CONNECT WITH US  

15 ದಿನಗಳಲ್ಲಿ ಸಮಸ್ಯೆ ಇತ್ಯರ್ಥ

ಹೊಳೆನರಸೀಪುರ: ಪಟ್ಟಣದ ಶಿಕ್ಷಕರ ಭವನದಲ್ಲಿ ಬುಧವಾರ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ನೇತೃತ್ವದಲ್ಲಿ ನಡೆದ ಸಾರ್ವಜನಿಕ ಕುಂದುಕೊರತೆ ಸಭೆಯಲ್ಲಿ ಸುಮಾರು 175ಕ್ಕೂ ಹೆಚ್ಚು ಅರ್ಜಿ ಸಲ್ಲಿಕೆಯಾದವು. ಮೂರು ಗಂಟೆಗಳ ಕಾಲ ನಡೆದ ಸಭೆಯಲ್ಲಿ ಬಹುತೇಕ ಕಂದಾಯ, ಪುರಸಭೆಗೆ ಸಂಬಂಧಿಸಿದ ಸಮಸ್ಯೆಗಳು ಕೇಳಿಬಂದವು. ಇದರ ಕೆಲವನ್ನು ಸ್ಥಳದಲ್ಲಿಯೇ ಪರಿಹಾರ ನೀಡಿದ ಜಿಲ್ಲಾಧಿಕಾರಿ ಸಿಂಧೂರಿ, ಗೊಂದಲವಿರುವ, ದಾಖಲೆ ಸರಿಯಿಲ್ಲದ ಅರ್ಜಿಗಳನ್ನು 15 ದಿನಗಳ ಒಳಗೆ ಪರಿಹರಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು.

ತಾಲೂಕಿನ ತಾತನಹಳ್ಳಿ ಗ್ರಾಮದಲ್ಲಿನ ಕೆರೆಯನ್ನು ಕೆಲ ರೈತರು ಒತ್ತುವರಿ ಮಾಡಿಕೊಂಡಿದ್ದಾರೆ. ಕೂಡಲೇ ತೆರವು
ಮಾಡಬೇಕು. 50 ವರ್ಷಗಳಿಂದ ಇರುವ ಕೆರೆಯನ್ನು ಸರ್ಕಾರಿ ದಾಖಲಾತಿಯಲ್ಲಿ ಸೇರ್ಪಡೆ ಮಾಡಿಲ್ಲ. ಈ ಬಗ್ಗೆ ಸೂಕ್ತ ಕ್ರಮಕೈಗೊಳ್ಳಬೇಕೆಂದು ಗ್ರಾಮಸ್ಥರು ಜಿಲ್ಲಾಧಿಕಾರಿಗಳಿಗೆ ದೂರು ಸಲ್ಲಿಸಿದರು. 

ಪಟ್ಟಣದ ಸಿಂಗಮ್ಮ ದೇಗುಲ ಬಳಿಯ ಶೈಲಜಾ ಎಂಬುವರು ದೂರು ನೀಡಿ, ಕಲ್ಯಾಣ ಮಂಟಪದವರು ತಮ್ಮ ಸ್ವಂತ
ನಿವೇಶನಕ್ಕೆ ಬೇಲಿ ಹಾಕಿ, ತೊಂದರೆ ನೀಡುತ್ತಿದ್ದು, ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

ನಾಲ್ಕು ವರ್ಷವಾದ್ರೂ ಖಾತೆ ಮಾಡಿಲ್ಲ: ಎಲೆಚಾಗಳ್ಳಿ ಗ್ರಾಮದ ರಂಗಶೆಟ್ಟಿ, ತಮ್ಮ ಆಸ್ತಿ ಖಾತೆ ಮಾಡಿಕೊಡುವಂತೆ ಕಳೆದ ನಾಲ್ಕು ವರ್ಷಗಳಿಂದ ತಾಲೂಕು ಕಚೇರಿಗೆ ಅಲೆಯುತ್ತಿದ್ದರೂ ಪ್ರಯೋಜನವಾಗಿಲ್ಲ. ಮೇಲಧಿಕಾರಿಗಳಿಗೆ ದೂರು ನೀಡಿದರೂ ಕ್ರಮಕೈಗೊಂಡಿಲ್ಲ. ತಾವಾದರೂ ತಮ್ಮ ಖಾತೆ ಮಾಡಲು ಸಂಬಂಧಪಟ್ಟ ಅಧಿಕಾರಿಗಳಿಗೆ ತಾಕೀತು ಮಾಡುವಂತೆ ಮನವಿ ಮಾಡಿದರು.

ಭವನ ಮಾರಾಟ?: ಪಟ್ಟಣದ ಆರ್ಯ ಈಡಿಗರ ಸಮುದಾಯಕ್ಕೆ ಸೇರಿದ ಕಲ್ಯಾಣ ಮಂಟಪವನ್ನು ಬೇರೆಯವರಿಗೆ ಮಾರಾಟ ಮಾಡಲು ಮುಂದಾಗಿದ್ದಾರೆ. ಭವನಕ್ಕೆ 96-97ರಲ್ಲಿ ಸಚಿವ ಎಚ್‌.ಡಿ.ರೇವಣ್ಣ ಸರ್ಕಾರದಿಂದ ಅನುದಾನ ಕೊಡಿಸಿದ್ದರು.  ಆದರೆ, ಆರ್ಯ ಈಡಿಗರ ಸಮಾಜದ ಸಂಘದ ಮಾಜಿ ಅಧ್ಯಕ್ಷ ದಿ.ಟಿ.ಮಲ್ಲೇಶ್‌ ಹಾಗೂ
ಮಕ್ಕಳು ಬೇರೆಯವರಿಗೆ ಭವನ ಮಾರಾಟ ಮಾಡಲು ಮುಂದಾಗಿದ್ದಾರೆ. ಕೂಡಲೇ ಕ್ರಮಕೈಗೊಳ್ಳಿ ಎಂದು ಸಮುದಾಯ ಮುಖಂಡರು ಮನವಿ ಮಾಡಿದರು.
 
ಮನವಿ ಸ್ವೀಕರಿಸಿದ ಜಿಲ್ಲಾಧಿಕಾರಿ, ಸ್ಥಳದಲ್ಲೇ ಇದ್ದ ಸಬ್‌ರಿಜಿಸ್ಟ್ರಾರ್‌ಗೆ ಸೂಚನೆ ನೀಡಿ, ಯಾವುದೇ ಕಾರಣಕ್ಕೂ ಈ ಆಸ್ತಿಯನ್ನು ನೋಂದಣಿ ಮಾಡಬಾರದು. ಈ ಪ್ರಕರಣ ನ್ಯಾಯಾಲಯದಲ್ಲಿರುವ ಕಾರಣ ಜಾಗರೂಕತೆಯಿಂದ ನೋಡಿ ಕೊಳ್ಳುವಂತೆ ಸೂಚನೆ ನೀಡಿದರು.

ನಿವೃತ್ತ ಸೈನಿಕ ವಸಂತ್‌ ದೂರು ನೀಡಿ, ಮಾಜಿ ಸೈನಿಕರಿಗೆ ಭೂಮಿ ಮತ್ತು ನಿವೇಶನ ಕೋರಿ ಹಲವು ವರ್ಷಗಳಿಂದ ಅರ್ಜಿ ನೀಡುತ್ತಲೇ ಬಂದಿದ್ದೇವೆ. ಆದರೆ, ಅಧಿಕಾರಿಗಳು ತಾಲೂಕಿನಲ್ಲಿ ಎಲ್ಲೂ ಸರ್ಕಾರಿ ಭೂಮಿಯೇ ಇಲ್ಲ ಎಂದು ಹಿಂಬರಹ ನೀಡಿದ್ದಾರೆ ಎಂದು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿ ತಮಗೆ ಸಿಗಬೇಕಾದ ಸೌಲಭ್ಯ ದೊರಕಿಸಿಕೊಡುವಂತೆ ಮನವಿ ಮಾಡಿದರು.
 
ಪಟ್ಟಣದಲ್ಲಿ ಸಂಚಾರಿ ವ್ಯವಸ್ಥೆ ಸಂಪೂರ್ಣ ಕೆಟ್ಟು ಹೋಗಿದೆ. ಶಾಲಾ ಕಾಲೇಜು ಮುಗಿದ ವೇಳೆಯಲ್ಲಿ ಪೋಲಿ ಹುಡುಗರ ಕಾಟ ಹೆಚ್ಚಿದೆ. ಬೈಕುಗಳಲ್ಲಿ ಕಿಚಾಯಿಸುವುದು ನಡೆಯುತ್ತಲೇ ಇದೆ. ಈ ಬಗ್ಗೆ ಹಲವು ಬಾರಿ ಪೊಲೀಸ್‌ ಇಲಾಖೆಗೆ ಮನವಿ ಸಲ್ಲಿಸಿದ್ದರೂ ಯಾವುದೇ ಪ್ರಯೋಜನ ಕಂಡಿಲ್ಲ ಎಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಹಳೇ ವಿದ್ಯಾರ್ಥಿ ಬಳಗದ ಅಧ್ಯಕ್ಷ ಹಾಗೂ ವರ್ತಕ ಎಂ.ಎನ್‌.ಜೈಪ್ರಕಾಶ್‌ ಅರ್ಜಿ ಸಲ್ಲಿಸಿ ಸಮಸ್ಯೆ ಪರಿಹಾರ ಕೊಡುವಂತೆ ಮನವಿ ಸಲ್ಲಿಸಿದರು. 

ಸಭೆಯಲ್ಲಿ ಉಪವಿಭಾಗಾಧಿಕಾರಿ ಡಾ.ಎಚ್‌.ಎಲ್‌.ನಾಗರಾಜು, ಜಿಲ್ಲಾ ಪಿಡಿಸಿ ಕೃಷ್ಣಪ್ರಸಾದ್‌, ತಾಪಂ ಇಒ ಪ್ರಭು, ಮುಖ್ಯಾಧಿಕಾರಿ ಬಿ.ಸಿ.ಬಸವರಾಜು, ಸಿಪಿಐ ಎಸ್‌.ಎಚ್‌.ವಸಂತ್‌, ವಿವಿಧ ಇಲಾಖಾಧಿಕಾರಿಗಳು ಉಪಸ್ಥಿತರಿದ್ದರು. 


Trending videos

Back to Top