ನೋವಾಗಿ ಕಾಡುವ ಹುಡುಗಿ…

Team Udayavani, Sep 27, 2019, 5:30 AM IST

ಅವಳು ರಾಜೇಶ್ವರಿ. ತೀರಾ ಆಕಸ್ಮಿಕವಾಗಿ ಅಲ್ಲಿ ನನಗೆ ಸಿಕ್ಕಿದ್ದಳು. ಆ ಭೇಟಿ ನನ್ನ ಮನಸ್ಸಲ್ಲೂ ಅವಳ ಮನಸ್ಸಲ್ಲೂ ಉಂಟುಮಾಡಿದ ಭಾವನೆ ಏನೋ? ಅವಳು ಬಿಕ್ಕಿಬಿಕ್ಕಿ ಅತ್ತಿದ್ದಳು. ನನ್ನ ಕಣ್ಣುಗಳಲ್ಲೂ ನೀರು ಜಿನುಗಿತು. ಹೃದಯ ಭಾರವಾಯಿತು. ಮೂರ್ನಾಲ್ಕು ವರ್ಷಗಳ ಹಿಂದೆ ನಾನು 9ನೆಯ “ಬಿ’ ವಿಭಾಗದ ಕ್ಲಾಸ್‌ ಟೀಚರ್‌ ಆಗಿದ್ದಾಗ ನನ್ನ ಕ್ಲಾಸ್‌ನಲ್ಲಿದ್ದಳು ಅವಳು. ಕಲಿಕೆಯಲ್ಲಿ ತೀರಾ ಹಿಂದೆಯೇನೂ ಅಲ್ಲ. ಕೈಬರಹವೂ ಉತ್ತಮವಾಗಿತ್ತು. ಸಾಂಸ್ಕೃತಿಕ ಚಟುವಟಿಕೆಗಳಲ್ಲೂ ಉತ್ತಮವಾಗಿ ಭಾಗವಹಿಸುತ್ತಿದ್ದಳು. ಒಂದೇ ಒಂದು ಸಮಸ್ಯೆ. ಶಾಲೆಗೆ ಆಗಾಗ ಚಕ್ಕರ್‌ ಹಾಕುತ್ತಿದ್ದಳು. ವಾರವಾದರೂ ಅವಳು ಶಾಲೆಯ ಕಡೆ ಬಾರದಿದ್ದಾಗ ಬೇರೆ ಉಪಾಯವಿಲ್ಲದೇ ಅವಳ ಮನೆಗೆ ಹುಡುಕಿಕೊಂಡು ಹೋಗುತ್ತಿದ್ದೆವು. ನಮ್ಮ ಮಾತುಗಳಿಗೆ ಒಪ್ಪಿ ಕೆಲವು ದಿವಸ ಶಾಲೆಗೆ ಬರುತ್ತಿದ್ದಳು. ನಂತರ ಮೊದಲಿನಂತೆ ಗೈರು ಹಾಜರಾಗುತ್ತಿದ್ದಳು. ಅವಳ ಅಕ್ಕ ಹಾಗೂ ತಂಗಿ ಉದಾಸೀನವಿಲ್ಲದೇ ಶಾಲೆಗೆ ಹೋಗುತ್ತಿದ್ದರೆ ಇವಳು ಮಾತ್ರ ಹೀಗೆ. ಜನತಾ ಕಾಲನಿಯ ತೀರಾ ಬಡತನದ ಮನೆಯೊಂದರ ಹುಡುಗಿ ಅವಳು. ಒಂದು ಕೊಠಡಿ ಹಾಗೂ ಒಂದು ಅಡುಗೆ ಕೋಣೆ ಇಷ್ಟೇ ಅವರ ಮನೆ. ಮನೆಯ ಅಂಗಳದ ಒಂದು ಮೂಲೆಯಲ್ಲಿ ಬಟ್ಟೆಗಳನ್ನು ಕಟ್ಟಿ ಮಾಡಿದ ಮರೆಯೇ ಬಾತ್‌ರೂಮ…. ನೆರೆಯ ಮನೆಗಳ ಹೆಂಗಸರಿಗೆ ಸಣ್ಣ ಪುಟ್ಟ ಸಹಾಯ ಮಾಡಿ ಕೊಟ್ಟರೆ, ಅಂಗಡಿಯಿಂದ ಸಾಮಾನು ಖರೀದಿಸಿ ತಂದರೆ ಅವರು ಅಷ್ಟಿಷ್ಟು ತಿನ್ನಲು ಕೊಟ್ಟು ಟಿ.ವಿ ನೋಡಲು ಬಿಡುತ್ತಿದ್ದರು.

ಶಾಲೆಗೆ ಬಾರದಿರಲು ಇದೂ ಒಂದು ಕಾರಣವಾಗಿತ್ತು. ಕೂಲಿ ಕೆಲಸದವರಾದ ಅಪ್ಪ, ಅಮ್ಮ ಇಬ್ಬರೂ ಕುಡುಕರು. ಮನೆಯಲ್ಲಿ ಇವರ ಜೊತೆ ಅವರ ಅಜ್ಜಿಯೂ ಇದ್ದರು. ಹಾಜರಾತಿ ಕೊರತೆಯ ಜೊತೆ, ಪರೀಕ್ಷೆಗೂ ಹಾಜರಾಗದೇ ಅವಳ ವಿದ್ಯಾಭ್ಯಾಸ ಅಲ್ಲಿಗೆ ಕೊನೆಯಾಯಿತು. ನಾವು ಎಷ್ಟೇ ಪ್ರಯತ್ನಪಟ್ಟರೂ ಅವಳನ್ನು ಶಾಲೆಗೆ ಮರಳಿ ತರುವಲ್ಲಿ ಯಶಸ್ವಿಯಾಗಲಿಲ್ಲ. ಒಂದೆರಡು ವರ್ಷ ಕಳೆಯಿತು. ಅವಳ ತಂಗಿ ಶಾರದಾ ಒಂಬತ್ತನೆಯ ತರಗತಿಗೆ ದಾಖಲಾದಳು. ಜೂನ್‌ ತಿಂಗಳಲ್ಲಿ ಶಾಲೆ ಪ್ರಾರಂಭವಾಗಿ ಒಂದೆರಡು ತಿಂಗಳಾಗಿತ್ತಷ್ಟೇ. ಇದ್ದಕ್ಕಿದ್ದಂತೆ ಶಾರದಾ ಕೂಡ ಗೈರುಹಾಜರಾದಳು. ಒಂದೆರಡು ದಿನ ಅವಳು ಕಾಣದಿದ್ದಾಗ ಉಳಿದ ವಿದ್ಯಾರ್ಥಿಗಳಲ್ಲಿ ಕೇಳಿದೆ. “”ಮೇಡಂ, ಅವರನ್ನೆಲ್ಲ ಅನಾಥಾಶ್ರಮಕ್ಕೆ ಸೇರಿಸಿದ್ದಾರೆ. ಅವರ ಅಜ್ಜಿ ಮಡಿಕೇರಿಯಲ್ಲಿರುವ ನೆಂಟರ ಮನೆಗೆ ಹೋಗಿದ್ದಾರೆ” ಎಂದರು ಅವರು. ಈ ಬಗ್ಗೆ ಕೇಳುವಾಗ ನಮ್ಮ ಮುಖ್ಯಶಿಕ್ಷಕರು, ಅವಳ ಅಪ್ಪ ಕೆಲವು ತಿಂಗಳ ಹಿಂದೆ ತೀರಿ ಹೋದರೆಂದೂ, ಕೆಲವು ದಿನಗಳ ಹಿಂದೆ ಅಮ್ಮ ಕೂಡ ಮರಣ ಹೊಂದಿದರೆಂದೂ, ಗ್ರಾಮ ಪಂಚಾಯತಿಯವರು ಈ ಮಕ್ಕಳನ್ನು ತಾಲೂಕು ಕೇಂದ್ರದ ಅನಾಥಾಶ್ರಮಕ್ಕೆ ಸೇರಿಸಿದ್ದಾರೆಂದೂ ತಿಳಿಸಿದರು. ನಮಗೆಲ್ಲ ಬಹಳ ಬೇಸರವಾಯಿತು.

ಅದಾಗಿ ಸ್ವಲ್ಪ ಸಮಯದ ನಂತರ ನನಗೆ ಕ್ಷೇತ್ರ ಸಂಪನ್ಮೂಲ ಕೇಂದ್ರದಲ್ಲಿ ಒಂದು ತರಬೇತಿಯಿತ್ತು. ಐದು ದಿನಗಳ ಆ ತರಬೇತಿಯಲ್ಲಿ ಒಂದು ಪ್ರಾಜೆಕr… ತಯಾರಿಸಬೇಕಿತ್ತು. ಆ ತರಬೇತಿ ಕೇಂದ್ರದ ಆಸುಪಾಸಿನ ಯಾವುದಾದರೂ ಒಂದು ಸಂಸ್ಥೆಯ ಕ್ಷೇತ್ರಾಧ್ಯಯನ ಮಾಡಿ ಅದರ ಬಗ್ಗೆ ನಿರ್ದಿಷ್ಟ ಮಾನದಂಡಗಳಲ್ಲಿ ಒಂದು ರಿಪೋರ್ಟ್‌ ನೀಡಬೇಕಿತ್ತು. ನಮ್ಮ ಗುಂಪಿನವರು ಸಮೀಪದ ಸರಕಾರಿ ಪ್ರೌಢಶಾಲೆಯ ಗ್ರಂಥಾಲಯದ ಕುರಿತು ಪ್ರಾಜೆಕ್ಟ್ ರಿಪೋರ್ಟ್‌ ತಯಾರಿಸಲೆಂದು ಅಲ್ಲಿಗೆ ತೆರಳಿದೆವು. ಅಲ್ಲಿನ ಗ್ರಂಥಾಲಯ ವಿಶಾಲವಾಗಿತ್ತು. ಒಂದು ಕ್ಲಾಸ್‌ರೂಮ್‌ನಲ್ಲಿ ಇರುವಷ್ಟು ಬೆಂಚು-ಡೆಸ್ಕಾಗಳು ಅಲ್ಲಿದ್ದವು. ಅಷ್ಟರಲ್ಲಿ ಗ್ರಂಥಾಲಯದ ಅವಧಿಗೆಂದು ಆ ಶಾಲೆಯ ಒಂಬತ್ತನೆಯ ತರಗತಿಯ ವಿದ್ಯಾರ್ಥಿಗಳು ಗ್ರಂಥಾಲಯದ ಉಸ್ತುವಾರಿ ವಹಿಸಿದ್ದ ಸಂಗೀತ ಶಿಕ್ಷಕಿಯ ಜೊತೆ ಅಲ್ಲಿಗೆ ಬಂದರು. ನಮ್ಮ ತಂಡದ ಸದಸ್ಯರನ್ನು ಅವರಿಗೆ ಪರಿಚಯಿಸಿದೆವು. ನಾವು ಬಂದ ಉದ್ದೇಶ ಹೇಳಿದೆವು. ಗ್ರಂಥಾಲಯದ ಸದುಪಯೋಗದ ಕುರಿತು ನಾನು ವಿದ್ಯಾರ್ಥಿಗಳನ್ನುದ್ದೇಶಿಸಿ ಸಣ್ಣದೊಂದು ಭಾಷಣ ಮಾಡಿದೆ.

ಅದಾದ ಮೇಲೆ ನಮ್ಮ ತಂಡದ ಸದಸ್ಯರು ವಿದ್ಯಾರ್ಥಿಗಳಲ್ಲಿ ಒಂದು ಪ್ರಶ್ನಾವಳಿಗೆ ಉತ್ತರ ಕೇಳಿ ದಾಖಲಿಸಿಕೊಂಡರು. ಆ ಅವಧಿ ಮುಗಿದಾಗ ವಿದ್ಯಾರ್ಥಿಗಳು ತಮ್ಮ ತರಗತಿಗೆ ಹಿಂತಿರುಗಿದರು. ಅಷ್ಟರಲ್ಲಿ ಇಬ್ಬರು ಹುಡುಗಿಯರು ನನ್ನ ಬಳಿ ಬಂದರು. ಅವರಲ್ಲೊಬ್ಬಳು “ನಮಸ್ತೇ ಮೇಡಂ’ ಎಂದಳು. “”ನೀನು ರಾಜೇಶ್ವರಿ.. ಅಲ್ಲಲ್ಲ… ವಾಣಿ ಅಲ್ವಾ?” ಎಂದು ಕೇಳಿದೆ. “”ರಾಜೇಶ್ವರಿ…” ಎಂದವಳೇ ಬಿಕ್ಕಿ ಬಿಕ್ಕಿ ಅಳಲಾರಂಭಿಸಿದಳು. ಸರಿಯಾಗಿ ಶಾಲೆಗೆ ಬರುತ್ತಿದ್ದರೆ ಅವಳು ಈಗ ಡಿಗ್ರಿಯಲ್ಲಿರಬೇಕಿತ್ತು. ಆದರೆ, ಈಗ ಒಂಬತ್ತನೆಯ ತರಗತಿಯಲ್ಲಿದ್ದಳು. ತನ್ನ ಈಗಿನ ಅನಾಥ ಸ್ಥಿತಿಯನ್ನು ನೆನೆದೋ, ಅವಳ ಬಗ್ಗೆ ಕಾಳಜಿಯಿದ್ದ ನನ್ನನ್ನು ಕಂಡಾಗ ಆಪ್ತರೊಬ್ಬರನ್ನು ಕಂಡ ಭಾವುಕತೆಯಿಂದಲೋ ಅವಳು ನಿಯಂತ್ರಣವಿಲ್ಲದೇ ಅತ್ತುಬಿಟ್ಟಳು. ಇತರ ಶಿಕ್ಷಕರು ನೋಡುತ್ತಾರೆಂಬ ಅಳುಕಾದರೂ ನನಗೂ ಕಣ್ಣೀರು ಬಂತು. ಒಮ್ಮೆಲೇ ಅವಳು ಈ ರೀತಿ ವರ್ತಿಸಿದ್ದನ್ನು ಕಂಡ ಆ ಶಾಲೆಯ ಶಿಕ್ಷಕಿಗೆ ದಿಗಿಲಾಯಿತು. ನಾನು ವಿಷಯ ತಿಳಿಸಿದೆ. ರಾಜೇ ಶ್ವ ರಿಯನ್ನು ಸಂತೈಸಿ ಧೈರ್ಯ ಹೇಳಿದೆ. “”ಚೆನ್ನಾಗಿ ಕಲಿತು, ಒಂದು ಉದ್ಯೋಗ ಗಿಟ್ಟಿಸಿಕೊಳ್ಳಲು ಪ್ರಯತ್ನಿಸಬೇಕು” ಎಂದೆ. ತಲೆಯಲ್ಲಾಡಿಸಿದಳು. ಸ್ವಲ್ಪ ಹೊತ್ತು ನನ್ನೊಂದಿಗೆ ಮಾತನಾಡಿದ ಬಳಿಕ ಅವಳಿಗೆ ಸಮಾಧಾನವಾಗಿರಬೇಕು. ವಿದಾಯ ಹೇಳಿ ತನ್ನ ತರಗತಿಗೆ ಹೊರಟಳು. ನನಗೆ ಮನಸ್ಸು ಭಾರವಾಗಿತ್ತು.

ತರಬೇತಿ ಮುಗಿಸಿ ಶಾಲೆ ಮರಳಿದ ದಿನ ಸಹೋದ್ಯೋಗಿಗಳಲ್ಲಿ ಈ ವಿಷಯ ಹಂಚಿಕೊಂಡೆ. ಅವರೂ ಅವಳ ಪರಿಸ್ಥಿತಿಗೆ ಮರುಗಿದರು. ಹೆಣ್ಣುಮಗಳು ಆ ಬಡತನದ ಮನೆಯಲ್ಲಿ ಇರುವುದಕ್ಕಿಂತ ಅನಾಥಾಶ್ರಮವೇ ಅವರಿಗೆ ಸುರಕ್ಷಿತ ಎಂದು ಕೊನೆಗೆ ಸಮಾಧಾನಪಟ್ಟೆವು. ಯಾವುದೇ ಮಗು ಈ ರೀತಿ ಹೆಪ್ಪುಗಟ್ಟಿದ ದುಃಖದೊಂದಿಗೆ ನಮ್ಮೆದುರು ಬರುವ ಪರಿಸ್ಥಿತಿ ಬಾರದಿರಲಿ ಎಂದು ಮನಸಾರೆ ಪ್ರಾರ್ಥಿಸಿದೆ.

ಜೆಸ್ಸಿ ಪಿ. ವಿ.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

  • ದಿನನಿತ್ಯ ಬಳಸುವ ಸೊಪ್ಪಿಗೂ ಹೆಣ್ಣಿಗೂ ಅವಿನಾಭಾವ ಸಂಬಂಧವಿದೆ. ಪ್ರಕೃತಿದತ್ತವಾಗಿರುವ ತಾಯ್ತನದ ಕಾರಣದಿಂದ ಕಾಪಿಡುವ, ಬೆಳೆಸುವ, ಪಾಲಿಸುವ ಗುಣಗಳು ಅವಳಲ್ಲಿ...

  • ಪ್ರತಿಯೊಬ್ಬ ಮಹಿಳೆಯೂ ತಾನು ಸೌಂದರ್ಯವತಿಯಾಗಿ, ವಿಭಿನ್ನವಾಗಿ ಮತ್ತು ಪರಿಪೂರ್ಣವಾಗಿ ಕಾಣಬೇಕೆಂದು ಬಯಸುತ್ತಾಳೆ ! ಸೀರೆ ಉಟ್ಟರೆ ನಾರಿಯ ಅಂದ ದುಪ್ಪಟ್ಟಾಗುತ್ತದೆ...

  • ರೊಟ್ಟಿ ಜನಪ್ರಿಯ ಉಪಹಾರಗಳಲ್ಲಿ ಒಂದು. ಬೆಳಗ್ಗಿನ ಉಪಹಾರಕ್ಕೆ ಶೀಘ್ರವಾಗಿ ಮತ್ತು ಸುಲಭವಾಗಿ ತಯಾರಿಸಿಕೊಳ್ಳಬಹುದಾದ ರುಚಿಕರ ರೊಟ್ಟಿ ವೈವಿಧ್ಯ ಇಲ್ಲಿದೆ. ಪಾಲಕ್‌...

  • ಬಾಲಿಶ ಹೇಳಿಕೆಗಳಿಂದ ಟ್ರೋಲ್‌ ಆಗುತ್ತಿರುವ ನಟಿ ಅಲಿಯಾ ಭಟ್‌, ಈ ಬಾರಿ ತನ್ನ "ಹೃದಯವಂತಿಕೆ'ಯ ಕಾರ್ಯದಿಂದ ಸಿನಿಪ್ರಿಯರ ಮೆಚ್ಚುಗೆಗೆ ಪಾತ್ರವಾಗಿದ್ದಾರೆ. ಹೌದು,...

  • ಶಾಲೆಯಲ್ಲಿ ತರಗತಿ ಪ್ರಾರಂಭವಾಗುವ ಮೊದಲು ಕ್ಷೀರಭಾಗ್ಯದ ಹಾಲನ್ನು ವಿತರಿಸುತ್ತೇವೆ. ಒಬ್ಬಳು ಬಂದು ಇನ್ನೊಂದು ಹುಡುಗಿಯ ಹೆಸರು ಹೇಳಿ, ""ಮೇಡಂ, ಅವಳು ಹಾಲು ಕುಡಿಯುವುದಿಲ್ಲವಂತೆ''...

ಹೊಸ ಸೇರ್ಪಡೆ