CONNECT WITH US  

ಕಪ್ಪುಹಣ ತಡೆಗೆ ಮೋದಿ ಸರಕಾರ ಹಲ ಕಠಿಣ ಕ್ರಮ

ನವದೆಹಲಿ: 2014ರ ಲೋಕಸಭೆ ಚುನಾವಣೆಯಲ್ಲಿ ವಿದೇಶದಲ್ಲಿ ಭಾರತೀಯರು ಇಟ್ಟಿರುವ ಕಪ್ಪುಹಣವನ್ನು ವಾಪಸ್‌ ತರುವ ಭರವಸೆಯೊಂದಿಗೆ ಮೋದಿ ಸರಕಾರ ಅಧಿಕಾರಕ್ಕೆ ಬಂದಿತ್ತು. ಒಂದು ವೇಳೆ ಅಧಿಕಾರಕ್ಕೆ ಬಂದರೆ, ಪ್ರತಿಯೊಬ್ಬನ ಖಾತೆಗೆ 15 ಲಕ್ಷ ರೂ. ಹಾಕುವುದಾಗಿ ಭರವಸೆ ನೀಡಿತ್ತು. ಆದರೆ, ಆದರೆ, ಕೇಂದ್ರದಲ್ಲಿ ಅಧಿಕಾರಕ್ಕೆ ಬಂದು 2 ವರ್ಷಗಳೇ ಕಳೆದರೂ ವಿದೇಶಿ ಕಪ್ಪುಹಣ ಭಾರತಕ್ಕೆ ಬಂದಿಲ್ಲ ಎಂಬ ಟೀಕೆಗೆ ಸರಕಾರ ಗುರಿಯಾಗಿದೆ. ಇದರ ಹೊರತಾಗಿಯೂ ಸರಕಾರ ಕಪ್ಪುಹಣ ಮಟ್ಟಹಾಕು ಹಲವು ಕ್ರಮಗಳನ್ನು ಕೈಗೊಂಡಿದೆ.

ಅವುಗಳ ಪೈಕಿ, ಸ್ವಿಸ್‌ ಖಾತೆಯಲ್ಲಿ ಹಣ ಇಟ್ಟವರ ಹೆಸರುಗಳ ಘೋಷಣೆ, ವಿಶೇಷ ತನಿಖಾ ತಂಡ ರಚನೆ, ಕಪ್ಪುಹಣ ನಿಗ್ರಹ ಕಾಯ್ದೆ, ರಚನೆ  ದೇಶೀಯ ಕಪ್ಪುಹಣ ಘೋಷಣೆ ಅವಕಾಶ ಇತ್ಯಾದಿ. ಇದುವೆಗೆ 1.40 ಲಕ್ಷ ಕೋಟಿ ರೂ. ಕಪ್ಪುಹಣವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಸರಕಾರ ಹೇಳಿಕೊಂಡಿದೆ. 

ಮೊದಲನೇಯದಾಗಿ ವಿದೇಶದಲ್ಲಿ ಭಾರತೀಯರು ಇಟ್ಟಿರುವ ಕಪ್ಪುಹಣವನ್ನು ಭಾರತಕ್ಕೆ ತರಲು ನಿಟ್ಟಿನಿಂದ ಕೇಂದ್ರ ಸರಕಾರ ಮುಂದಾಯಿತು. ಕಪ್ಪುಹಣದ ತನಿಖೆಗಾಗಿ 2014ರ ಮೇ 27ರಂದು ವಿಶೇಷ ತನಿಖಾ ತಂಡವನ್ನು ಮೋದಿ ಸರಕಾರ ರಚನೆ ಮಾಡಿತು. ವಿದೇಶಿ ಬ್ಯಾಂಕ್‌ಗಳಲ್ಲಿ ಇಟ್ಟಿರುವ 13,000 ಕೋಟಿ ರೂ. ಕಪ್ಪುಹಣವನ್ನು ಸರಕಾರ ಪತ್ತೆಹಚ್ಚಿದೆ. ತೆರಿಗೆ ಅಧಿಕಾರಿಗಳು ವಿದೇಶದಲ್ಲಿ 700 ಮಂದಿ ಭಾರತೀಯರಿಗೆ ಸಂಬಂಧಿಸಿದ ಖಾತೆಗಳಲ್ಲಿ ಇರುವ  5,000  ಕೋಟಿ ರೂ. ಹಣವನ್ನು ಬಯಲಿಗೆಳೆದಿದ್ದಾರೆ. ಎಚ್‌ಎಸ್‌ಬಿಸಿ, ಜಿನೆವಾ ಬ್ಯಾಂಕ್‌ಗಳಲ್ಲಿ ಭಾರತೀಯರು ಇಟ್ಟಿರುವ 400 ಪ್ರಕರಣಗಳು ಬೆಳಕಿಗೆ ಬಂದಿದ್ದು,  8,186 ಕೋಟಿ ರೂ. ಹಣ ಇಟ್ಟಿರುವುದನ್ನು ಪತ್ತೆ ಮಾಡಲಾಗಿದೆ.

ಕಪ್ಪು ಹಣ ನಿಗ್ರಹ ಕಾಯ್ದೆ: ಕಪ್ಪು ಹಣದ ವರ್ಗಾವಣೆಗೆ ಕಡಿವಾಣ ಹಾಕುವ ನಿಟ್ಟಿನಿಂದ ಕೇಂದ್ರ ಸರಕಾರ 2015ರ ಮೇ 26ರಂದು ಕಪ್ಪು ಹಣ ಕಾಯ್ದೆಯನ್ನು ಸಂಸತ್ತಿನಲ್ಲಿ ಅಂಗೀಕರಿಸಿದೆ.

ಸ್ವದೇಶಿ ಕಪ್ಪು ಹಣ ಘೋಷಣೆ ಯೋಜನೆ: ವಿದೇಶದಲ್ಲಿ ಮಾತ್ರವಲ್ಲ  ಸ್ವದೇಶದಲ್ಲಿ ಇಟ್ಟಿರುವ ಕಪ್ಪುಹಣವನ್ನು ಬಯಲಿಗೆಳೆಯುವ ನಿಟ್ಟಿನಿಂದ ಕೇಂದ್ರ ಸರಕಾರ ಕಪ್ಪು ಹಣ ಘೋಷಣೆ ಯೋಜನೆಯನ್ನು ಜಾರಿಗೆ ತಂದಿದೆ. ಈ ಯೋಜನೆಯ ಅಡಿಯಲ್ಲಿ ಕಪ್ಪು ಹಣ ಘೋಷಣೆಗೆ ಸೆ.30 ಕಡೆಯ ದಿನವಾಗಿತ್ತು. ಕಪ್ಪು ಹಣ ಘೋಷಣೆ ಮಾಡಿಕೊಂಡವರ ಹೆಸರನ್ನು ಬಹಿರಂಗ ಪಡಿಸುವುದಿಲ್ಲ. ಶೇ. 45ರಷ್ಟು ದಂಡ ಪಾವತಿಸಿದರೆ ಸಾಕು ಎಂದು ಭರವಸೆ ನೀಡಿತ್ತು.  ಈ ಯೋಜನೆಗೆ ಸಾಕಷ್ಟು ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು ಅಡಿಯಲ್ಲಿ 65,000 ಕೋಟಿ ರೂ. ಸ್ವದೇಶಿ ಕಪ್ಪುಹಣ ಘೋಷಣೆಯಾಗಿದೆ. 

ಇದರ ಬೆನ್ನಲ್ಲೇ  500 ರೂ., ಮತ್ತು 100 ರೂ. ನೋಟುಗಳ ಚಲಾವಣೆಗೆ ನಿಷೇಧ ಹೇರಿದೆ.

500, 1000 ರದ್ದತಿಗೆ ಹೋರಾಡಿದ್ದ ರಾಮ್‌ದೇವ್‌
ಕಾಂಗ್ರೆಸ್‌ ನೇತೃತ್ವದ ಯುಪಿಎ ಸರಕಾರದ ಅವಧಿಯಲ್ಲಿ ಯೋಗಗುರು ಬಾಬಾ ರಾಮ್‌ದೇವ್‌ ಕಪ್ಪುಹಣದ ವಿರುದ್ಧ ಹೋರಾಟ ನಡೆಸಿದ್ದರು. ಈ ಹೋರಾಟದಲ್ಲಿ ಎರಡು ಅಂಶಗಳನ್ನು ಅವರು ಪ್ರತಿಪಾದಿಸಿದ್ದರು. ಮೊದಲನೆಯದಾಗಿ 500 ಹಾಗೂ 10 ಸಾವಿರ ರೂ. ಮುಖಬೆಲೆಯ ನೋಟುಗಳನ್ನು ಸಂಪೂರ್ಣವಾಗಿ ನಿಷೇಧಿಸಬೇಕು ಎಂಬುದು ಪ್ರಮುಖವಾಗಿತ್ತು. ಎರಡನೇಯದಾಗಿ ದೇಶದಲ್ಲಿ ತೆರಿಗೆ ವಂಚಿಸಿ ವಿದೇಶಿ ಬ್ಯಾಂಕ್‌ಗಳಲ್ಲಿಟ್ಟಿರುವ ಕಪ್ಪುಹಣವನ್ನು ದೇಶಕ್ಕೆ ವಾಪಸ್‌ ತರಬೇಕು ಎಂದು ರಾಮ್‌ದೇವ್‌ ಪಟ್ಟು ಹಿಡಿದಿದ್ದರು. ಇದಕ್ಕೆ ದೇಶಾದ್ಯಂತ ಸಾಕಷ್ಟು ಬೆಂಬಲ ವ್ಯಕ್ತವಾಗಿತ್ತು. ಇದಕ್ಕಾಗಿ ಅವರು ದೆಹಲಿಯ ರಾಮಲೀಲಾ ಮೈದಾನದಲ್ಲಿ 2012, ಜೂನ್‌ 3ರಂದು ಅನಿರ್ದಿಷ್ಟ ಬೃಹತ್‌ ಧರಣಿಯನ್ನು ಹಮ್ಮಿಕೊಂಡಿದ್ದರು. ಇದರಲ್ಲಿ ಸುಮಾರು 6-7 ಸಾವಿರ ಬೆಂಬಲಿಗರು ಪಾಲ್ಗೊಂಡಿದ್ದರು. ರಾಮ್‌ದೇವ್‌ ಈ ಹೋರಾಟಕ್ಕೆ  ಅಣ್ಣಾ ಹಜಾರೆ ಹಾಗೂ ಬಿಜೆಪಿ ಮುಖಂಡರು ಬೆಂಬಲ ವ್ಯಕ್ತಪಡಿಸಿದ್ದರು. ಆದರೆ, ಇವರು ಖುದ್ದಾಗಿ ಧರಣಿಯಲ್ಲಿ ಪಾಲ್ಗೊಂಡಿರಲಿಲ್ಲ. ಧರಣಿ ನಡೆಸಲು ಅಂದಿನ ಯುಪಿಎ ಸರಕಾರ ಅವಕಾಶ ನೀಡಿರಲ್ಲಿಲ್ಲ. ಆದರೂ ಸರಕಾರದ ಆದೇಶವನ್ನು ಮೀರಿ ರಾಮ್‌ದೇವ್‌ ಸಹಸ್ರಾರು ಬೆಂಬಲಿಗರೊಂದಿಗೆ ರಾಮ್‌ಲೀಲಾ ಮೈದಾನದಲ್ಲಿ ಧರಣಿ ನಡೆಸಿದ್ದರು. ಬಳಿಕ ರಾತ್ರೋರಾತ್ರಿ ರಾಮ್‌ದೇವ್‌ ಅವರನ್ನು ಪೊಲೀಸರು ಬಂಧಿಸಿ ಧರಣಿಯನ್ನು ಹಿಂಪಡೆಯುವಂತೆ ಮಾಡಿದ್ದರು.

ಸುಳಿವೇ ನೀಡದೆ ಪ್ರಧಾನಿ ಮೋದಿ ಮತ್ತೂಂದು "ಸರ್ಜಿಕಲ್‌ ಸ್ಟ್ರೈಕ್‌'!
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರಕಾರ ಇಂತಹದ್ದೊಂದು ನಿರ್ಧಾರ ಕೈಗೊಳ್ಳಬಹುದು ಎಂದು ಯಾರೂ ಊಹಿಸಿರಲೂ ಇಲ್ಲ. ನಾಲ್ಕೈದು ದಿನಗಳಿಂದ ಹೊಸ 2000 ರೂ. ನೋಟು ಬರಲಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸುದ್ದಿಯಾಗಿತ್ತು. ಈ ಸುದ್ದಿ ಫೇಸ್‌ಬುಕ್‌, ಟ್ವೀಟರ್‌, ವಾಟ್ಸಪ್‌ಗ್ಳಲ್ಲಿ ಭಾರೀ ಸಂಚಲನ ಮೂಡಿಸಿತ್ತು. ಆದರೆ, 2000 ರೂ. ನೋಟು ಚಲಾವಣೆಗೆ ಬರುವ ಬಗ್ಗೆ ಸರಕಾರವಾಗಲಿ, ರಿಸರ್ವ್‌ ಬ್ಯಾಂಕ್‌ ಆಗಲಿ ತುಟಿಪಿಟಿಕ್ಕೆಂದಿರಲಿಲ್ಲ. ಬ್ಯಾಂಕುಗಳಿಗೆ 2000 ರೂ. ನೋಟು ಬರಲಿದೆ ಎಂದಷ್ಟೇ ಮಾಹಿತಿ ಬಂದಿತ್ತು. ಸೋಮವಾರ "ಉದಯವಾಣಿ' ಈ ಸುದ್ದಿಯ ಬೆನ್ನು ಹತ್ತಿ 2000 ರೂ. ನೋಟು ಚಲಾವಣೆಯಾಗುವುದು ಖಚಿತ ಎಂದು ವರದಿ ಮಾಡಿತ್ತು. ದೊಡ್ಡ ಮೊತ್ತದ ನಗದು ನಿರ್ವಹಿಸಲು ಸರಕಾರ ಈ ಕ್ರಮ ಕೈಗೊಳ್ಳುತ್ತಿರಬಹುದು ಎಂದೇ ಆರ್ಥಿಕ ವಲಯ, ತಜ್ಞರು ಕಲ್ಪಿಸಿಕೊಂಡಿದ್ದರು. ಆದರೆ, 500, 1000 ರೂ. ನೋಟು ಹಿಂಪಡೆಯಲಾಗುತ್ತದೆ ಎಂಬ ಬಗ್ಗೆ ಯಾರಿಗೂ ಲವಲೇಶ ಸುಳಿವೂ ಇರಲಿಲ್ಲ. ಮಂಗಳವಾರ ಸಂಜೆಯಷ್ಟೇ ಕೇಂದ್ರ ಸಚಿವ ಸಂಪುಟ ಸಭೆ ಬಳಿಕ ನರೇಂದ್ರ ಮೋದಿ ದೇಶವನ್ನುದ್ದೇಶಿಸಿ ಮಾತನಾಡಲಿದ್ದಾರೆ ಎಂಬ ಸುದ್ದಿ ಹೊರಬಿದ್ದಾಗ, ಏನೋ ದೊಡ್ಡ ಘೋಷಣೆ ಹೊರಬೀಳಲಿದೆ ಎಂಬ ಸುಳಿವು ದೊರೆತದ್ದು. ಮೊದಲಿಗೆ ಕಪ್ಪುಹಣದ ಬಗ್ಗೆ ಪೀಠಿಕೆ ಹಾಕಿ ಮೋದಿ ಮಾತನಾಡತೊಡಗಿದಾಗ ಇದೊಂದು ದಿನನಿತ್ಯದ ಕಸರತ್ತು ಎಂದೇ ಅನಿಸತೊಡಗಿತ್ತು. ಆದರೆ, ಇದ್ದಕ್ಕಿದ್ದಂತೆ ದೊಡ್ಡ ನಿರ್ಧಾರ ಕೈಗೊಳ್ಳುವ ಮೂಲಕ ಮೋದಿ ಇಡೀ ದೇಶಕ್ಕೇ ಶಾಕ್‌ ನೀಡಿದರು.


Trending videos

Back to Top