಂಬುದನ್ನು ಪರಿಶೀಲಿಸಿ, ಅಗತ್ಯ ಸಾಮಗ್ರಿಗಳನ್ನು ಸಿದ್ಧಪಡಿಸಿಕೊಂಡು ಪ್ರಯೋಗಕ್ಕೆ ಸಿದ್ಧಳಾಗುತ್ತಿದ್ದೆ. ದಿನಕ್ಕೊಂದು ಬಗೆಯ ಅಡುಗೆ ಮಾಡುವ ಹುಮ್ಮಸ್ಸು, ಉತ್ಸಾಹ ನನ್ನಲ್ಲಿತ್ತು.

ಹಾಗೆಯೇ ಒಂದು ದಿನ ಗೋಬಿ ಮಂಚೂರಿ ಮಾಡುತ್ತೇನೆಂದು ನಿರ್ಧರಿಸಿದೆ. ಶ್ರದ್ಧೆಯಿಂದ ಅಡುಗೆ ಕೆಲಸವನ್ನು ಪೂರೈಸಿ, ಗಂಡನ ಬರುವಿಕೆಗಾಗಿ ಕಾಯುತ್ತಿದ್ದೆ. ಸಂಜೆ ಅವರು ಬಂದಾಗ, ಬಿಸಿಬಿಸಿಯಾಗಿ ಗೋಬಿ ಮಂಚೂರಿ ಬಡಿಸಿ, ಅವರ ಒಂದು ಮುಗುಳ್ನಗು, “ವಾವ್‌, ತುಂಬಾ ಚೆನ್ನಾಗಿದೆ’ ಎಂಬ ಅವರ ಶಹಬ್ಟಾಸ್‌ಗಿರಿಗಾಗಿ ಕಾತುರಳಾಗಿ ಕಾಯುತ್ತಾ ಇದ್ದೆ.

ಅವರು ಬಂದರು. ಗೋಬಿಮಂಚೂರಿ ತಿನ್ನುತ್ತಾ- “ಚೆನ್ನಾಗಿದೆ, ಏನೇನು ಹಾಕಿದ್ದೀಯ? ಹೇಗೆ ಮಾಡಿದೆ’ ಅಂತೆಲ್ಲಾ ವಿಚಾರಿಸಿದರು. ನಾನು ಉತ್ಸಾಹದಿಂದ ಎಲ್ಲವನ್ನೂ ವಿವರಿಸಿದೆ. ಇನ್ನೂ ಸ್ವಲ್ಪ ಬಡಿಸಲಾ? ಅಂದಾಗ ಮಾತ್ರ, ಉಹೂಂ, ಅಂದುಬಿಟ್ಟರು. ಎಷ್ಟೇ ಒತ್ತಾಯ ಮಾಡಿದರೂ ಪುನಃ ಹಾಕಿಸಿಕೊಳ್ಳಲಿಲ್ಲ, ಆಗ ನನಗೆ ಅನುಮಾನ ಬಂತು. “ಯಾಕೆ? ಚೆನ್ನಾಗಿಲ್ಲವೇ?’ ಎಂದು ಕಾತುರಳಾಗಿ ಕೇಳಿದೆ. “ಇಲ್ಲ, ಏನೋ ಒಂದು ಬಗೆಯ ಔಷಧದ ವಾಸನೆ ಬರುತ್ತಿದೆ. ಹೂಕೋಸಿಗೆ ಏನಾದರೂ ಔಷಧ ಸಿಂಪಡಿಸಿರಬೇಕು. ನೀನು ಸರಿಯಾಗಿ ತೊಳೆದಿದ್ದೀಯೋ, ಇಲ್ಲವೋ’ ಎಂದರು. ಮದುವೆಯಾದ ಹೊಸತಲ್ಲವೇ, ಬೈಯಲು ಅವರಿಗೂ ಮುಜುಗರ. ಅಯ್ಯೋ, ಹೂಕೋಸನ್ನು ಚೆನ್ನಾಗಿಯೇ ತೊಳೆದಿದ್ದೆನಲ್ಲ ಅಂತ ಗೊಣಗುತ್ತಾ, ಒಂದು ತುಣುಕು ಗೋಬಿಯನ್ನು ಬಾಯಿಗೆ ಹಾಕಿಕೊಂಡೆ. ಏನೋ ಒಂಥರಾ ವಾಸನೆ, ಒಗರು ಒಗರು ರುಚಿ. ಹೂಕೋಸಿಗೆ ಹಾಕಿದ್ದ ಕ್ರಿಮಿನಾಶಕದ ವಾಸನೆಯೇ ಇರಬೇಕು ಅಂತಂದುಕೊಂಡು ನಾನೂ ಸುಮ್ಮನಾದೆ.

ಆದರೆ, ರಾತ್ರಿ ರೆಫ್ರಿಜರೇಟರ್‌ನ ಬಾಗಿಲು ತೆಗೆದಾಗಲೇ ಗೊತ್ತಾಗಿದ್ದು, ನಾನು ಗೋಬಿ ಮಂಚೂರಿಗೆ ಸೋಯಾ ಸಾಸ್‌ ಬದಲು ಕಾಫ್ ಸಿರಪ್‌ (ಕೆಮ್ಮಿನ ಔಷಧಿ) ಸುರಿದಿದ್ದೆ ಎಂದು! ಎರಡನ್ನೂ ಫ್ರಿಡ್ಜ್ನಲ್ಲಿ ಅಕ್ಕಪಕ್ಕ ಇಟ್ಟಿದ್ದರಿಂದ, ಗಡಿಬಿಡಿಯಲ್ಲಿ ನನಗೆ ಗೊತ್ತಾಗಿರಲಿಲ್ಲ. ಅಂದಿನಿಂದ ಕಾಫ್ ಸಿರಪ್‌ನ ಜಾಗ ಬದಲಾವಣೆ ಆಯಿತು. ನನ್ನದೇ ಮರ್ಯಾದೆಯ ಪ್ರಶ್ನೆಯಾದ್ದರಿಂದ, ಗಂಡನ ಬಳಿ ವಿಷಯ ಹೇಳಲಿಲ್ಲ. ಹಾಗೆಯೇ, ಹೆಂಗಸರ ಬಾಯಲ್ಲಿ ಗುಟ್ಟು ನಿಲ್ಲುವುದಿಲ್ಲ ಎಂದು ಎಲ್ಲರೂ ಹೇಳುತ್ತಾರಲ್ಲ, ಇವತ್ತಿನ ತನಕ ನಾನು ಈ ಫ‌ಜೀತಿಯನ್ನು ಯಾರಲ್ಲೂ ಬಾಯಿ ಬಿಟ್ಟಿರಲಿಲ್ಲ ಗೊತ್ತೇ!

ಆಶಾ ನಾಯಕ್‌, ಮೈಸೂರು

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

  • ಮಗಳು ಬಂದಮೇಲೆ ಬಾಳಿಗೊಂದು ಅರ್ಥ ಬಂತು. ಮಗಳು ಮನೆ ತುಂಬಿದ ಮೇಲೆ ನನ್ನಲ್ಲೂ ತುಂಬಾ ಬದಲಾವಣೆ ಆಯ್ತು ಎನ್ನುವ ಅಪ್ಪಂದಿರುಂಟು. ಮಗಳನ್ನು- ತಾಯಿ , ದೇವತೆ, ಮಹಾಲಕ್ಷ್ಮಿ...

  • ಹಿಂದೆಲ್ಲಾ ಬಟ್ಟೆ ಖರೀದಿಸುವುದೇ ಒಂದು ಮಹಾ ಹಬ್ಬ. ವರ್ಷಕ್ಕೊಮ್ಮೆ ಬರುವ ದೊಡ್ಡ ಹಬ್ಬಕ್ಕೆ ಒಮ್ಮೆ ಖರೀದಿಸಿದರೆ ಮುಗೀತಿತ್ತು. ಮತ್ತೆ ಬಟ್ಟೆ ಕೊಳ್ಳುವುದು...

  • ಪಕ್ಕದ ತಟ್ಟೆಗೆ ಕೈ ಹಾಕಿ, ತಲೆಯೆತ್ತದೇ ಎರಡು ದೊಡ್ಡ ತುಂಡು ಬಾಯಿಗಿಳಿಸಿ, ಮಗನ ಅಭಿಪ್ರಾಯ ಕೇಳಲು ತಲೆ ಎತ್ತಿ ನೋಡಿದೆ. ಮಗ ಗರ ಬಡಿದವನಂತೆ ಅವಾಕ್ಕು! "ಏನಾಯ್ತೋ?...

  • ಅಥ್ಲೆಟಿಕ್ಸ್‌ನಲ್ಲಿ ಒಂದು ಚಿನ್ನದ ಪದಕ ಗಳಿಸುವುದೇ ಅತಿ ಕಷ್ಟದ ವಿಷಯ. ಅದರಲ್ಲೂ, ನೂರು ಮೀಟರ್‌ ಓಟದಲ್ಲಿ ಸೆಕೆಂಡ್‌ಗಳ ಅಂತರದಲ್ಲಿ ಪದಕ ಮಿಸ್‌ ಆಗಿಬಿಡುತ್ತದೆ....

  • ದಸರಾ ರಜೆ ಇರೋದ್ರಿಂದ ನೆಂಟರು ಮನೆಗೆ ಬಂದಿದ್ದಾರೆ. ಅವರು ಮೆಚ್ಚುವಂಥ ತಿಂಡಿ ಮಾಡಬೇಕು. ಏನು ಮಾಡ್ಹೋದು ಎಂದು ಬಹಳಷ್ಟು ಮಹಿಳೆಯರು ಯೋಚನೆಯಲ್ಲಿದ್ದಾರೆ. ದಸರೆಯ...

ಹೊಸ ಸೇರ್ಪಡೆ