ಪರಿಪೂರ್ಣ ಪ್ರದರ್ಶನ ಲವ ಕುಶ-ಮಾಗಧ ವಧೆ

Team Udayavani, Aug 2, 2019, 5:02 AM IST

ಯಕ್ಷಗಾನಕ್ಕೆ ತನ್ನದೇ ಆದ ನಿಯಮಾವಳಿಗಳ ಚೌಕಟ್ಟು ಇದೆ. ಅದರಲ್ಲಿಯೂ ಪೌರಾಣಿಕ ಪ್ರಸಂಗವನ್ನು ರಂಗದಲ್ಲಿ ಪ್ರಸ್ತುತಪಡಿಸುವ ಸಂದರ್ಭದಲ್ಲಿ ಸರಿಯಾದ ರೀತಿಯ ಪೂರ್ವ ತಯಾರಿಯೂ ಸಮರ್ಥ ರಂಗ ನಿರ್ದೇಶನದ ಅವಶ್ಯಕತೆಯೂ ಇದೆ ಎನ್ನುವುದು ನಿರ್ವಿವಾದ.

ವೃತ್ತಿಪರ ಕಲಾ ತಂಡಗಳೂ ಸೇರಿದಂತೆ ಯಾವುದೇ ಕಲಾವಿದರು ಪೌರಾಣಿಕ ಪ್ರಸಂಗವೊಂದನ್ನು ಪ್ರಸಂಗ ಚೌಕಟ್ಟಿನೊಳಗೆ ಪ್ರದರ್ಶಿಸಬೇಕೆಂಬ ಬದ್ಧತೆಗೆ ಒಳಪಟ್ಟಾಗ ಮಾತ್ರವೇ ಯಾವುದೇ ಪ್ರಸಂಗ ಕಳೆಗಟ್ಟಲು ಮತ್ತು ನೈಜ ಯಕ್ಷಾಭಿಮಾನಿಗಳ ಮನದಲ್ಲಿ ಅಚ್ಚಳಿಯದೆ ಉಳಿಯುವಲ್ಲಿ ಕಾರಣವಾಗುತ್ತದೆ.

ಇದಕ್ಕೊಂದು ಸೂಕ್ತ ನಿದರ್ಶನವಾಗಿ ಮೂಡಿಬಂದಿದ್ದು ಬಡಗುತಿಟ್ಟಿನ ಅಗ್ರಣಿ ಮೇಳವೆಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಪೆರ್ಡೂರು ಮೇಳದ ಕಲಾವಿದರ ಕೂಡುವಿಕೆಯಲ್ಲಿ ಕುಂಜಾಲು ಸಮೀಪದ ಆರೂರು ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಬಯಲು ರಂಗಮಂದಿರದಲ್ಲಿ ಸಂಪನ್ನಗೊಂಡ “ಕುಶಲವ – ಮಾಗಧ ವಧೆ’ ಎಂಬ ಜನಪ್ರಿಯ ಪೌರಾಣಿಕ ಪ್ರಸಂಗದ ಪ್ರದರ್ಶನ.ಇದು ಒಂದು ರೀತಿಯಲ್ಲಿ ಮುಂದಿನ ಸಾಲಿನ ತಿರುಗಾಟಕ್ಕೆ ಹೊಸ ರೀತಿಯಲ್ಲಿ ಸಜ್ಜುಗೊಂಡ ಪೆರ್ಡೂರು ಮೇಳದ ಮೊಟ್ಟ ಮೊದಲ ಆಟವಾಗಿಯೂ ದಾಖಲಿಸಲ್ಪಟ್ಟಿತು.

ಮೊದಲನೆಯದಾಗಿ ಪ್ರದರ್ಶನಗೊಂಡ ಕುಶ-ಲವ ಪ್ರಸಂಗದಲ್ಲಿ ಭಾಗವತರಾಗಿ ಪ್ರಸನ್ನ ಭಟ್‌ ಬಾಳ್ಕಲ್, ಮದ್ದಳೆಯಲ್ಲಿ ಶಶಿ ಆಚಾರ್ಯ, ಚೆಂಡೆಯಲ್ಲಿ ಕೌಡೂರು ರವಿ ಆಚಾರ್ಯ ಅವರ ಸಮರ್ಥ ಜೋಡಿ ಹಿಮ್ಮೇಳದ ಯಶಸ್ಸಿನ ಪಾಲುದಾರರಾದರು.ಮುಮ್ಮೇಳದಲ್ಲಿ ಶತ್ರುಘ್ನನಾಗಿ ವಿಶ್ವನಾಥ್‌ ಆಚಾರ್ಯ ತೊಂಬೊಟ್ಟು ತಮ್ಮ ಎಂದಿನ ಲವಲವಿಕೆಯ ಕುಣಿತ ಮತ್ತು ಮಾತುಗಾರಿಕೆಯಿಂದ ಪಾತ್ರವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದರು.ಲವನಾಗಿ ಕಾರ್ತಿಕ್‌ ಚಿಟ್ಟಾಣಿ ಹಾಗೂ ಕುಶನಾಗಿ ಕಿರಾಡಿ ಪ್ರಕಾಶ್‌ ಜೋಡಿ ರಂಗದಲ್ಲಿ ಮಿಂಚಿನ ಸಂಚಾರಕ್ಕೆ ಕಾರಣವಾಯಿತು. ವಾಲ್ಮೀಕಿ ಆಶ್ರಮದಲ್ಲಿರುವ ವಟುಗಳಾಗಿ ಬಡಗು ಹಾಸ್ಯರಂಗದಲ್ಲಿ ಮಿಂಚುತ್ತಿರುವ ಹಾಸ್ಯ ಕಲಾವಿದರಾದ ಮೂರೂರು ರಮೇಶ್‌ ಭಂಡಾರಿ ಹಾಗೂ ಮೂಡ್ಕಣಿ ಪುರಂದರ ಅವರ ಜೋಡು ಹಾಸ್ಯ ಪ್ರಸಂಗ ಇನ್ನಷ್ಟು ಕಳೆಕಟ್ಟಲು ಸಹಕಾರಿಯಾಯಿತು. ಮಾಣಿ ಪಾತ್ರಧಾರಿಗಳಲ್ಲಿ ಒಬ್ಬರಾಗಿದ್ದ ರಮೇಶ್‌ ಭಂಡಾರಿ ಅವರು ಲವನಲ್ಲಿ ಸಂಭಾಷಿಸುವಾಗ ತೊದಲು ನುಡಿಗಳನ್ನು ಕೇಳುವುದೇ ಪ್ರೇಕ್ಷಕರ ಪಾಲಿಗೆ ಒಂದು ನಗೆ ಹಬ್ಬ.

ಖಳ ಪಾತ್ರಗಳಲ್ಲಿ ತಮ್ಮ ಛಾಪನ್ನು ಮೂಡಿಸಿರುವ ಸಮರ್ಥ ಕಲಾವಿದ ಥಂಡಿಮನೆ ಶ್ರೀಪಾದ ಭಟ್‌ ಅವರು ಇಲ್ಲಿ ಮರ್ಯಾದಾ ಪುರುಷೋತ್ತಮ ಶ್ರೀರಾಮಚಂದ್ರನ ಪಾತ್ರವನ್ನು ತನ್ನಲ್ಲಿ ಆವಾಹಿಸಿಕೊಂಡು ನಿರ್ವಹಿಸಿದ್ದು ಅವರ ಪ್ರತಿಭಾ ವೈಶಾಲ್ಯತೆಗೊಂದು ಹೊಸ ಭಾಷ್ಯ ಬರೆದಂತಿತ್ತು.

ಎರಡನೇ ಪ್ರಸಂಗವಾಗಿ ಪ್ರದರ್ಶನಗೊಂಡ ಮಾಗಧ ವಧೆ ಪ್ರೇಕ್ಷಕ ಸಮೂಹಕ್ಕೆ ಹೊಸ ಅನುಭವವನ್ನು ಕೊಟ್ಟಿತು. ಜನ್ಸಾಲೆ ರಾಘವೆಂದ್ರ ಆಚಾರ್ಯರ ಮಾಧುರ್ಯಭರಿತ ಕಂಠಸಿರಿ ಪ್ರಸಂಗದ ಮೆರುಗನ್ನು ಹೆಚ್ಚಿಸಿದರೆ ಅದಕ್ಕೆ ಪೂರಕವೆಂಬಂತೆ ಕಥಾ ನಾಯಕ ಮಾಗಧನ ಪಾತ್ರದಲ್ಲಿ ರಂಗದಲ್ಲಿ ಮಿಂಚು ಹರಿಸಬಲ್ಲ ವಿದ್ಯಾಧರ ಜಲವಳ್ಳಿ ಅವರು ಪ್ರವೇಶದಿಂದ ಅಂತ್ಯದವರೆಗೂ ಮಿಂಚಿನ ಸಂಚಾರವನ್ನೇ ಉಂಟುಮಾಡಿದರು. ಗತ್ತು ಗೈರತ್ತಿನ ಹೆಜ್ಜೆಗಾರಿಕೆ, ತೂಕಭರಿತ ಮಾತುಗಳು ಮತ್ತು ಜಲವಳ್ಳಿ ಶೈಲಿಯ ಆಂಗಿಕ ಅಭಿನಯದಿಂದ ರಂಗದ ಮೇಲೆ ಮಾಗಧನ ಅಮೂರ್ತ ವ್ಯಕ್ತಿತ್ವಕ್ಕೊಂದು ಮೂರ್ತ ರೂಪ ಕೊಡುವಲ್ಲಿ ಜಲವಳ್ಳಿ ಯಶಸ್ಸನ್ನು ಕಂಡರು.

ಕೃಷ್ಣನಾಗಿ ಕಡಬಾಳ ಉದಯರ ಪಾತ್ರಪೋಷಣೆ ಪ್ರಸಂಗಕ್ಕೊಂದು ಅಚ್ಚುಕಟ್ಟುತನವನ್ನು ತಂದುಕೊಟ್ಟಿತು. ಸತ್ಯಭಾಮೆಯಾಗಿ ಯಲಗುಪ್ಪ ಅವರು ತಮ್ಮ ಅಗಾಧ ಅನುಭವದ ಪ್ರಾವಿಣ್ಯತೆಯನ್ನು ಜಾಹೀರುಗೊಳಿಸಿದರು.ಹಿಮ್ಮೇಳದಲ್ಲಿ ಜನ್ಸಾಲೆಯವರಿಗೆ ಮದ್ದಳೆಯಲ್ಲಿ ಸುನೀಲ್‌ ಭಂಡಾರಿ ಹಾಗೂ ಚೆಂಡೆಯಲ್ಲಿ ಯುವ ಪ್ರತಿಭೆ ಸೃಜನ್‌ ಸೂಕ್ತ ಸಾಥ್‌ ನೀಡಿದರು.

ಇವೆಲ್ಲದರ ನಡುವೆ ಇಲ್ಲಿ ಪ್ರಸ್ತಾಪಿಸಲೇಬೇಕಾಗಿರುವ ಮುಖ್ಯವಾದ ಅಂಶ ಒಂದಿದೆ. ಅದೆಂದರೆ, ಸಮರ್ಥ ಕಲಾವಿದರ ತಂಡವನ್ನು ಮುನ್ನಡೆಸಲು ಸಮರ್ಥ ಯಜಮಾನನ ಅವಶ್ಯಕತೆ ಎಷ್ಟಿದೆ ಎಂಬ ಅಂಶ. ಇದಕ್ಕೆ ಸೂಕ್ತ ನಿದರ್ಶನವಾಗಿ ಸದ್ಯಕ್ಕೆ ನಮಗೆ ಕಾಣಿಸುವಂತಹ ಹೆಸರೇ ಪೆರ್ಡೂರು ಮೇಳದ ಯಜಮಾನರಾಗಿರುವ ಕರುಣಾಕರ ಶೆಟ್ಟಿಯವರ ಹೆಸರು. ಪೌರಾಣಿಕ ಪ್ರಸಂಗಗಳ ಆಳವಾದ ಜ್ಞಾನ, ನಿರ್ದೇಶನಾ ಸಾಮರ್ಥ್ಯ, ಸಂಘಟನಾ ಚತುರತೆಗಳನ್ನೆಲ್ಲಾ ತನ್ನಲ್ಲಿ ಮೇಳೈಸಿಗೊಂಡಿರುವ ವೈ ಕರುಣಾಕರ ಶೆಟ್ಟಿ ಅವರು ತನ್ನ ಮೇಳದ ಕಲಾವಿದರ ಶಕ್ತಿ ಸಾಮರ್ಥ್ಯವನ್ನು ಸಮರ್ಥವಾಗಿ ಒರೆಗೆ ಹಚ್ಚುವ ಹೆಚ್ಚುಗಾರಿಕೆಯಿಂದಲೇ ಅವರಿಂದು ಒಬ್ಬ ಸಮರ್ಥ ಯಜಮಾನರಾಗಿ ರೂಪುಗೊಂಡಿದ್ದಾರೆ.

ಮೋಹನ್‌ ಪೆರ್ಡೂರು

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

  • ಇಬ್ಬರೇ ಪಾತ್ರಧಾರಿಗಳು ಕಥನವನ್ನು ಕೊಂಡೊಯ್ಯುವ ಗತಿ , ದಿನ ನಿತ್ಯದ ಎಲ್ಲಾ ಗೌಜಿ ಗದ್ದಲದ ನಡುವೆ ಸಾಗುವ ನಾಟಕ ಕೇವಲ ಇಬ್ಬರೇ ಪಾತ್ರಧಾರಿಗಳ ಪ್ರಸ್ತುತಿ ಎಂಬುದನ್ನೇ...

  • ಸತ್ಯರೂಢನಾದ ಭೂಪಾಲನಾರು ಎನ್ನುವ ಇಂದ್ರನ ಪ್ರಶ್ನೆಯೊಂದಿಗೆ ಕಥೆ ಆರಂಭ.ವಸಿಷ್ಠರು ಹರಿಶ್ಚಂದ್ರನ ಹೆಸರು ಸೂಚಿಸಿದಾಗ ಕೋಪಗೊಂಡು ವಿರೋಧಿಸಿದ ವಿಶ್ವಾಮಿತ್ರರು...

  • ಉಡುಪಿ ಪುತ್ತೂರು ಭಗವತಿ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ನವರಾತ್ರಿ ಅಂಗವಾಗಿ ಶ್ರೀ ಭಗವತಿ ಹವ್ಯಾಸಿ ಯಕ್ಷ ಬಳಗ ಪುತ್ತೂರು ಇವರು "ಲಂಕಿಣಿ ಮೋಕ್ಷ' ಮತ್ತು...

  • ಡಿಜಿಟಲ್‌ ಯುಗದಲ್ಲಿ ಮಕ್ಕಳ ಮನಸ್ಸನ್ನು ಆಕರ್ಷಿಸಿ ಅವರ ಸೃಜನಶೀಲತೆ ಬೆಳೆಸಲು ಸೂಕ್ತ ತರಬೇತಿಯನ್ನು ನೀಡುವುದೆಂದರೆ ಸುಲಭದ ಕೆಲಸವಲ್ಲ. ಉತ್ಸಾಹಿ ಸಂಪನ್ಮೂಲ...

  • ಚೇಂಪಿಯ ಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನದಲ್ಲಿ ಜಿ.ಎಸ್‌.ಬಿ.ಎಸ್‌ ಸೇವಾ ಸಂಘದ ಆಶ್ರಯದಲ್ಲಿ ಸುಧನ್ವ ಕಾಳಗ ಎಂಬ ಯಕ್ಷಗಾನ ಪ್ರದರ್ಶನಗೊಂಡಿತು. ಕಿರಣ್‌ ಪೈ...

ಹೊಸ ಸೇರ್ಪಡೆ