ಪ್ರಯತ್ನ ಅನ್ನುವ ಟರ್ನಿಂಗ್‌ ಪಾಯಿಂಟ್

Team Udayavani, Sep 20, 2019, 5:00 AM IST

ಪ್ರತಿಯೊಬ್ಬರ ದೃಷ್ಟಿಯಲ್ಲಿಯೂ ಜೀವನದ ಅರ್ಥ ಬೇರೆಯಾಗಿ ಕಾಣುತ್ತದೆ. ಯಾರಿಗೆ ಹೇಗೆ ಕಂಡರೂ ಜೀವನದ ಅಂತ್ಯವೆಂಬುದು ಸಾವೇ ಆಗಿರುತ್ತದೆ. ಸಾವಿಗಿಂತ ಮೊದಲು ಏನಾದರೂ ಸಾಧಿಸಬೇಕು ಎಂಬ ಛಲ ಇದ್ದಾಗ ಮಾತ್ರ ಜೀವನ ಸಾರ್ಥಕವಾಗುತ್ತದೆ. ಅದೆಷ್ಟೋ ಜನರು ಈ ಜೀವನವೇ ಸಾಕು ಸಾಕಾಗಿದೆ ಎಂದು ಸುಮ್ಮನೆ ಕುಳಿತಿರುತ್ತಾರೆ. ಇನ್ನೆಷ್ಟೋ ಜನರು ಜೀವನದಲ್ಲಿ ಬರುವ ಕಷ್ಟಗಳನ್ನು ಎದುರಿಸಲಾಗದೆ ಸಾವಿನ ಬಾಗಿಲಿಗೆ ತಾವೇ ಶರಣಾಗುತ್ತಾರೆ. ಜೀವನವೆಂದರೇ ಇದೆಯಾ? ಹಾಗಾದರೆ, ಮನುಷ್ಯರಾಗಿ ಏಕೆ ಹುಟ್ಟಿದೆವು? ಎಂದು ತಮ್ಮನ್ನು ತಾವೇ ಪ್ರಶ್ನಿಸಿಕೊಳ್ಳಬೇಕಾಗುತ್ತದೆ.

ಜೀವನವೆಂಬುದು ಅದೆಷ್ಟೋ ಏಳು-ಬೀಳುಗಳನ್ನು ಕಂಡು ಕೊನೆಗೆ ಸಾಧನೆಯ ಮೆಟ್ಟಿಲೇರಿ ಸಾಧಿಸಿದ ಖುಷಿಯನ್ನು ಸಾಯುವ ತನಕ ನಿಭಾಯಿಸುವುದು ಕೂಡ ಒಂದು ತರಹದಲ್ಲಿ ಜೀವನ. ಡಾ. ಎ. ಪಿ. ಜೆ . ಅಬ್ದುಲ್‌ ಕಲಾಂ ಅವರು ಹೇಳಿದ ಹಾಗೆ ನಾವು ಒಬ್ಬ ಯಶಸ್ಸನ್ನು ಕಂಡ ವ್ಯಕ್ತಿಯ ಚರಿತ್ರೆಯನ್ನು ಓದಿದಾಗ ನಮಗೆ ಕೇವಲ ಸಂದೇಶ ಸಿಗುತ್ತದೆ, ಹಾಗೆಯೇ ಸೋಲನ್ನು ಕಂಡ ವ್ಯಕ್ತಿಯ ಚರಿತ್ರೆಯನ್ನು ಓದಿದಾಗ ಮಾತ್ರ ನಾವು ಯಶಸ್ಸನ್ನು ಹೇಗೆ ಪಡೆಯಬೇಕೆಂಬ ಕಲ್ಪನೆ ಬರುತ್ತದೆ.

ಯಾರಿಗೆ ಗೊತ್ತು, ನಮ್ಮ ಜೀವನದಲ್ಲಿ ನಾವು ಕಂಡ ಸೋಲೇ ಮುಂದೊಂದು ದಿನ ನಮ್ಮ ಗೆಲುವಾಗಿ ಎದ್ದು ನಿಲ್ಲಬಹುದು. “ಸೋಲೇ ಜೀವನದ ಸೋಪಾನ’ ಎನ್ನುವ ಹಾಗೆ ನಾವು ಕಂಡ ಸೋಲೇ ಜೀವನದ ಟರ್ನಿಂಗ್‌ ಪಾಯಿಂಟ್‌ ಆದರೂ ಆಶ್ಚರ್ಯವೇನಿಲ್ಲ . “ಮರಳಿ ಯತ್ನವ ಮಾಡು’ ಎಂಬ ಮಾತಿದೆ ಹಾಗೆಯೇ ಜೀವನದಲ್ಲಿ ಸೋತಾಗ ಕುಗ್ಗದೆ, ಗೆದ್ದಾಗ ಹಿಗ್ಗದೆ ಏನೇ ಆದರೂ ನಿಭಾಯಿಸುತ್ತೇನೆ ಎಂಬ ಧೈರ್ಯವೇ ಜೀವನದ ಸಾಕ್ಷಾತ್ಕಾರವಾಗಬಹುದು.

ಅಧ್ಯಾಪಕರು ಒಮ್ಮೆ ತರಗತಿಯಲ್ಲಿ ಹೇಳಿದ ಉದಾಹರಣೆ: ತರಗತಿಯಲ್ಲಿದ್ದ ಎಲ್ಲ ವಿದ್ಯಾರ್ಥಿಗಳು ಬಹಳ ಉತ್ಸುಕರಾಗಿ ಪಾಠವನ್ನು ಕೇಳುವಾಗ ಕೊನೆಯ ಬೆಂಚಿನ ವಿದ್ಯಾರ್ಥಿ ಸುಮ್ಮನೆ ತನ್ನಷ್ಟಕ್ಕೆ ಏನೋ ಮಾಡುತ್ತಿದ್ದುದನ್ನು ಕಂಡ ಶಿಕ್ಷಕರು ಆ ವಿದ್ಯಾರ್ಥಿ ಹತ್ತಿರ ಬಂದು, “ಯಾಕೋ ಪಾಠ ಕೇಳುತ್ತಿಲ್ಲ?’ ಎಂದು ಗದರಿಸಿ ಒಂದೆರಡು ಬೈದರು. ಆ ಬೈಗುಳದಲ್ಲಿ ಒಂದು ವಿಷಯ ಮಾತ್ರ ಆತ ಗಂಭೀರವಾಗಿ ತೆಗೆದುಕೊಂಡ. ಶಿಕ್ಷಕರು ಆತನಿಗೆ, “ನೋಡು, ನೀನು ಏಕೆ ಅವರಂತೆ ಇಲ್ಲ. ಎಲ್ಲರೂ ಪಾಠ ಕೇಳುವಾಗ ನೀನೇನೋ ಮಾಡುತ್ತಿರುತ್ತೀಯಾ? ’ ಎಂದಾಗ ಆತನಿಗೆ ಆ ಮಾತು ಹೊಸ ಹುರುಪನ್ನು ನೀಡಿತು. ಅಂದೇ ಆತ ತನ್ನನ್ನು ತಾನು ಪ್ರಶ್ನಿಸಿಕೊಂಡು ತಾನೇಕೆ ಬೇರೆಯವರ ಹಾಗಿರಬೇಕು, ತನ್ನ ಹಾಗೆ ಏಕೆ ಬೇರೆಯವರಿಲ್ಲ- ಎಂಬ ಶಿಕ್ಷಕರ ಆ ಮಾತು ಆ ಮಗುವಿಗೆ ಟರ್ನಿಂಗ್‌ ಪಾಯಿಂಟ್‌ ಆಗಿ ಕಂಡಿತು. ಅಂದೇ ಆತ ಬೇರೆಯವರಿಗಿಂತ ಭಿನ್ನವಾಗಿ ತನ್ನನ್ನು ತಾನು ಹೊಸ ಕೆಲಸದಲ್ಲಿ ಹೇಗೆ ತೊಡಗಿಸಿ ಕೊಂಡ- ಎಂದು ತರಗತಿಯಲ್ಲಿ ಪ್ರಾಧ್ಯಾಪಕರು ಹೇಳಿದರು.

ಸ್ನೇಹಿತರೆ, ಜೀವನದಲ್ಲಿ ಅದೆಷ್ಟು ಕಷ್ಟ ಬಂದರೂ ಎದುರಿಸುವ ಛಲವಿದ್ದಾಗ ಮಾತ್ರ ನಾವು ಗೆಲುವು ಸಾಧಿಸಲು ಸಾಧ್ಯ. ಪ್ರಯತ್ನವೆಂಬುದು ಜೀವನದ ಮಂತ್ರವಾಗಬೇಕು. ನ‌ಮ್ಮ ಬಗ್ಗೆ ನ‌ಮಗೆ ಹೆಮ್ಮೆ ಇರಬೇಕು. ಯಾವತ್ತೂ ತಮ್ಮ ಜೀವನವನ್ನು ಬೇರೆಯವರೊಂದಿಗೆ ಹೋಲಿಸಿಕೊಂಡು ನೋಡದೆ, ಬೇರೆಯವರ ಹಾಗೆ ನಾವೇಕೆ ಇರಬೇಕು, ನಮಗಾಗಿ ನಾವು ಏಕೆ ಬದುಕಬೇಕು ಎಂಬ ದೃಷ್ಟಿಕೋನ ನಮ್ಮಲ್ಲಿರಬೇಕು. ಜೀವನದಲ್ಲಿ ಕಂಡ ಸೋಲು ಜೀವನದ ಮುಖ್ಯ ಟರ್ನಿಂಗ್‌ ಪಾಯಿಂಟ್‌ ಕೂಡ ಆಗಬಹುದು.

ಎ. ಸಿ. ಶೋಭಾ
ಎಂಪಿಎಂ ಪ್ರಥಮ ದರ್ಜೆ ಕಾಲೇಜು, ಕಾರ್ಕಳ


ಈ ವಿಭಾಗದಿಂದ ಇನ್ನಷ್ಟು

  • ಬರೋಬ್ಬರಿ ಒಂದು ತಿಂಗಳಿನಿಂದ ನೆಗಡಿಯ ಕಾಟ. ಅದೆಷ್ಟೋ ವೈದ್ಯ ಮಹಾಶಯರನ್ನೂ ಕಂಡರೂ, ಬಗೆ ಬಗೆಯ ಗುಳಿಗೆ ನುಂಗಿದರೂ ನನಗೆ ನೆಗಡಿಯಿಂದ ಮುಕ್ತಿ ದೊರಕಲಿಲ್ಲ. ಹೀಗಿರಲು...

  • ಜೀವನದಲ್ಲಿ ಮೊದಲ ಬಾರಿಗೆ ಮೊಬೈಲನ್ನು ಬಿಟ್ಟು ಒಂದು ವಾರ ಕಳೆದ ಅನುಭವ ಈ ರಜೆಯಲ್ಲಿ ನನ್ನದಾಗಿತ್ತು. ಇಂದು ಒಂದು ಸಣ್ಣ ಕಲ್ಲನ್ನು ಈ ಕಡೆಯಿಂದ ಆಕಡೆ ಇಟ್ಟರೂ ಫೋಟೋ...

  • ನಾನು ನೋಡಿದ ಮೊದಲ ವೀರ ಅಂತಾರಲ್ಲ, ಹಾಗೆಯೇ ನನ್ನ ಜೀವನದಲ್ಲಿ ನಾನು ಕಂಡ ಮೊದಲನೆಯ ಧೀರ ನನ್ನ ಅಪ್ಪ. ಎಲ್ಲರ ಜೀವನದಲ್ಲಿ ಒಬ್ಬೊಬ್ಬರು ಆದರ್ಶ ವ್ಯಕ್ತಿಗಳಿರುತ್ತಾರೆ....

  • ಮಳೆ ಒಂದೇ ಸಮನೆ ಸುರಿಯುತ್ತಿತ್ತು. ನಾನು ನನ್ನ ಗೆಳತಿಯರೊಂದಿಗೆ ಬ್ಯಾಗ್‌ ಅನ್ನು ಎದೆಗವಚಿಕೊಂಡು ಒಂದು ಕೊಡೆಯಲ್ಲಿ ಇಬ್ಬರು ಎಂಬಂತೆ ನಾಲ್ಕು ಜನ ಬರುತ್ತಿದ್ದೆವು....

  • ಸ್ಪಿಸ್‌ (SPYSS-Shri Pathanjali Yoga Shikshana Samithi) ಎಂದ ಮೇಲೆ ಎಲ್ಲರಿಗೂ ನೆನಪಾಗುವುದು ಪತಂಜಲಿ ಯೋಗ ಸೇವಾ ಸಮಿತಿ. ನನಗೆ ಕೂಡ ಯೋಗ ಕಲಿಯಬೇಕೆಂಬ ಆಸೆ ಇತ್ತು. ಈ ಆಸೆಯ ಈಡೇರಿಕೆ ಆದದ್ದು...

ಹೊಸ ಸೇರ್ಪಡೆ