CONNECT WITH US  

ಮತ್ತೆ ಮೋಡಿ ಮಾಡಲಿದೆಯೇ 'ಮಾಣಿಕ್ಯ' ಜೋಡಿ ?

'ಮಾಣಿಕ್ಯ' ಚಿತ್ರದಲ್ಲಿ ತಂದೆ-ಮಗ ಪಾತ್ರದಲ್ಲಿ ಮೋಡಿ ಮಾಡಿದ್ದ ಕ್ರೇಜಿಸ್ಟಾರ್ ರವಿಚಂದ್ರನ್ ಮತ್ತು ಕಿಚ್ಚ ಸುದೀಪ್ ಮತ್ತೊಮ್ಮೆ ಒಂದಾಗಿ ನಟಿಸಲಿದ್ದಾರೆಯೇ...?

ಸದ್ಯದ ಗಾಂಧಿನಗರದ ಸುದ್ದಿಗಳ ಪ್ರಕಾರ ಕ್ರೇಜಿ-ಕಿಚ್ಚ ಜೋಡಿ ಮತ್ತೊಮ್ಮೆ ಬೆಳ್ಳಿತೆರೆ ಮೇಲೆ ಕಮಾಲ್ ಮಾಡಲಿದ್ದಾರೆ.

ಬಾಲಿವುಡ್'ನಲ್ಲಿ ಭರ್ಜರಿ ಯಶಕಂಡ ಓ ಮೈ ಗಾಡ್ ಚಿತ್ರವನ್ನು ಕನ್ನಡದಲ್ಲಿ ರಿಮೇಕ್ ಮಾಡಲಿದ್ದಾರೆ ಎಂಬುದು ಈ ಹಿಂದೆಯೇ ಸುದ್ದಿಯಾಗಿತ್ತು.

ಎಂ.ಡಿ ಶ್ರೀಧರ್ ನಿರ್ದೇಶಿಸಲಿರುವ ಈ ಚಿತ್ರದಲ್ಲಿ ರವಿಚಂದ್ರನ್ ಮತ್ತು ಉಪೇಂದ್ರ ಜೊತೆಯಾಗಿ ನಟಿಸಲಿದ್ದಾರೆ ಎಂದು ಹೇಳಲಾಗಿತ್ತು. ಈ ಸುದ್ದಿ ಹೊರ ಬಿದ್ದ ಬೆನ್ನಲ್ಲೇ ಉಪ್ಪಿ ಬದಲು ರವಿಮಾಮರೊಂದಿಗೆ ದರ್ಶನ್ ಕಾಣಿಸಿಕೊಳ್ಳುತ್ತಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು.

ಇದೀಗ ಚಿತ್ರತಂಡವೇ ಬದಲಾಗಿರುವ ಸುದ್ದಿಯೊಂದು ಕೇಳಿ ಬಂದಿದೆ. ಕನ್ನಡದಲ್ಲಿ ಓ ಮೈ ಗಾಡ್ ಚಿತ್ರವನ್ನು ಅಧ್ಯಕ್ಷ, ರನ್ನ ಚಿತ್ರಗಳ ಖ್ಯಾತಿಯ ನಂದಕಿಶೋರ್ ನಿರ್ದೇಶಿಸಲಿದ್ದಾರೆ ಎಂದು ಹೇಳಲಾಗಿದೆ.

ಹಿಂದಿಯಲ್ಲಿ ಪರೇಶ್ ರಾವಲ್ ಮಾಡಿದ ಪಾತ್ರವನ್ನು ರವಿಚಂದ್ರನ್ ನಿರ್ವಹಿಸಲಿದ್ದು, ಅಕ್ಷಯ್ ಕುಮಾರ್ ರೋಲ್'ನಲ್ಲಿ ಕಿಚ್ಚ ಸುದೀಪ್ ನಟಿಸಲಿರುವುದು ಪಕ್ಕಾ ಎನ್ನುತ್ತಿದೆ ಗಾಂಧಿನಗರದ ಕೆಲಮೂಲಗಳು.

ಕ್ರೇಜಿಸ್ಟಾರ್ ರವಿಚಂದ್ರನ್ ಮತ್ತು ಕಿಚ್ಚ ಸುದೀಪ್ 'ಮಾಣಿಕ್ಯ' ಚಿತ್ರದಲ್ಲಿ ಮೊದಲ ಬಾರಿ ಜೊತೆಯಾಗಿ ಕಾಣಿಸಿಕೊಂಡು ಭರ್ಜರಿ ಹಿಟ್ ನೀಡುವಲ್ಲಿ ಯಶಸ್ವಿಯಾಗಿದ್ದರು.

ಈ ಇಬ್ಬರೂ ಸ್ಟಾರ್'ಗಳೂ ಜೊತೆಯಾಗಿ ನಟಿಸುವ ಬಗ್ಗೆ ಎಲ್ಲೂ ಅಧಿಕೃತವಾಗಿ ಪ್ರಕಟವಾಗದಿದ್ದರೂ ಹೊಸ ಚಿತ್ರದಲ್ಲಿ ಒಂದಾಗುತ್ತಿರುವ ಗಾಂಧಿನಗರದ ಸುದ್ದಿಯಂತೂ ಮಹತ್ವ ಪಡೆದುಕೊಂಡಿದೆ.

ಸದ್ಯ ಪ್ರದೀಪ್ ನಾಯಕನಾಗಿ ನಟಿಸುತ್ತಿರುವ 'ಟೈಗರ್' ಚಿತ್ರೀಕರಣದಲ್ಲಿ ಬಿಝಿಯಾಗಿರುವ ನಿರ್ದೇಶಕ ನಂದಕಿಶೋರ್ ಓ ಮೈಗಾಡ್ ರಿಮೇಕ್ ಬಗ್ಗೆ ಮಾತುಕತೆ ನಡೆಯುತ್ತಿದ್ದು, ಶೀಘ್ರದಲ್ಲೇ ಸಂಪೂರ್ಣ ಮಾಹಿತಿ ನೀಡುವುದಾಗಿ ತಿಳಿಸಿದ್ದಾರೆ.

*ಕಪ್ಪು ಮೂಗುತ್ತಿ

Trending videos

Back to Top