ಶ್ರಾವಣ ಮಾಸದಲ್ಲಿ ಎರಡು ಕಲ್ಯಾಣ

ಯಕ್ಷಮಿತ್ರರು ಟೌನ್‌ಹಾಲ್‌ ಪ್ರಸ್ತುತಿ

Team Udayavani, Sep 6, 2019, 5:00 AM IST

ಪದ್ಮಾವತಿಯಾಗಿ ಹೆಗಡೆ ಮಿಂಚಿನ ಸಂಚಲವನ್ನುಂಟು ಮಾಡಿದರುಮಾಡಿತು. ಅಪ್ರತಿಮ ಸೌಂದರ್ಯ, ಬೆಡಗು-ಬಿನ್ನಾಣಗಳಿಂದ ಪದ್ಮಾವತಿ ನೋಡುಗರ ಮನಸೂರೆಗೈದರು. ಕಣ್ಸೆಳೆಯುವ ಪೋಷಾಕು ಒಡ್ಯಾಣ ಇತ್ಯಾದಿ ಆಭರಣಗಳು, ಸುಂದರ ಕೇಶವಿನ್ಯಾಸ, ಸುಲಲಿತ ವಾಗ್ಝರಿ ಪಾತ್ರಕ್ಕೆ ವಿಶೇಷ ಕಳೆಯನ್ನಿತ್ತವು

ಕೃಷ್ಣಜನ್ಮಾಷ್ಟಮಿ ಪ್ರಯುಕ್ತ ಯಕ್ಷಮಿತ್ರರು ಟೌನ್‌ಹಾಲ್‌ ಉಡುಪಿ ಇವರ ಆಶ್ರಯದಲ್ಲಿ ಉಡುಪಿ ಪುರಭವನದಲ್ಲಿ ಎರಡು ಪೌರಾಣಿಕ ಯಕ್ಷಗಾನ ಪ್ರಸಂಗಗಳು ಪ್ರದರ್ಶಿತವಾದವು. ಅಂಗ ದೇಶಾಧಿಪತಿ ದೃಢವರ್ಮ ರಾಜಕುವರಿ ರತ್ನಾವತಿಯನ್ನು ಕೌಶಾಂಬಿಯ ರಾಜ ವತ್ಸಾಖ್ಯನಿಗೆ ಮದುವೆ ಮಾಡಿಕೊಡುವುದಾಗಿ ನಿಶ್ಚಯಿಸಿ ಪತ್ರ ಬರೆಯುತ್ತಾನೆ. ಇತ್ತ ಮೃಗಬೇಟೆ ಆಡಲು ಬಂದ ಭದ್ರಸೇನ ರಾಜನು ಯುದ್ಧದಲ್ಲಿ ದೃಢವರ್ಮನನ್ನು ಸೋಲಿಸಿ ಸೆರೆಮನೆಗೆ ತಳ್ಳಿ ನಿದ್ರಾವಶಳಾಗಿದ್ದ ರತ್ನಾವತಿಯನ್ನು ಮಂಚ ಸಮೇತ ಹೊತ್ತೂಯ್ಯುವನು. ಮಾರ್ಗಮಧ್ಯದ ದಟ್ಟಡವಿಯಲ್ಲಿ ವಿದ್ಯುಲ್ಲೋಚನನೆಂಬ ರಕ್ಕಸಾಧಿಪತಿಯೊಂದಿಗೆ ನಡೆದ ಘನಘೋರ ಯುದ್ಧದಲ್ಲಿ ಭದ್ರಸೇನನು ಹತನಾಗುವನು.

ವನವಿಹಾರದೊಂದಿಗೆ ಹರಿಣಗಳನ್ನಟ್ಟಿಸಿಕೊಂಡು ಬಂದ ಕೌಶಾಂಭಿಯರಸ ವತ್ಸಾಖ್ಯನು ರತ್ನಾವತಿಯನ್ನು ಕಂಡು ಮೋಹಿತನಾಗುವನು. ತಾನು ಮದುವೆಯಾಗಲಿರುವ ವಧು ರತ್ನಾವತಿ ಎಂದು ತಿಳಿದ ವತ್ಸಾಖ್ಯನು ವಿದ್ಯುಲ್ಲೋಚನನ್ನು ಸಂಹರಿಸಿ ರತ್ನಾವತಿಯನ್ನು ವಿವಾಹವಾಗುವನು. ಭದ್ರಸೇನನಾಗಿ ಕೊಂಡದಕುಳಿ ರಾಮಚಂದ್ರ ಹೆಗಡೆ ಎಂದಿನ ಗಾಂಭೀರ್ಯದಿಂದ ವೈವಿಧ್ಯಮಯ ಹೆಜ್ಜೆಗಾರಿಕೆಯಿಂದ, ತೂಕದ ಮಾತುಗಳಿಂದ ಕರತಾಡನ ಗಿಟ್ಟಿಸಿದರು. ಅಂಗದೇಶದ ರಾಜನ ಪಾತ್ರದಲ್ಲಿ ಆದಿತ್ಯ ಭಟ್‌ ಮಿಂಚಿದರು. ರತ್ನಾವತಿಯಾಗಿ ಸುಧೀರ್‌ ಉಪ್ಪೂರು ಒನಪು ವೈಯಾರಗಳಿಂದ, ಸುಲಲಿತ ನೃತ್ಯ ವೈವಿಧ್ಯದಿಂದ ಮಿಂಚಿದರು. ವಿದ್ಯುಲ್ಲೋಚನನಾಗಿ ನರಸಿಂಹ ಗಾಂವ್ಕರ್‌ ಪಾತ್ರಕ್ಕೆ ನ್ಯಾಯ ಒದಗಿಸಿದರು. ಕಾರ್ತಿಕ್‌ ಚಿಟ್ಟಾಣಿ ವತ್ಸಾಖ್ಯನ ಪಾತ್ರವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದರು. ಭಾಗವತರಾಗಿ ಜನ್ಸಾಲೆ ರಾಘವೇಂದ್ರ ಆಚಾರ್ಯ ಮಧುರ ಕಂಠದಿಂದ ಆಲಾಪದಲ್ಲಿ ಆರೋಹದ ತುತ್ತ ತುದಿಗೇರಿ ಅಷ್ಟೇ ಸಾಮಾರ್ಥ್ಯದಿಂದ ಅವರೋಹಕ್ಕಿಳಿದು ಮಂತ್ರಮುಗ್ಧರನ್ನಾಗಿಸಿದರು. ಮದ್ದಲೆಯಲ್ಲಿ ಸುನೀಲ್‌ ಭಂಡಾರಿ ಕಡತೋಕ ಹಾಗೂ ಚೆಂಡೆಯಲ್ಲಿ ಯುವ ಪ್ರತಿಭೆ ಸುಜನ್‌ ಹಾಲಾಡಿ ಸಮರ್ಥ ಸಾಂಗತ್ಯ ನೀಡಿದರು.

ಮುಂದಿನ ಪ್ರಸಂಗ ಪದ್ಮಾವತಿ ಕಲ್ಯಾಣ ಅರ್ಥಾತ್‌ ಶ್ರೀನಿವಾಸ ಕಲ್ಯಾಣ ಜನಜನಿತ ಕಥೆಯನ್ನೊಳಗೊಂಡಿತ್ತು. ಮಹಾವಿಷ್ಣುವಿನ ಮೇಲೆ ಮುನಿಸಿಕೊಂಡ ಲಕ್ಷ್ಮೀಯು ಭೂಲೋಕದಲ್ಲಿ ಆಕಾಶರಾಜನಿಗೆ ಮಗಳು ಪದ್ಮಾವತಿಯಾಗಿ ಜನಿಸುವಳು. ಆಕೆಯನ್ನು ಹುಡುಕಿ ಕೊಂಡು ಶ್ರೀನಿವಾಸನು ಕಿರಾತನ ರೂಪದಲ್ಲಿ ಧರೆಗಿಳಿಯುವನು. ಸಾಕು ತಾಯಿ ಬಕುಳಾದೇವಿಯ ಸಂರಕ್ಷಣೆಯಲ್ಲಿರುವ ಶ್ರೀನಿವಾಸನಿಗೆ ಒಂದು ದಿನ ವನಾಂತರದಲ್ಲಿ ಪದ್ಮಾವತಿಯ ಭೇಟಿಯಾಗಿ ಆಕೆಗಾಗಿ ಹಂಬಲಿಸುತ್ತಾನೆ. ಬಕುಳಾದೇವಿ ಆಕಾಶರಾಜನಲ್ಲಿ ಶ್ರೀನಿವಾಸ – ಪದ್ಮಾವತಿಯರ ವಿವಾಹ ಪ್ರಸ್ತಾಪ ಮಾಡುವಳು. ಬ್ರಹ್ಮನ ಪೌರೋಹಿತ್ಯ, ಶಿವನ ಮುಂದಾಳತ್ವದಲ್ಲಿ ದೇವಾಧಿದೇವತೆಗಳ ಸಾಂಗತ್ಯ, ಹದಿನಾರು ಲಕ್ಷ ಸುವರ್ಣ ಮುದ್ರೆಗಳ ಆಧಿಪತ್ಯದ ಕರಾರುಗಳನ್ನು ಪೂರೈಸಲು ಒಪ್ಪಿದ ಶ್ರೀನಿವಾಸನ ಕಲ್ಯಾಣ ಪದ್ಮಾವತಿಯೊಂದಿಗೆ ಅದ್ದೂರಿಯಾಗಿ ನೆರವೇರುವುದು. ಈ ಕಥಾನಕದಲ್ಲಿ ಪ್ರಸನ್ನ ಶೆಟ್ಟಿಗಾರ್‌ ಮಂದಾರ್ತಿ ಕಿರಾತ ಶ್ರೀನಿವಾಸ ಪಾತ್ರವನ್ನು ನಿರ್ವಹಿಸಿದರು. ಶ್ರೀನಿವಾಸನ ಮಿತ್ರ ಕಾಲ್ಪನಿಕ ಪಾತ್ರ ಜೋಗಿದಾಸನಾಗಿ ಕಾಸರಕೋಡು ಶ್ರೀಧರ ಭಟ್‌ ನಗೆಗಡಲಲ್ಲಿ ಮುಳುಗಿಸಿದರು. ಹರಿತವಾದ ಸಂಭಾಷಣೆ, ಪ್ರಾಸಂಗಿಕವಾದ ಮಾತು, ಅಣುಕು ನೃತ್ಯ ಮುಂತಾದವುಗಳು ಅವರ ಪಾತ್ರಕ್ಕೆ ಹೆಚ್ಚಿನ ಮೆರುಗನ್ನು ನೀಡಿದವು.

ಪದ್ಮಾವತಿಯಾಗಿ ನೀಲ್ಕೋಡು ಶಂಕರ ಹೆಗಡೆ ಹಾಗೂ ಸಖೀಯಾಗಿ ಉಮೇಶ್‌ ಶಂಕರನಾರಾಯಣ ಇವರ ರಂಗಪ್ರವೇಶ ಮಿಂಚಿನ ಸಂಚಲವನ್ನುಂಟು ಮಾಡಿತು. ಅಪ್ರತಿಮ ಸೌಂದರ್ಯ, ಬೆಡಗು-ಬಿನ್ನಾಣಗಳಿಂದ ಪದ್ಮಾವತಿ ನೋಡುಗರ ಮನಸೂರೆಗೈದರು. ಕಣ್ಸೆಳೆಯುವ ಪೋಷಾಕು ಒಡ್ಯಾಣ ಇತ್ಯಾದಿ ಆಭರಣಗಳು, ಸುಂದರ ಕೇಶವಿನ್ಯಾಸ, ಸುಲಲಿತ ವಾಗ್ಝರಿ ಪಾತ್ರಕ್ಕೆ ವಿಶೇಷ ಕಳೆಯನ್ನಿತ್ತವು. ಸಾಂಪ್ರದಾಯಿಕ ಕುಣಿತ, ಗಾಂಭೀರ್ಯದಿಂದ ಕೂಡಿದ ಚಲನ-ವಲನ, ಹಿತ-ಮಿತವಾದ ಸಂಭಾಷಣೆ ಪಾತ್ರದ ಇನ್ನಷ್ಟು ಧನಾತ್ಮಕ ಅಂಶಗಳು. ಪದ್ಮಾವತಿಯ ಸಖೀಯಾಗಿ ಉಮೇಶ್‌ ಸಮರ್ಥ ಸಂಗಾತಿಯೆನಿಸಿದರು.

ಮುಖ,ಮೈಮಾಟ ಬಕುಳಾ ದೇವಿಗೆ ಹೊಂದಿಕೆಯಾಗದಿದ್ದರೂ ಪಾತ್ರದ ಘನತೆಯನ್ನು ಎತ್ತಿ ಹಿಡಿಯುವಲ್ಲಿ ಗೋವಿಂದ ವಂಡಾರು ಯಶಸ್ವಿಯಾದರು. ಆಕಾಶ ರಾಜನಾಗಿ ನರಸಿಂಹ ಗಾಂವ್ಕರ್‌ ಪಾತ್ರ ಚಿಕ್ಕದಾದರೂ ಚೊಕ್ಕವಾಗಿ ನಿರ್ವಹಿಸಿದರು. ಶ್ರೀನಿವಾಸನಾಗಿ ಆದಿತ್ಯ ಭಟ್‌ ಪದ್ಮಾವತಿ ಕಲ್ಯಾಣದ ಪೂರ್ತಿ ಕಥಾನಕ ಹಾಗೂ ಫ‌ಲಶ್ರುತಿಯನ್ನು ತೆರೆದಿಟ್ಟರು. ಪ್ರಧಾನ ಭಾಗವತರಾಗಿ ಚಂದ್ರಕಾಂತ ರಾವ್‌ ಮೂಡುಬೆಳ್ಳೆ ಕಂಚಿನ ಕಂಠದ ಸುಶ್ರಾವ್ಯವಾದ ಭಾಗವತಿಕೆಯಿಂದ ಪ್ರಸಂಗದ ಒಟ್ಟಂದವನ್ನು ಹೆಚ್ಚಿಸಿದರು. ಇವರನ್ನು ಸಮರ್ಥವಾಗಿ ಬೆಂಬಲಿಸಿದವರು ಎನ್‌.ಜಿ. ಹೆಗಡೆ (ಮದ್ದಳೆ) ಹಾಗೂ ಶ್ರೀನಿವಾಸ ಯಾನೆ ಗುಂಡ (ಚೆಂಡೆ).

ಜನನಿ ಭಾಸ್ಕರ ಕೊಡವೂರು

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ