ಸಿಟ್ಟಲ್ಲಿ ಕೊಟ್ಟ ಪೆಟ್ಟು ಬಾಳಿನ ದಾರಿ ತೋರಿತು!

Team Udayavani, Feb 12, 2019, 12:30 AM IST

“ಸನ್ಮಾನ್ಯ ಅಧ್ಯಕ್ಷರೆ, ಅತಿಥಿಗಳೇ…’ ಮುಂದಿನದು ನೆನಪಾಗುತ್ತಿಲ್ಲ. ಮಾಸ್ತರರಿಗೆ ಸಿಟ್ಟು ಎಲ್ಲಿತ್ತೋ ಗೊತ್ತಿಲ್ಲ. ಅಲ್ಲೇ ಕಿಟಕಿಯಲ್ಲಿದ್ದ ರೂಲ್‌ ಬಡಿಗೆಯಿಂದ ಒಳ ಮೊಣಕಾಲಿಗೆ “ಟಪ್‌’ ಎಂದು ಒಂದೇಟು ಕೊಟ್ಟರು. ಅದೆಷ್ಟು ನೋವಾಯಿತೆಂದರೆ, ಕಣ್ಣೀರು ಸುರಿಯಿತು.
 
ನಾಲ್ಕು ದಶಕದ ಹಿಂದಿನ ಘಟನೆ ಇದು. ನಾನಾಗ 7ನೇ ತರಗತಿ ಓದುತ್ತಿದ್ದೆ. ನಮಗೆ ಆಲೂರ ಸರ್‌ ಎಂಬ ಶಿಕ್ಷಕರಿದ್ದರು. ಅವರ ಹೆಂಡತಿಯೂ ಶಿಕ್ಷಕಿಯೇ. ಆ ಶಿಕ್ಷಕ ದಂಪತಿಗೆ ನನ್ನ ಮೇಲೆ ಪ್ರೀತಿ ಜಾಸ್ತಿ. ತಪ್ಪು ಮಾಡಿದ ಹುಡುಗರ ಅಂಗೈ ಮೇಲೆ ಜಬರಿ ಏಟಿನ ಕೆಂಪಾದ ರಂಗೋಲಿ ಎಳೆಯುತ್ತಿದ್ದರಾದರೂ, ಅದರಲ್ಲಿ ನನಗೆ ಮಾತ್ರ ಸ್ವಲ್ಪ ವಿನಾಯಿತಿ. ಆದರೆ, ನನ್ನ ಈ ಗರ್ವವೇ ಒಮ್ಮೆ ಅವರಿಂದ ನಾನೂ ಪೆಟ್ಟು ತಿನ್ನಲು ಕಾರಣವಾಯ್ತು.

ರಾಷ್ಟ್ರೀಯ ಹಬ್ಬಗಳಲ್ಲಿ ನಮ್ಮೂರು ಗ್ರಾಮ ಪಂಚಾಯತಿ ಮುಂದೆ ಸಾಮೂಹಿಕ ಕಾರ್ಯಕ್ರಮ ನಡೆಯುತ್ತಿತ್ತು. ಶಾಲಾ ಮಕ್ಕಳಿಂದ, “ಹಾರುತಿಹುದು ಏರುತಿಹುದು ನೋಡು ನಮ್ಮ ಬಾವುಟ’ ಗೀತೆ ಗಾಯನ, ನಂತರ ಪ್ರತಿ ಕಾರ್ಯಕ್ರಮದಲ್ಲೂ ನನ್ನದೇ ಭಾಷಣ. ಆಲೂರ ಮಾಸ್ತರರೇ ಭಾಷಣ ಬರೆದು ಕೊಡುತ್ತಿದ್ದರು. ನಾನು ಅದನ್ನು ಬಾಯಿಪಾಠ ಮಾಡಿ, ಅವರಿಗೆ ಒಪ್ಪಿಸಬೇಕಿತ್ತು.

 ತಮ್ಮ ಮನೆಯ ಮೆಟ್ಟಿಲ ಮೇಲೆ ಒಂದು ಜಬರಿ ಕೈಯಲ್ಲಿ ಹಿಡಿದು ಮಾಸ್ತರರು ಕುಳಿತಿರುತ್ತಿದ್ದರು. ನಾನು ಅವರ ಮುಂದೆ ನಿಂತು ಒಮ್ಮೆ ಅತ್ತ, ಒಮ್ಮೆ ಇತ್ತ ಕೈ ಹೊರಳಿಸುತ್ತ ಭಾಷಣ ಒಪ್ಪಿಸಬೇಕಿತ್ತು. ಅವರೇನೋ ದ್ರೋಣಾಚಾರ್ಯರು. ಆದರೆ, ನಾನು ಅರ್ಜುನನಂತಿರಲಿಲ್ಲ. ಸರಿಯಾಗಿ ಭಾಷಣ ಮಾಡದಿದ್ದಾಗ, ಅವರಿಗೆ ಸಿಟ್ಟು. ಕೋಪದ ಉಪಶಮನವೆಂದರೆ, ಕೊನೆಯವರೆಗೆ ಸರಿಯಾಗಿ ಹೇಳಿದ್ದರೂ, ಮತ್ತೂಮ್ಮೆ “ಸನ್ಮಾನ್ಯ ಅಧ್ಯಕ್ಷರೇ, ಗೌರವಾನ್ವಿತ ಅತಿಥಿಗಳೇ…’ ಇಂದ ಶುರು ಮಾಡಬೇಕಿತ್ತು. ಅತ್ತ ರೇಡಿಯೋ ತನ್ನಷ್ಟಕ್ಕೆ ತಾನು ನಿರಂತರ ಆಲಾಪ ಮಾಡುತ್ತಿದ್ದರೆ, ಇತ್ತ ನನ್ನ ಭಾಷಣದ ಆಲಾಪ ಆಗಾಗ ಕಟ್‌ ಕಟ್‌ ಆಗುತ್ತಿತ್ತು.

 ಆ ವರ್ಷದ ಸ್ವಾತಂತ್ರ್ಯ ದಿನಾಚರಣೆಗೆ ಎಂಟತ್ತು ದಿನ ಇತ್ತು. ಮಾಸ್ತರರು ಭಾಷಣ ಬರೆದು, ಬಾಯಿಪಾಠ ಮಾಡಲು ಹೇಳಿದರು. “ಹ್ಞುಂ’ ಎಂದು ತಲೆ ಅಲ್ಲಾಡಿಸಿದ ನಾನು, ಅಮ್ಮನೊಂದಿಗೆ ಊರಿಗೆ ಹೋಗಿಬಿಟ್ಟೆ. “ನನಗೇ ಏನು ಪ್ರತಿ ಸಾರಿ ಭಾಷಣ ಮಾಡೋಕೆ ಹೇಳ್ಳೋದು ಸರ್‌! ಈ ಸಲ ಬೇರೆಯವರಿಗೆ ಹೇಳ್ತಾರೆ ಬಿಡು’ ಎಂಬ ಅಹಂ ತಲೆ ಹೊಕ್ಕಿತ್ತು. ಐದಾರು ದಿನಗಳ ನಂತರ ಊರಿಗೆ ವಾಪಸ್‌ ಬಂದವಳೇ, ಮಾಸ್ತರರ ಮನೆಗೆ ಹೋದೆ. ಲಾಂದ್ರದ ಬೆಳಕಿನಲ್ಲಿ ತಣ್ಣಗೆ ಬೆಳದಿಂಗಳಂತೆ ಕುಳಿತಿದ್ದರು ಅವರು. “ಭಾಷಣ ಹೇಳು. ನಾಳೆ ಕಾರ್ಯಕ್ರಮ ಐತಿ’ ಎಂದರು. ನನ್ನ ಜಂಘಾಬಲವೇ ಉಡುಗಿ ಹೋಯ್ತು. ತುಟಿ ಅದುರಿತು. ಭಾಷಣ ಕಲಿತಿಲ್ಲ ಅಂತ ಹೇಳಲೂ ಧೈರ್ಯ ಸಾಲಲಿಲ್ಲ.

“ಸನ್ಮಾನ್ಯ ಅಧ್ಯಕ್ಷರೆ, ಅತಿಥಿಗಳೇ…’ ಮುಂದಿನದು ನೆನಪಾಗುತ್ತಿಲ್ಲ. ಮಾಸ್ತರರಿಗೆ ಸಿಟ್ಟು ಎಲ್ಲಿತ್ತೋ ಗೊತ್ತಿಲ್ಲ. ಅಲ್ಲೇ ಕಿಟಕಿಯಲ್ಲಿದ್ದ ರೂಲ್‌ ಬಡಿಗೆಯಿಂದ ಒಳ ಮೊಣಕಾಲಿಗೆ “ಟಪ್‌’ ಎಂದು ಒಂದೇಟು ಕೊಟ್ಟರು. ಅದೆಷ್ಟು ನೋವಾಯಿತೆಂದರೆ, ಕಣ್ಣೀರು ಸುರಿಯಿತು. “ಮನೆಯಲ್ಲಿ ಅಭ್ಯಾಸ ಮಾಡು’ ಎಂದು ಸಿಟ್ಟಿನಲ್ಲೇ ವಾಪಸ್‌ ಕಳಿಸಿದರು.

ಮರುದಿನ ಗ್ರಾಮ ಪಂಚಾಯತಿ ಧ್ವಜಾರೋಹಣ. ಭಾಷಣಕ್ಕೆ ನನ್ನ ಹೆಸರು ಕರೆದರು. ಮಾಸ್ತರರ ಕಡೆ ನೋಡಿದೆ. ಹೋಗು ಎಂದು ಕಣ್ಣಲ್ಲಿ ಆಜ್ಞೆ ಇತ್ತರು.  ನಾನು ವೇದಿಕೆಯೇರಿ, ಕೈ ಮಾಡಿ ಭಾಷಣ ಮಾಡಿದೆ. ಎಲ್ಲ ಮುಗಿದ ಮೇಲೆ ಕಂಪಾಸ್‌ ಬಾಕ್ಸ್‌, ನೋಟ್‌ ಬುಕ್‌, ಒಂದು ಚೀಲ ಪೆಪ್ಪರಮೆಂಟ್‌ ಬಹುಮಾನ ಸಿಕ್ಕಿತು. ಸೀದಾ ಹೋಗಿ ಸರ್‌ ಎದುರು ನಿಂತೆ. ಅವರ ಕಣ್ಣಲ್ಲಿ  ಹೊಳಪಿತ್ತು. “ಮಗಳ.. ಭಾರೀ ಶ್ಯಾಣೆ ಆಗೀ. ನಾ ಬರೆದದ್ದಕ್ಕಿಂತ ಚಂದ ಹೇಳಿದಿ ನೋಡ್‌!’ ಎಂದು ಬೆನ್ನು ತಟ್ಟಿದರು. 

 ಹಿಂದಿನ ದಿನ ಅವರು ಹೊಡೆದದ್ದಕ್ಕೆ, “ನೀನ್ಯಾಕವ್ವ ಊರಿಗೆ ಬಂದಿ. ಇಲ್ಲೇ ಅಜ್ಜಿ ಜೊತೆ ಇರಬೇಕಿಲ್ಲ’ ಎಂದು ಅಮ್ಮನೂ ಬೇಜಾರು ಮಾಡಿಕೊಂಡಿದ್ದಳು. ಕಂದೀಲದ ಬೆಳಕಲ್ಲಿ  ರಾತ್ರಿಯಿಡೀ ಚೆನ್ನಾಗಿ ಬಾಯಿಪಾಠ ಮಾಡಿದ್ದೆ. ಆ ಪರಿಶ್ರಮವೇ ಮಾಸ್ತರರ ಕಣ್ಣಲ್ಲಿ ಹೊಳಪಾಗಿ ಕಾಣಿಸಿತ್ತು. 

ಅಂದು ಆಲೂರ ಸರ್‌ ಬರೆದು ಕೊಟ್ಟ ಅಕ್ಷರದ ಸಾಲುಗಳೇ ಇಂದು ಬಾಳಿನ ಅರ್ಥ ಹುಡುಕಲು ಕಲಿಸಿವೆ. ಇಂದು ನನ್ನ ಬರಹವನ್ನು ಗುರುತಿಸಿ, ಭಾಷಣಕ್ಕೆ ಆಮಂತ್ರಣ ಕೊಡುತ್ತಾರೆಂದರೆ ಅದರ ಶ್ರೇಯ ಆಲೂರ ಸರ್‌ನಂಥ ಶಿಕ್ಷಕರಿಗೆ ಸೇರಬೇಕು. ಬಾಳಿನ ಉದ್ದಗಲದಲ್ಲಿ ಬಂದು ಹೋದ ಒಳ ಪೆಟ್ಟುಗಳು ನೂರು. ಯಾವ ಏಟಿನಿಂದ ಯಾರ ಬಾಳಿನಲ್ಲಿ ಚಿತ್ತಾರ ಮೂಡುತ್ತದೋ ಯಾರಿಗೆ ಗೊತ್ತು? ಸ್ವೀಕರಿಸುವವನ ಎದೆ ಮಾತ್ರ ಭಾರವಾಗದೇ ಹಗುರಾಗಿರಬೇಕು.. ಇದು ಅವರೇ ಹೇಳಿದ ತತ್ವದ ಮಾತು. ಆಲೂರ ಸರ್‌, ನಿಮಗೊಂದು ಶರಣು. 

ಲಲಿತಾ ಕೆ. ಹೊಸಪ್ಯಾಟಿ, ಹುನಗುಂದ

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

  • ಹಣವನ್ನು ಎಲ್ಲೆಲ್ಲಿ ಹೂಡಿದರೆ, ಹೇಗೇಗೆ ಲಾಭ ಮಾಡಬಹುದು. ಕಂಪೆನಿಗೆ ನಷ್ಟವಾಗದ ರಹದಾರಿಗಳು ಯಾವುವು? ಹೀಗೆ, ಉದ್ಯಮ ಆರಂಭಿಸಲು ನಿಂತವರಿಗೆ ನಾನಾ ಮಾರ್ಗಗಳನ್ನು...

  • ನಾಳೆಯೇ ಪರೀಕ್ಷೆ. ಹೀಗಂತ ನೆನಪು ಬಂದಾಕ್ಷಣ ಮನಸ್ಸು ಬೆಚ್ಚಿ ಬೀಳುತ್ತದೆ. ಉಸಿರು ಸ್ವಲ್ಪ ಬಿಸಿಯಾಗುತ್ತದೆ. ಕೆಲವರಿಗೆ ಇದೇ ಭಯವಾಗಿ, ಓದಿದ್ದೆಲ್ಲ ಮರೆತು ಹೋಗುತ್ತದೆ....

  • ಫೋಟೋಗ್ರಫಿಯು ನಿಸರ್ಗದ ಎಂತಹುದೇ ಆಕಾರ, ರೂಪ, ವರ್ಣ, ಪ್ರಮಾಣ, ಇರುವ ಜೀವ ಅಥವಾ ನಿರ್ಜೀವ ವಸ್ತುವನ್ನು, ಕನ್ನಡಿ ಹಿಡಿದಂತೆ ಯಥಾವತ್ತು ದೃಶ್ಯದಾಖಲೆಯಾಗಿಸುವಷ್ಟಕ್ಕೇ...

  • ಕೈ ತುಂಬಾ ಕಾಸು ಇದ್ದರೂ, ಅನ್ಯರ ಕಷ್ಟಕ್ಕೆ ತುಡಿಯುವ ಮನಸ್ಸು ಎಲ್ಲರಿಗೂ ಇರಲ್ಲ. ಹಣದಲ್ಲಿ ಶ್ರೀಮಂತಿಕೆ ಇದ್ದು, ಸಮಾಜಕ್ಕೆ ಅವರಿಂದ ನಯಾ ಪೈಸೆ ಅನುಕೂಲವಿಲ್ಲ...

  • ನೀವು ಆಫೀಸಲ್ಲಿ ಕೆಲಸ ಮಾಡುವಾಗ, ಸಣ್ಣಗೆ ಕೆಮ್ಮುವುದು, ನೆಗಡಿಯಿಂದ ನಸ ನಸ ಅನ್ನುವುದು ಆದರೆ, ಎಲ್ಲ ಆಫೀಸಿನ ಎ.ಸಿ ಕಾಟ ಅಂದುಕೊಂಡು ಬಿಡ್ತೀರಿ. ಇದು ನಿಮ್ಮ ದೇಹದಲ್ಲಿನ...

ಹೊಸ ಸೇರ್ಪಡೆ