ನಟೇಶ ಯಕ್ಷಬಾಲೆಯರ ಹೆಜ್ಜೆಯಲ್ಲಿ ಸುಧನ್ವಾರ್ಜುನ

Team Udayavani, Oct 18, 2019, 4:00 AM IST

ನೂತನವಾಗಿ ಆರಂಭಗೊಂಡ ಶ್ರೀ ನಟೇಶ ಯಕ್ಷ ಬಾಲೆಯರ ಬಳಗ, ಸಾಲಿಗ್ರಾಮ, ಇವರು ಚೊಚ್ಚಲ ಪ್ರದರ್ಶನವಾಗಿ ” ಸುಧನ್ವಾರ್ಜುನ’ ಎನ್ನುವ ಆಖ್ಯಾನವನ್ನು ಯಕ್ಷಗಾನ ಕಲಾಕೇಂದ್ರ, ಹಂಗಾರಕಟ್ಟೆ ಇವರ ಸಹಯೋಗದೊಂದಿಗೆ ಗುಂಡ್ಮಿಯ ಸದಾನಂದ ರಂಗಮಂಟಪದಲ್ಲಿ ಪ್ರದರ್ಶಿಸಿದರು. ಹಸ್ತಿನಾವತಿಯ ಅರಸ ಯುಧಿಷ್ಠಿರನು ಪೂಜಿಸಿ ಬಿಟ್ಟ ಅಶ್ವಮೇಧ ಯಾಗದ ಕುದುರೆ ಅರ್ಜುನನ ಬೆಂಗಾವಲಿನೊಂದಿಗೆ ಶ್ರೀಕೃಷ್ಣನ ಪರಮ ಭಕ್ತನಾದ ಹಂಸಧ್ವಜ ಭೂಪತಿಯ ಚಂಪಕಾವತಿಯನ್ನು ಪ್ರವೇಶಿಸುತ್ತದೆ. ತುರಗವನ್ನು ಬಂಧಿಸಿ ಅರ್ಜುನನನ್ನು ಸೋಲಿಸಿದರೆ ಶ್ರೀಕೃಷ್ಣ ಬಂದೇ ಬರುತ್ತಾನೆ. ಇದರಿಂದ ತನ್ನ ಪುರದ ಜನರಿಗೆ ಆತನ ದರುಶನ ಭಾಗ್ಯ ಮತ್ತು ಆತನ ಪದತಲದಲ್ಲಿ ಕೈವಲ್ಯ ಪಡೆಯುವ ಮಹದಾಸೆ ಹಂಸಧ್ವಜನದು. ಅಂತೆಯೇ ತುರಗವನ್ನು ಬಂಧಿಸಿ, ಮಗನಾದ ಸುಧನ್ವನನ್ನು ಸೇನಾ ನಾಯಕನನ್ನಾಗಿಸಿ ಯುದ್ಧವನ್ನು ಸಾರುತ್ತಾನೆ. ತಾಯಿ ಸುಗಭೆìಯ ಆಶೀರ್ವಾದ ಮತ್ತು ತಂಗಿ ಕುವಲೆಯ ಶುಭ ಹಾರೈಕೆ ಪಡೆದ ಸುಧನ್ವನು ಮಡದಿ ಪ್ರಭಾವತಿಯ ಬಳಿಗೆ ಬರುತ್ತಾನೆ. ಮಡದಿಯ ಮನದಿಂಗಿತದಂತೆ ಆ ರಾತ್ರಿ ಆಕೆಯೊಂದಿಗೆ ಅಂತಪುರದಲ್ಲಿ ತಂಗುತ್ತಾನೆ. ಯುದ್ಧಕ್ಕೆ ಹಿಂದೇಟು ಹಾಕಿದ ಎನ್ನುವ ಶಂಕೆಯಿಂದ ಹಂಸಧ್ವಜನು ಮಗನಿಗೆ ಘೋರ ಶಿಕ್ಷೆಯನ್ನು ನೀಡಿದರೂ ಶ್ರೀಹರಿಯ ಕೃಪೆಯಿಂದ ಆತನಿಗೆ ಒಳಿತಾಗುತ್ತದೆ. ಮುಂದೆ ನಡೆವ ಯುದ್ಧದಲ್ಲಿ ಸುಧನ್ವಾರ್ಜುನರು ಸಮಬಲರಾಗಿ ಸೆಣಸಿದಾಗ ಶ್ರೀಕೃಷ್ಣನು ತನ್ನ ಹಿಂದಿನ ಅವತಾರಗಳ ಪುಣ್ಯಫ‌ಲದಿಂದ ಸುಧನ್ವನಿಗೆ ಸೋಲಾಗಿಸಿ ಕೈವಲ್ಯಪದವನ್ನು ಕರುಣಿಸುತ್ತಾನೆ ಎನ್ನುವಲ್ಲಿಗೆ ಕಥಾನಕ ಮುಕ್ತಾಯಗೊಳ್ಳುತ್ತದೆ.

ಹಂಸಧ್ವಜನಾಗಿ ಕು| ವೈಷ್ಣವಿ ಹೆಗ್ಡೆ ರಾಜ ಗಾಂಭೀರ್ಯದ ಮಾತು ಮತ್ತು ಹೆಜ್ಜೆಗಳನ್ನು ಉತ್ತಮವಾಗಿ ಮೇಳೈಸಿದ್ದರು. ಸುಧನ್ವನಾಗಿ ಪೂರ್ವಾರ್ಧದಲ್ಲಿ ಕು| ವಿಶ್ರುತಾ ಹೇಳೆì ತನ್ನ ಛಾಪನ್ನು ಒತ್ತಿದರೆ, ಉತ್ತರಾರ್ಧದಲ್ಲಿ ಕು| ವೈಷ್ಣವಿ ಹೆಗೆª ಬಹಳ ಲವಲವಿಕೆಯಿಂದ ಪಾತ್ರ ನಿರ್ವಹಿಸಿದ್ದು ಮೆಚ್ಚುಗೆಯ ಅಂಶವಾಗಿತ್ತು. ಸುಗಭೆìಯಾಗಿ ಕು| ಸ್ಮಿತಾ ಗಾಣಿಗ ಯುದ್ಧ ಸನ್ನದ್ಧನಾಗಿ ಬಂದ ಮಗನ‌ನ್ನು ಹರಸಿ ಕಳಿಸುವ ಪರಿ ಮತ್ತು ಪ್ರಭಾವತಿ ತನ್ನ ಮನದಿಂಗಿತವನ್ನು ಪತಿಯೊಂದಿಗೆ ಬಿನ್ನವಿಸಿಕೊಳ್ಳುವ ರೀತಿಯನ್ನು ಕು| ನಿಶಾ ಸಾಲಿಗ್ರಾಮ ಭಾವಪೂರ್ಣವಾಗಿಸಿದ್ದರು. ಅರ್ಜುನನಾಗಿ ಕು| ಸಹನಾ ಹೆಗಡೆ ದಿಟ್ಟತನದ ಅಭಿನಯದಿಂದ ಪಾತ್ರ ಪೋಷಣೆ ಗೈದರೆ, ಪ್ರದ್ಯುಮ್ನನಾಗಿ ಕು| ಸ್ನೇಹಾ ಗಾಣಿಗ,ವೃಷಕೇತುವಾಗಿ ಕು| ಮಮತಾ, ಮಂತ್ರಿಯಾಗಿ ಕು| ಶರ್ಮದಾ ಎಂ, ಶ್ರೀಕೃಷ್ಣನಾಗಿ ಕು| ವರ್ಷಾ ಪಾತ್ರಗಳಿಗೆ ನ್ಯಾಯ ಒದಗಿಸಿದ್ದರು. ಬಾಲಗೋಪಾಲರಾಗಿ ಕು| ಶರ್ಮದಾ ಎಂ. ಮತ್ತು ಕು| ಮಾನ್ಯಾ ಹಾಗೂ ಪೀಠಿಕಾ ಸ್ತ್ರೀ ವೇಷಧಾರಿಗಳಾಗಿ ಕು| ಧನ್ಯತಾ ಮತ್ತು ಚಾರ್ವಿ ಪೂರ್ವರಂಗದಲ್ಲಿ ಮಿಂಚಿದರು. ಸೀತಾರಾಮ ಶೆಟ್ಟಿ ಕೊಯೂRರು ಇವರ ನಿರ್ದೇಶನದಲ್ಲಿ ಮೂಡಿಬಂದ ಈ ಪ್ರಸಂಗದಲ್ಲಿ ಭಾಗವತಿಕೆಯನ್ನು ಹಿರಿಯರಾದ ಕೆ.ಪಿ. ಹೆಗಡೆ ಮತ್ತು ವಿ| ಭಾಗೀರಥಿ ಎಂ. ರಾವ್‌ ನಿರ್ವಹಿಸಿದ್ದು, ಮದ್ದಲೆಯಲ್ಲಿ ರಾಘವೇಂದ್ರ ಹೆಗಡೆ ಹಾಗೂ ಚೆಂಡೆಯಲ್ಲಿ ಕೃಷ್ಣಾನಂದ ಶೆಣೈ ಸಹಕರಿಸಿದ್ದರು. ವೇಷಭೂಷಣ ಬಾಲಣ್ಣ ಹಂದಾಡಿಯವರದ್ದಾಗಿತ್ತು. ಒಂದಿಬ್ಬರು ಬಾಲೆಯರನ್ನು ಹೊರತುಪಡಿಸಿ ಉಳಿದ ಬಾಲೆಯರಿಗೆ ಇದು ಪ್ರಥಮ ವೇದಿಕೆಯಾಗಿತ್ತು. ಹಾಗಾಗಿ ಅಭಿನಯದಲ್ಲಿ ಮತ್ತು ಭಾವಾಭಿವ್ಯಕ್ತಿಯಲ್ಲಿ ಕೊರತೆಯಾಗುವುದು ಸಹಜ. ಆದರೂ ಪ್ರಸಂಗದ ಒಟ್ಟಂದಕ್ಕೆ ಯಾವುದೇ ಭಂಗವಾಗಿಲ್ಲ ಎನ್ನುವುದು ಮೆಚ್ಚುಗೆಯ ನುಡಿ.

ಕೆ. ದಿನಮಣಿ ಶಾಸ್ತ್ರಿ

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ