ಈ ಗಂಡು ಹೋದ್ರೆ ಇನ್ನೊಂದು ಸಿಗಬಹುದು…

Team Udayavani, Jan 15, 2020, 5:45 AM IST

“ಗಂಡಿನವರು ಕುಳಿತಿದ್ದಾರೆ ಬಾರೇ…’ಎಂದು ಎಷ್ಟು ಹೇಳಿದರೂ ಕೇಳದೆ, ಸೊಂಟದ ಮೇಲೊಂದು, ತಲೆಯ ಮೇಲೊಂದು ಹಿತ್ತಾಳೆ ಬಿಂದಿಗೆಗಳನ್ನು ಇಟ್ಟುಕೊಂಡು ಅಕ್ಕ, ನೀರು ತರಲು ಆಚೆ ಓಡಿಯೇಬಿಟ್ಟಳು.

ಅಡುಗೆ ಮನೆಯಲ್ಲಿ ಹಬ್ಬದ ಸಡಗರ, ಸಂಭ್ರಮ! ರವೆ ಹದವಾಗಿ ಹುರಿದು ತುಪ್ಪದೊಂದಿಗೆ ದ್ರಾಕ್ಷಿ, ಗೋಡಂಬಿ ಚೆನ್ನಾಗಿ ಸುರಿದು ಕೇಸರಿಬಾತ್‌ ಮಾಡಿ ಮುಚ್ಚಿಟ್ಟು, ಕ್ಯಾಪ್ಸಿಕಂ ಶ್ಯಾವಿಗೆ ಬಾತ್‌ ಮಾಡತೊಡಗಿದರು ಅಮ್ಮ. ಅಕ್ಕನನ್ನು ನೋಡಲು ಗಂಡಿನ ಕಡೆಯವರು ಬರುವ ಸುದ್ದಿ ಕೇಳಿದಾಗಿನಿಂದ, ಮನೆಯ ವಾತಾವರಣವೇ ಬದಲಾಗಿ ಹೋಗಿತ್ತು. ಕಿತ್ತು ಹೋದ ಗೋಡೆಗಳೂ, ಕ್ಯಾಲೆಂಡರ್‌ಗಳ ಆಶ್ರಯದಲ್ಲಿ ನಗು ಬೀರುತ್ತಾ ಅಭ್ಯಾಗತರ ಸ್ವಾಗತಕ್ಕೆ ಮನೆಯ ಮುಂದಿನ ರಂಗೋಲಿ, ಬಾಗಿಲ ತೋರಣ, ಹೊಸ ಉಡುಪು ಸೋಫಾಗಳ ಸಮೇತ ಕಾಯುತ್ತಾ ಇದ್ದವು..

ಹೊಸ ವಾಲೆ ಜುಮುಕಿ ತೊಟ್ಟು, ಹೊಸ ಹಸಿರು ಸೀರೆ ಉಟ್ಟು ಮಲ್ಲಿಗೆ ಹೂ ಮುಡಿದ ಅಕ್ಕ, ನಮ್ಮ ಕೀಟಲೆ ಮಾತಿಗೆ ನವವಧುವಿನಂತೆ ಕ್ಷಣ ಕ್ಷಣಕ್ಕೂ ನಾಚುತ್ತಾ “ಅವರು ಬಂದರೇನೇ…?’ ಅನ್ನುತ್ತಾ ಬೇಸರ ತರಿಸಿದ್ದಳು. ನನಗಾಗ 10-11 ವರ್ಷ. ಅಕ್ಕ ಹೇಳಿದಾಗಲೆಲ್ಲಾ ತಲೆಬಾಗಿಲ ಹತ್ತಿರ ಓಡಿ ನೋಡಿಕೊಂಡು ಬಂದು ಸಾಕಾಗಿತ್ತು. ಕೊನೆಗ 5 ಗಂಟೆಗೆ ಭುರ್‌ ಎಂದ ಕಾರಿನ ಶಬ್ದ ಕಿವಿಗೆ ಬಿದ್ದಾಗ, ಗೇಟಿನ ಹತ್ತಿರ ಹೋಗಿ “ಓ ಅವರೇ..’ ಎಂದು ನಿಶ್ಚಯಿಸಿ ಸುದ್ದಿ ತಲುಪಿಸಲು ಅಕ್ಕನ ರೂಮಿನ ಕಡೆ ಓಡಿದೆ.
ಕಾಫಿ ಡಿಕಾಕ್ಷನ್‌ ಹಾಕಿ ಹೊರಬಂದ ಅಮ್ಮ, ಅಪ್ಪನ ಜೊತೆ ಸೇರಿ- “ಬನ್ನಿ ಬನ್ನಿ’ ಎನ್ನುತ್ತಾ ಗೇಟಿನ ಬಳಿ ಧಾವಿಸಿದರು. ಮದುವೆ ಗಂಡು, ಅವನ ಅಪ್ಪ-ಅಮ್ಮ, ಅವರ ಮನೆ ಪುರೋಹಿತರು, ಜೊತೆಗೆ ಹುಡುಗನ ಇಬ್ಬರು ಮಾವಂದಿರ ಗುಂಪು ಒಳಬಂದು ಸೋಫಾದ ಮೋಲೆ ವಿರಾಜಮಾನವಾಯಿತು.

“ಬೇಗ ಬೇಗ ಹುಡುಗೀನ ಕರೆಸಿ, ಬೇರೆ ಇನ್ನೊಂದೆರಡು ಕಡೆ ಹೋಗಬೇಕು’- ಎಂದು ಅವಸರಿಸಿದ ಪುರೋಹಿತರ ಮಾತಿಗೆ ತಲೆಯಾಡಿಸಿದ ಅಪ್ಪ, ಅಮ್ಮನಿಗೆ ಸನ್ನೆ ಮಾಡಿದರು. ರೂಮಿನಿಂದ ಅಕ್ಕ ಬಲು ಮೆಲ್ಲಗೆ ಹೆಜ್ಜೆ ಇಡುತ್ತಾ ಹೊರಬಂದು, ಎದುರಿಗೆ ಹಾಸಿದ್ದ ಚಾಪೆ ಮೇಲೆ ಕುಳಿತಳು. ನಾಚಿಕೆಯಿಂದ ತಲೆ ಮೇಲೆತ್ತಿ ನೋಡಲೂ ಕಷ್ಟವಾಗಿ ಹಣೆ ಮೇಲೆ ಮೂಡಿದ್ದ ಬೆವರನ್ನು ಕರ್ಚಿಫ್ ತುದಿಯಲ್ಲಿ ಒರೆಸಿಕೊಳ್ಳುತ್ತಾ ಇದ್ದಳು. ಹುಡುಗನ ಅಮ್ಮ ಏನೋ ಮಾತಾಡಿಸಿದರೆಂಬ ನೆನಪು.
ಅವಳು ಉತ್ತರ ಕೊಡುವ ಮುಂಚೆಯೇ ಶ್ಯಾವಿಗೆ ಬಾತು, ಕೇಸರಿಬಾತಿನ ತಟ್ಟೆಗಳು ಟೀಪಾಯಿಯ ಮೇಲೆ ಬಂದು ಕುಳಿತು ಸಂಭಾಷಣೆಗೆ ತಡೆಯಾದವು. ತಿಂಡಿಯ ಘಮಲು ಮನೆಯ ತುಂಬೆಲ್ಲಾ ಹರಡಿತು. “ಪಾಪ, ಹುಡುಗಿಗೆ ಸಂಕೋಚವೇನೋ, ಇರಲಿ ಬಿಡೆ’ ಎಂದರು ಹುಡುಗನ ಅಪ್ಪ, ಕೇಸರಿಬಾತಿನ ಗೋಡಂಬಿ ಒಳನೂಕುತ್ತಾ. ಅವರ ಮಾತನ್ನು ಅನುಮೋದಿಸಿ ಹುಡುಗನ ತಾಯಿ “ಹೂಂ, ಆಗಲಿಂದ ನೋಡಿದ್ನಲ್ಲಾ, ಏನು ನಯ, ಏನು ವಿನಯ! ತಲೆ ಎತ್ತಿ ನೋಡಲೇ ಇಲ್ಲ! ಇದಲ್ಲವೇ ಸಂಸ್ಕಾರ…’ ಮಾತು ಮುಗಿಸೋ ಮುನ್ನವೇ ಗೇಟಿನ ಹತ್ತಿರ ಸುಬ್ಬಮ್ಮತ್ತೆ, “ನಲ್ಲೀಲಿ ನೀರು ಬಂತೂ, ನಿಮ್ಮದೇ ಫ‌ಸ್ಟೂ, ಕೊಡ ಎತ್ಕೊಂಡು ಬಾರೆ ನಳಿನಿ…’ ಎಂದು ಜೋರಾಗಿ ಕಿರುಚಿದರು. ಎರಡೇ ನಿಮಿಷದಲ್ಲಿ ಸೊಂಟದ ಮೇಲೊಂದು, ತಲೆಯ ಮೇಲೊಂದು ಹಿತ್ತಾಳೆ ಬಿಂದಿಗೆಗಳನ್ನು ಇಟ್ಟುಕೊಂಡು ಅಕ್ಕ, ನೀರು ತರಲು ಆಚೆ ಓಡಿಯೇಬಿಟ್ಟಳು.
ಬೀದಿ ಕೊನೆಯಲ್ಲಿದ್ದ ನಲ್ಲಿಯಿಂದ ಬೇಗ ಬೇಗ 25-26 ಕೊಡ ಅಡುಗೆಮನೆ, ಸ್ನಾನದ ಮನೆ, ಆಚೆಯಿದ್ದ ತೊಟ್ಟಿ ತುಂಬಿಸಿಯೇಬಿಟ್ಟಳು. ಅಮ್ಮ ಗಾಬರಿಯಿಂದ, “ಗಂಡಿನವರು ಕುಳಿತಿದ್ದಾರೆ ಬಾರೇ…’ಎಂದು ಎಷ್ಟು ಹೇಳಿದರೂ ಕೇಳದೆ, “ಗಂಡಿಗೇನಮ್ಮಾ, ಈ ಗಂಡು ಹೋದರೆ ಇನ್ನೊಂದು ಸಿಗಬಹುದು, ನಾನು ಬೇಗ ಬೇಗ ನೀರು ಹಿಡಿಯದಿದ್ದರೆ ಮುಂದಿನ ವಾರದವರೆಗೆ ಹನಿ ನೀರು ಸಿಗೋದಿಲ್ಲ..’
ಅಂದುಬಿಡೋದೇ!

ಆಗ ನಾವಿದ್ದ ಬಡಾವಣೆಯಲ್ಲಿ ನೀರಿಗೆ ತುಂಬಾ ಕಷ್ಟವಿತ್ತು. 50 ಮನೆಗಳಿಗೆ ಇದ್ದುದು ಒಂದೇ ಕೊಳಾಯಿ. ಸರದಿ ಪ್ರಕಾರ ನೀರು ಹಿಡಿದುಕೊಳ್ಳುವ ಅಭ್ಯಾಸ. ಅಕ್ಕ ಹಾಗಂದರೂ, ನಮ್ಮ ಕಷ್ಟ ಅರ್ಥ ಮಾಡಿಕೊಂಡು ಇಂತಹ ದಾಷ್ಟೀಕದ ಹುಡುಗಿಯೇ ನಮಗೆ ಬೇಕಿತ್ತೆಂದು, ತಿಂಗಳೊಪ್ಪತ್ತಿನಲ್ಲಿ ಮದುವೆ ಮುಗಿಸಿಯೇಬಿಟ್ಟರು. ವರ್ಷಗಳ ನಂತರ ಈಗಲೂ ಆ ಪ್ರಹಸನ ನೆನಪು ಮಾಡಿಕೊಂಡು ನಗುತ್ತಿರುತ್ತಾರೆ ಭಾವ.

(ಹೆಣ್ಣು ನೋಡಲು ಗಂಡಿನ ಕಡೆಯವರು ಬರುತ್ತಾರೆಂದರೆ, ಮನೆಮಂದಿಗೆಲ್ಲಾ ಖುಷಿ, ಗಡಿಬಿಡಿ, ಆತಂಕ, ನಿರೀಕ್ಷೆಗಳೆಲ್ಲವೂ ಒಟ್ಟೊಟ್ಟಿಗೇ ಆಗುವ ಸಂದರ್ಭ. ಭಾಮೆಯನ್ನು ನೋಡಲು ಬಂದಾಗ ಮನೆಯಲ್ಲಿ ಏನೇನಾಗಿತ್ತು ಅಂತ 250 ಪದಗಳಲ್ಲಿ v.avalu@gmail.comಗೆ ಬರೆದು ಕಳಿಸಿ.)

-ಜಲಜಾ ರಾವ್‌

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

  • ಅಬ್ಟಾ, ಆಫೀಸಲ್ಲಿ ತುಂಬಾ ಕೆಲಸ ಇತ್ತು ಅಂತ ಮನೆಗೆ ಬಂದು ಮೈ ಚಾಚುವ ಅನುಕೂಲ ಬಹುತೇಕ ಉದ್ಯೋಗಸ್ಥೆಯರಿಗೆ ಇಲ್ಲ. ಆಫೀಸಿಂದ ಅವರು ಸೀದಾ ಬರುವುದೇ ಅಡುಗೆಮನೆಗೆ. ಅಲ್ಲಿ...

  • ಮೆಜಸ್ಟಿಕ್‌ ಬಸ್‌ ಸ್ಟಾಂಡ್‌ನ‌ ಪ್ಲಾಟ್‌ಫಾರ್ಮ್ ಬಳಿಯ ತೂತಿನಿಂದ ಇಲಿಯೊಂದು ಹೊರಬಂದು, ಹತ್ತಿರದಲ್ಲಿ ಬಿದ್ದಿದ್ದ ಬಿಸ್ಕತ್ತನ್ನು ತಿಂದು ಓಡಿತು! ಅಬ್ಟಾ, ಎಷ್ಟು...

  • ಶಾಲೆ ಎಂದಕೂಡಲೇ ಮೊದಲು ನೆನಪಾಗೋದು, ಮಕ್ಕಳು. ಜುಟ್ಟು ಕಟ್ಟಿದ ಹುಡುಗಿಯರು, ಯೂನಿಫಾರ್ಮ್ ಚಡ್ಡಿ ತೊಟ್ಟ ಸಣ್ಣ ಹುಡುಗರು. ಆದರೆ, ಅಜ್ಜಿಯರೇ ವಿದ್ಯಾರ್ಥಿಗಳಾಗಿರುವ...

  • ಗಣಿತ ಶಿಕ್ಷಕಿ ಮೇಧಾ, ರಾಗಬದ್ಧವಾಗಿ ಗಣಪತಿಯ ಭಜನೆಯಲ್ಲಿ ತನ್ಮಯರಾಗಿದ್ದರೆ, ಅವರ ಮುಂದೆ ಬಿಳಿಯ ಕ್ಯಾನ್ವಾಸ್‌ ಮೇಲೆ ಕಪ್ಪು ಶಾಯಿಯ ಜೆಲ್‌ ಪೆನ್‌ ಹಿಡಿದು ಸರಸರನೆ...

  • ಮದುವೆಗಳು ಸ್ವರ್ಗದಲ್ಲಿ ನಡೆಯುತ್ತವಂತೆ. ಆದರೆ, ಹನಿಮೂನ್‌/ ಮಧುಚಂದ್ರ ಮಾತ್ರ ಇಂಥದ್ದೇ ಸ್ಥಳ, ದೇಶದಲ್ಲಿ ನಡೆಯಬೇಕು ಅಂತ ಇಂದಿನ ಜೋಡಿಗಳು ಬಯಸುತ್ತವೆ. ಮಧುಚಂದ್ರದ...

ಹೊಸ ಸೇರ್ಪಡೆ

  • ಲಂಕೆಯಲ್ಲಿ ಯುದ್ಧವೆಲ್ಲ ಮುಗಿದು, ಮರಳುವಾಗ ವಿಮಾನದ ಮೇಲಿಂದ ರಾಮನು ತನ್ನೊಲವಿನ ಮಡದಿ ಸೀತೆಗೆ ರಾಮೇಶ್ವರಂನ ದ್ವೀಪವನ್ನು ತೋರಿಸಿ- "ನೋಡಿಲ್ಲಿ, ಈ ದ್ವೀಪದಲ್ಲೇ...

  • ಸುತ್ತೂರಿನ ಶಿವರಾತ್ರೀಶ್ವರ ಶಿವಯೋಗಿಗಳ ಜಾತ್ರಾ ಮಹೋತ್ಸವ ಈಗಾಗಲೇ ಶುರುವಾಗಿದ್ದು, 26ಕ್ಕೆ ಕೊನೆಗೊಳ್ಳಲಿದೆ. ಜಗತ್ತಿಗೆ ಶಾಂತಿ ಬೋಧಿಸಿದ ಈ ಮಠದಲ್ಲಿ ಭೋಜನವೂ...

  • ರಂಗದ ಮೇಲೆ ಮಿಂಚಿನ ಬಳ್ಳಿಯೊಂದು ಝಳಪಿಸಿದಂತೆ ಅದಮ್ಯ ಚೈತನ್ಯದಿಂದ ಲೀಲಾಜಾಲವಾಗಿ ನರ್ತಿಸಿದವಳು ಭರತನಾಟ್ಯ ಕಲಾವಿದೆ ಹರ್ಷಿತಾ ಜಗದೀಶ್‌. ಅದು ಅವಳ ಮೊದಲ ರಂಗಾರ್ಪಣೆ...

  • ಕುರಿಗಾಹಿಯೊಬ್ಬನಿಗೆ ಭೀಮಾ ನದಿಯಲ್ಲಿ ಗಾಜಿನ ರೂಪದ ಕಂಬದಲ್ಲಿದ್ದ ದೇವಿ ಕಾಣಿಸಿಕೊಳ್ಳುತ್ತಾಳೆ. ಆ ದೇವಿಯನ್ನು ಒಂದು ಸರ್ಪವು ಕಾಯುತ್ತಿತ್ತು... ಭೀಮಾ ನದಿಯಲ್ಲಿ...

  • "ಅದೊಂದು ವಟವೃಕ್ಷ. ಅಲ್ಲೊಂದು ವಿಚಿತ್ರವಾದ ಸನ್ನಿವೇಶ. ಗುರುವನ್ನು ಸುತ್ತುವರಿದು ಶಿಷ್ಯರೆಲ್ಲ ಕುಳಿತಿದ್ದಾರೆ. ಶಿಷ್ಯರೆಲ್ಲರೂ ವೃದ್ಧರು. ಗುರುವಾದರೋ ಯುವಕ....