ಸಂತನ ಬದುಕಿನ ಬಿಡಿ ಚಿತ್ರಗಳು


Team Udayavani, Dec 30, 2019, 4:01 AM IST

santana

70ರ ದಶಕದಲ್ಲಿ ಸಂನ್ಯಾಸಿಯೊಬ್ಬರು – ಅದೂ ಮಾಧ್ವರು – ಹರಿಜನರ ಕೇರಿಗೆ ಕಾಲಿಟ್ಟರು ಎಂಬುದೇ ಬೆರಗುಗಣ್ಣಿಗೆ, ಹಾರುಹುಬ್ಬಿಗೆ ಕಾರಣವಾದ ಸುದ್ದಿ. ಉಳಿದವರಿಗೆ ಗಿಮಿಕ್ಕು ಮಾತ್ರ ಆಗಬಹುದಿದ್ದ ಆ ಸಂಗತಿ ಶ್ರೀಗಳಿಗೆ ಮಾತ್ರ ಪ್ರಾಮಾಣಿಕ ಯತ್ನ,

ಸ್ವಾಮೀಜಿಯಾಗಿ ಮಠ ಸೇರಿಕೊಂಡುಬಿಟ್ಟರೆ ಮೂರು ಹೊತ್ತು ತಿಂದುಂಡು, ಪ್ರತಿನಿತ್ಯ ಪಾದಪೂಜೆ ಮಾಡಿಸಿಕೊಂಡು, ಉತ್ಸವ ಮೂರ್ತಿಯಾಗಿ ಅಡ್ಡಪಲ್ಲಕಿ ಹೊರಿಸಿಕೊಂಡು ಆರಾಮಾಗಿರಬಹುದು ಎಂಬ ಅತಾರ್ಕಿಕ ಕಲ್ಪನೆಯೊಂದು ಲೌಕಿಕ ವೈಚಾರಿಕರಲ್ಲಿ ಮನೆಮಾಡಿರುತ್ತದೆ. ಅಂಥವರು ಪೇಜಾವರ ಶ್ರೀ ವಿಶ್ವೇಶತೀರ್ಥರ ಒಂದೇ ಒಂದು ದಿನದ ದಿನಚರಿಯನ್ನು ನೋಡಿದ್ದರೂ ಬೆದರಿ ನಾಚಿ ಬೆವರೊರೆಸಿಕೊಳ್ಳುತ್ತಿದ್ದರೋ ಏನೋ. ಒಂದೊಂದು ಕ್ಷಣವನ್ನೂ ಲೆಕ್ಕಾಚಾರ ಮಾಡಿ ವ್ಯಯಿಸುವ ವಿಐಪಿಗಳಂತೆ ಪೇಜಾವರರು ತನ್ನ ಬದುಕಿನ ಪ್ರತಿ ನಿಮಿಷವನ್ನೂ ಸಾಧ್ಯವಾದಷ್ಟು ಸಾರ್ಥಕವಾಗಿ ಕಳೆಯಲು ಯತ್ನಿಸಿದವರು.

ದಿನದ ಇಪ್ಪತ್ತನಾಲ್ಕು ತಾಸುಗಳಲ್ಲಿ ಮುತ್ಸದ್ದಿ, ವಿದ್ವಾಂಸ, ವಿಮರ್ಶಕ, ಭಾಷ್ಯಕಾರ, ಸಮಾಜ ಸೇವಕ, ಜನಹಿತ ರಕ್ಷಕ, ರಾಷ್ಟ್ರಹಿತ ಚಿಂತಕ, ರಾಜರ್ಷಿ, ಗುರು, ಕರ್ಮಠ ಸಂನ್ಯಾಸಿ – ಈ ಎಲ್ಲ ಪಾತ್ರಗಳನ್ನೂ ಲೀಲಾಜಾಲವಾಗಿ ಧರಿಸುವುದು ಮಾತ್ರವಲ್ಲದೆ, ಪ್ರತಿಯೊಂದಕ್ಕೂ ನ್ಯಾಯ ದೊರಕಿಸುವ ಕೆಲಸವನ್ನೂ ಮಾಡಬೇಕಾದ ನಿಬಿಡ ಬದುಕನ್ನು ಬದುಕಿದವರು ಅವರು. ಏಕಾಂತ, ಲೋಕಾಂತಗಳೆರಡನ್ನೂ ಅವರಂತೆ ಒಳಗೊಂಡು, ಆವರಿಸಿಕೊಂಡು, ಅನುಭವಿಸಿಕೊಂಡು ಬದುಕಿ ಧನ್ಯತೆ ಕಂಡವರು ದುರ್ಲಭರಲ್ಲಿ ದುರ್ಲಭ.

ಕೆಲವರು ತೋರಿಕೆಗಾಗಿ ಕೆಲಸ ಮಾಡುತ್ತಾರೆ. ಅವರಿವರಿಗೆ ತಿಳಿಯಲಿ, ಹೊಗಳಲಿ ಎಂಬ ಬಯಕೆ ಮತ್ತು ಸಂಚಿಟ್ಟುಕೊಂಡು ಕೆಲಸ ಮಾಡುವವರೂ ಇದ್ದಾರು. ಆದರೆ ಪೇಜಾವರರಿಗೆ ಯಾವುದೇ ಕೆಲಸವಿದ್ದರೂ ಅದು ದೇವರ ಪೂಜೆ. ಮಧ್ವರ ಆಜ್ಞೆ. ಬದುಕಿನ ಕರೆ. ಇನ್ನೊಬ್ಬರನ್ನು ಮೆಚ್ಚಿಸುವುದರಲ್ಲಿ ಅವರಿಗೆ ಆಸಕ್ತಿಯಿರಲಿಲ್ಲ. ಆದರೆ ದೇವರನ್ನು ಮೆಚ್ಚಿಸಲಿಕ್ಕಾಗಿ ಎಂಥ ಕೆಲಸವನ್ನೂ ಮಾಡುವ ಬದ್ಧತೆ ಇತ್ತು. ಬಹುಶಃ ಹಾಗೆ ಪ್ರತಿಯೊಂದನ್ನೂ ಕೃಷ್ಣಪೂಜೆ ಎಂದು ಅನುಸಂಧಾನ ಮಾಡಿಕೊಳ್ಳುತ್ತಿದ್ದುದರಿಂದಲೇ ಈ ಹೂಭಾರದ ಸಂನ್ಯಾಸಿ ಬಂಡೆಯಂಥ ದೊಡ್ಡ ಕೆಲಸಗಳನ್ನು ಲೀಲಾಜಾಲವಾಗಿ ಮಾಡಿಮುಗಿಸಲು ಸಾಧ್ಯವಾಯಿತೇನೋ.

ಆಚಾರ್ಯ ಮಧ್ವರು ಯುವಕರಿದ್ದಾಗ ಬಂಡೆಗಳನ್ನು ಎತ್ತಿ ತೋರಿಸುತ್ತಿದ್ದರಂತೆ. ಅಭಿನವ ಮಧ್ವರೆನ್ನಬಹುದಾದ ವಿಶ್ವೇಶರು ಮಾಡಿತೋರಿಸಿದ ಸಾಧನೆಗಳು ಈ ಹೆಬ್ಬಂಡೆಗಳಿಗೇನೂ ಕಡಿಮೆಯಲ್ಲ! ನಾರಾಯಣಾಚಾರ್ಯ-ಕಮಲಮ್ಮ ದಂಪತಿಗೆ ಮಗನಾಗಿ ವೆಂಕಟರಮಣ ಹುಟ್ಟಿದ್ದು ಇಂಗ್ಲೀಷ್‌ ಕ್ಯಾಲೆಂಡರಿನ ಪ್ರಕಾರ 1931ರ ಏಪ್ರಿಲ್‌ 27. ಪ್ರಜಾಪತಿ ಸಂವತ್ಸರದ ವೈಶಾಖಶುದ್ಧ ಪಂಚಮಿ, ಸೋಮವಾರ. ರಾಮಕುಂಜದ ದೇವಳದ ಪೌಳಿಯಲ್ಲೇ ಪ್ರಾಥಮಿಕ ವಿದ್ಯಾಭ್ಯಾಸ. ಏಳರ ಚೋಟುದ್ದದ ಹುಡುಗನಿಗೆ ಶ್ರೀ ವಿಶ್ವಮಾನ್ಯತೀರ್ಥರಿಂದ ಸಂನ್ಯಾಸದೀಕ್ಷೆ.

ಬಹುಧಾನ್ಯ ಸಂವತ್ಸರದ ಮಾರ್ಗಶಿರ ಶುದ್ಧ ಪಂಚಮಿಯ ದಿನ ಚಕ್ರತೀರ್ಥದಲ್ಲಿ ಮುಳುಗುಹಾಕಿದ ವೆಂಕಟರಮಣ ಎದ್ದದ್ದು ವಿಶ್ವೇಶತೀರ್ಥರಾಗಿ. ಏಕವಚನದಿಂದ ಬಹುವಚನಕ್ಕೆ ಭಡ್ತಿ! ಭಂಡಾರಕೇರಿಯ ಮಠದಲ್ಲಿ ವೇದ-ವೇದಾಂಗಗಳ ಆಳ ಅಧ್ಯಯನ. ಚುರುಕು ಹುಡುಗನ ತಲೆಗೆ ದಿನನಿತ್ಯ ಜ್ಞಾನಸ್ನಾನ. 21ರ ಎಳವೆಯಲ್ಲೇ ಮೊದಲ ಪರ್ಯಾಯದ ಸಂಭ್ರಮ. ಅಲ್ಲಿಂದ ಮುಂದಿನದು ಸಾಧನೆಗಳ ಯಾತ್ರೆ, ಸಂನ್ಯಾಸ ದಿಗ್ವಿಜಯ. ಮೊದಲ ಪರ್ಯಾಯದಲ್ಲೇ ವಿಶ್ವೇಶತೀರ್ಥರು ತನ್ನ ಚುರುಕು, ವೇಗ, ಅಗಾಧತೆಯ ಸಣ್ಣ ಪರಿಚಯವನ್ನು ಮಾಡಿಕೊಟ್ಟರು – ಅಖೀಲ ಭಾರತ ಮಾಧ್ವ ತತ್ತಜ್ಞಾನ ಸಮ್ಮೇಳನದ ಮೂಲಕ.

ಅದುವರೆಗೆ ದ್ವೀಪಗಳಾಗಿದ್ದ ಜ್ಞಾನ ಕೇಂದ್ರಗಳೆಲ್ಲ ಆ ಸಮ್ಮೇಳನದ ಮೂಲಕ ಒಂದೆಡೆ ಸಂಗಮಿಸಿದವು. ಉತ್ತರಾದಿ ಮಠ, ರಾಘವೇಂದ್ರ ಸ್ವಾಮಿ ಮಠ, ವ್ಯಾಸರಾಯ ಮಠ, ಭೀಮನಕಟ್ಟೆ, ಸುಬ್ರಹ್ಮಣ್ಯ, ಭಂಡಾರಕೇರಿ, ಚಿತ್ರಾಪುರ ಮಾತ್ರವಲ್ಲದೆ ಗೌಡಸಾರಸ್ವತ ಮಠಗಳು ಈ ಜ್ಞಾನಸತ್ರದಲ್ಲಿ ಕೈಜೋಡಿಸಿ ಒಟ್ಟಾದವು, ಒಗ್ಗಟ್ಟಾದವು. ಈ ಸಮ್ಮೇಳನದ ಉದ್ಘಾಟನೆ ಮಾಡಿದವರು ಮೈಸೂರು ಮಹಾರಾಜರು! ಅಲ್ಲಿಂದ ಮುಂದಿನದು ಎಡೆಬಿಡದ ಓಟ. ಜೈತ್ರಯಾತ್ರೆ. ಬನ್ನಂಜೆ ಗೋವಿಂದಾಚಾರ್ಯರು ಸಂಪಾದಿಸಿದ ಆಚಾರ್ಯ ಮಧ್ವರ ಸರ್ವಮೂಲ ಗ್ರಂಥಗಳ ಪ್ರಕಟಣೆಗೆ ಪ್ರೋತ್ಸಾಹ, ಬೆಂಗಳೂರಿನ ಕತ್ತರಿಗುಪ್ಪೆಯಲ್ಲಿ ವಿದ್ಯಾಪೀಠ ಪ್ರಾರಂಭ, ಪಾಜಕ ಪ್ರತಿಷ್ಠಾನ, ಆನಂದತೀರ್ಥ ಪ್ರತಿಷ್ಠಾನಗಳ ಸ್ಥಾಪನೆ,

ಪೂರ್ಣಪ್ರಜ್ಞ ಸಂಶೋಧನ ಮಂದಿರದ ಸ್ಥಾಪನೆ, ಸರ್ವಮೂಲ ಗ್ರಂಥಗಳ ಕನ್ನಡಾನುವಾದ, ನಿತ್ಯನಿರಂತರವಾಗಿ ನಡೆಯುತ್ತಲೇ ಹೋದ ಸುಧಾ ಮಂಗಳ ಉತ್ಸವಗಳು…ಹೀಗೆ ಸಂಶೋಧನವೆಂಬ ಕಿರೀಟಕ್ಕೆ ವಿಶ್ವೇಶತೀರ್ಥರಿಂದ ನೂರಾರು ತುರಾಯಿಗಳ ಸೇರ್ಪಡೆ. ಸಂನ್ಯಾಸಿಯ ಕರ್ತವ್ಯ ಜನಾರ್ದನನ ಸೇವೆಗಷ್ಟೇ ಸೀಮಿತವಾಗದೆ ಜನ ‌ಸೇವೆಗೂ ವಿಸ್ತರಿಸಬೇಕೆಂದು ಯೋಚಿಸಿದ ಶ್ರೀಗಳು ರಥಬೀದಿಯಲ್ಲಿ, ಕನಕನ ಕಿಂಡಿಯ ಎದುರಲ್ಲೇ ಶ್ರೀಕೃಷ್ಣ ಉಚಿತ ಚಿಕಿತ್ಸಾಲಯವನ್ನು ಪ್ರಾರಂಭಿಸಿದರು. ಆಂಧ್ರಪ್ರದೇಶದಲ್ಲಿ 1978ರಲ್ಲಿ ಭೀಕರ ಚಂಡಮಾರುತ ಅಪ್ಪಳಿಸಿ ಜನಜೀವನ ಮೂರಾ ಬಟ್ಟೆಯಾದಾಗ ತಾನೇ ಮುಂದೆ ನಿಂತು 150 ಮನೆಗಳನ್ನು ನಿರ್ಮಿಸಿಕೊಟ್ಟರು.

ಗೋವಿಂದಪುರದಲ್ಲಿ ಭೂಕಂಪವಾಗಿ ಜನ ಮನೆಮಾರು ಕಳೆದುಕೊಂಡು ಬೀದಿಗೆ ಬಿದ್ದಾಗ ಅಲ್ಲಿ 60 ಸುಸಜ್ಜಿತ ಮನೆಗಳನ್ನು ಕಟ್ಟಿಕೊಟ್ಟದ್ದು ಪೇಜಾವರರೇ. ನಾನಾ ಜನಸ್ಯ ಶುಶ್ರೂಷಾ ಕರ್ತವ್ಯಾ ಕರವನಿತೇಃ ಎಂಬ ಮಧ್ವನುಡಿಯೇ ಶ್ರೀಗಳ ಕೈಕಾಲುಗಳಿಗೆ ಇಂಧನ, ಬುದ್ಧಿಗೆ ಚೋದಕ. ಪೇಜಾವರರು ಕೈಯಲ್ಲಿ ಯಥೇತ್ಛ ಧನಕನಕವನ್ನಿಟ್ಟುಕೊಂಡು ಸಂಘಸಂಸ್ಥೆಗಳನ್ನು ಕಟ್ಟಲು ಹೊರಟವರಲ್ಲ. ಹೊರಟ ಮೇಲೆ ನಾನಾ ಮೂಲಗಳಿಂದ ಸಂಪನ್ಮೂಲಗಳು ಆಯಾಚಿತವಾಗಿ ಹರಿದುಬಂದವು, ಅಷ್ಟೆ. ಪ್ರಥಮ ಸುಧಾಮಂಗಲೋತ್ಸವದ ಕತೆಯೂ ಅದೇ.

ನಾಲ್ಕು ಮಂದಿ ವಿದ್ಯಾರ್ಥಿಗಳಿಗೆ ಪಾಠ ಮುಗಿಸಿ ಮಂಗಲೋತ್ಸವ ಆಚರಿಸಬೇಕೆಂಬ ಸಂದರ್ಭದಲ್ಲಿ ಶ್ರೀಗಳ ಕೈಯಲ್ಲಿ ಚಿಕ್ಕಾಸೂ ಇರಲಿಲ್ಲ! ಆದರೆ ಅಲಭ್ಯ ಲಾಭವೆಂಬಂತೆ ಸೀತಾರಾಮರಾಯರೆಂಬ ಮಠದ ಭಕ್ತರು ಬಂದರು, ಇಡೀ ಸಮಾರಂಭದ ಭಾರವನ್ನು ತನ್ನ ಹೆಗಲುಗಳಲ್ಲಿ ಹೊತ್ತು ಸ್ವಾಮಿಗಳ ದೋಣಿಯನ್ನು ದಡಮುಟ್ಟಿಸಿದರು! ನ್ಯಾಯಸುಧಾ ಗ್ರಂಥಕ್ಕೆ ಪರಿಮಳವೆಂಬ ಟೀಕೆ ಬರೆದು ಹೆಸರಾದವರು ರಾಘವೇಂದ್ರ ಸ್ವಾಮಿಗಳಾದರೆ, ಅದೇ ಸುಧೆಯನ್ನು ಸಾವಿರಾರು ವಿದ್ಯಾರ್ಥಿಗಳಿಗೆ ಕುಡಿಸಿ ಹೆಸರಾದವರು ವಿಶ್ವೇಶ ತೀರ್ಥರು. ಇಬ್ಬರ ಪೂರ್ವಾಶ್ರಮದ ಹೆಸರೂ ವೆಂಕಟರಮಣ ಎಂಬುದು ಅಚ್ಚರಿಯ ಆಕಸ್ಮಿಕ.

ತನ್ನ ಇಪ್ಪತ್ತೆçದನೆಯ ವಯಸ್ಸಲ್ಲೇ ಶ್ರೀಗಳು ಕಟ್ಟಿದ ಪೂರ್ಣಪ್ರಜ್ಞ ವಿದ್ಯಾಪೀಠ ಇಂದು ದೇಶಾದ್ಯಂತ ಹೆಸರು ಮಾಡಿದ ವೈದಿಕ ವಿದ್ಯಾಲಯ. ಹಂಪಿಯಲ್ಲಿ ವೇದಾಂತ ವಿಶ್ವವಿದ್ಯಾಲಯ ಕಟ್ಟಿದ ಚಂದ್ರಿಕಾಚಾರ್ಯರಂತೆ ವಿಶ್ವೇಶರು ಕಟ್ಟಿ ಬೆಳೆಸಿ ನಿಲ್ಲಿಸಿದ ವಿದ್ಯಾಪೀಠದಲ್ಲಿ ಕಿವಿಗೊಟ್ಟು ಆಲಿಸಿದರೆ ಕೇಳುವುದು ನ್ಯಾಯಸುಧೆ ಕಲ್ಲುಕಲ್ಲುಗಳಲ್ಲೂ. ಮುಂಜಾವು ಮೂರಕ್ಕೋ ನಾಲ್ಕಕ್ಕೋ ಎದ್ದು ನಿತ್ಯನೈಮಿತ್ತಿಕ ಮುಗಿಸಿ ಭಿಕ್ಷೆಗೆ ಹೊರಟರೆ ಸ್ವಾಮಿಗಳ ಪುನರಾಗಮನ ನಡುರಾತ್ರಿ ಒಂದಕ್ಕೋ ಎರಡಕ್ಕೋ. ಆ ನಟ್ಟಿರುಳಲ್ಲೂ ಗುರುಗಳು ಬಂದು ವಿದ್ಯಾರ್ಥಿಗಳನ್ನೆಬ್ಬಿಸಿ ಪಾಠಕ್ಕೆ ಕರೆದರೆಂದರೆ ಅದು ಖಂಡಿತ ಹಾಸ್ಯವಲ್ಲ;

ನಿಜಕ್ಕೂ ಪಾಠ ನಡೆಯಲಿದೆಯೆಂದೇ ಅರ್ಥ! ವಿದ್ಯಾಪೀಠ ಆ ಮಟ್ಟಿಗೆ ನೂರಕ್ಕೆ ನೂರಂಶ ಗುರುಕುಲ. ಹಗಲಿರುಳಿನ ಭೇದವಳಿಸುವಂತೆ ಇಲ್ಲಿ ನಿತ್ಯ ಜ್ಞಾನಸುಧೆಯ ಪ್ರವಾಹ. ಶ್ರೀಗಳು ಅತ್ಯಂತ ಧೀಮಂತರಾಗಿ ಕೈಗೆತ್ತಿಕೊಂಡ ಕಾರ್ಯ ದಲಿತೋದ್ಧಾರ. 70ರ ದಶಕದಲ್ಲಿ ಸಂನ್ಯಾಸಿಯೊಬ್ಬರು – ಅದೂ ಮಾಧ್ವರು – ಹರಿಜನರ ಕೇರಿಗೆ ಕಾಲಿಟ್ಟರು ಎಂಬುದೇ ಬೆರಗುಗಣ್ಣಿಗೆ, ಹಾರುಹುಬ್ಬಿಗೆ ಕಾರಣವಾದ ಸುದ್ದಿ. ಉಳಿದವರಿಗೆ ಗಿಮಿಕ್ಕು ಮಾತ್ರ ಆಗಬಹುದಿದ್ದ ಆ ಸಂಗತಿ ಶ್ರೀಗಳಿಗೆ ಮಾತ್ರ ಪ್ರಾಮಾಣಿಕ ಯತ್ನ, ಬದ್ಧತೆ. ಕ್ರೆಸ್ತ, ಮುಸ್ಲಿಂ ರೈತರಿಗೆ ತನ್ನ ಬಳಿ ಕೂತು ಮಾತಾಡಲು ಇರುವ ಸ್ವಾತಂತ್ರ ದಲಿತ ರೈತರಿಗಿಲ್ಲ ಎಂಬ ಕಟುಸತ್ಯ ಕಣ್ಣಿಗೆ ಹೊಡೆದ ದಿನ ಅವರು ಕೈಗೊಂಡ ನಿರ್ಧಾರವದು.

ಹಾಗೆಯೇ, ಮೊದಲು ಸಂಸ್ಕೃತ ಕಾಲೇಜಿನ ವಿದ್ಯಾರ್ಥಿಗಳಿಗೆ ಮಾತ್ರ ಸೀಮಿತವಿದ್ದ ಕೃಷ್ಣಮಠದ ಭೋಜನ ವ್ಯವಸ್ಥೆಯನ್ನು ಶ್ರೀಗಳು ಉಡುಪಿಯ ಎಲ್ಲ ಶಾಲಾಕಾಲೇಜುಗಳ ಎಲ್ಲ ವಿದ್ಯಾರ್ಥಿಗಳಿಗೆ ವಿಸ್ತರಿಸಿದ್ದು ಕೂಡ ಸದ್ದಿಲ್ಲದೆ ನಡೆದುಹೋದ ಮಹಾಕ್ರಾಂತಿಯೇ. ಅವಕಾಶ ಸಿಕ್ಕಾಗೆಲ್ಲ ಕಾವ್ಯ-ನಾಟಕಗಳ ಮೂಲಕ ತನ್ನನ್ನೂ ತನ್ನ ಧರ್ಮವನ್ನೂ ಬಯ್ಯುವ ಕಟುವೈಚಾರಿಕರಿಗೆ ಕೂಡ ಊಟ-ವಸತಿ ಕಲ್ಪಿಸುವ ಔದಾರ್ಯ ತೋರಿದ್ದಾರೆ ಈ ವಿಶಾಲಹೃದಯಿ. ತಿರುಗಾಟದ ನಾಟಕ ಸಂಸ್ಥೆಗಳು ಉಡುಪಿಗೆ ಬಂದಾಗೆಲ್ಲ ಪೇಜಾವರರ ಆದರಾತಿಥ್ಯ ಸ್ವೀಕರಿಸಿ, ನಂತರ ತಮ್ಮ ಎಡಪಂಥದ ಪ್ರಚಾರ ನಾಟಕಗಳನ್ನು ವೇದಿಕೆಗಳಲ್ಲಿ ಆಡಿವೆ!

ಈ ಬಗೆಯ ಖಂಡನ-ಮಂಡನಗಳ ಚರ್ವಿತಚರ್ವಣ ಕೇವಲ ಕಲೆ-ಸಾಹಿತ್ಯ ಜಗತ್ತಿನಲ್ಲಿ ಮಾತ್ರವಲ್ಲ, ತಣ್ತೀ-ಮೀಮಾಂಸೆಯ ಪಂಡಿತಲೋಕದಲ್ಲಿ ರೋಗದಂತೆ ಉಲ್ಬಣಿಸಿದಾಗ ಒಮ್ಮೆ ಪಂಡಿತರೆಲ್ಲ ಸೇರಿ ಇನ್ನು ಮುಂದೆ ಖಂಡನ-ಮಂಡನ ಬೇಡ ಎಂದು ನಿರ್ಣಯಿಸಿದರಂತೆ. ಆದರೆ ಟೀಕೆ-ಟಿಪ್ಪಣಿಗಳಿಲ್ಲದೆ ನಮ್ಮ ಬೌದ್ಧಿಕತೆ ಬೆಳೆಯುವುದು ಹೇಗೆ ಎಂದು ಪೇಜಾವರರು ಸಂವಾದದ ಪರವಾಗಿ ಓಟು ಹಾಕಿಬಿಟ್ಟರು! ಪೋಲಂಕಿಯವರು ಸೀತಾಯಣ ಬರೆದಾಗ ಶ್ರೀಗಳು, ಅವರ ಜೊತೆ ಕೂತು, ಸಂಸ್ಕೃತ ತಿಳಿಯದೆ ಕೇವಲ ಅನುವಾದಗಳನ್ನೋದಿ ಅರ್ಥೈಸಿಕೊಂಡು ಆದ ಎಡವಟ್ಟುಗಳನ್ನು ಮನವರಿಕೆ ಮಾಡಿಕೊಟ್ಟಿದ್ದರು.

ಮೈಸೂರಿನ ವಿಚಾರವಾದಿಯೊಬ್ಬ ರಾಮಾಯಣದ ಮೇಲೆ ಬಾಯಿಗೆ ಬಂದಂತೆ ಮಾತಾಡತೊಡಗಿದಾಗ ಪೇಜಾವರರು ಮುಂದೆ ಬಂದು, ಆ ವಿಚಾರವಾದಿಯನ್ನು ಚರ್ಚೆಗೆ ಕರೆದಿದ್ದರು. ವ್ಯಾಸ-ಮಧ್ವರನ್ನು ಓದಿಕೊಂಡಷ್ಟೇ ಆಸ್ಥೆಯಿಂದ ಗಾಂಧಿ, ಜಯಪ್ರಕಾಶ, ಲೋಹಿಯಾರನ್ನು ಆಳವಾಗಿ ಓದಿಕೊಂಡದ್ದರಿಂದ ಮೂಡಿದ ವೈಚಾರಿಕ ಧೈರ್ಯ ಮತ್ತು ಸ್ಪಷ್ಟತೆ ಇದು. ಸ್ವಾಮೀಜಿ ಅದೆಷ್ಟು ಎತ್ತರಕ್ಕೆ ಬೆಳೆದರೂ ಮನಸ್ಸು ಮಗುವಿನದ್ದೇ. ಅದಕ್ಕೊಂದು ಪುಟ್ಟ ಉದಾಹರಣೆ ಕೊಟ್ಟು ಈ ಲೇಖನವನ್ನು ಮುಗಿಸುತ್ತೇನೆ. ಉತ್ತರ ಭಾರತದ ಬರೇಲಿಯಲ್ಲಿ ಸ್ವಾಮಿಗಳ ಕಾರು ಹೋಗುತ್ತಿದ್ದ ಸಂದರ್ಭ.

ಕಾಡಿನ ದಾರಿ. ಕಳ್ಳಕಾಕರು ಮಾತ್ರವಲ್ಲ, ಜೀವ ತೆಗೆವ ಕುಖ್ಯಾತ ಡಕಾಯಿತರಿಗೆ ಹೆಸರಾದ ಪ್ರದೇಶ. ಪೊಲೀಸರ ಸರ್ಪಗಾವಲಿಲ್ಲದೆ ಖಾಸಗಿ ವಾಹನಗಳು ಓಡಾಡುವಂತಿಲ್ಲವೆಂಬ ಕಟ್ಟುನಿಟ್ಟಿನ ನಡುವೆಯೂ ಸ್ವಾಮಿಗಳ ಕಾರು ಆ ರಸ್ತೆಯನ್ನು ಪ್ರವೇಶಿಸಿತ್ತು. ಆರತಿಗೆ ಉಷ್ಣ, ತೀರ್ಥಕ್ಕೆ ಶೀತ ಎಂಬಂಥ ಸೂಕ್ಷ್ಮಪ್ರಕೃತಿಯ ಸ್ವಾಮೀಜಿಗಳಿಗೆ ಚಳಿಯಾಯಿತು. ಸದಾ ತಲೆಗೇರಿಸಿಕೊಳ್ಳುವ ತನ್ನ ಉಣ್ಣೆಯ ಟೋಪಿ ಎಲ್ಲಿ ಎಂದು ಅಕ್ಕಪಕ್ಕದವರನ್ನು ಕೇಳಿದರು. ಸ್ವಾಮಿಗಳ ನೂರಾರು ಸರಕುಸರಂಜಾಮುಗಳ ನಡುವೆ ಆ ಟೋಪಿ ಎಲ್ಲಿ ಹೋಗಿತ್ತೆಂದು ಯಾರಿಗೆ ತಿಳಿಯಬೇಕು!

ಯಾರ ಕಡೆಯಿಂದಲೂ ಉತ್ತರ ಬರಲಿಲ್ಲ. ಸ್ವಾಮೀಜಿಗಳು ಕಾರನ್ನು ನಿಲ್ಲಿಸಿಯೇಬಿಟ್ಟರು! ಕಾರಿನ ಮಂದಿಯೆಲ್ಲ ಇಳಿದು, ಮೂಲೆಗಳನ್ನೆಲ್ಲ ಹುಡುಕಾಡಿ ಕೊನೆಗೂ ಟೋಪಿ ಸಿಕ್ಕಾಗಲೇ ಸ್ವಾಮೀಜಿಗಳಿಗೆ ಸಮಾಧಾನವಾದದ್ದು, ಕಾರು ಮುನ್ನಡೆದದ್ದು! ಅಂಥ ಸ್ವಾಮಿಗಳನ್ನು ನಿನ್ನೆ ಬುಟ್ಟಿಯಲ್ಲಿ ಪದ್ಮಾಸನದ ಭಂಗಿಯಲ್ಲಿ ನೋಡಿದಾಗ ಒಂದು ಕ್ಷಣ ಅನ್ನಿಸಿದ್ದು: ಶ್ರೀಕೃಷ್ಣನನ್ನು ಯಶೋದೆ ಈಗಷ್ಟೇ ಸ್ನಾನ ಮಾಡಿಸಿ ಮೈಯೊರೆಸಿ ಸಿಂಗರಿಸಿ ತಂದು ತೊಟ್ಟಿಲಲ್ಲಿ ಮಲಗಿಸಿದಂತಿದೆಯಲ್ಲ ಎಂದು. ಸ್ವಾಮಿಗಳೇನೋ ಮಗುವಿನಂತೆ ಮಲಗಿ ಚಿರನಿದ್ರೆಗೆ ಜಾರಿದ್ದರು. ಕಂಡು ಕೈಮುಗಿದ ಕಪೋಲಗಳು ಮಾತ್ರ ಮಕ್ಕಳಂತೆ ಕಣ್ಣೀರಾಗಿದ್ದವು.

* ರೋಹಿತ್‌ ಚಕ್ರತೀರ್ಥ

ಟಾಪ್ ನ್ಯೂಸ್

G. Parameshwara ದಾದಾಗಿರಿ ಮಾಡಿದವರು ಯಾರೇ ಆದರೂ ಕ್ರಮ

G. Parameshwara ದಾದಾಗಿರಿ ಮಾಡಿದವರು ಯಾರೇ ಆದರೂ ಕ್ರಮ

ನಡು ರಸ್ತೆಯಲ್ಲೇ ಧರಣಿ ಕುಳಿತ ಮಾಜಿ ಸಚಿವ ಆನಂದ ಸಿಂಗ್‌ನಡು ರಸ್ತೆಯಲ್ಲೇ ಧರಣಿ ಕುಳಿತ ಮಾಜಿ ಸಚಿವ ಆನಂದ ಸಿಂಗ್‌

ನಡು ರಸ್ತೆಯಲ್ಲೇ ಧರಣಿ ಕುಳಿತ ಮಾಜಿ ಸಚಿವ ಆನಂದ ಸಿಂಗ್‌

Prajwal Revanna Case ಮೇ 1ರ ಪತ್ರ ಎಲ್ಲಿ ಹೋಯ್ತು? ಕೇಂದ್ರಕ್ಕೆ ಗೃಹ ಸಚಿವರ ಪ್ರಶ್ನೆ

Prajwal Revanna Case ಮೇ 1ರ ಪತ್ರ ಎಲ್ಲಿ ಹೋಯ್ತು? ಕೇಂದ್ರಕ್ಕೆ ಗೃಹ ಸಚಿವರ ಪ್ರಶ್ನೆ

bjp-jdsBJP-JDS ಹೆಚ್ಚುವರಿ ಅಭ್ಯರ್ಥಿ ಕಣಕ್ಕಿಳಿಸಲಿದೆಯೇ ಮಿತ್ರಪಕ್ಷ?

BJP-JDS ಹೆಚ್ಚುವರಿ ಅಭ್ಯರ್ಥಿ ಕಣಕ್ಕಿಳಿಸಲಿದೆಯೇ ಮಿತ್ರಪಕ್ಷ?

H. D. Kumaraswamy ಅನ್ನಭಾಗ್ಯದ ಹಣ ಕೊಡುವ ಯೋಗ್ಯತೆ ಇಲ್ಲ

H. D. Kumaraswamy ಅನ್ನಭಾಗ್ಯದ ಹಣ ಕೊಡುವ ಯೋಗ್ಯತೆ ಇಲ್ಲ

bjp-jdsಮೇಲ್ಮನೆ ಗೆಲುವಿಗೆ ಬಿಜೆಪಿ-ಜೆಡಿಎಸ್‌ ಪಣ

ಮೇಲ್ಮನೆ ಗೆಲುವಿಗೆ ಬಿಜೆಪಿ-ಜೆಡಿಎಸ್‌ ಪಣ

Karnataka ಮಳೆ: ಸಿಡಿಲಿಗೆ ಇಬ್ಬರು ಸಾವು

Karnataka ಮುಂಗಾರು ಪೂರ್ವ ಮಳೆ: ಸಿಡಿಲಿಗೆ ಇಬ್ಬರು ಸಾವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಹೀರಾಮಂಡಿ ಕಲೆ, ಸ್ವಾತಂತ್ರ್ಯ ಹೋರಾಟದ ಕೊಂಡಿ

ಹೀರಾಮಂಡಿ ಕಲೆ, ಸ್ವಾತಂತ್ರ್ಯ ಹೋರಾಟದ ಕೊಂಡಿ

cyber crime

Cambodia ಸೈಬರ್‌ ಕ್ರೈಮ್‌ ಹಬ್‌: ಭಾರತೀಯರಿಂದಲೇ ಭಾರತೀಯರ ಟಾರ್ಗೆಟ್‌!

Puri Jagannath Temple: ಪುರಿ ಜಗನ್ನಾಥ ದೇಗುಲದ ರತ್ನ ಭಂಡಾರದಲ್ಲಿ ಏನಿದೆ?

Puri Jagannath Temple: ಪುರಿ ಜಗನ್ನಾಥ ದೇಗುಲದ ರತ್ನ ಭಂಡಾರದಲ್ಲಿ ಏನಿದೆ?

Buddha Poornima: ಭಗವಾನ್‌ ಬುದ್ಧನ ಆದರ್ಶದಿಂದ ವಿಶ್ವಶಾಂತಿ

Buddha Poornima: ಭಗವಾನ್‌ ಬುದ್ಧನ ಆದರ್ಶದಿಂದ ವಿಶ್ವಶಾಂತಿ

Chabahar

Chabahar ಮಧ್ಯ ಏಷ್ಯಾಕ್ಕೆ ಭಾರತದ ಹೆಬ್ಟಾಗಿಲು

MUST WATCH

udayavani youtube

ಹೆದ್ದಾರಿಯಲ್ಲೇ ಲಾಂಗ್‌ ಹಿಡಿದು ಓಡಾಡಿದ ಯುವಕ!

udayavani youtube

ಆರೋಗ್ಯಕರ ಬೇಕರಿ ಫುಡ್ ತಿನ್ನಬೇಕಾ ? ಇಲ್ಲಿಗೆ ಬನ್ನಿ

udayavani youtube

ಬಾವಿಗೆ ಬಿದ್ದು ಒದ್ದಾಡುತ್ತಿದ್ದ ರಾಷ್ಟ್ರಪಕ್ಷಿಯ ರಕ್ಷಣೆ

udayavani youtube

ಮಡಿಕೇರಿಯಲ್ಲೊಂದು ಪಕ್ಕಾ ಉಡುಪಿ ಶೈಲಿಯ ಉಪಹಾರ ಮಂದಿರ

udayavani youtube

ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ

ಹೊಸ ಸೇರ್ಪಡೆ

G. Parameshwara ದಾದಾಗಿರಿ ಮಾಡಿದವರು ಯಾರೇ ಆದರೂ ಕ್ರಮ

G. Parameshwara ದಾದಾಗಿರಿ ಮಾಡಿದವರು ಯಾರೇ ಆದರೂ ಕ್ರಮ

ನಡು ರಸ್ತೆಯಲ್ಲೇ ಧರಣಿ ಕುಳಿತ ಮಾಜಿ ಸಚಿವ ಆನಂದ ಸಿಂಗ್‌ನಡು ರಸ್ತೆಯಲ್ಲೇ ಧರಣಿ ಕುಳಿತ ಮಾಜಿ ಸಚಿವ ಆನಂದ ಸಿಂಗ್‌

ನಡು ರಸ್ತೆಯಲ್ಲೇ ಧರಣಿ ಕುಳಿತ ಮಾಜಿ ಸಚಿವ ಆನಂದ ಸಿಂಗ್‌

Prajwal Revanna Case ಮೇ 1ರ ಪತ್ರ ಎಲ್ಲಿ ಹೋಯ್ತು? ಕೇಂದ್ರಕ್ಕೆ ಗೃಹ ಸಚಿವರ ಪ್ರಶ್ನೆ

Prajwal Revanna Case ಮೇ 1ರ ಪತ್ರ ಎಲ್ಲಿ ಹೋಯ್ತು? ಕೇಂದ್ರಕ್ಕೆ ಗೃಹ ಸಚಿವರ ಪ್ರಶ್ನೆ

bjp-jdsBJP-JDS ಹೆಚ್ಚುವರಿ ಅಭ್ಯರ್ಥಿ ಕಣಕ್ಕಿಳಿಸಲಿದೆಯೇ ಮಿತ್ರಪಕ್ಷ?

BJP-JDS ಹೆಚ್ಚುವರಿ ಅಭ್ಯರ್ಥಿ ಕಣಕ್ಕಿಳಿಸಲಿದೆಯೇ ಮಿತ್ರಪಕ್ಷ?

H. D. Kumaraswamy ಅನ್ನಭಾಗ್ಯದ ಹಣ ಕೊಡುವ ಯೋಗ್ಯತೆ ಇಲ್ಲ

H. D. Kumaraswamy ಅನ್ನಭಾಗ್ಯದ ಹಣ ಕೊಡುವ ಯೋಗ್ಯತೆ ಇಲ್ಲ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.