ವೈವಿಧ್ಯದಿಂದ ಮನದುಂಬಿದ ಯಕ್ಷಾರ್ಪಣ

Team Udayavani, Sep 13, 2019, 5:00 AM IST

ಯಕ್ಷದೇವ ಮಿತ್ರ ಕಲಾಮಂಡಳಿ ಬೆಳುವಾಯಿಯ ಕ್ರಾಂತಿಕಾರಿ ಸಂಸ್ಥೆ. ಸ್ಥಾಪಕರೂ ಕಲಾವಿದರೂ ಆಗಿರುವ ದೇವಾನಂದ ಭಟ್ಟರು ತಮ್ಮ ಸಂಘಟನಾ ಕುಶಲತೆಯ ಸವಿಯನ್ನು ಜನತೆಗೆ ಈ ಸಂಸ್ಥೆಯ ಮೂಲಕ ಉಣಿಸಿಕೊಂಡು ಬಂದಿದ್ದಾರೆ. ಸಂಸ್ಥೆಯ 22ನೇ ವರ್ಷದ ಕೊಡುಗೆಯಾಗಿ “ಯಕ್ಷಾರ್ಪಣ’ ಜರುಗಿತು. ಸಂಸ್ಮರಣೆ – ಸನ್ಮಾನ – ತಾಳಮದ್ದಳೆ – ಗಾನವೈಭವ – ಕೂಡಾಟ – ಹಾಸ್ಯರಸಾಯನಗಳ ಸಮ್ಮಿಲನಕ್ಕೆ ಪದ್ಮಾವತಿ ಸಭಾಂಗಣ ಸಾಕ್ಷಿಯಾಯಿತು.

ವೃತ್ತಿಪರ – ಹವ್ಯಾಸಿ – ವಿದ್ಯಾರ್ಥಿ ಕಲಾವಿದರ ಕಲಾ ಶ್ರೀಮಂತಿಕೆಯನ್ನು ಸಹಸ್ರಾರು ಕಣ್ಣುಗಳು ತುಂಬಿಸಿಕೊಂಡವು. ಸಭಾ ಕಾರ್ಯಕ್ರಮಕ್ಕೆ ಜನವೇ ಆಗುವುದಿಲ್ಲ ಎನ್ನುವ ಅಪವಾದವನ್ನು ಈ ಮೂರು ದಿನಗಳ ಹಬ್ಬ ಸುಳ್ಳು ಮಾಡಿ ತೋರಿಸಿದೆ. ಸಮಯ ಪಾಲನೆಗೆ ಜನಸ್ಪಂದನೆ ದೊರೆಯುತ್ತದೆ ಎನ್ನುವುದನ್ನು ಯಕ್ಷಾರ್ಪಣ ನಿರೂಪಿಸಿದೆ. ಆರು ಮಂದಿ ಕೀರ್ತಿಶೇಷರುಗಳ ಸಂಸ್ಮರಣೆಯನ್ನು ನಡೆಸಲಾಯಿತು. ಪ್ರಸಾದನ ಕಲಾವಿದ ಜಯ ದೇವಾಡಿಗ, ಕಲಾವಿದ ನಯನ ಶೆಟ್ಟಿ, ಜೆಪ್ಪು ದಯಾನಂದ ಶೆಟ್ಟಿ, ವಿ| ಗೀತಾ ಸರಳಾಯ ಅವರನ್ನು ಸನ್ಮಾನಿಸಲಾಯಿತು. “ಶ್ರೀ ಯಕ್ಷದೇವ ಪ್ರಶಸ್ತಿ’ಯನ್ನು ಹಿರಿಯ ವೇಷಧಾರಿ ಬೋಳಾರ ಸುಬ್ಬಯ್ಯ ಶೆಟ್ಟಿ ಮತ್ತು ಹಿರಿಯ ಹಿಮ್ಮೇಳವಾದಕ ಕೃಷ್ಣ ಭಟ್‌ ಅವರಿಗೆ ಪ್ರದಾನಿಸಲಾಯಿತು.

ಮೂರು ದಿನಗಳ ಕಾರ್ಯಕ್ರಮದಲ್ಲಿ ತಿಲಕಪ್ರಾಯವಾಗಿ ಮೂಡಿಬಂದದ್ದು ತೆಂಕು – ಬಡಗು ವೃತ್ತಿ ಕಲಾವಿದರ ಕೂಡಾಟ “ಕುಶ – ಲವ’. ಕಲಾವಿದರ ಕೂಡಾಟ ಮಾತ್ರವಲ್ಲದೆ ಪ್ರಸಂಗ ಸಾಹಿತ್ಯದ ಕೂಡಾಟ ವಿಶೇಷವಾಗಿ ಗಮನ ಸೆಳೆಯಿತು. ನಾಟ್ಯ – ಸಂಭಾಷಣೆಗಳ ಮೇಲಾಟ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಯಿತು. ರಾಮ – ಕುಶಲವರ ಯುದ್ಧದ ಭಾಗದಿಂದ ಬಡಗಿನ ನಡೆಯನ್ನು ಅಳವಡಿಸಿಕೊಂಡದ್ದು ಪ್ರದರ್ಶನದ ಸಮಗ್ರ ಯಶಸ್ಸಿಗೆ ಕಾರಣವಾಯಿತು. ಈ ನಡೆಯಲ್ಲಿ ರಾಮ – ಕುಶಲವ – ವಾಲ್ಮೀಕಿ ಪಾತ್ರಗಳಿಗೆ ಮಾತಿನ ವೈವಿಧ್ಯತೆಗೆ ವಿಪುಲವಾದ ಅವಕಾಶವಿದೆ. ಯುದ್ಧಭೂಮಿಯಲ್ಲೆ ಕುಶಲವರಿಂದ ರಾಮಾಯಣದ ಪ್ರಸ್ತುತಿ, ಪೂರಕವಾಗಿ ರಾಮನ ಪ್ರತಿಕ್ರಿಯೆ ಕುತೂಹಲ ಹುಟ್ಟಿಸುತ್ತದೆ. ಇದೇ ನಡೆಯನ್ನು ತೆಂಕಿನ ನಿತ್ಯದ ಪ್ರದರ್ಶನದಲ್ಲಿ ಪಾಲಿಸಬಹುದೋ ಏನೋ. ರಾಮ (ಸುಣ್ಣಂಬಳ ವಿಶ್ವೇಶ್ವರ ಭಟ್‌), ಶತ್ರುಘ್ನ (ಕನ್ನಡಿಕಟ್ಟೆ ಗಣೇಶ ಶೆಟ್ಟಿ), ಕುಶ (ಮಂಕಿ ಈಶ್ವರ ನಾಯ್ಕ), ಲವ (ರಾಜೇಶ್‌ ಮರವಂತೆ), ಸೀತೆ (ಅಕ್ಷಯ ಮಾರ್ನಾಡು), ವಾಲ್ಮೀಕಿ (ಡಾ| ಶ್ರುತಕೀರ್ತಿರಾಜ), ದೂತ (ಅರುಣ್‌ ಜಾರ್ಕಳ) ಪ್ರಸಂಗವನ್ನು ಜೀವಂತವಾಗಿರಿಸುವಲ್ಲಿ, ಶ್ರೇಷ್ಠ ಮಟ್ಟದ ಪ್ರದರ್ಶನವಾಗಿಸುವಲ್ಲಿ ತಮ್ಮ ಪ್ರತಿಭೆಯನ್ನು ಸಂಪೂರ್ಣವಾಗಿ ವಿನಿಯೋಗಿಸಿದರು.

ರವಿಚಂದ್ರ ಕನ್ನಡಿಕಟ್ಟೆ ಮತ್ತು ಚಂದ್ರಕಾಂತ್‌ರಾವ್‌ ಮೂಡುಬೆಳ್ಳೆ ಹಿಮ್ಮೇಳ – ಮುಮ್ಮೇಳ ಕಲಾವಿದರನ್ನು ಪರಿಣಾಮಕಾರಿಯಾಗಿ ದುಡಿಸಿಕೊಂಡರು. ಹಾಸ್ಯ ಕಲಾವಿದರ ಯಕ್ಷಗಾನ “ಶೂರ್ಪನಖಾ ವಿವಾಹ’ ಸಭೆಯನ್ನಿಡೀ ನಗೆಗಡಲಿನಲ್ಲಿ ತೇಲಾಡಿಸಿತು. ಬಂಟ್ವಾಳ ಜಯರಾಮ ಆಚಾರಿ (ವಿದ್ಯುಜ್ಜಿಹ್ವ), ಪ್ರಜ್ವಲ್‌ ಗುರುವಾಯನಕೆರೆ (ರಾವಣ), ಲಕ್ಷ್ಮಣಕುಮಾರ್‌ ಮರಕಡ (ಶೂರ್ಪನಖಾ), ರಮಣ ಆಚಾರ್ಯ (ಮಾರೀಚ) ಮನೋಜ್ಞವಾಗಿ ಕಥಾನಿರೂಪಣೆ ಮಾಡಿದರು. ದೇವಾನಂದ ಭಟ್ಟರ ನಿರ್ದೇಶನದ ಮಕ್ಕಳ ಯಕ್ಷಗಾನ “ಕಾರ್ತವೀರ್ಯ’ ಶಿಸ್ತುಬದ್ಧವಾಗಿ, ಅರ್ಥಪೂರ್ಣವಾಗಿ ಪ್ರದರ್ಶಿಸಲ್ಪಟ್ಟಿತು. ಯಕ್ಷದೇವ ತಿಂಗಳ ಕೂಟದ ಹವ್ಯಾಸಿ ಕಲಾವಿದರ ತಾಳಮದ್ದಳೆ “ಕರ್ಣಾರ್ಜುನ’ ಪೈಪೋಟಿಯಿಂದ ಕೂಡಿತ್ತು. ವಿಶೇಷವಾಗಿ ಕರ್ಣ (ವಿದ್ವಾನ್‌ ವಿನಾಯಕ ಭಟ್‌), ಶಲ್ಯ (ರಜನೀಶ ಹೊಳ್ಳ)ರ ಸಂಭಾಷಣೆ – ವಾಕlರಿ ರಸದೌತಣವನ್ನು ಬಡಿಸಿತು.

ಡಾ| ಶ್ರುತಕೀರ್ತಿರಾಜ, ಉಜಿರೆ

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ