ಅಂಪೈರ್ ನಿರ್ಣಯಕ್ಕೆ ಅಗೌರವ ತೋರಿದ ಜೇಸನ್ ರಾಯ್ ಗೆ ದಂಡ

ಔಟ್ ತೀರ್ಪು ನೀಡಿದರೂ ಮೈದಾನ ಬಿಟ್ಟು ಕದಲದ ರಾಯ್

Team Udayavani, Jul 12, 2019, 11:45 AM IST

ಬರ್ಮಿಗಂ: ಇಂಗ್ಲೆಂಡಿನ ಆರಂಭಿಕ ಆಟಗಾರ ಜೇಸನ್ ರಾಯ್ ಅಸೀಸ್ ವಿರುದ್ಧದ ಪಂದ್ಯದಲ್ಲಿ ಅಂಪೈರ್ ನಿರ್ಣಯಕ್ಕೆ ಅಗೌರವ ತೋರಿದ ಹಿನ್ನಲೆಯಲ್ಲಿ ಐಸಿಸಿ ಪಂದ್ಯ ಶುಲ್ಕದ 30 ಶೇಕಡಾ ದಂಡ ವಿಧಿಸಲಾಗಿದೆ.

ಆಸಿಸ್ ವಿರುದ್ದದ ಸೆಮಿ ಫೈನಲ್ ಪಂದ್ಯದಲ್ಲಿ ಉತ್ತಮವಾಗಿ ಆಡುತ್ತಿದ್ದ ರಾಯ್ ಕೆಟ್ಟ ಅಂಪೈರ್ ತೀರ್ಪಿಗೆ ಬಲಿಯಾಗಬೇಕಾಯಿತು. ಪ್ಯಾಟ್ ಕಮಿನ್ಸ್ ರ ಪಂದ್ಯದ 20 ನೇ ಓವರ್ ವೇಳೆ ಈ ಘಟನೆ ನಡೆದಿತ್ತು. ಕಮಿನ್ಸ್ ಎಸೆದ ಬಾಲ್ ಆನ್ ಸೈಡ್ ಮೂಲಕ ಕೀಪರ್ ಕೈ ಸೇರಿತು. ಹೊಡೆತಕ್ಕಾಗಿ ರಾಯ್ ಬ್ಯಾಟ್ ಬೀಸಿದ್ದರು ಕೂಡಾ. ಆಸೀಸ್ ಬೌಲರ್, ಕೀಪರ್ ಸೇರಿ ಕ್ಯಾಚ್ ಗೆ ಮನವಿ ಮಾಡಿದರು. ಅಂಪೈರ್ ಕುಮಾರ ಧರ್ಮಸೇನ ಔಟ್ ಎಂದು ಘೋಷಿಸಿದರು.

ಆದರೆ ರಾಯ್ ಗೆ ಧರ್ಮಸೇನಾ ತೀರ್ಪು ಸಮಾಧಾನ ತಂದಿರಲಿಲ್ಲ. ಯಾಕೆಂದರೆ ರಾಯ್ ಬ್ಯಾಟ್ ಅಥವಾ ಗ್ಲೌಸ್ ಗೆ ಚೆಂಡು ತಾಗಿರಲಿಲ್ಲ. ಅಲ್ಟ್ರಾ ಎಡ್ಜ್ ಕೂಡಾ ಇದನ್ನೆ ಅನುಮೋಧಿಸಿತ್ತು. ಆದರೆ ಇಂಗ್ಲೆಂಡ್ ಬಳಿ ತೀರ್ಪು ಮರು ಪರಿಶೀಲಿಸುವ ಅವಕಾಶ ಇಂಗ್ಲೆಂಡ್ ಅದಾಗಲೇ ಕಳೆದುಕೊಂಡಿತ್ತು. ಇದರಿಂದ ಅಸಮಧಾನಗೊಂಡ ರಾಯ್ ಮೈದಾನ ಬಿಟ್ಟು ಕದಲಲಿಲ್ಲ. ಕೊನೆಗೆ ಅಂಪೈರ್ ಮನವೊಲಿಸಿ ರಾಯ್ ಅವರನ್ನು ಹೊರಗೆ ಕಳುಹಿಸಿದರು.

ಈ ವೇಳೆಗೆ ಜೇಸನ್ ರಾಯ್ 85 ರನ್ ಗಳಿಸಿದ್ದರು. ಸೆಮಿ ಫೈನಲ್ ಪಂದ್ಯದಲ್ಲಿ ಶತಕ ಗಳಿಸುವ ಉತ್ತಮ ಅವಕಾಶವೊಂದನ್ನು ರಾಯ್ ತಪ್ಪಿಸಿಕೊಂಡರು.

ಮೈದಾನದಲ್ಲಿ ರಾಯ್ ಈ ವರ್ತನೆಗೆ ಐಸಿಸಿ ದಂಡ ವಿಧಿಸಿದ್ದು, ಪಂದ್ಯ ಶುಲ್ಕದ ಶೇ 30ರಷ್ಟನ್ನು ರಾಯ್ ಗೆ ದಂಡ ವಿಧಿಸಲಾಗಿದೆ.

ಅಸೀಸ್ ವಿರುದ್ಧ ಇಂಗ್ಲೆಂಡ್ ಎಂಟು ವಿಕೆಟ್ ಗಳ ಜಯ ಸಾಧಿಸಿ ಫೈನಲ್ ತಲುಪಿತು. ಮೊದಲು ಬ್ಯಾಟಿಂಗ್ ಮಾಡಿದ್ದ ಆಸೀಸ್ 49 ಓವರ್ ಗಳಲ್ಲಿ 223 ರನ್ ಗೆ ತನ್ನೆಲ್ಲಾ ವಿಕೆಟ್ ಕಳೆದು ಕೊಂಡಿತ್ತು. ಇದನ್ನು ಬೆನ್ನಟ್ಟಿದ ಇಂಗ್ಲೆಂಡ್ ಕೇವಲ 32.1 ಓವರ್ ನಲ್ಲಿ ಎರಡು ವಿಕೆಟ್ ಕಳೆದುಕೊಂಡು ಗುರಿ ಮುಟ್ಟಿತ್ತು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ