ಎಮ್ಮ ಮನೆಯಂಗಳದಿ ಬೆಳೆದ ಹೂವು

Team Udayavani, Nov 15, 2019, 5:38 AM IST

ಮೊನ್ನೆ ಗೆಳತಿಯ ಮನೆಗೆ ಹೋಗಿದ್ದೆ. ಅವಳ ಮನೆಗೆ ಹೋಗುವ ದಾರಿಯಲ್ಲಿ ರಸ್ತೆ ಬದಿಯಲ್ಲಿ ಒಂದು ದೊಡ್ಡ ಮರವಿತ್ತು. ಬಿಸಿಲಿನಿಂದ ನಡೆದು ಹೋಗುವವರಿಗೆಲ್ಲ ಆ ಮರ ನೆರಳು ಕೊಡುತ್ತಿತ್ತು. ಆದರೆ, ರಸ್ತೆ ಅಗಲಗೊಳಿಸುವಾಗ ಅದನ್ನು ಕಡಿದ ಕಾರಣ ಈಗ ಅಲ್ಲಿ ಆ ಮರ ಇಲ್ಲದೆ ಬೋಳುಬೋಳಾಗಿಬಿಟ್ಟಿದೆ. ಆ ಮರವಿದ್ದ ಜಾಗವನ್ನೇ ನೋಡುತ್ತ ಗೆಳತಿಯ ಮನೆಯತ್ತ ಹೆಜ್ಜೆ ಹಾಕಿದೆ. ಅವಳ ಮನೆಯ ಕಾಂಪೌಂಡ್‌ ಒಳಗೆ ಕಾಲಿಡುತ್ತಿದ್ದಂತೆ ಅವಳ ಆರೈಕೆಯಲ್ಲಿ ಬೆಳೆದು ನಿಂತ ತರತರದ ಹೂವಿನಗಿಡಗಳು ಸ್ವಾಗತಿಸಿದವು. ಒಮ್ಮೆ ಯಾವುದೋ ಪಾರ್ಕಿನೊಳಗೆ ಹೋದಂತೆ ಅನಿಸಿಬಿಟ್ಟಿತು. ಅಬ್ಟಾ! ಎಷ್ಟೊಂದು ಬಗೆಯ ಗಿಡಗಳು. ದಾಸವಾಳದ್ದೇ ಐದಾರು ಬಣ್ಣದ ಹೂಗಿಡಗಳು, ಕೆಂಪು, ಹಳದಿ, ಗುಲಾಲಿ, ಬಿಳಿ ಬಣ್ಣದ ಗುಲಾಬಿ, ಒಂದೆರಡು ಮಲ್ಲಿಗೆ ಗಿಡ, ಸೇವಂತಿಗೆ, ಸಂಪಿಗೆ, ಗೊಂಡೆ, ಅಬ್ಬಮಲ್ಲಿಗೆ ಜಾಜಿ, ಮುತ್ತುಮಲ್ಲಿಗೆ… ಹೀಗೆ ಒಂದೇ ಎರಡೇ! ಆಗತಾನೆ ಅರಳಿದ ಸುರುಳಿ ಹೂವು ಬೀರುತ್ತಿದ್ದ ಹಿತವಾದ ಪರಿಮಳ ಮನಸ್ಸಿಗೆ ಮುದ ನೀಡಿತು. ಕಾಕಡ ಗಿಡದಲ್ಲಿ ಗಿಡದ ತುಂಬ ಬಿಳಿಯ ಹೂವುಗಳು ಅರಳಿ ಬೆಳದಿಂಗಳು ಚೆಲ್ಲಿದಂತೆ ಕಾಣಿಸುತ್ತಿತ್ತು. ಮನೆಯ ಸುತ್ತಮುತ್ತ ಎಲ್ಲಿ ನೋಡಿದರೂ ಹಸಿರು ಹಸಿರು. ಕುಂಡಗಳಲ್ಲಿ ಅಲೋವೆರಾ, ಪುದೀನಾ, ತುಳಸಿ, ದೊಡ್ಡಪತ್ರೆ, ಒಂದೆಲಗ, ಶುಂಠಿ, ಕಿರಾತಕಡ್ಡಿಯಂತಹ ಔಷಧೀಯ ಸಸ್ಯಗಳನ್ನೂ ಬೆಳೆಸಿದ್ದಾಳೆ. ಮನೆಯ ಹಿಂದೆ ಕರಿಬೇವಿನ ಗಿಡ, ಬಸಳೆ-ತೊಂಡೆಯ ಚಪ್ಪರ. ಒಂದು ಚೂರೂ ಸ್ಥಳವೂ ಹಾಳಾಗದಂತೆ ಉಪಯೋಗ ಮಾಡಿದ್ದನ್ನು ನೋಡಿ ಮನಸ್ಸಿಗೆ ತುಂಬ ಖುಷಿ ಆಯಿತು.

ಹೌದು, ಗಿಡಗಳನ್ನು ಬೆಳೆಸುವುದೆಂದರೆ ಅವಳಿಗೆ ಎಲ್ಲಿಲ್ಲದ ಆಸಕ್ತಿ. ಒಂದು ಕಳೆಗಿಡವೂ ಇಲ್ಲದೆ ತೋಟವನ್ನು ನಿರ್ವಹಣೆ ಮಾಡಿಕೊಂಡ ಅವಳ ಜಾಣ್ಮೆಗೆ ಯಾರಾದರೂ ಮೆಚ್ಚಲೇ ಬೇಕು. ಅಷ್ಟೊಂದು ಪ್ರೀತಿ ಗಿಡಗಳ ಮೇಲೆ. ಪುಟ್ಟ ಮಕ್ಕಳನ್ನು ಆರೈಕೆ ಮಾಡಿದಂತೆ ಆರೈಕೆ ಮಾಡುತ್ತಾಳೆ. ನಿಜ ಹೇಳಬೇಕೆಂದರೆ, ದಿನದ ಹೆಚ್ಚಿನ ಸಮಯವನ್ನು ಅವಳು ತೋಟದಲ್ಲೇ ಕಳೆಯುತ್ತಾಳೆಂದರೆ ಅದು ಅತಿಶಯೋಕ್ತಿ ಆಗಲಾರದು. ಅವಳು ಹೀಗೆ ಯಾವಾಗಲೂ ಹೂದೋಟದಲ್ಲಿ ಇರುವುದನ್ನು ನೋಡಿ ಅವಳ ಗಂಡ ಕೆಲವೊಮ್ಮೆ ತಮಾಷೆಗೆ ಹೇಳುವುದುಂಟು, “”ನನಗಿಂತಲೂ ಅವಳಿಗೆ ಗಿಡಗಳ ಮೇಲೆಯೇ ಹೆಚ್ಚು ಪ್ರೀತಿ” ಎಂದು. ಹೆಣ್ಣುಮಕ್ಕಳೇ ಹಾಗೆ ಅಲ್ಲವೆ! ಗಿಡಗಳಿಗೂ ಅವರಿಗೂ ಬಿಡದ ನಂಟು. ಮನೆಯ ಮುಂದೆ ಗಾರ್ಡನ್‌ ಇರಬೇಕೆಂಬ ಆಸೆ ಯಾವ ಹೆಣ್ಣಿಗೆ ತಾನೆ ಇರುವುದಿಲ್ಲ ಹೇಳಿ? ಹಳ್ಳಿಯವರೇ ಇರಲಿ, ನಗರದವರೇ ಇರಲಿ, ಮನೆಯ ಮುಂದೆ ಹೂಗಿಡಗಳನ್ನು ಬೆಳೆಸುವುದು ಗೃಹಿಣಿಯರ ಅಚ್ಚುಮೆಚ್ಚಿನ ಹವ್ಯಾಸಗಳಲ್ಲಿ ಒಂದು. ಮನೆಯಲ್ಲೇ ಇರುವ ಗೃಹಿಣಿಯಾಗಲಿ, ಆಫೀಸ್‌ ಕೆಲಸಕ್ಕೆ ಹೋಗುವವಳಾದರೂ ಎಲ್ಲವನ್ನೂ ನಿಭಾಯಿಸಿ ಬಳಲಿದ ಅವಳಿಗೆ ಹೂದೋಟದತ್ತ ಸುಳಿದಳೆಂದರೆ ಎಂತಹ ದಣಿವಿದ್ದರೂ ಮಾಯವಾಗಿ ಒಮ್ಮೆ ಉಲ್ಲಸಿತಳಾಗಿಬಿಡುತ್ತಾಳೆ. ಬಹುಶಃ ಅದಕ್ಕೇ ಇರಬೇಕು, ರಜಾ ದಿನಗಳಲ್ಲಿ, ವೀಕೆಂಡ್‌ಗಳಲ್ಲಿ ಪಾರ್ಕ್‌ಗಳಲ್ಲಿ, ಉದ್ಯಾನವನಗಳಲ್ಲಿ ಜನರ ದಂಡೇ ಹರಿದು ಬರುವುದು! ಹಸಿರನ್ನು ಕಣ್ತುಂಬಿಕೊಂಡರೆ ಮನಸ್ಸು ಮತ್ತು ದೇಹವನ್ನು ಮುದಗೊಳಿಸುವ ಶಕ್ತಿ ಗಿಡಗಳಿಗೆ ಇದೆ ಎಂಬುದು ನಮಗೆ ಅಧ್ಯಯನಗಳಿಂದ ಕಂಡುಬಂದಿದೆ ಅಲ್ಲವೆ?

ಒಮ್ಮೆ ನಾನು ಗೆಳತಿಯ ಮನೆಗೆ ಸಂಬಾರಬಳ್ಳಿಯ ಗಿಡ ಬೇಕೆಂದು ಹೋಗಿದ್ದೆ. ಅವಳ ಹತ್ತಿರ ಮಾತನಾಡುತ್ತ¤, ಗಿಡವನ್ನೂ ಚೀಲಕ್ಕೆ ಸೇರಿಸಿ ವಾಪಸು ಬರುವಾಗ, “”ನೀನು ನಮ್ಮ ಮನೆಗೆ ಬರುವುದೇ ಇಲ್ಲ. ಯಾವಾಗ ಬರುತ್ತೀಯಾ?” ಎಂದದ್ದಕ್ಕೆ ಒಮ್ಮೆ ಬಂದವಳು ಹೀಗೆ ಬಂದು ಹಾಗೆ ಹೊರಟುನಿಂತುಬಿಟ್ಟಿದ್ದಳು. “”ಊಟ ಮಾಡಿ ಹೋಗು” ಅಂದದ್ದಕ್ಕೆ ಅವಳು, “”ಇಲ್ಲ, ನಾನು ಬಂದು ಆಗಲೇ ಸುಮಾರು ಹೊತ್ತಾಯ್ತು. ಮನೆಗೆ ಹೋಗಬೇಕು. ಗಿಡಗಳಿಗೆ ನೀರು ಹಾಕಿಲ್ಲ. ಎಲ್ಲಿಗೆ ಹೋದರೂ ಸಂಜೆಯೊಳಗೆ ಮನೆ ಸೇರಿಬಿಡುವ ಪರಿಪಾಠ ನನ್ನದು. ಗಿಡಗಳಿಗೆ ಪ್ರತಿದಿನ ನೀರುಣಿಸದಿದ್ದರೆ ಅವು ಬಾಡುತ್ತವೆ. ಅಮ್ಮನ ಮನೆಗೂ ನಾನು ಹೋಗುವುದು ಕಡಿಮೆ. ಹೋದರೂ ಒಂದೆರಡು ದಿನಕ್ಕಿಂತ ಹೆಚ್ಚು ದಿನ ಕೂರುವುದಿಲ್ಲ. ಏನಾದರೂ ಫ‌ಂಕ್ಷನ್‌ ಇದ್ದಾಗಲೆಲ್ಲ ಹೋಗಲೇಬೇಕಾಗುತ್ತದೆ. ಆಗ ನೆರೆಮನೆಯವರ ಹತ್ತಿರ ಗಿಡಗಳಿಗೆ ನೀರು ಹಾಕಲು ಹೇಳುತ್ತೇನೆ” ಎಂದಾಗ ನನಗೆ ಅಚ್ಚರಿಯಾಯಿತು.

ನನಗೂ ಹೂಗಿಡಗಳೆಂದರೆ ತುಂಬಾ ಇಷ್ಟ. ಅವಳಷ್ಟು ಅಲ್ಲದಿದ್ದರೂ ಐದಾರು ವೆರೈಟಿಯ ಹೂವಿನ ಗಿಡಗಳನ್ನು ನಾನೂ ಬೆಳೆಸಿದ್ದೇನೆ. ವಾಕಿಂಗ್‌ ಹೋಗುವಾಗ, ರಸ್ತೆಯಲ್ಲಿ ನಡೆಯುವಾಗ, ಬಸ್‌ನಲ್ಲಿ ಸಂಚರಿಸುವಾಗಲೆಲ್ಲ ದಾರಿಯುದ್ದಕ್ಕೂ ಕಾಣುವ ಹೂಗಿಡಗಳತ್ತ ನನ್ನ ಕಣ್ಣು ಹರಿಯುತ್ತದೆ. ಯಾರ ಮನೆಗೆ ಹೋದರೂ ನನ್ನ ದೃಷ್ಟಿ ಮೊದಲು ಹಾಯುವುದು ಹೂತೋಟದ ಕಡೆಗೆ. “”ಇದು ಯಾವ ಗಿಡ? ಎಷ್ಟು ಚೆನ್ನಾಗಿದೆ. ಇದರ ಹೆಸರೇನು? ನನಗೂ ಒಂದು ಚಿಕ್ಕ ಗೆಲ್ಲು ಕೊಡಿ” ಎಂದು ಅವರಿವರಲ್ಲಿ ಕೇಳಿ ತಂದು ನೆಟ್ಟದ್ದರಲ್ಲಿ ಕೆಲವೊಮ್ಮೆ ಬೆಳೆದಿವೆ. ಕೆಲವೊಂದು ಎಷ್ಟು ಕಷ್ಟಪಟ್ಟರೂ ಹೂಬಿಡದಾಗ “ಮರಳಿ ಯತ್ನವ ಮಾಡು’ ಎನ್ನುವಂತೆ ಪ್ರಯತ್ನಿಸುತ್ತಲೇ ಇರುತ್ತೇನೆ.

ನಾವು ಹೊಸ ಮನೆ ಕಟ್ಟಿದ ಹೊಸತರಲ್ಲಿ ಮನೆಯೆದುರು ಗಿಡ ನೆಡಬೇಕು ಎಂಬ ಆಸೆಯಿಂದ ಎಲ್ಲರಿಂದಲೂ ಗಿಡಗಳನ್ನು ಕೇಳಿ ಕೇಳಿ ತಂದು ನೆಟ್ಟಿದ್ದೆ. ಹೊಸ ಜಾಗ, ಹೊಸ ಮಣ್ಣಿಗೆ ಇರಬಹುದು ನೆಟ್ಟ ಎಲ್ಲ ಗಿಡಗಳೂ ಹಸಿರುಹಸಿರಾಗಿ ಸೊಂಪಾಗಿ ಹೂಬಿಟ್ಟಿದ್ದವು. ಒಮ್ಮೆ ನಮ್ಮನೆೆಗೆ ಅತ್ತೆಯ ಕಡೆಯವರು ಯಾರೋ ಬಂದಾಗ ನಮ್ಮ ಹೂದೋಟ ನೋಡಿ ಕಣ್ಣರಳಿಸುತ್ತಾ, “”ಎಷ್ಟು ಚೆಂದ ಹೂ ಬಿಟ್ಟಿವೆ ಗಿಡಗಳೆಲ್ಲ. ಇವನ್ನೆಲ್ಲ ಯಾರು ನೆಟ್ಟದ್ದು ?” ಎಂದಾಗ ನಮ್ಮತ್ತೆ ಹೆಮ್ಮೆಯಿಂದ ನನ್ನತ್ತ ತಿರುಗಿ, “”ನನ್ನ ಸೊಸೆ. ಅವಳು ಗಿಡಗಳ ಹುಚ್ಚಿ” ಎಂದಾಗ ನಾನು ಉಬ್ಬಿ ಹೋಗಿದ್ದೆ. ಅವರು ಹೊರಡುವಾಗ ಅವರಿಗೆ ಮಲ್ಲಿಗೆ ಹೂವಿನೊಂದಿಗೆ ನಮ್ಮತ್ತೆ ಬಸಳೆಯನ್ನೂ ಕಟ್ಟಿಕೊಟ್ಟಿದ್ದರು.
.
ನನ್ನ ಸಹೋದ್ಯೋಗಿಯೊಬ್ಬಳಿಗೂ ಹೂಗಿಡಗಳೆಂದರೆ ಜೀವ. ಆದರೆ, ಅವಳಿಗೆ ಮನೆಮುಂದೆ ಗಿಡ ನೆಡಲು ಸ್ಥಳವೆೇ ಇಲ್ಲ. ಆದರೂ ಅವಳು ಬಗೆಬಗೆಯ ಹೂಗಿಡಗಳನ್ನು ಬೆಳೆಸಿದ್ದಾಳೆ, ಅವಳ ಮನೆಯ ತಾರಸಿಯಲ್ಲಿ. ಮನೆಯಂಗಳದಲ್ಲಿ ಹೂದೋಟಕ್ಕೆ ಸ್ಥಳವಿಲ್ಲದಿದ್ದರೇನು? ಮನೆಯ ತಾರಸಿಯೇ ಸಾಕಲ್ಲವೆ! ಅವಳದ್ದು ತಾರಸಿ ಗಾರ್ಡನ್‌. ತಾರಸಿ ತುಂಬಾ ಚಿಕ್ಕ ಚಿಕ್ಕ ಪ್ಲಾಸ್ಟಿಕ್‌ ಬಕೆಟ್‌, ಟಬ್‌, ಪೇಂಟ್‌ ಡಬ್ಬ, ಡ್ರಮ್‌, ಮಾರುಕಟ್ಟೆಯಲ್ಲಿ ಸಿಗುವ ಹೂಕುಂಡ, ಗೋಣೀಚೀಲ, ಒಡೆದುಹೋದ ಮಡಕೆ, ವಾಹನಗಳ ಟೈರು- ಹೀಗೆ ಯಾವುದರಲ್ಲೆಲ್ಲ ಗಿಡ ಬೆಳೆಸಬಹುದೋ ಅದರಲ್ಲೆಲ್ಲ ಗಿಡ ನೆಟ್ಟಿದ್ದಾಳೆ. ಅಡುಗೆ ಮನೆಯ ಕಸ, ಗಿಡಗಳಿಂದ ಉದುರಿದ ಎಲೆಗಳೇ ಗೊಬ್ಬರ. ಇದರಿಂದ ಅವಳಿಗೆ ಕಸ ವಿಲೇವಾರಿಯೂ ಸುಲಭಸಾಧ್ಯವಾಗಿದೆ. ಈಗ ಎಲ್ಲೆಡೆಯೂ “ತಾರಸಿ ಗಾರ್ಡನ್‌’ ಎಂಬ ಕೈತೋಟ ಹೆಚ್ಚು ಜನಪ್ರಿಯವಾಗುತ್ತಿದೆ ಮತ್ತು ಇಂತಹ ಗಾರ್ಡನ್‌ ಬೆಳೆಸಲು ತರಬೇತಿಯೂ ಸಿಗುತ್ತದೆ.
.
ನನ್ನ ತಂಗಿ ಫ್ಲ್ಯಾಟ್‌ವೊಂದರಲ್ಲಿ ಮನೆ ಕೊಂಡುಕೊಂಡಿದ್ದಾಳೆ. ಅವಳಿಗೆ ನೆಲದಲ್ಲಿಯೇ ಸ್ವಂತ ಮನೆ ಹೊಂದಬೇಕೆಂಬ ಆಸೆ ಇತ್ತು. ಯಾಕೆಂದರೆ, ಫ್ಲ್ಯಾಟ್‌ನಲ್ಲಿ ಹೂಗಿಡಗಳನ್ನು ನೆಡಲು ಅವಕಾಶವಿಲ್ಲವಲ್ಲ! “”ದಿನಾ ದೇವರ ಪೂಜೆಗೆ ಹೂ ಎಲ್ಲಿಂದ ತರಲಿ? ಪ್ರತಿನಿತ್ಯ ಮಾರ್ಕೆಟ್‌ನಿಂದ ಹೂ ಖರೀದಿಸುವುದು ಬಹಳ ದುಬಾರಿ. ದಿನಾ ಮಾರ್ಕೆಟ್‌ಗೆ ಬೇರೆ ಹೋಗಬೇಕು” ಎಂದು ಗೊಣಗುತ್ತಾಳೆ. ಮೊದಮೊದಲು ಒಂದು ವಾರಕ್ಕಾಗುವಷ್ಟು ಹೂ ಖರೀದಿಸಿ ಫ್ರಿಡ್ಜ್ನಲ್ಲಿ ಇಟ್ಟು ಅದನ್ನೇ ಉಪಯೋಗಿಸುತ್ತಿದ್ದಳು. ಫ್ರಿಡ್ಜ್ನಲ್ಲಿಟ್ಟ ಹೂವಿಗೆ ವಾಸನೆಯೂ ಇಲ್ಲ ಪರಿಮಳವೂ ಇಲ್ಲದೆ ಆಕೆ ಬಾಲ್ಕನಿಯಲ್ಲೇ ಚಿಕ್ಕ ಚಿಕ್ಕ ಕುಂಡಗಳಲ್ಲಿ ದೇವರ ಪೂಜೆಗೆಗಾಗುವಷ್ಟು ತುಳಸಿ, ನಿತ್ಯಪುಷ್ಪ, ಗುಲಾಬಿ ನೆಟ್ಟಿದ್ದಾಳೆ.

ಹೂದೋಟ ಬೆಳೆಸಬೇಕೆಂಬ ಮನಸ್ಸು ಇದ್ದರೆ ತಾರಸಿ ಮನೆ, ವಸತಿ ಸಂಕೀರ್ಣಗಳ ಮನೆಗಳಾದರೂ ಇದಕ್ಕೆ ಸದವಕಾಶ ನೀಡುತ್ತವೆ ಅಲ್ಲವೆ! ಮನೆಯ ಹೊರಗೆ ಹೂವಿನ ಗಿಡ ನೆಡಲು ಜಾಗವಿಲ್ಲವೆಂದಾದರೆ ಮನೆಯೊಳಗೂ ಕೆಲವು ಹೂವಿನ ಗಿಡಗಳನ್ನು ಬೆಳೆಸಬಹುದು. ಇದರಿಂದ ಮನೆಯೂ ತಂಪಾಗಿರುತ್ತದೆ. ಗಿಡಗಳನ್ನು ಬೆಳೆಸುವುದು ಒಂದು ಒಳ್ಳೆಯ ಹವ್ಯಾಸ. ಇದು ನಮ್ಮನ್ನು ಚಟುವಟಿಕೆಯಲ್ಲಿರುವಂತೆ ಮಾಡುತ್ತದೆ. ಮನೆಯ ಮುಂದೆ ಬೆಳೆಯು ತುಳಸಿ, ಸಂಬಾರ ಬಳ್ಳಿ, ಅಲೋವೆರಾದಂತಹ ಔಷಧೀಯ ಸಸ್ಯಗಳೂ ಆರೋಗ್ಯವರ್ಧಕಗಳಾಗಿವೆ. ನಮ್ಮದೇ ಗಾರ್ಡನ್‌ನಲ್ಲಿ ನಾವೇ ಕೈಯಾರೆ ಬೆಳೆಸಿದ ಹೂವನ್ನು ದೇವರಿಗೆ ಅರ್ಪಿಸುವಾಗ, ತರಕಾರಿ ಬೆಳೆಸಿ ತಿನ್ನುವಾಗ, ಆತ್ಮೀಯರಿಗೆ ಹಂಚುವಾಗ ಆಗುವ ಖುಷಿ ಮಾರ್ಕೆಟ್‌ನಲ್ಲಿ ಖರೀದಿಸಿದ ಹೂ ಹಾಗೂ ತರಕಾರಿಯಿಂದ ಸಿಗಲು ಸಾಧ್ಯ ಉಂಟೆ?

ಸ್ವಾತಿ


ಈ ವಿಭಾಗದಿಂದ ಇನ್ನಷ್ಟು

  • ಗಂಡನಾದವನು ಸಾಮಾನ್ಯ ನಾಗರಿಕನಾಗಿರುತ್ತಾನೆ ಎಂದಿಟ್ಟುಕೊಳ್ಳಿ. ಸಮಾಜದಲ್ಲಿ ಅವನಿಗೆ ಘನತೆಯ ಸ್ಥಾನಮಾನವೇನೂ ಇರುವುದಿಲ್ಲ. ಹೇಳಿಕೊಳ್ಳುವ ಸಾಧನೆಯನ್ನೇನೂ...

  • ಟಿವಿ ಎಂಬ ಮಾಯಾಂಗನೆಯು ಮನುಷ್ಯನನ್ನು ಆವರಿಸಿಕೊಳ್ಳದ ಕಾಲದಲ್ಲಿ ನನ್ನ ವಿದ್ಯಾಭ್ಯಾಸ ಮುಗಿದಿತ್ತು ಎಂಬುದು ನನ್ನ ಪೂರ್ವಜನ್ಮ ಪುಣ್ಯದ ಫ‌ಲ. ಆಗಿನ ಹಳ್ಳಿಗಳ...

  • ಕಥನ ಸಾಹಿತ್ಯದ ಮೂಲಕ ಅಪಾರ ಓದುಗ ವರ್ಗವನ್ನು ಸೃಷ್ಟಿಸಿದ ಕನ್ನಡದ ಜನಪ್ರಿಯ ಲೇಖಕಿಯರಲ್ಲಿ ಪದ್ಮಾ ಶೆಣೈ ಕೂಡ ಒಬ್ಬರು. ಸ್ವಾತಂತ್ರ್ಯೋತ್ತರ ಅವಧಿಯಲ್ಲಿ ತಮ್ಮ...

  • ರಾಜಕುಮಾರಿ ಮನೆಯೊಳಗೆ ಬಗ್ಗಿ ನೋಡಿದಳಂತೆ. ಆಗ ಕಂಡದ್ದೇನು ಗೊತ್ತಾ? ಅಲ್ಲಿದ್ದಾಕೆಯ ಕೋರೆದಾಡೆಗಳು ಹೊರ ಬಂದಿದ್ದವು. ಇನ್ನೇನು ರಾಜಕುಮಾರಿಯನ್ನು ಸುಟ್ಟು ತಿನ್ನುವ...

  • ದಕ್ಷಿಣದಿಂದ ಉತ್ತರಕ್ಕೆ ಹೋಗಿ ಬಾಲಿವುಡ್‌ ಅಂಗಳದಲ್ಲಿ ತಮ್ಮದೇ ಆದ ಛಾಪು ಮೂಡಿಸಿ ಮಿಂಚುತ್ತಿರುವ ನಟಿಯರ ಸಂಖ್ಯೆ ಸಾಕಷ್ಟು ದೊಡ್ಡದಿದೆ. ಇನ್ನು, ಇತ್ತೀಚೆಗೆ...

ಹೊಸ ಸೇರ್ಪಡೆ